ಮನೆ-ಮನಿ ನಿರ್ವಹಣೆಯಲ್ಲಿ ಮಹಿಳೆ..

Lalitha
Published on
ಮನೆ ನಿರ್ವಹಣೆಗೆ ಹಣಕಾಸು ಹೊಂದಾಣಿಕೆಯೇ ಈಗಿನ ಕುಟುಂಬಗಳು ಎದುರಿಸುವ ದೊಡ್ಡ ಸವಾಲು. ವೈಯಕ್ತಿಕ ಖರ್ಚು-ವೆಚ್ಚಗಳಿಗೆ ಪತಿಯನ್ನು ಅವಲಂಬಿಸುವುದೇಕೆ ಎಂದು ಪಾಕೆಟ್ ಮನಿಗಾಗಿ ದುಡಿಯುವ ಮಹಿಳೆಯರ ಮಧ್ಯೆಯೂ ವೃತ್ತಿಪರ ಸಾಧನೆಗಾಗಿ ಗುರಿ ಇಟ್ಟುಕೊಂಡು ಕೆಲಸ ಮಾಡುವ ಮಹಿಳೆಯರೂ ನಮ್ಮ ಕಣ್ಣ ಮುಂದಿದ್ದಾರೆ. ದುಡಿಯುವ ಮಹಿಳೆಯರು ಮನೆ ನಿರ್ವಹಣೆಯಲ್ಲಿ ಎದುರಿಸುವ ಸವಾಲುಗಳೇನು? ಅವರು ದುಡಿದ ಹಣ ಸ್ವಂತ ಖರ್ಚಿಗಷ್ಟೇ ಅಲ್ಲದೆ ಮನೆ ನಿರ್ವಹಣೆಯಲ್ಲಿ ಹೇಗೆ ವ್ಯಯವಾಗುತ್ತದೆ ಎಂದು ಅವಲೋಕಿಸಿದಾಗ ಕೆಲವೊಂದು ಅಂಶಗಳು ಹೊರಬೀಳುತ್ತವೆ.

| ಶ್ವೇತಾ ನಾಯ್ಕ್​

ಆರತಿ ಕಾಲೇಜಿನಲ್ಲಿ ಓದುತ್ತಿದ್ದಾಗ ಪಾಕೆಟ್ ಮನಿಗೆ ಅಪ್ಪನ ಬಳಿ ದುಡ್ಡು ಕೇಳಬಾರದು ಎಂದು ಕೆಲಸ ಮಾಡುತ್ತಿದ್ದಳು. ಆದರೆ ಮದುವೆಯಾದ ಮೇಲೆ ಅನಿವಾರ್ಯವಾಗಿ ಅದೇ ವೃತ್ತಿಯಾಗಿ ಬದಲಾಯಿತು. ಕಾರಣ ಗಂಡ ಒಬ್ಬನೇ ದುಡಿಯುತ್ತಿದ್ದರಿಂದ ಮನೆ ನಿರ್ವಹಣೆಗೆ ತಾನೂ ಹೆಗಲು ಕೊಡಬೇಕಾದ ಪರಿಸ್ಥಿತಿ ನಿರ್ವಣವಾಯಿತು. ಆದರದು ಆಕೆಯ ಹೆಗಲಿಗೆ ಭಾರ ಎನಿಸಲಿಲ್ಲ. ಬದಲಿಗೆ ಈಗಿನ ಸ್ಥಿತಿಯಲ್ಲಿ ಇಬ್ಬರೂ ದುಡಿದರಷ್ಟೇ ಮನೆ ನಿರ್ವಹಣೆ ಸಾಧ್ಯ ಎಂಬುದು ಮನದಟ್ಟಾಗಿತ್ತು. ಮನೆಯಲ್ಲಿದ್ದ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಗಂಡನಂತೆ ತಾನೂ ದುಡಿಯುತ್ತಾ ಸಂಸಾರದ ನೊಗ ಹೊತ್ತಳು...

ರೇಷ್ಮಾಳದು ಮಧ್ಯಮ ವರ್ಗದ ಕುಟುಂಬ. ಮನೆಯಲ್ಲಿ ಅಪ್ಪನ ದುಡಿಮೆ ಸಾಲುತ್ತಿರಲಿಲ್ಲವೆಂದು ತನ್ನ ಓದಿಗೆ, ಮನೆಯ ಖರ್ಚಿಗೆಂದು ತಾನೇ ಅಷ್ಟಿಷ್ಟು ದುಡಿಯುತ್ತಾ ಪದವಿ ಮುಗಿಸಿ ಮದುವೆಯಾದಳು. ಕೊನೆಗೆ ಪತಿಯ ಮನೆಯಲ್ಲೂ ಅಷ್ಟು ಸ್ಥಿತಿವಂತರಲ್ಲದ ಕಾರಣ ಮನೆ, ಮಗು, ಕುಟುಂಬ ಎಂದು ಕೂರದೆ ತಾನೂ ಗಂಡನ ಕಷ್ಟದಲ್ಲಿ ಭಾಗಿಯಾಗಿ ಮನೆ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಳು... ಇವೆರಡು ಘಟನೆಗಳಲ್ಲಿ ವ್ಯತ್ಯಾಸ ಹುಡುಕುವುದು ಕಷ್ಟ. ಏಕೆಂದರೆ ಈಗ ಕಾಲ ಮೊದಲಿನಂತಿಲ್ಲ. ಅನಾದಿ ಕಾಲದ ಆಚರಣೆಗಳಿಂದ ಹೊರಬಂದ ಮಹಿಳೆ ಸ್ವತಂತ್ರ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾಳೆ. ಈ ದೇಶದಲ್ಲಿ ಮಹಿಳೆ ಏನೆಲ್ಲ ಸಾಧಿಸಿದ್ದಾಳೆ, ಸಾಧಿಸುತ್ತಿದ್ದಾಳೆ ಎನ್ನುವುದು ಒಂದೆಡೆಯಾದರೆ ಮನೆ ನಿರ್ವಹಣೆಗೆ ತನ್ನ ಕೊಡುಗೆ ಎಷ್ಟು ನೀಡಿದ್ದಾಳೆ ಎನ್ನುವುದು ಪ್ರಸ್ತುತ ವಿಷಯವಾಗುತ್ತದೆ. ಹವ್ಯಾಸಕ್ಕಾಗಿ ದುಡಿಯುವ ಮಹಿಳೆಯರು ಕೆಲವರಿರಬಹುದು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಪತಿಯೊಂದಿಗೆ ಪತ್ನಿಯೂ ಉದ್ಯಮ ಕ್ಷೇತ್ರದಲ್ಲಿ ತೊಡಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಸತಿ-ಪತಿ ಸೇರಿ ಮನೆ ನಡೆಸಿದರಷ್ಟೇ ಜೀವನ ಅನ್ನುವ ಪರಿಸ್ಥಿತಿಗೆ ಬಂದಿದ್ದೇವೆ. ಇದು ಕಾಲದ ಜತೆಗೆ ಮಹಿಳೆ ಹೊಂದಿಕೊಂಡಿದ್ದಾಳೆ ಅನ್ನುವುದಕ್ಕಿಂತ ಆರ್ಥಿಕ ಬದಲಾವಣೆಗೆ ತಕ್ಕಂತೆ ಕುಟುಂಬದಲ್ಲೂ ಬದಲಾವಣೆಯ ಪರ್ವ ಶುರುವಾಗಿದೆ ಎಂದೇ ಹೇಳಬಹುದು. ಬಯಸಿದ ರೀತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಲು ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಇಲ್ಲಿ ಬಹುತೇಕ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಬದುಕಬೇಕು ಎಂಬ ಆಸೆಯಿಂದ ಕೆಲಸಕ್ಕೆ ಸೇರಿರುತ್ತಾರೆ. ಕೊನೆಗದು ಬದುಕಿನ ಭಾಗವಾಗಿ ಬದಲಾಗಿರುತ್ತದೆ. ಆಧುನಿಕ ಪರಿಸ್ಥಿತಿಗೆ ಒಗ್ಗಬೇಕೆಂದರೆ ಇಂತಹ ಹೊಂದಾಣಿಕೆಗಳು ಅಗತ್ಯವಾಗಿ ಆಗಬೇಕು.

ಮಹಾತ್ಮ ಗಾಂಧಿ ಪರಿಕಲ್ಪನೆಯ ಸ್ವಾತಂತ್ರ್ಯ ಮಹಿಳೆಯರಿಗೆ ಎಷ್ಟು ಸಿಕ್ಕಿದೆಯೋ ತಿಳಿದಿಲ್ಲ. ಅದರ ಸ್ವರೂಪವನ್ನು ಕೆಲಸದ ವಿಷಯದಲ್ಲಿ ಅರ್ಥಮಾಡಿಕೊಳ್ಳುವುದಾದರೆ ಖಂಡಿತಾ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಗೆ ಸಮಾನ ಸ್ವಾತಂತ್ರ್ಯ ಸಿಕ್ಕಿದೆ ಎನ್ನಬಹುದು. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳೆಯರು ಬದುಕಿನ ಅಗತ್ಯಗಳಿಗೆ ಅನುಗುಣವಾಗಿ ಈ ಕ್ಷೇತ್ರದಲ್ಲೂ ಮುಂದುವರಿಯುತ್ತಿ ದ್ದಾರೆ. ಮನೆ ನಿರ್ವಹಣೆಗೆ ಹೆಗಲು ಕೊಟ್ಟು ಕುಟುಂಬದ ಆಧಾರಸ್ತಂಭವಾಗಿದ್ದಾರೆ. ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಹೆಜ್ಜೆ ಇಡುತ್ತ ಮನೆಯೆಂಬ ನಂದಾದೀಪ ಬೆಳಗುತ್ತಿದ್ದಾರೆ. ಸ್ವಾವಲಂಬಿಯಾಗಿ ಯಾರ ಹಂಗಿಗೂ ಹಾತೊರೆಯದೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಾ ಮನೆಯನ್ನು ಮುನ್ನಡೆಸುತ್ತಿದ್ದಾಳೆ. ಒಡಲಲ್ಲಿ ಕಷ್ಟ, ಅವಮಾನಗಳನ್ನು ಕಟ್ಟಿಕೊಂಡು ಬದುಕಿನ ಪ್ರಮುಖ ಹಂತ ತಲುಪುವ ಮಟ್ಟಕ್ಕೆ ಬಂದಿರುವ ಮಹಿಳೆಗೆ ಈಗ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ವಿವೇಚನೆ ಇದೆ.

ಭರವಸೆ ಮತ್ತು ಪರಿಪೂರ್ಣತೆ: ಭರವಸೆ ಮತ್ತು ಪರಿಪೂರ್ಣತೆ ಯಾವಾಗಲೂ ಕೈಜೋಡಿಸಿ ಕೆಲಸ ಮಾಡುತ್ತವೆ. ಮನೆಯಲ್ಲೂ ಕೆಲಸ ಮಾಡಿ, ಹೊರಗೂ ಕೆಲಸ ಮಾಡಿದಾಗ ಅನೇಕ ಬಾರಿ ಹೊರೆ ಅನಿಸಬ ಹುದು. ಆದರೆ ಕೆಲಸದ ಕೊನೆಯಲ್ಲಿ ಸಿಗುವ ತೃಪ್ತಿ, ಮನೆಯವರ ಮುಖದಲ್ಲಿ ಮೂಡುವ ನಗು ಎಲ್ಲವನ್ನೂ ಮರೆಸುವಂತೆ ಮಾಡುತ್ತದೆ. ಹೊರೆ ಎಂದುಕೊಂಡು ಕೆಲಸ ಮಾಡಿದರೆ ಹೊರೆಯಾಗುತ್ತದೆ. ಅಗತ್ಯತೆ, ಅನಿವಾರ್ಯ, ಸ್ವಾತಂತ್ರ್ಯ ಎಂದುಕೊಂಡರೆ ಇದೆಲ್ಲ ಪರಿಗಣನೆಗೆ ಬರುವುದಿಲ್ಲ. ನಾವು ಮಾಡುವ ಕೆಲಸವನ್ನು ನೋಡಿ ನಮ್ಮೊಳಗಿರುವ ಮಹಿಳೆಯೇ ಹೆಮ್ಮೆ ಪಡುವಂತಾಗಬೇಕು. ನಮ್ಮನ್ನು ನಾವು ಪ್ರೇರೇಪಿಸಿಕೊಂಡು ಸಿದ್ಧರಾದಾಗ ಜಗತ್ತು ಹೆಮ್ಮೆಯಿಂದ ನೋಡುತ್ತದೆ.

ಸಮಾನ ಪ್ರಾಮುಖ್ಯತೆ: ಮನೆಯಿಂದ ಹೊರ ಹೋಗುವ ಮಹಿಳೆ ತನ್ನ ಶಕ್ತಿ, ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿರುತ್ತಾಳೆ. ಅದರ ಜತೆಗೆ ಸಂಸಾರದ ರಥ ಮುನ್ನಡೆಸುವ ಜವಾಬ್ದಾರಿ ಹೊತ್ತಿರುತ್ತಾಳೆ. ಮನೆಯಲ್ಲಿ ಎಲ್ಲರ ಮನಸ್ಥಿತಿಗೆ ಹೊಂದಿಕೊಳ್ಳುವುದು, ಮಕ್ಕಳ ಪಾಲನೆ, ಪೋಷಣೆ, ಗಂಡನ ಇಚ್ಛೆಯನ್ನು ಪೂರೈಸುವುದು, ಅತ್ತೆ-ಮಾವನಿಗೆ ಮಗಳಾಗಿ ಅವರ ವಿಶ್ವಾಸದಲ್ಲಿ ನಡೆದುಕೊಳ್ಳುವುದೂ ಆಕೆಯ ಜವಾಬ್ದಾರಿ. ಮನೆ ಕೆಲಸದೊಂದಿಗೆ ಹೊರಗೆ ದುಡಿಯುವ ನಿರ್ಧಾರ ಮಾಡಿದ ಮೇಲೆ ಅಲ್ಲಿನ ಕೆಲಸದ ಒತ್ತಡದೊಂದಿಗೆ ಹೆಣ್ಣು ತನ್ನ ಪ್ರಾಮಾಣಿಕತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ತನಗೆ ಎಷ್ಟೇ ಸಮಸ್ಯೆ ಇದ್ದರೂ ಅದನ್ನು ತೋರಿಸಿಕೊಳ್ಳದೆ ತಾಳ್ಮೆ-ಸಹನೆ ಇವೆಲ್ಲದರ ಜೊತೆ ಪರಿಪೂರ್ಣತೆ ತೋರುವ ದಿಟ್ಟ ಹೆಜ್ಜೆ ಇಡಬೇಕು. ಅದು ಅವಳ ದೊಡ್ಡ ಗುಣ. ನಮ್ಮ 2 ಕಣ್ಣುಗಳಂತೆ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡಕ್ಕೂ ಸಮಾನ ಪ್ರಾಮುಖ್ಯತೆ ನೀಡಬೇಕು ಎನ್ನುತ್ತಾರೆ ಉದ್ಯಮಿ ಸ್ನೇಹಾ ರಾಕೇಶ್.

ಮನೆ, ಸಂಸಾರ, ಕುಟುಂಬ ನಿರ್ವಹಣೆ, ಮಕ್ಕಳ ನಿರ್ವಹಣೆ... ಹೀಗೆ ಹೆಣ್ಣಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆಕೆಗದು ಜನ್ಮದತ್ತವಾಗಿ ಬಂದ ಕೆಲಸ. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ದುಡಿಯುವ ಮಹಿಳೆ ಕೊನೆಗೆ ವೃತ್ತಿಪರ ಸಾಧನೆಗಾಗಿ ಹೋರಾಡುತ್ತಾಳೆ. ಸಮಯದ ಚೌಕಟ್ಟಿನಲ್ಲಿ ಎಲ್ಲವನ್ನೂ ಸರಿದೂಗಿಸುವ ಮಹಿಳೆ ನಿಜಕ್ಕೂ ಅಭಿನಂದನೆಗೆ ಅರ್ಹಳು. | ಸ್ನೇಹಾ ರಾಕೇಶ್ ವ್ಯವಸ್ಥಾಪಕ ನಿರ್ದೇಶಕಿ, ಅಕರ್​ವ್ಯಾಕ್ಸ್ ಟೆಕ್ ಪ್ರೖೆ.ಲಿ.

ಮನೆಯವರ ಸಹಕಾರ ಅಗತ್ಯ

ಆರ್ಥಿಕ ಓಟದೊಂದಿಗೆ ಜನರೂ ಓಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಮೂಲಸೌಕರ್ಯ ಕಂಡುಕೊಳ್ಳುವುದು ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ಮನೆ ನಿರ್ವಹಣೆಗೆ ಇಬ್ಬರ ದುಡ್ಡು ಖಂಡಿತ ಅವಶ್ಯಕವಾಗಿದೆ. ಗಂಡನೇ ಸಂಪಾದನೆ ಮಾಡಲಿ ಅಂತ ಬಿಟ್ಟರೆ ಎಲ್ಲದಕ್ಕೂ ಅವರ ಮುಂದೆ ಕೈಚಾಚಲು ಆಗುವುದಿಲ್ಲ. ಹೆಣ್ಣು ಮಕ್ಕಳು ಸಬಲೆಯರಾಗಬೇಕು, ಆರ್ಥಿಕವಾಗಿ ಮುಂದೆ ಬರಬೇಕು. ಮನೆಯಲ್ಲಷ್ಟೇ ಕೆಲಸ ಮಾಡಿ ನಮ್ಮ ಸಮಯವನ್ನು ವ್ಯರ್ಥ ಮಾಡುತ್ತೇವೆ. ನಾವು ಎರಡೂ ಕಡೆ ದುಡಿಯಲು ಸಮರ್ಥರು. ನಮ್ಮ ಶಕ್ತಿಯನ್ನು ನಾವು ಉಪಯೋಗಿಸಿಕೊಳ್ಳಬೇಕು. ಹೊರಗೆ ದುಡಿಯುವ ಮಹಿಳೆಗೆ ಪತಿಯ ಮತ್ತು ಕುಟುಂಬದ ಸಹಕಾರ ಅಗತ್ಯವಾಗಿ ಬೇಕು ಎನ್ನುತ್ತಾರೆ ರೇಡಿಯೋ ಜಾಕಿ ಆಗಿರುವ ದಿವ್ಯಶ್ರೀ. ಶೇ.99ರಷ್ಟು ಮಹಿಳೆಯರಿಗೆ ಮನೆ ಒಳಗೆ ಮತ್ತು ಹೊರಗಿನ ಕೆಲಸವನ್ನು ನಿರ್ವಹಣೆ ಮಾಡಲು ಸಾಧ್ಯವಾಗುವುದು ಗಂಡನ ಸಪೋರ್ಟ್ ಇದ್ದಾಗ ಮಾತ್ರ. ಯಾವತ್ತೋ ಒಂದಿನ ನಾನು ಮನೆ ಕೆಲಸ ಮಾಡದೇ ಇದ್ದಾಗ ಪತಿ ಕೋಪ ಮಾಡಿಕೊಂಡು ನೀನು ಮನೆ ಕೆಲಸ ಮಾಡಿಲ್ಲ ಅಂತ ರೇಗಬಾರದು. ಪರಸ್ಪರ ಅರ್ಥ ಮಾಡಿಕೊಳ್ಳುವವರು ಇದ್ದಾಗ ಮಾತ್ರ ಎರಡನ್ನೂ ಸರಿದೂಗಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net