ಅಡುಗೆ ನೋಡಿ ತಿಳಿ, ಮಾಡಿ ಕಲಿ; ಕಲಿಕೆಗೆ ಉತ್ತಮ ಮಾರ್ಗ

Putani
Published on

ಮಕ್ಕಳ ಪರೀಕ್ಷೆ ಮುಗಿದು, ಫಲಿತಾಂಶವೂ ಬಂದಾಯ್ತು. ಬೇಸಿಗೆ ರಜೆ ಶುರುವಾಗಿದೆ. ಇನ್ನೊಂದು ತಿಂಗಳು ಕಳೆದರೆ ಮತ್ತೆ ಶಾಲೆಗಳು ಪ್ರಾರಂಭ. ಈ ಮಧ್ಯದಲ್ಲಿ ಮಕ್ಕಳು ತಮಗೆ ಬೇಸರವಾಗುತ್ತಿದೆ, ಈ ಬೇಸಿಗೆ ರಜೆ ಕಳೆಯುವುದು ಹೇಗೆ ಎಂದು ಗೊಣಗುವ ಮೊದಲು ಅವರನ್ನು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪೋಷಕರ ಆದ್ಯ ಕರ್ತವ್ಯ. ಮಕ್ಕಳು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಲು ಕೆಲವು ಮನೆಗೆಲಸಗಳನ್ನೂ ಕಲಿಸುವುದು ಒಳ್ಳೆಯದು. ಇದರಿಂದ ಮಕ್ಕಳು ಬಿಜಿಯಾಗುವುದಲ್ಲದೆ, ಕೆಲಸವನ್ನು ಕಲಿತಂತಾಗುತ್ತದೆ. ಇಲ್ಲಿ ಅಡುಗೆ ಕೆಲಸ ಮಾಡುತ್ತಲೇ ಮಕ್ಕಳು ಏನೆಲ್ಲಾ ಜ್ಞಾನ ಪಡೆದುಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ ನೋಡಿ...

| ಪ್ರಾರ್ಥನಾ ಬೆಂಗಳೂರು

ಕೆಲಸದಿಂದ ಜವಾಬ್ದಾರಿ ತನಕ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಅಡುಗೆ ಕಲಿಯುವಂತೆ ಪ್ರೇರೇಪಿಸುವುದು ಒಳ್ಳೆಯದು. ಅಡುಗೆ ಮಾಡುವುದು ಸಮಯ ಕಳೆಯುವ ಮಾತ್ರವಲ್ಲ, ಅದ್ಭುತ ಜೀವನ ಕೌಶಲವೂ ಆಗಿದೆ. ಅನೇಕ ಪಾಲಕರು ಮಕ್ಕಳು ಹದಿಹರೆಯಕ್ಕೆ ಬಂದ ಮೇಲೆ ಅಥವಾ ಪ್ರೌಢಾವಸ್ಥೆ ದಾಟಿದಾಗ ಮಾತ್ರ ಅಡುಗೆ ಕಲಿಯುವಂತೆ ಹೇಳುತ್ತಾರೆ. ಆದರೆ ಚಿಕ್ಕವರಾಗಿದ್ದಾಗಲೇ ಪ್ರಾರಂಭಿಸುವುದು ಒಂದು ಉತ್ತಮ ಆಯ್ಕೆ. ತರಕಾರಿಗಳನ್ನು ಕತ್ತರಿಸುವುದು, ಪದಾರ್ಥಗಳನ್ನು ಮಿಶ್ರಣ ಮಾಡುವುದು, ಸಣ್ಣಪುಟ್ಟ ಬೇಕಿಂಗ್ ಕಲಿಕೆ, ತಂಪು ಪಾನೀಯಗಳನ್ನು ಮಾಡುವುದು ಅಥವಾ ಸಲಾಡ್ ರುಚಿಯನ್ನು ಸರಿಪಡಿಸುವುದು ಹೀಗೆ ಹಲವಾರು ಸರಳವಾದ ಅಡುಗೆ ಮನೆ ಕೆಲಸಗಳಲ್ಲಿ ಮಕ್ಕಳನ್ನು ತೊಡ ಗಿಸಿಕೊಂಡಾಗ ಮಕ್ಕಳಿಗೂ ಜವಾಬ್ದಾರಿ ಬರುತ್ತದೆ.

ಕೌಶಲ ಅಭಿವೃದ್ಧಿ

ಅಡುಗೆ ಮಾಡುವುದನ್ನು ನೋಡುತ್ತಾ, ಕಲಿಯುತ್ತಾ ಮಕ್ಕಳು ತಿನ್ನುವುದಕ್ಕಿಂತ ಹೆಚ್ಚಾಗಿ ಆಹಾರದ ಬಗ್ಗೆ ಗಮನ ಕೊಡಲು ಪ್ರಾರಂಭಿಸುತ್ತಾರೆ. ಆಗ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರದ ಬಗ್ಗೆ ಹೆಚ್ಚಿನ ಗೌರವ ಬರುತ್ತದೆ. ಅಲ್ಲದೆ ಅದರ ಮೌಲ್ಯ ತಿಳಿಯುತ್ತದೆ. ಆಹಾರ ಎಲ್ಲಿಂದ ಬರುತ್ತದೆ ಅಥವಾ ಪಾಕವಿಧಾನದ ಇತಿಹಾಸ/ ಮೂಲವನ್ನು ತಿಳಿಯುವುದು ಕೂಡ ಉತ್ತಮ ಕಲಿಕೆಯಾಗಿದೆ. ಅಷ್ಟೇ ಅಲ್ಲ, ಮಕ್ಕಳಿಗೆ ಪ್ರಾಯೋಗಿಕ ಗಣಿತ ಮತ್ತು ವಿಜ್ಞಾನ ಕಲಿಸಲು ಅಡುಗೆ ಒಂದು ಉತ್ತಮ ಮಾರ್ಗವಾಗಿದೆ. ಸಿಹಿ ಹುಳಿ, ಉಪ್ಪು ಮತ್ತು ಖಾರದ ಕುರಿತಂತೆ ಎಚ್ಚರಿಕೆಯ ಅಳತೆಗಳು, ಬಳಕೆ, ಏಕೆ ಮತ್ತು ಹೇಗೆ ಅಡುಗೆ ಮಾಡುವುದು ಎಂಬ ಕೌಶಲಗಳನ್ನು ಕಲಿಯುತ್ತಾರೆ.

ಪರಿಶ್ರಮದ ಜತೆಗೆ ತಾಳ್ಮೆ

ಇಲ್ಲಿಯವರೆಗೆ ಅಮ್ಮ ಮಾಡಿದ ಅಡುಗೆ ಸವಿಯುತ್ತಿದ್ದ ಮಕ್ಕಳಿಗೆ ಈಗ ಅಡುಗೆ ಮಾಡುವುದರ ಹಿಂದಿನ ಪರಿಶ್ರಮ ಮತ್ತು ತಾಳ್ಮೆ ಬಗ್ಗೆ ಅರಿವಾಗತೊಡಗುತ್ತದೆ. ಹೀಗೆ ಅಡುಗೆಯಲ್ಲಿ ಪರಿಣಿತಿ ಪಡೆದಾಯಿತು. ಆದರೆ ನಾವು ಅಡುಗೆಯ ನಂತರ ಅಡುಗೆ ಮಾಡಿದ ಸ್ಥಳ ಹಾಗೂ ಪಾತ್ರೆ ತೊಳೆಯುವ ಕೆಲಸಗಳಲ್ಲಿ ತಾಳ್ಮೆಯನ್ನು ಕಲಿಸುವುದು ಸಹ ಅತ್ಯವಶ್ಯಕ.

ಜಾಗರೂಕತೆ ವಹಿಸಿ

ಒಂದು ವೇಳೆ ಪಾಕವಿಧಾನ ವಿಫಲವಾದರೆ ಮಕ್ಕಳು ಪುನಃ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿಯಲು ಪ್ರಾಯೋಗಿಕ ಪಾಠವಾಗಬಹುದು. ಅಡುಗೆ ಕೆಲಸ ಮಕ್ಕಳು ಇತರರೊಂದಿಗೆ ಕೆಲಸ ಮಾಡಲು ಪೋ›ತ್ಸಾಹಿಸುತ್ತದೆ. ಹಾಗೆಯೇ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅಂದಹಾಗೆ ಅಡುಗೆ ಮಾಡುವಾಗ ಆ ಸ್ಥಳಗಳಲ್ಲಿ ಸಾಮಾನ್ಯವಾಗಿ ಸಾಕಷ್ಟು ಚೂಪಾದ ಸಾಧನಗಳು, ಚಾಕುಗಳು ಹಾಗೂ ಬೆಂಕಿ ಇರುವುದರಿಂದ ಮಕ್ಕಳು ಹಿರಿಯರ ಮೇಲ್ವಿಚಾರಣೆಯಲ್ಲಿ ಅಡುಗೆ ಕಲಿಯುವುದು ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net