

| ರಮೇಶ್ಕುಮಾರ ಬಿ. ಎಡಮೋಳೆ
ಅದು 2019ರ ಅವಧಿ. ಅಹಮದಾಬಾದ್ನ 19 ವರ್ಷದ ಮಾನಾ ಪಟೇಲ್ ಜೀವನದಲ್ಲಿ ಮರೆಯಲಾಗದ ದಿನ. ಈಜಿನಲ್ಲಿ ಏನೋ ಸಾಧನೆ ಮಾಡಬೇಕು ಎಂದು ಅಂದುಕೊಂಡಿದ್ದ ಈಕೆ ಜಿಮ್ಲ್ಲಿ ಬಿದ್ದು ಹಿಮ್ಮಡಿಗೆ ಪೆಟ್ಟು ಮಾಡಿಕೊಂಡಳು. ಭುಜದ ಗಾಯದಿಂದ ಆಗತಾನೇ ಚೇತರಿಸಿಕೊಂಡಿದ್ದ ಮಾನಾಗೆ ಮತ್ತಷ್ಟು ಆಘಾತವಾಗಿತ್ತು. ಚೇರಿಸಿಕೊಳ್ಳುವಷ್ಟರಲ್ಲಿಯೇ ಬಂದೆರಗಿದ್ದು ಕರೊನಾ. ಓರ್ವ ಈಜುಗಾತಿಗೆ ಇದಕ್ಕಿಂತ ದೊಡ್ಡ ಆಘಾತ ಮತ್ತೊಂದಿಲ್ಲ. ಇದಕ್ಕೆ ಕಾರಣ, ದೀರ್ಘಕಾಲ ಈಜುಕೊಳ ಮುಚ್ಚಿತ್ತು. ತರಬೇತಿಯೂ ಇಲ್ಲದೆ ಮನೆಯಲ್ಲೂ ಇರಲಾಗದೆ ಪರಿತಪಿಸಿದರು ಮಾನಾ. ಆದರೂ ಪಟ್ಟುಬಿಡದೇ ಮನೆಯಲ್ಲೇ ಫಿಟ್ನೆಸ್ಗೆ ಅನುಗುಣವಾಗಿ ತಾಲೀಮು ಆರಂಭಿಸಿದ ಮಾನಾ ಈಗ ಒಲಿಂಪಿಕ್ಸ್ನತ್ತ ಪಯಣ ಬೆಳೆಸಿದ್ದಾರೆ. ಬಿ.ಕಾಂ. ಪದವೀಧರೆ ಮಾನಾ ಕಳೆದ 2 ವರ್ಷದಿಂದ ದ್ರೋಣಾಚಾರ್ಯ ರಾಷ್ಟ್ರೀಯ ತರಬೇತುದಾರ ನಿಹಾರ್ ಅಮೀನ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಸಾರ್ವತ್ರಿಕ ಕೋಟಾ ಅಡಿಯಲ್ಲಿ ಟೋಕಿಯೋ ಒಲಿಂಪಿಕ್ಸ್ಗೆ ಆಯ್ಕೆಯಾದ ಭಾರತದ ಮೂರನೇ ಹಾಗೂ ಮಹಿಳಾ ವಿಭಾಗದ ಮೊದಲ ಈಜುಪಟು ಆಗಿದ್ದಾರೆ. ಯುರೋಪಿಯನ್ ಮೀಟ್ಸ್ನಲ್ಲಿ ಕಳೆದ 3 ತಿಂಗಳಿಂದ ಮಾನಾ ಅವರ ಪ್ರದರ್ಶನ ನೋಡಿದ ಭಾರತದ ಈಜು ಸಂಸ್ಥೆ (ಎಸ್ಎಫ್ಐ), ಅವರ ಹೆಸರನ್ನು ಅಂತಾರಾಷ್ಟ್ರೀಯ ಈಜು ಫೆಡರೇಷನ್ಗೆ (ಫಿನಾ) ಶಿಫಾರಸು ಮಾಡಿತ್ತು. ಅದನ್ನು ಪರಿಗಣಿಸಿರುವ ಫಿನಾ ಇದೇ 2ರಂದು ಮಾನಾ ಅವರನ್ನು ಒಲಿಂಪಿಕ್ಸ್ಗೆ ಆಯ್ಕೆ ಮಾಡಿದೆ. ಮಾನಾ ಅವರು 100 ಮೀಟರ್ಸ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 2019ರಲ್ಲಿ ನಡೆದ ಸೀನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ತಪು್ಪ ಆರಂಭದಿಂದಾಗಿ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಮಾನಾ ಅನರ್ಹಗೊಂಡಿದ್ದರು. ಆದರೂ ಪ್ರಯತ್ನ ಬಿಡದೆ ಇಂದು ಅದೇ 100 ಮೀಟರ್ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲೇ ಟೋಕಿಯೋ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ.
ಕರೊನಾದಿಂದ ಕ್ರೀಡಾಕೂಟದ ನಿಯಮಗಳಲ್ಲಿ ಬದಲಾವಣೆಯಾಗಿದ್ದು, ಹೊಸ ಶಿಷ್ಟಾಚಾರ ಗಳೊಂದಿಗೆ ಒಲಿಂಪಿಕ್ಸ್ ನಂತಹ ಬಹುದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಒಂದು ರೀತಿಯ ಒತ್ತಡದ ವ್ಯಾಯಾಮವಾಗಿದೆ. ‘‘ಇತ್ತೀಚೆಗೆ ಬೆಲ್ಗ್ರೇಡ್ನಲ್ಲಿ ನಡೆದ ಈವೆಂಟ್ನಲ್ಲಿ ನನ್ನ ತಾಯಿ ನನ್ನೊಂದಿಗೆ ಇದ್ದಾಗ ತುಂಬಾ ಸಂತೋಷ ಅನಿಸುತ್ತಿತ್ತು. ಆದರೆ, ನಂತರದ ರೋಮ್ ಈವೆಂಟ್ನಲ್ಲಿ ನನ್ನೊಂದಿಗೆ ಬರಲು ಸಾಧ್ಯವಾಗಲಿಲ್ಲ. ಕರೊನಾದಿಂದಾಗಿ ಪ್ರತಿ ದಿನ ಹೊಸ ಬೆಳವಣಿಗೆಗಳು ಆಗುತ್ತಿವೆ. ಕುಟುಂಬಸ್ಥರು ಇಲ್ಲದೇ ದೂರದೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ನಿಯಮಿತವಾಗಿ ಪರೀಕ್ಷೆಗೂ ಒಳಗಾಗಬೇಕಿದೆ. ಕ್ರೀಡೆಯ ಹೊರತಾಗಿಯೂ ಇತರ ವಿಷಯಗಳ ಬಗ್ಗೆ ಯೋಚಿಸಬೇಕಾಗಿರುವುದರಿಂದ ಸಾಂಕ್ರಾಮಿಕ ಕಾಲದ ಕ್ರೀಡಾಕೂಟ ಒಂದು ರೀತಿಯಲ್ಲಿ ಒತ್ತಡದ ವ್ಯಾಯಾಮ’’ ಎಂದಿದ್ದಾರೆ ಮಾನಾ.
ರಾಷ್ಟ್ರೀಯ ಕ್ರೀಡಾಕೂಡದಲ್ಲಿ 50 ಮತ್ತು 200 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಮಾನಾ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 60ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ(2015)ದಲ್ಲಿ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಚಿನ್ನ ಗೆದ್ದ ಅವರು ರಾಷ್ಟ್ರೀಯ ದಾಖಲೆಯನ್ನೂ ಮುರಿದರು. ಕಳೆದ ಏಪ್ರಿಲ್ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದಿದ್ದ ಓಪನ್ ಈಜು ಚಾಂಪಿಯನ್ಶಿಪ್ನಲ್ಲಿ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಬೆಲ್ಗ್ರೇಡ್ನಲ್ಲಿ ಈಚೆಗೆ ನಡೆದ ಅರ್ಹತಾ ಸ್ಪರ್ಧೆಯೆಲ್ಲಿ ಒಲಿಂಪಿಕ್ಸ್ ಅರ್ಹತಾ ಮಟ್ಟಕ್ಕಿಂತ 0.01 ಸೆಕೆಂಡುಗಳಲ್ಲಿ ಹಿಂದುಳಿದಿದ್ದರು.