ಸೋಲಿಗೆ ಕಾರಣವಾಗದಿರಲಿ ಗೆಲುವು: ಮನೋಲ್ಲಾಸ

Manollasa
Published on
| ಮಹಾದೇವ ಬಸರಕೋಡ ಅಮೀನಗಡ

ಸೋಲು ಗೆಲುವಿಗೆ ಸೋಪಾನವೆಂಬ ಸತ್ಯವನ್ನು ನಾವು ಬಹುಕಾಲದಿಂದಲೂ ನಂಬಿಕೊಂಡು ಬಂದಿದ್ದೇವೆ. ಸೋಲು, ಅಪಜಯ ಮನುಷ್ಯನನ್ನು ಇನ್ನಿಲ್ಲದಂತೆ ಹತಾಶನನ್ನಾಗಿ ಮಾಡಿದಾಗ ಅವನಿಗೆ ಪ್ರೇರಣೆ ತುಂಬಲು ಸೋಲು ಗೆಲುವಿಗೆ ಸೋಪಾನವಾಗಬಲ್ಲದು ಎಂಬ ಮಾತು ಸಂಜೀವಿನಿಯಂತೆ ಕೆಲಸ ಮಾಡಬಲ್ಲದು. ಸೋಲಿನ ಅನುಭವ, ಕಾರಣಗಳನ್ನು ವಿಶ್ಲೇಷಿಸಿ ಅವುಗಳನ್ನು ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡ ನಿದರ್ಶನಗಳು ಹೇರಳವಾಗಿ ಸಿಗುತ್ತವೆ. ಆದರೆ, ಗೆಲುವು ಕೂಡ ಕೆಲವೊಮ್ಮೆ ಸೋಲಿಗೆ ಕಾರಣವಾದೀತು ಎಂಬ ಸಂಗತಿಯನ್ನೂ ಅಲ್ಲಗಳೆಯಲಾಗುವುದಿಲ್ಲ. ರಿಚರ್ಡ್ ಕ್ಯಾರಿಯನ್ ಹೇಳಿದ, ‘ಗೆಲುವು ನೀಡುವಂಥ ಸೋಲು ಬೇರೆ ಇಲ್ಲ’ ಎಂಬ ಮಾತು ಅರ್ಥಪೂರ್ಣ. ಗೆಲುವಿನ ಅಹಂ, ಸಂತಸ, ತೃಪ್ತಿ, ನಲಿವಿನ ಉನ್ಮಾದ ಮನುಷ್ಯನನ್ನು ಅನೇಕ ಬಾರಿ ವಿವೇಚನಾ ಶೂನ್ಯನ್ನಾಗಿ ಮಾಡಿಬಿಡುತ್ತದೆ. ಎಲ್ಲರೂ ತಾನು ಹೇಳಿದಂತೆಯೇ ಕೇಳಬೇಕು, ತನ್ನನ್ನು ಎಲ್ಲರೂ ಗೌರವಿಸಬೇಕು ಎಂಬ ಭ್ರಮಾತ್ಮಕತೆಯ ಬಂಧನದಲ್ಲಿ ಬಹುಬೇಗ ಬಂಧಿಯಾಗಿ ಬಿಡುತ್ತಾನೆ. ಮೊದಲಿನ ವಿನಮ್ರತೆ, ಸಮರ್ಪಣಾ ಭಾವ ನೇಪಥ್ಯಕ್ಕೆ ಜಾರುತ್ತ ಹೋಗುತ್ತದೆ. ಇಂತಹ ಸಂಗತಿಗಳು ಮನುಷ್ಯನನ್ನು ಯಶಸ್ಸಿನ ಶಿಖರದ ತುತ್ತತುದಿಯಿಂದ ಮೆಲ್ಲ ಮೆಲ್ಲನೆ ಪ್ರಪಾತದಾಳಕ್ಕೆ ಜಾರಿಸಿಬಿಡಬಲ್ಲದು.

ಒಮ್ಮೆ ಝೆನ್ ಗುರುಗಳನ್ನು ಒಬ್ಬ ವ್ಯಕ್ತಿ, ‘ನಿಮಗೆ ಜ್ಞಾನೋದಯವಾಗುವುದಕ್ಕೆ ಮುಂಚೆ ಏನು ಮಾಡುತ್ತಿದ್ದಿರಿ?’ ಎಂದು ಪ್ರಶ್ನಿಸಿದ. ‘ನನ್ನ ಬದುಕನ್ನು ನಿರ್ವಹಿಸಲು ಅಗತ್ಯವಿರುವ ಕೆಲಸಗಳಾದ ಕಟ್ಟಿಗೆ ಒಡೆಯೋದು, ಬಾವಿಯಿಂದ ನೀರು ತರೋದು ಮಾಡುತ್ತಿದ್ದೆ. ಆಶ್ರಮಕ್ಕೆ ಬಂದವರನ್ನು ದೇವರೆಂದು ಭಾವಿಸಿ ಅತ್ಯಂತ ಪ್ರೀತಿಯಿಂದ ಅತಿಥಿ ಸತ್ಕಾರ ಮಾಡುತ್ತಿದ್ದೆ. ಇತರ ಸಮಯದಲ್ಲಿ ಪ್ರಾರ್ಥನೆ, ಧ್ಯಾನ ಮಾಡುತ್ತಿದ್ದೆ’ ಎಂದರು. ‘ಈಗ ನಿಮಗೆ ಜ್ಞಾನೋದಯವಾಗಿದೆಯಲ್ಲ, ಈಗೇನು ಮಾಡುತ್ತಿರುವಿರಿ’ ಎಂದು ಕೇಳಿದ. ‘ಈಗಲೂ ಮೊದಲಿನ ಕೆಲಸಗಳನ್ನೇ ಮಾಡುತ್ತಿದ್ದೇನೆ’ ಎಂದರು. ‘ಹಾಗಾದರೆ ಜ್ಞಾನೋದಯವಾಗಿದ್ದಕ್ಕೂ, ಆಗದೇ ಇರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲವೆ?’ ಎಂದು ಅವನು ಗೊಂದಲದಲ್ಲಿ ಕೇಳಿದ. ‘ವ್ಯತ್ಯಾಸ ನನ್ನಲ್ಲಾಗಿದೆ, ನನ್ನ ದೈನಂದಿನ ಕೆಲಸಗಳಲ್ಲಿ ಅಲ್ಲ. ನನ್ನೆಲ್ಲ ಕೆಲಸಗಳೂ ಬದಲಾಗದಿದ್ದರೂ ಅವುಗಳ ಮಹತ್ವಗಳಲ್ಲಿ ಬದಲಾಗಿದೆ. ಈಗ ನಾನು ಪ್ರತಿಯೊಂದು ಕೆಲಸದಲ್ಲೂ ಕೈಲಾಸವನ್ನು ಎಲ್ಲರಲ್ಲೂ ದೇವರನ್ನು ಕಾಣುತ್ತಿದ್ದೇನೆ, ದೇವರ ಹೊರತಾಗಿ ನನಗೆ ಬೇರೇನೂ ಕಾಣುವುದಿಲ್ಲ’ ಎಂದರು ನಸುನಗುತ್ತ. ಹೀಗೆಯೇ ಮನುಷ್ಯ ಗೆಲುವಿನ ನಂತರವೂ ಸ್ಥಿತಪ್ರಜ್ಞೆ ಭಾವ ಬೆಳೆಸಿಕೊಳ್ಳುವುದು ಅಗತ್ಯ. ಗೆಲುವಿಗೆ ಕಾರಣವಾದ ಮೆಟ್ಟಿಲುಗಳನ್ನು ಇನ್ನಷ್ಟು ಪರಿಪೂರ್ಣವಾಗಿ ನೋಡುವುದನ್ನು ರೂಢಿಸಿಕೊಳ್ಳಬೇಕು. ಒರಟುತನ, ಉದ್ಧಟತನ, ತೀಕ್ಷ ್ಣ ಭಾವಗಳನ್ನು ನಿಗ್ರಹಿಸಿ ಸಮತೋಲನದಿಂದ ವರ್ತಿಸುವ ಗುಣ ಕಲಿಯಬೇಕು. ಗೆಲುವು ದೊರೆತ ನಂತರವೂ ಇನ್ನಷ್ಟು ಶ್ರದ್ದೆ, ಜಾಗರೂಕತೆ, ದಕ್ಷತೆ, ಸಮರ್ಪಣಾ ಭಾವದಿಂದ ಕೆಲಸಗಳನ್ನು ಮಾಡುತ್ತ ಬದುಕನ್ನು ಮುನ್ನಡೆಸಲು ಸಾಧ್ಯವಾದರೆ ಮಾತ್ರವೇ ನಾವು ಗಳಿಸಿದ ಗೆಲುವು ನಮ್ಮ ಸೋಲಿಗೆ ಕಾರಣವಾಗದಂತೆ ತಡೆಯಲು ಸಾಧ್ಯ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net