ದ್ವೇಷಾಸೂಯೆ ಅಳಿಯಲಿ.. ಸಹಿಷ್ಣುತೆ ಗಟ್ಟಿಯಾಗಲಿ…

Pierce
Published on
ಧಾರ್ವಿುಕವಾಗಿ ಹಾಗೂ ವೈಜ್ಞಾನಿಕವಾಗಿ ಇಂದಿನ ನಮ್ಮ ಆಚಾರ-ವಿಚಾರ, ನಡೆ-ನುಡಿ, ಗುಣ ಸ್ವಭಾವಗಳೆಲ್ಲವೂ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಂಥವುಗಳು. ಪ್ರತಿಯೊಂದು ವಿಷಯ, ಸ್ವಭಾವಗಳೂ ಕೂಡ ಆಯಾ ಕಾಲಕ್ಕೆ ಬದಲಾವಣೆಗೊಳ್ಳುತ್ತಾ, ಇನ್ನಷ್ಟು ನುಣುಪುಗೊಳ್ಳುತ್ತಾ, ಮತ್ತಷ್ಟು ಸಾಣೆಗೊಳ್ಳುತ್ತಾ ಸಾಗಿ ಬಂದಂಥವುಗಳು. ಒಬ್ಬ ಉತ್ತಮ ವ್ಯಕ್ತಿ ರೂಪುಗೊಳ್ಳಬೇಕಾದರೆ ಸಾಕಷ್ಟು ತಿದ್ದಿ-ತೀಡಬೇಕಾಗುತ್ತದೆ. ತಂದೆ-ತಾಯಿ, ಗುರು-ಹಿರಿಯರು, ಬಂಧುಗಳು, ನೆರೆಹೊರೆಯವರು ಎಲ್ಲರ ಉತ್ತಮ ವಿಚಾರಗಳನ್ನು ಉಣಿಸಿದಾಗಲೇ ಅವು ವ್ಯಕ್ತಿಯೋರ್ವನಲ್ಲಿ ಮೈತಳೆದು ಸದ್ಗುಣಗಳಾಗಿ ಮೂಡಿಬರುವುದು. ಆ ವ್ಯಕ್ತಿಯಲ್ಲಿನ ಉತ್ತಮ ಸಂಗತಿಗಳನ್ನು ಪೋ›ತ್ಸಾಹಿಸುವುದರ ಜೊತೆಗೆ ತಪ್ಪು ವಿಚಾರಗಳನ್ನು ಆತನಿಗೆ ತೋರಿಸಿಕೊಡುವ ಮೂಲಕ ತಪ್ಪನ್ನು ತಿದ್ದಿಕೊಳ್ಳಲು ಸಹಾಯ ಮಾಡಿದಂತಾಗುತ್ತದೆ. ಮಾತೃ ದೇವೋ ಭವಃ ಪಿತೃದೇವೋ ಭವಃ ಆಚಾರ್ಯ ದೇವೋ ಭವಃ ಎಂದು ನುಡಿವಂತೆ ತಾಯಿ-ತಂದೆ ಹಾಗೂ ಅಧ್ಯಾಪಕರು ವ್ಯಕ್ತಿತ್ವವನ್ನು ರೂಪಿಸುತ್ತಾರೆ.

ಸಂತರೊಬ್ಬರು ತಮ್ಮ ಸ್ಥಾನದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಆಗ ಅವರ ಶಿಷ್ಯ ಬಂದು ಧ್ಯಾನಸ್ಥ ಸಂತರ ಬಳಿ ಸ್ವಾಮಿ ನಿಮ್ಮ ಎದುರುಗಡೆ ಒಬ್ಬ ವ್ಯಕ್ತಿ ನಿಂತಿದ್ದಾನೆ. ಅವನು ನಿಮಗೆ ಕಾಣಿಸುತ್ತಿರಬಹುದು. ಆತ ತಮ್ಮ ಮೇಲೆ ಅನೇಕ ಅಪಚಾರದ ಮಾತುಗಳನ್ನು ಆಡುತ್ತಿದ್ದಾನೆ. ಕೆಟ್ಟದಾಗಿ ದ್ವೇಷಿಸುತ್ತಿದ್ದಾನೆ. ನಿಮ್ಮಲ್ಲಿ ಸಹಸ್ರಾರು ದೋಷ, ದ್ವೇಷಗಳಿವೆ ಎಂದು ಟೀಕೆ ಮಾಡುತ್ತಿದ್ದಾನೆ ಎಂದನಂತೆ. ಆಗ ಸಂತ. ಹೌದು ನನ್ನಲ್ಲಿ ಸಾವಿರಾರು ದೋಷಗಳಿರಬಹುದು. ಆದರೆ ಅವನು ನನ್ನಲ್ಲಿ ಹೇಳುವುದರಿಂದ ಅದನ್ನು ತಿದ್ದಿಕೊಳ್ಳಲು ಸಹಕಾರಿಯಾಗಿದೆ. ನಾನು ಎಲ್ಲವನ್ನೂ ತ್ಯಾಗ ಮಾಡಿ ಈ ಸಂತ ಜೀವನಕ್ಕೆ ಕಾಲಿಟ್ಟದ್ದೇ, ದೋಷ ಪರಮಾರ್ಜನೆ ಮಾಡಿಕೊಂಡು ಉತ್ತಮ ವ್ಯಕ್ತಿ ಆಗಬೇಕು ಎಂಬ ದೃಷ್ಟಿಯಿಂದ. ಹಾಗಾಗಿ ಅವನಿಗೆ ಧನ್ಯವಾದ ಹೇಳು, ನನ್ನ ದೋಷಗಳನ್ನು ಪರಿಗಣಿಸಿದ್ದರಿಂದ ನಾನು ಪರಿಶುದ್ಧನಾಗುತ್ತಿದ್ದೇನೆ ಎಂದು ಹೇಳುತ್ತಾರೆ. ಮತ್ತೊಂದು ಮಾತು ಸಂತರು ತಿಳಿಸುತ್ತಾರೆ. ಇನ್ನೊಬ್ಬರ ಸಾವಿರ ದೋಷಗಳನ್ನು ಕಂಡು ಹುಡುಕಬಹುದು. ಆದರೆ ನನ್ನ ಒಂದೇ ಒಂದು ಒಳ್ಳೆಯ ಗುಣ ಅವನಿಗೆ ಕಾಣಲಿಲ್ಲವೇ ಎಂದು ಬೇಸರ ಪಟ್ಟುಕೊಂಡರಂತೆ. ಹೀಗೆ ಅನೇಕ ಮಂದಿ ತಮ್ಮ ದೋಷಗಳ ನಿವಾರಣೆಗೋಸ್ಕರ ಸಂತರಾಗುತ್ತಾರೆ. ದೋಷಗಳನ್ನು ನಿವಾರಿಸಿಕೊಂಡು ಮಹಾತ್ಮರಾಗುತ್ತಾರೆ.

ಧನಾತ್ಮಕ ಚಿಂತನೆಗಳು ಬದುಕಿಗೆ ಸಾಕಷ್ಟು ನೆರವಾಗುತ್ತವೆ. ಧನಾತ್ಮಕ ಚಿಂತನೆಗಳು ನಮ್ಮ ಕಷ್ಟ, ನೋವುಗಳನ್ನು ದೂರ ಮಾಡಲು ಸಹಕಾರಿಯಾಗುತ್ತವೆ. ಅನೇಕ ಸಂದರ್ಭಗಳಲ್ಲಿ ಯಾರ್ಯಾರದೋ ಸುಳ್ಳು ಮಾತುಗಳನ್ನು, ಚಾಡಿಗಳನ್ನು, ದೋಷಾರೋಪಗಳನ್ನು, ಹಾಗಂತೆ- ಹೀಗಂತೆ ಎಂಬ ಸುದ್ದಿಗಳನ್ನು ಕೇಳಿ ಅದೆಷ್ಟೋ ಸಂಸಾರಗಳು, ಗೆಳೆತನಗಳು, ವ್ಯಾಪಾರ ವ್ಯವಹಾರಗಳು, ದೇಶಗಳೂ ಕೂಡ ಪರಸ್ಪರ ವೈರಿಗಳಾಗಿವೆ, ನಾಶವಾಗಿ ಹೋಗಿವೆ. ರಾಮಾಯಣದಲ್ಲಿ ರಾಮನು ವನವಾಸಕ್ಕೆ ಹೋಗಲು ಕೈಕೇಯಿ ಕಾರಣಳಾಗುತ್ತಾಳೆ. ರಾಮನೂ ವನವಾಸ ಮಾಡುತ್ತಾನೆ. ಅಷ್ಟಾದರೂ ಆದದ್ದೆಲ್ಲ ಒಳ್ಳೆಯದಕ್ಕೆ ಎಂಬಂತೆ ರಾಮನ ಮೂಲಕವಾಗಿ ದುಷ್ಟರ ಸಂಹಾರವಾಗಿ ಧರ್ಮ ಉಳಿಸುವ ಪುಣ್ಯ ಕಾರಣವಾಗುತ್ತದೆ. ಬಹುಶಃ ರಾಮನು ಪಟ್ಟಾಭಿಷಕ್ತನಾಗಿದ್ದರೆ ರಾಜ್ಯಭಾರ ಮಾಡಿಕೊಂಡು ಇರುತ್ತಿದ್ದನೋ ಏನೋ. ಆದರೆ ಧರ್ಮ ಸಂಸ್ಥಾಪನೆಗೆ ಮುಂದಡಿಯಿಡಲು ವನವಾಸ ಎಂಬ ನೆಪ ಬೇಕಾಯಿತಷ್ಟೆ. ಆ ಮೂಲಕ ಇಂದು ನಾಡಿನ ಮನೆ-ಮನಗಳ ಹೃದಯ ಮಂದಿರಗಳಲ್ಲಿ ಅಜರಾಮರಾಗಿದ್ದಾನೆ ಎಂದರೆ ಅತಿಶಯೋಕ್ತಿಯಾಗದು.

ಒಬ್ಬ ಸಂತರು ಚಾತುರ್ವಸ್ಯದ ನಾಲ್ಕು ತಿಂಗಳ ಕಾಲ ಧ್ಯಾನ, ಅಧ್ಯಯನಗಳಲ್ಲಿ ತೊಡಗಿಕೊಳ್ಳುತ್ತಾ ವ್ರತಾಚರಣೆಯಲ್ಲಿರಬೇಕು ಎಂಬುದಾಗಿ ನಿರ್ಣಯಿಸುತ್ತಾರೆ ಹಾಗೂ ಈ ಸಂದರ್ಭದಲ್ಲಿ ಪ್ರಯಾಣ ಮಾಡುವುದು, ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ, ಅನೇಕ ಕ್ರಿಮಿಕೀಟಾದಿಗಳಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಚಾತುರ್ವಸ್ಯ ವ್ರತಾಚರಣೆಗೆ ಕುಳಿತುಕೊಳ್ಳುತ್ತಾರೆ. ಒಬ್ಬ ಸಂತರು ಊರ ಮಹನೀಯನೊಬ್ಬನಿಗೆ ಸೇರಿದ ಸ್ಥಳದಲ್ಲಿ ಚಾತುರ್ವಸ್ಯಕ್ಕೆ ಕುಳಿತಿದ್ದರಂತೆ. ಆಗ ವ್ರತಾಚರಣೆಯಲ್ಲಿ ಕೂತಿದ್ದ ಜಾಗದ ಮಾಲೀಕನಲ್ಲಿ ಯಾರೋ ಬಂದು ಕಿವಿ ಚುಚ್ಚತೊಡಗಿದನು. ನೋಡು ನೀನು ಯಾರನ್ನು ಸಂತ, ಮಹಾತ್ಮ ಎಂದುಕೊಂಡು ಕುಳಿತುಕೊಳ್ಳಲು ಜಾಗ ಕೊಟ್ಟಿದ್ದೀಯೋ ನಾಳೆ ನಿನ್ನ ಅಂಗಡಿ ಹಾಗೂ ಕುಳಿತುಕೊಳ್ಳಲು ಕೊಟ್ಟ ಪ್ರದೇಶ ತನ್ನದು ಎಂದು ಹೇಳಬಹುದು ಹಾಗಾಗಿ ಮೊದಲು ಆತನನ್ನು ಹೊರದಬ್ಬು ಎಂದು ಹೇಳಿದರಂತೆ. ಊರವರ ಮಾತನ್ನು ಕೇಳಿ ಆ ವ್ಯಕ್ತಿ ಸಂತರ ಬಳಿ ಬಂದು ಸ್ವಾಮಿ ನನಗೆ ತಮ್ಮ ಬಗ್ಗೆ ಅಪಾರ ಭಕ್ತಿಯಿದೆ ಆದರೆ ನಿಮ್ಮನ್ನಿಲ್ಲಿ ಉಳಿಸಿಕೊಳ್ಳಲಾರೆ, ಅನೇಕ ಮಂದಿ ಬೇರೆ-ಬೇರೆ ರೀತಿ ವ್ಯಾಖ್ಯಾನ ಮಾಡುತ್ತಿರುವುದರಿಂದ ನಾನು ತಮ್ಮನ್ನು ಈ ಕಟ್ಟಡ, ಪ್ರದೇಶವನ್ನು ತೊರೆದು ಬೇರೆ ಕಡೆ ಆಶ್ರಯ ಪಡೆದುಕೊಳ್ಳಿ ಎಂದು ಕೇಳಿಕೊಳ್ಳಬೇಕಾಗುತ್ತದೆ ಎಂದು ವಿನಮ್ರವಾಗಿ ಹೇಳಿದನಂತೆ. ಇದನ್ನು ಕೇಳಿಸಿಕೊಂಡ ಸಂತರು ನಕ್ಕು, ಆಯ್ತು ನಿನಗೆ ಯಾವುದೇ ರೀತಿ ವಿಘ್ನವಾಗಬಾರದು. ನೀನು ನನಗೆ ಇಷ್ಟರವರೆಗೆ ಪ್ರೀತಿಯಿಂದ ಇಲ್ಲಿ ವಾಸ್ತವ್ಯ ಹೂಡಲು ಅವಕಾಶ ಕೊಟ್ಟಿದ್ದೀಯ, ಆದರೆ ಇವತ್ತು ಯಾವುದೋ ಕಾರಣದಿಂದ ಇಲ್ಲಿಂದ ಹೊರಹೋಗಿ ಎಂದು ಹೇಳಬೇಕಾಗಿದ್ದರೆ ಏನೋ ಪ್ರಬಲವಾದ ಕಾರಣವೇ ಇರಬೇಕು. ಆದುದ್ದರಿಂದ ಖಂಡಿತವಾಗಿಯೂ ಈ ಜಾಗವನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿ ಅವರು ಬೇರೆ ಕಡೆ ತೆರಳಿ ವಾಸ್ತವ್ಯ ಹೂಡಿ ವ್ರತಾಚರಣೆ ಮುಂದುವರೆಸುತ್ತಾರೆ.

ಆಗ ಅವರ ಜೊತೆ ಇದ್ದ ಒಬ್ಬ ಶಿಷ್ಯ ಕೇಳುತ್ತಾನೆ. ಸ್ವಾಮಿ, ಅವನು ಹೇಳಿದ ತಕ್ಷಣ ತಾವು ಆ ಪ್ರದೇಶವನ್ನು ಯಾಕೆ ತೊರೆದಿರಿ, ಆಗ ಸಂತರು ಸ್ವಲ್ಪ ದಿವಸ ಹೋಗಲಿ.. ಎಂದು ಹೇಳುತ್ತಾರೆ. ಮಳೆಗಾಲವಾದ್ದರಿಂದ ಮಳೆ ಜೋರಾಗಿ ಸುರಿಯುತ್ತದೆ. ಈ ವೇಳೆ ಅವರು ಹಿಂದೆ ವ್ರತಾಚರಣೆಗೆ ಕುಳಿತಿದ್ದ ಕಟ್ಟಡ ಕುಸಿದು ಬೀಳುತ್ತದೆ. ಆ ಕಟ್ಟಡದ ಅವಶೇಷಗಳನ್ನು ಸಂತರು ತೋರಿಸುತ್ತಾ ನೋಡು ನಾವು ಅಲ್ಲೇ ಇದ್ದಿದ್ದರೆ ಇಂದು ಕಟ್ಟಡದ ಅವಶೇಷಗಳ ನಡುವೆ ನಮ್ಮ ದೇಹ ಇರುತ್ತಿತ್ತಲ್ವೇ. ಆತ ನಮ್ಮನ್ನು ಸಾಗಹಾಕಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತಲ್ಲವೇ. ನಮ್ಮ ಜೀವನ, ನಮ್ಮ ಸಾಧನೆಯನ್ನು ಮುಂದುವರೆಸಿಕೊಂಡು ಹೋಗಬಹುದು. ಹಾಗಾಗಿ ಕೆಲವು ಬಾರಿ ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಭಾವಿಸಿಕೊಂಡರೆ ಒಳ್ಳೆಯದಾಗುತ್ತದೆ. ಆತನ ಮಾತಿಗೆ ಮನ್ನಣೆ ನೀಡಿ ಹೊರಬಂದೆವು. ಬದಲಾಗಿ ನಾವು ಹಠದಿಂದ ಅಲ್ಲಿಯೇ ಇರುತ್ತಿದ್ದರೆ ನಾವು ಇಂದು ಇರುತ್ತಿರಲಿಲ್ಲ. ಕೆಲವೊಮ್ಮೆ ದ್ವೇಷ, ಅಸೂಯೆಗೆ ಪ್ರತಿಕ್ರಿಯೆ ಕೊಡದಿದ್ದರೆ ಒಳ್ಳೆಯ ಪರಿಣಾಮ ಉಂಟಾಗುತ್ತದೆ.

ಒಬ್ಬನ ಮಾತಿಗೆ ಪ್ರತಿಕ್ರಿಯೆ ಕೊಡಬೇಕು ಅಂದುಕೊಂಡರೆ ಖಂಡಿತವಾಗಿಯೂ ಮಾತಿನಿಂದ ಅಥವಾ ಕ್ರಿಯೆಯಿಂದ ಪ್ರತಿಕ್ರಿಯೆ ಕೊಡಬಹುದು. ಯಾವುದೇ ಪ್ರತಿಕ್ರಿಯೆಯನ್ನು ಕೊಡದಿದ್ದರೂ ಅವನು ಶಾಂತನಾಗಿದ್ದರೆ ಅವನ ಮಾನಸಿಕ ನೆಮ್ಮದಿ ಕೆಡುವುದಿಲ್ಲ ಮತ್ತು ಉತ್ತಮ ರೀತಿಯಲ್ಲಿ ಜೀವನವನ್ನು ಸಾಗಿಸಬಹುದು. ಮನುಷ್ಯನಿಗೆ ಹಿಂಸೆ, ಒತ್ತಡ ಮತ್ತು ಮಾನಸಿಕ ಅನಿಶ್ಚಿತತೆಗಳು ಸರಿಯಲ್ಲ. ಅದರ ಬದಲಾಗಿ ತಮ್ಮ ಸದ್ಧರ್ಮದ ದಾರಿಯಲ್ಲಿ ತಾವು ನಡೆದುಕೊಂಡು ಹೋದರೆ ಯಾವ ಸಮಸ್ಯೆಗೂ ಎದೆಗುಂದುವ ಅವಶ್ಯವಿಲ್ಲ.

ಇಂದಿನ ದಿನಗಳಲ್ಲಿ ಮಾತಿನಿಂದಾಗಿ ಎಷ್ಟು ಒಳ್ಳೆಯ ಕಾರ್ಯಗಳು ನಡೆಯುತ್ತವೆಯೋ ಹಾಗೆಯೇ ಅಷ್ಟೇ ಕೆಟ್ಟ ಘಟನೆಗಳೂ ನಡೆಯುತ್ತಿವೆ. ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಕಳೆಯು, ಮಾತಿನಿಂ ಸರ್ವ ಸಂಪದವು ಲೋಕಕೆ ಮಾತೇ ಮಾಣಿಕ್ಯ ಸರ್ವಜ್ಞ ಎಂಬ ಸರ್ವಜ್ಞರ ವಚನಗಳು ಮಾತಿನ ಮಹತ್ವದ ಕುರಿತು ವರ್ಣಿಸುತ್ತದೆ. ಮಾತು ಆಡುವ ಮುನ್ನ ವಿವೇಚಿಸಿಕೊಳ್ಳಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವಂತೆ ಮಾತು ವ್ಯಕ್ತಿಯ ವ್ಯಕ್ತಿತ್ವ, ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅನೇಕರು ನನ್ನನ್ನು ಭೇಟಿಯಾದಾಗ ಈ ವಿಚಾರವನ್ನೇ ಪ್ರಸ್ತಾಪಿಸುತ್ತಾರೆ. ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಸ್ವಾಮಿ.. ಏನು ಮಾಡುವುದು? ಎಂದು ಕೇಳುತ್ತಾರೆ. ಆಗ ನಾನು ಅಹಿತಕರ ಮಾತನ್ನು ಎಂದಿಗೂ ಬೆಳೆಸಲು ಬಿಡಬಾರದು. ಅದು ಸಂವಾದದಿಂದ ವಾಗ್ವಾದಕ್ಕೆ ತಿರುಗಬಾರದು ಎಂದು ಹೇಳುತ್ತೇನೆ. ಮಾತು ಎನ್ನುವುದು ಒಂದು ಅಸ್ತ್ರ, ಕತ್ತಿ ಇದ್ದ ಹಾಗೆ. ತರಕಾರಿ ಹೆಚ್ಚಲೂ ಬಳಸಬಹುದು, ಮೂಗು ಕೊಯ್ಯಲೂ ಬಳಸಬಹುದು. ಹಾಗಾಗಿ ಮಾತನ್ನು ಪ್ರಯೋಗಿಸುವಾಗ ತುಂಬಾ ಜಾಗರೂಕರಾಗಿರಬೇಕು ಎಂದು ತಿಳಿಸುತ್ತೇನೆ.

ಆಚಾರ್ಯ ತುಳಸಿಯವರಿಗೆ ಒಮ್ಮೆ ಒಬ್ಬ ವ್ಯಕ್ತಿ ಬಂದು ಹೇಳಿದನಂತೆ. ಸ್ವಾಮಿ ನಾನು ನಿಮಗೆ ಒಂದು ಪಂಥಾಹ್ವಾನ ಕೊಡುತ್ತೇನೆ. ನಮ್ಮೊಳಗೆ ಧರ್ಮದ ವಿಚಾರದ ಬಗ್ಗೆ ಚರ್ಚೆ ನಡೆಯಲಿ. ಆ ಚರ್ಚೆಯಲ್ಲಿ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಸವಾಲೊಡ್ಡಿದನಂತೆ. ಅದಕ್ಕೆ ಆಚಾರ್ಯರು ಅಲ್ಲಪ್ಪ ನಿನ್ನ ಉದ್ದೇಶ ಏನು? ನೀನು ನನ್ನನ್ನು ಸೋಲಿಸಿದರೆ, ಚರ್ಚೆ, ವಾಕ್​ಚಾತುರ್ಯದಲ್ಲಿ ನೀನು ಗೆದ್ದರೆ ಏನು ಲಾಭ ಎಂದು ಕೇಳಿದರಂತೆ. ಅದಕ್ಕಾತ ನನಗೆ ಲಾಭ, ನಷ್ಟ ಮುಖ್ಯ ಅಲ್ಲ. ನಿಮ್ಮೊಂದಿಗೆ ಚರ್ಚೆಯಲ್ಲಿ ಗೆದ್ದು ನಾನು ನಿಮಗಿಂತ ಪ್ರಭಾವಶಾಲಿ ಶಕ್ತಿಶಾಲಿ ಎಂದು ಗುರುತಿಸಿಕೊಳ್ಳಬೇಕು ಎಂಬುದೇ ನನ್ನ ಹಂಬಲ ಎಂದು ಹೇಳುತ್ತಾನೆ. ಆಗ ಆಚಾರ್ಯರು ಹೇಳುತ್ತಾರೆ, ಇಲ್ಲ ನಾನು ನಿನ್ನೊಂದಿಗೆ ತರ್ಕ ಮಾಡದೆ ಮೊದಲೇ ಸೋಲೊಪ್ಪಿಕೊಂಡರೆ ಏನಾಗುತ್ತದೆ, ನಾನು ನಿನ್ನೊಂದಿಗೆ ಚರ್ಚೆಯಲ್ಲಿ ಗೆದ್ದು ನನಗೇನೂ ಆಗಬೇಕಾದದ್ದಿಲ್ಲ. ಹಾಗಾಗಿ ಆಚಾರ್ಯರನ್ನು ನಾನು ಸೋಲಿಸಿದ್ದೇನೆ ಎಂದು ಪ್ರಪಂಚ ಪೂರ್ತಿ ತಿರುಗಿಕೊಂಡು ಹೇಳು. ನನಗೆ ಅದರಿಂದ ಯಾವುದೇ ನೋವಿಲ್ಲ ಎಂದು ಆಚಾರ್ಯರು ಹೇಳಿದರು. ಹೀಗೆ ಗೆಲ್ಲಬೇಕೆಂದು ಬಂದ ವ್ಯಕ್ತಿಯು ಆಚಾರ್ಯರ ಅನೇಕ ಪ್ರವಚನಗಳನ್ನು ಕೇಳುತ್ತಾನೆ. ಬಳಿಕ ಹೇಳುತ್ತಾನೆ ಆಚಾರ್ಯರೇ ನಾನು ವಿಭಿನ್ನ ರೀತಿಯಲ್ಲಿ ಹಿಂಸೆ ಕೊಟ್ಟರೂ ನೀವು ಪ್ರತಿಕ್ರಿಯಿಸದೆ ಇರುವುದರಿಂದ ಇವತ್ತು ನನ್ನ-ನಿಮ್ಮ ವ್ಯಕ್ತಿತ್ವ ಏನು ಎಂಬುದರ ಬಗ್ಗೆ ನನಗೆ ಅರಿವಾಗಿದೆ. ಇದು ಸ್ಪರ್ಧೆ, ಗೆಲುವು-ಸೋಲು ಎನ್ನುವುದಕ್ಕಿಂತ ಬದುಕಿನ ಸೂಕ್ಷ್ಮತೆ ತಿಳಿದುಕೊಳ್ಳುವ ನಿಮ್ಮ ಪ್ರವಚನಗಳೇ ನನಗೆ ಉಪಯುಕ್ತವಾದವು ಎಂದು ಒಪ್ಪಿಕೊಂಡ.

ಧಾರ್ವಿುಕ ಚಿಂತನೆ ಮತ್ತು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಹೋದರೆ ಅದರಿಂದ ನಮಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎನ್ನುತ್ತಾರೆ ಆಚಾರ್ಯರು. ಹಾಗಾಗಿ ಧರ್ಮ ಮತ್ತು ಧಾರ್ವಿುಕ ಆಚರಣೆಗಳು ಮನುಷ್ಯನಿಗೆ ಸೂಕ್ತವಾದಂತಹ ವ್ಯಕ್ತಿತ್ವವನ್ನು ಕೊಡುತ್ತದೆ ಮತ್ತು ಮನಸ್ಸಿಗೆ ಶಾಂತಿ-ನೆಮ್ಮದಿಯನ್ನು ಕೊಡುತ್ತದೆ. ನಾವು ಸಮಾಜದಲ್ಲಿ ಕೆಲವರನ್ನು ಗುರುತಿಸುವಾಗ ಆತ ಬಹಳ ಧಾರ್ವಿುಕನಿದ್ದಾನೆ ಎನ್ನುತ್ತೇವೆ. ಅಂದರೆ ಸಾತ್ವಿಕ, ತಾಳ್ಮೆಯ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದಾನೆ ಎಂಬ ಅರ್ಥ ನೀಡುತ್ತದೆ. ಆತನಿಂದ ಯಾವುದೇ ಹಾನಿ ಇಲ್ಲ ಎಂದು ಗೊತ್ತಾದಾಗ ಆತ ಶಾಂತಮೂರ್ತಿ ಎಂದು ಹೇಳುತ್ತಾರೆ. ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಬಹಳ ಸುಲಭದ ಕೆಲಸವಲ್ಲ. ಸಾಕಷ್ಟು ಇಂದ್ರೀಯ ಸುಖಗಳು ಮನಸ್ಸನ್ನು ಚಂಚಲಗೊಳಿಸುತ್ತವೆ. ವಿವಿಧ ರೀತಿಯ ಪ್ರೇರಣೆ, ಆಕರ್ಷಣೆಗಳಿಂದ ಹೊರಬರಬೇಕಾಗುತ್ತದೆ. ಅವೆಲ್ಲವುಗಳಿಂದ ಹೊರ ಬರಬೇಕಾದರೆ ಧ್ಯಾನ, ಯೋಗ, ಮತ್ತಿತರ ಸಾಧನಗಳು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ. ನಮ್ಮ ವ್ಯಕ್ತಿತ್ವವನ್ನು ರಕ್ಷಣೆ ಮಾಡಿಕೊಳ್ಳುವುದು, ವಿಚಾರಧಾರೆಯನ್ನು ಪ್ರಸ್ತುತವಾಗಿ ಇಟ್ಟುಕೊಳ್ಳುವುದು. ಯಾವುದೇ ಅಸಹನೀಯ ಪರಿಸ್ಥಿತಿಯಲ್ಲೂ ಕೂಡ ತನ್ನ ವ್ಯಕ್ತಿತ್ವವನ್ನು ಹೊಂದಾಣಿಕೆ ಮಾಡಿಕೊಳ್ಳದೆ ಇರುವಂತಹ ಭಾವನೆ ಬಹಳ ಅಗತ್ಯವಿದೆ. ಒಬ್ಬ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ ನಿತ್ಯವೂ ತನ್ನ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ರೋಗ ನಿರೋಧಕ ಶಕ್ತಿ (ಆಂಟಿಬಯೋಟಿಕ್) ಬೆಳೆಸಿಕೊಳ್ಳಬಹುದು ಅಥವಾ ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳಲೂಬಹುದು. ರೋಗ ನಿರೋಧಕ ಶಕ್ತಿ ಖಾಯಿಲೆ ಬಾರದಂತೆ ತಡೆದರೆ, ವೈದ್ಯರು ನೀಡುವ ಔಷಧ ಬಂದ ಕಾಯಿಲೆಯನ್ನು ಉಪಶಮನಗೊಳಿಸಲು ಸಹಕಾರಿಯಾಗುತ್ತದೆ. ಯಾವುದನ್ನು? ಯಾವಾಗ? ಹೇಗೆ? ಬಳಸಬೇಕು ಎನ್ನುವುದು ನಮ್ಮ ಕೈಯಲ್ಲಿದೆ ಎನ್ನುತ್ತಾರೆ ಮಹಾತ್ಮರು. ಹಾಗಾಗಿ ಆಯ್ಕೆ ನಮಗೆ ಬಿಟ್ಟದ್ದು. ಪೌಷ್ಟಿಕ ಆಹಾರ ಮತ್ತು ಒಳ್ಳೆಯ ಚಿಂತನೆಗಳಿಂದ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಿ. ಶಾಂತಚಿತ್ತರಾಗಿರಿ ಎಂಬ ಸಂತರ ನುಡಿ ನಮಗೆಲ್ಲ ಪ್ರೇರಣೆ ನೀಡುವಂಥದ್ದು.

ಒಂದು ಸಂದರ್ಭದಲ್ಲಿ ಒಬ್ಬ ಆಭರಣ ವ್ಯಾಪಾರಿ ಮಹಾತ್ಮರೊಂದಿಗೆ ವ್ಯವಹಾರದಲ್ಲಿ ತೊಡಗಿರುತ್ತಾನೆ. ಮಹಾತ್ಮರು ಆಭರಣದ ವ್ಯಾಪಾರಿಗೆ ಮುಂಗಡ ಹಣ ನೀಡಿ ಈ ಹಣದಿಂದ ನನಗೆ ಆಭರಣಗಳನ್ನು ಮಾಡಿಕೊಡು ಎಂದು ಹೇಳುತ್ತಾರೆ. ಆದರೆ ಇವರು ವ್ಯವಹಾರ ಮಾಡಿದ ಕೆಲವೇ ದಿನಗಳಲ್ಲಿ ಬೆಲೆ ಏರಿಕೆಯಾಗಿ ಆತನಿಗೆ ಸಾವಿರಾರು ರೂ.ಗಳ ನಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಆ ವ್ಯಕ್ತಿ ಬಂದು ಗುರುಗಳಲ್ಲಿ ಕೇಳಿಕೊಳ್ಳುತ್ತಾನೆ. ಗುರುಗಳೇ ಬೆಲೆ ಏರಿಕೆಯಿಂದಾಗಿ ನನಗೆ ತಮ್ಮೊಡನೆ ಮಾಡಿದ ವ್ಯವಹಾರದಲ್ಲಿ ಬಹಳಷ್ಟು ನಷ್ಟವಾದ ಕಾರಣ ಕೊಟ್ಟ ಮಾತು ಪಾಲಿಸಲಾಗುತ್ತಿಲ್ಲ ಎಂದು.

ಆಗ ಗುರುಗಳು ನಾನೇನೂ ನಿನ್ನನ್ನು ಕರೆದು ನನಗೆ ರೊಕ್ಕ ಕೊಡು, ಚಿನ್ನ ಕೊಡು ಎಂದು ಕೇಳಲಿಲ್ಲ. ನೀನೇ ಈಗ ಬಂದು ಹಣ ಕೊಡಲು ಸಾಧ್ಯವಾಗುತ್ತಿಲ್ಲ ಅನ್ನುತ್ತಿದ್ದೀಯ. ಬೆಲೆ ಏರಿಕೆಯಿಂದ ಆಭರಣ ಮಾಡಿಕೊಡಲು ನಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದೀಯ. ಹೀಗಾಗಿ ನೀನು ಈ ಮಾತನ್ನು ಹೇಳುವ ಅಗತ್ಯ ಇರಲಿಲ್ಲ. ಬದಲಾಗಿ ನಾನೇ ನಿನ್ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿ ಅವರು ತಮ್ಮೊಳಗೆ ಮಾಡಿಕೊಂಡಿದ್ದ ಒಪ್ಪಂದ ಪತ್ರವನ್ನು ವಾಪಾಸ್ಸು ಕೊಡುತ್ತಾರೆ. ಅಂದರೆ ಮಹಾತ್ಮರು ನ್ಯಾಯಕ್ಕಾಗಿ ತ್ಯಾಗವನ್ನು ಮಾಡಲು ಸಿದ್ಧರಿದ್ದರು. ಮತ್ತು ಅವರ ದೃಷ್ಟಿಯಲ್ಲಿ ಹಣಕ್ಕಿಂತ ಹೆಚ್ಚು ವ್ಯವಹಾರಸ್ಥನಲ್ಲಿ ಆಗಬಹುದಾದಂತಹ ನಷ್ಟವನ್ನು ತಪ್ಪಿಸುವ ದೃಷ್ಟಿ ಇತ್ತು. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಸೋಲು ಗೆಲುವು, ಲಾಭ-ನಷ್ಟಕ್ಕಿಂತ ಹೆಚ್ಚು ಮಾತು ಉಳಿಸಿಕೊಳ್ಳುವ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು.

ಇಂದಿನ ಆಧುನಿಕ ಜೀವನದಲ್ಲಿ ನಂಬಿಕೆ ಯಾವುದು? ಮೂಢನಂಬಿಕೆ ಯಾವುದು ಎಂಬ ದ್ವಂದ್ವಗಳು ಸಾಕಷ್ಟು ಜನರಲ್ಲಿವೆ. ಹಾಗೆಯೇ ಧರ್ಮ-ಅಧರ್ಮ, ಸತ್ಯ-ಅಸತ್ಯ, ನ್ಯಾಯ-ಅನ್ಯಾಯಗಳ ಕುರಿತಾಗಿಯೂ ಗೊಂದಲಗಳು ಉಂಟಾಗುತ್ತಿವೆ. ಅಸತ್ಯವನ್ನೇ ಸತ್ಯ ಎಂದು ಬಿಂಬಿಸುತ್ತಾ ಲಾಭ ಪಡೆಯುವವರು, ಅನ್ಯಾಯವನ್ನೇ ನ್ಯಾಯವೆಂದು ಹೇಳುತ್ತಾ ಕೆಲಸ ಮಾಡಿಕೊಳ್ಳುವವರು, ಸಮಯ ಸಾಧಿಸುವವರು ಈ ಮೂಲಕ ಸುಲಭವಾಗಿ ಜೀವನ ನಿರ್ವಹಣೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ಅಂತಹ ಜನರನ್ನು ನಂಬುವ ಮುಗ್ಧ ಜನರು ಮಾತ್ರ ಮೋಸ ಹೋಗುವ ಬಲಿಪಶುವಾಗುತ್ತಾರೆ. ಮುಖ್ಯವಾಗಿ ತಿಳಿಯಬೇಕಾದುದೆಂದರೆ ಯಾರು ಏನೇ ಹೇಳಿದರೂ ಸುಳ್ಳು ಸತ್ಯವಾಗಲಾರದು, ಅನ್ಯಾಯ-ನ್ಯಾಯವಾಗಲಾರದು, ಅಧರ್ಮ ಧರ್ಮವಾಗಲಾರದು. ಅಜ್ಞಾನಿಗಳು ನಮ್ಮ ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದರೆ ನಮ್ಮ ಧರ್ಮಕ್ಕೇನೂ ಆಗದು. ಟೀಕೆ, ಲೇವಡಿ, ಸಿಟ್ಟು, ಹಠ ಮತ್ತು ದ್ವೇಷಗಳನ್ನು ನಿತ್ಯವೂ ಕಾಣಬಹುದಾಗಿದೆ. ಮನೆ, ಕಚೇರಿ, ಸಮಾಜಗಳಲ್ಲಿ ಸಣ್ಣ-ಪುಟ್ಟ ವಿಷಯಗಳೂ ವಿಕೋಪಕ್ಕೆ ಹೋಗುವುದುಂಟು. ಸಿಟ್ಟು, ಹಠ ಮತ್ತು ದ್ವೇಷ ಇನ್ನೊಬ್ಬರನ್ನು ಸೋಲಿಸಬೇಕು, ಅವಮಾನಿಸಬೇಕು ಎಂಬ ಭಾವನೆ ಇರುವ ಮನುಷ್ಯ ಯಾವತ್ತೂ ಗೆಲ್ಲಲಾರ ಎಂದು ಮಹಾತ್ಮರು ತಿಳಿಸುತ್ತಾರೆ. ಕ್ರಿಯೆಗೆ ನೀಡುವ ಪ್ರತಿಕ್ರಿಯೆಗಳು ಮತ್ತಷ್ಟು ದ್ವೇಷ. ಅಶಾಂತಿಯನ್ನು ಉತ್ಪತ್ತಿ ಮಾಡಬಹುದು ಮತ್ತು ಹೆಚ್ಚು ಮಾನಸಿಕ ಒತ್ತಡವನ್ನೂ ತರಬಹುದು. ಒಬ್ಬ ವ್ಯಕ್ತಿಯನ್ನು ಆತ ಮೋಸಗಾರ, ಕಳ್ಳ ಎಂದ ತಕ್ಷಣ ಯಾರೂ ಮೋಸಗಾರ ರಾಗಲಾರರು. ಅದೇ ರೀತಿ ಒಬ್ಬಾತನನ್ನು ಬಹಳ ಪುಣ್ಯವಂತ, ಮಹಾತ್ಮ ಎಂದ ತಕ್ಷಣ ಆತ ಮಹಾತ್ಮನಾಗಲಾರ. ಅದಕ್ಕೆ ಸಾಧನೆ ಬೇಕಾಗುತ್ತದೆ. ಕೆಟ್ಟದ್ದನ್ನು ದೂರ ಇಡುವುದು ಮತ್ತು ಉತ್ತಮವಾದ ಅಂಶವನ್ನು ಧರಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ. ಅದಕ್ಕಾಗಿ ಸಾಕಷ್ಟು ರೀತಿಯ ಸಹಿಷ್ಣುತೆಯ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ತಾಳ್ಮೆ, ಸಮಾಧಾನ, ಧನಾತ್ಮಕ ಚಿಂತನೆಗಳು ದ್ವೇಷ, ಅಸೂಯೆ, ಅಶಾಂತಿ ಇತ್ಯಾದಿಗಳಿಂದ ದೂರ ಇರಲು ಸಹಕಾರಿಯಾಗಿವೆ. ನಮ್ಮ ಮನೆಯ, ಸಮಾಜ ಹಾಗೂ ನಮ್ಮ ಒಳಗೂ ಇರಬಹುದಾದಂಥ ದ್ವೇಷ, ಅಸೂಯೆಗಳು ಅಳಿಯಲಿ. ನಮ್ಮೆಲ್ಲರಲ್ಲಿ ತಾಳ್ಮೆ, ತ್ಯಾಗ, ಸಹಬಾಳ್ವೆ, ಸಹಿಷ್ಣುತೆಗಳು ಇನ್ನಷ್ಟು ಗಟ್ಟಿಯಾಗಲಿ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net