ಆಕರ್ಷಣೆಗೆ ಮಿತಿಯಿರಲಿ: ಮನೋಲ್ಲಾಸ

King with queens
Published on
| ಚಿದಂಬರ ಗಣೇಶ ಮುನವಳ್ಳಿ 
ಜೀವನದ ಅತಿಯಾದ ಆಕರ್ಷಣೆಗಳಿಗೊಳಗಾದ ರಾಜನೊಬ್ಬ ಯೌವ್ವನದ ಮದದಲ್ಲಿ, ಸುಂದರವಾದ ಹೆಣ್ಣುಮಕ್ಕಳು ದೃಷ್ಟಿಗೆ ಬಿದ್ದರೆ ಸಾಕು ಅವರನ್ನು ಒತ್ತಾಯದಿಂದ ರಾಣೀವಾಸಕ್ಕೆ ಕರೆಸಿಕೊಂಡು ಅಲ್ಲಿ ಈಗಾಗಲೇ ಇರುವ ಸ್ತ್ರೀಯರ ಜತೆ ಸೇರಿಸಿಕೊಂಡುಬಿಡುತ್ತಿದ್ದ. ಅವನ ಈ ದುಷ್ಟ ವರ್ತನೆಗೆ ರಾಜ್ಯದ ಮರ್ಯಾದಸ್ಥ ಪ್ರಜೆಗಳು ತೊಂದರೆ ಅನುಭವಿಸುತ್ತಿದ್ದರೂ ಏನೂ ಮಾಡದೆ ಅಸಹಾಯಕರಾಗಿದ್ದರು. ಒಮ್ಮೆ ಆ ರಾಜ ಕುದುರೆಯ ಮೇಲೆ ಹೊರಟಿರಬೇಕಾದರೆ ಎದುರಿಗೆ ಆ ರಾಜನ ಹಿರಿಯ ವಯಸ್ಸಿನ ಮಂತ್ರಿ ತನ್ನ ಮಗಳ ಜತೆಗೆ ನಡೆದುಕೊಂಡು ಬರುತ್ತಿದ್ದ. ಹದಿ ಹರೆಯದ ಆ ಸುಂದರ ಕನ್ಯೆಯನ್ನು ನೋಡುವುದೇ ತಡ ಭೋಗ ಲಾಲಸೆಯಿಂದ ಅವಳನ್ನು ತನ್ನ ರಾಣೀವಾಸಕ್ಕೆ ಸೇರ್ಪಡೆ ಮಾಡಲು ಮಂತ್ರಿಗೆ ಆಜ್ಞೆ ಇತ್ತ. ಮಂತ್ರಿಗೆ ಇದು ಪೇಚಾಟಕ್ಕಿಟ್ಟುಕೊಂಡಿತು.

ಮಗಳ ಭವಿಷ್ಯ ಹಾಳು ಮಾಡಲಾಗದೆ ರಾಜನ ವಿರುದ್ಧ ಮಾತನಾಡಲೂ ಆಗದೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ. ಆದರೆ, ಬುದ್ಧಿವಂತನಾದ ಆ ಮಂತ್ರಿಯು ಯೋಚನೆ ಮಾಡಿ, ರಾಜನಿಗೆ ಒಂದು ದಿನ ತನ್ನ ಮನೆಗೆ ಭೋಜನಕ್ಕೆ ಆಮಂತ್ರಿಸಿದ. ಊಟಕ್ಕೆ ಬಗೆ ಬಗೆಯ ಪದಾರ್ಥಗಳನ್ನು ತಯಾರಿಸುವುದರ ಜತೆಗೆ ಒಂದು ಅಗಲವಾದ ತಟ್ಟೆಯಲ್ಲಿ ವಿವಿಧ ಪ್ರಕಾರದ ನಿಂಬೆ ಹಣ್ಣುಗಳನ್ನು ಬೇರೆ ಬೇರೆ ಆಕಾರಗಳಲ್ಲಿ ಕೊಯ್ದು ಹೋಳು ಮಾಡಿ ರಾಜನ ಮುಂದೆ ಇಟ್ಟ. ನಿಂಬೆಯ ವಾಸನೆ ರಾಜನ ಬಾಯಲ್ಲಿ ನೀರೂರಿಸಿತು. ಅದರಲ್ಲಿಯ ಒಂದು ಹೋಳು ತೆಗೆದುಕೊಳ್ಳುತ್ತಾ ರಾಜ, ‘ಇವುಗಳನ್ನು ಇಷ್ಟೇಕೆ ವಿಧ ವಿಧವಾಗಿ ಇಟ್ಟಿರುವಿರಿ? ಒಂದೇ ತೆರನಾಗಿ ಹೆಚ್ಚಿ ಇಡಬಹುದಲ್ಲ? ಎಂದು ಕೇಳಿದಾದ ಮಂತ್ರಿಯು, ‘ರಾಜನ್ ಇದನ್ನೇ ನಿಮಗೆ ತಿಳಿಸಲೆಂದು ನಾನು ಹೀಗೆ ಮಾಡಿದೆ. ಇವು ಹೊರಗಿನಿಂದ ಬೇರೆ ಆಕಾರಗಳಲ್ಲಿ ಇದ್ದರೂ ಇವೆಲ್ಲವುಗಳ ಒಳಗಿರುವ ರಸ ಒಂದೇ ಆಗಿದೆಯಲ್ಲವೇ? ಮನುಷ್ಯನ ಬಯಕೆಗಳು ನೂರಾರು ಇದ್ದರೂ ತೃಷೆ ಒಂದೇ ಅಲ್ಲವೇ?’ ಎಂದ. ರಾಜನಿಗೆ ತನ್ನ ತಪ್ಪಿನ ಅರಿವಾಗಿ ದುಷ್ಕೃತ್ಯ ನಿಲ್ಲಿಸಿಬಿಟ್ಟ. ಮಂತ್ರಿಯೂ ಸಮಸ್ಯೆಯಿಂದ ಪಾರಾದ. ಪ್ರಜೆಗಳೂ ನಿರಾಳರಾದರು.

ಜೀವನಕ್ಕೆ ಬೇಕಾದ ಅವಶ್ಯಕತೆಗಳೆಲ್ಲ ಸಿಕ್ಕಿದರೂ ಜಗತ್ತಿನಲ್ಲಿಯ ನೂರಾರು ಆಕರ್ಷಣೆಯ ವಸ್ತುಗಳು ಸೆಳೆಯುತ್ತವೆ. ಅದನ್ನೇ ಮಾಯಾ ಪ್ರಪಂಚ ಎಂದು ಕರೆದಿದ್ದಾರೆ. ಅವುಗಳೆಡೆ ಮೋಹಿತನಾಗಿ ವಿಚಾರ ಮಾಡದೇ ದುಡುಕಿ ಮಾಡಿದ ಕರ್ಮದ ಪರಿಣಾಮದಿಂದ ಒದಗಬಹುದಾದ ಆಪತ್ತು, ಹಾನಿ ಇವು ನಮ್ಮನ್ನು ಅಧಃಪತನಕ್ಕೆ ತಳ್ಳುತ್ತವೆ. ಭಗವದ್ಗೀತೆಯಲ್ಲಿ ‘ಅಹಂಕಾರಂ ಬಲಂ ದರ್ಪಮ್ ಕಾಮಂ ಕ್ರೋಧಂ ಪರಿಗ್ರಹಮ್ ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮ ಭೂಯಾಯ ಕಲ್ಪತೇ ಅಹಂಕಾರ’ ಎಂದು ಹೇಳಲಾಗಿದೆ. ಬಲ , ದರ್ಪ , ಕಾಮ , ಕ್ರೋಧ, ಅತಿಯಾಗಿ ಸಂಗ್ರಹಿಸಬೇಕೆಂಬ ಬುದ್ಧಿಯನ್ನು ತ್ಯಜಿಸಿ ಧ್ಯಾನಯೋಗವನ್ನು ಆಶ್ರಯಿಸಿದ ಶಾಂತಿಯುಕ್ತ ಮನುಷ್ಯನು ಯಾವಾಗಲೂ ಸಂತಸದಿಂದಿರುತ್ತಾನೆ ಎಂಬುದು ಇದರರ್ಥ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net