

| ರಾಘವ ಶರ್ಮ ನಿಡ್ಲೆ, ನವದೆಹಲಿ
ದೇಶಾದ್ಯಂತ ಇಂದು ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ 118ನೇ ಜನ್ಮದಿನ ಆಚರಿಸುತ್ತಿದ್ದರೂ, ಶಾಸ್ತ್ರಿಯವರು ತಾಷ್ಕೆಂಟ್ನಲ್ಲಿ ಸಾವಿಗೀಡಾಗಿದ್ದು ಹೇಗೆ ಎಂಬ ರಹಸ್ಯ ಭೇದಿಸಲು ಇಂದಿಗೂ ಸಾಧ್ಯವಾಗಿಲ್ಲ. ಅವರದ್ದು ಸಹಜ ಸಾವೋ ಅಥವಾ ಕೊಲೆಯೋ ಎಂಬ ಚರ್ಚೆಗೆ ಈಗಲೂ ಉತ್ತರ ಸಿಕ್ಕಿಲ್ಲ. ಶಾಸ್ತ್ರಿಯವರು ಕಟ್ಟಾ ಕಾಂಗ್ರೆಸ್ಸಿಗರಾಗಿದ್ದರೂ, ಅವರ ಸಾವಿನ ಸತ್ಯವನ್ನು ಬಹಿರಂಗಪಡಿಸುವ ಸಾಹಸಕ್ಕೆ ಯಾವ ಕಾಂಗ್ರೆಸ್ ನಾಯಕನೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಶಾಸ್ತ್ರಿಯವರ ಎರಡನೇ ಪುತ್ರ, ಕಾಂಗ್ರೆಸ್ ಮುಖಂಡ ಅನಿಲ್ ಶಾಸ್ತ್ರಿಯವರು ಕಾಂಗ್ರೆಸ್ ಸೇರಿ ಹಲವು ಸರ್ಕಾರಗಳಿಗೆ ಈ ಬಗ್ಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗಲೂ, ಶಾಸ್ತ್ರೀಜಿಯವರ ಸಾವಿನ ಸತ್ಯದ ಕುರಿತ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ರಾಜಕೀಯ ಪಕ್ಷವಾಗಿ ಬಿಜೆಪಿ ಶಾಸ್ತ್ರಿಯವರ ಬಗ್ಗೆ ಭಾರಿ ಅಭಿಮಾನ ವ್ಯಕ್ತಪಡಿಸಿದರೂ, ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿಲ್ಲ. ತಾಷ್ಕೆಂಟ್ನಲ್ಲಿ ತಂಗಿದ್ದ ಕೋಣೆಯಲ್ಲಿ ದೂರವಾಣಿ ಇಲ್ಲದಿದ್ದದ್ದು, ವೈದ್ಯರಲ್ಲಿಗೆ ಕರೆದೊಯ್ಯಲು ವ್ಯವಸ್ಥೆಯಿಲ್ಲದ್ದು, ಮರಣೋತ್ತರ ಪರೀಕ್ಷೆಗೆ ಭಾರತ ರಾಯಭಾರ ಕಚೇರಿ ಮನವಿ ಮಾಡದೆ ಸುಮ್ಮನಿದ್ದದ್ದು, ಭಾರತಕ್ಕೆ ಮೃತದೇಹ ವಾಪಸಾದಾಗ ದೇಹ, ಮುಖಬಣ್ಣದಲ್ಲಾಗಿದ್ದ ಬದಲಾವಣೆ... ಎಲ್ಲವೂ ಹಲವು ಅನುಮಾನ ಮೂಡಿಸುತ್ತವೆ ಎನ್ನುತ್ತಾರೆ ಅನಿಲ್ ಕುಮಾರ್ ಶಾಸ್ತ್ರಿ.
ಲಾಲ್ ಬಹಾದೂರ್ ಶಾಸ್ತ್ರಿ ಮ್ಯಾನೇಜ್ವೆುಂಟ್ ಶಿಕ್ಷಣ ಸಂಸ್ಥೆ ಸೇರಿ ಹಲವು ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಅವರು, 1989ರಲ್ಲಿ ವಾರಾಣಸಿ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು. 118ನೇ ಜನ್ಮದಿನದ ಸಂಭ್ರಮಾಚರಣೆಗೆ ಲಾಲ್ ಬಹಾದೂರ್ ಶಾಸ್ತ್ರಿ ಸ್ಮಾರಕದಲ್ಲಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದ ವೇಳೆ ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಶಾಸ್ತ್ರೀಜೀ ಸಾವಿನ ಸತ್ಯ ತಿಳಿದುಕೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಇನ್ನಾದರೂ, ಸರ್ಕಾರ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ, ಈ ವಿಷಯದಲ್ಲಿ ಸತ್ಯವನ್ನು ರಹಸ್ಯವಾಗಿಟ್ಟು ದೇಶದ ಜನರನ್ನು ಕತ್ತಲಲ್ಲಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅವರ ಸಾವಿಗೆ ಸಂಬಂಧಿಸಿದ ದಾಖಲೆ ಬಹಿರಂಗಪಡಿಸುವ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಲೇಖಕ ಅನುಜ್ ಧಾರ್ ಎಂಬವರು ಪ್ರಧಾನಿ ಕಾರ್ಯಾಲಯಕ್ಕೆ ಹಿಂದೊಮ್ಮೆ ಪ್ರಶ್ನೆ ಕೇಳಿದ್ದರು. ಆದರೆ, ದಾಖಲೆ ಬಹಿರಂಗಪಡಿಸುವುದು ವಿದೇಶಗಳ ಜತೆಗಿನ ರಾಜತಾಂತ್ರಿಕ ಸಂಬಂಧಕ್ಕೆ ಹಾನಿ ಮಾಡಬಹುದು ಎಂಬ ಕಾರಣ ನೀಡಿ ದಾಖಲೆ ಬಹಿರಂಗಕ್ಕೆ ನಿರಾಕರಿಸಿತು. ದೆಹಲಿ ಪೊಲೀಸರು ಕೂಡ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದಂತೆ ತಮ್ಮ ಬಳಿ ಯಾವುದೇ ದಾಖಲೆ ಇಲ್ಲ ಎಂದಿದ್ದಾರೆ. ರಷ್ಯಾದಲ್ಲಿ (ಯುಎಸ್ಎಸ್ಆರ್) ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಒಪ್ಪಿಕೊಂಡಿದೆ ಎಂದು ವಿವರಿಸುತ್ತಾರೆ.
1966ರಲ್ಲಿ ಭಾರತ-ಪಾಕಿಸ್ತಾನ ನಡುವೆ ರಷ್ಯಾದ ತಾಷ್ಕೆಂಟ್ಲ್ಲಿ ನಡೆದ ಶಾಂತಿ ಮಾತುಕತೆ ಒಪ್ಪಂದಕ್ಕೆ ಸಹಿ ಹಾಕುವ ಸಲುವಾಗಿ ತಂದೆ ತಾಷ್ಕೆಂಟ್ಗೆ ತೆರಳುವ ತಯಾರಿಯಲ್ಲಿದ್ದರು. ಕಾರಣಾಂತರಗಳಿಂದಾಗಿ ತಾಯಿ ಲಲಿತಾ ಶಾಸ್ತ್ರಿ ಪತಿಯೊಂದಿಗೆ ಹೋಗುತ್ತಿಲ್ಲ ಎಂದು ತೀರ್ವನವಾಗಿತ್ತು. ಹೀಗಾಗಿ ನನ್ನನ್ನು ಕರೆದೊಯ್ಯುವ ಬಗ್ಗೆ ತೀರ್ವನವಾಯ್ತು. ಈ ವಿಷಯ ಅನೇಕರಿಗೆ ತಿಳಿದಿರಲಿಲ್ಲ. ಮೊದಲ ಬಾರಿ ಸೋವಿಯತ್ ಯೂನಿಯನ್ ನೋಡಲಿದ್ದೇನೆ ಎಂಬ ಸಂಭ್ರಮ ನನ್ನಲ್ಲಿ ಮನೆ ಮಾಡಿತ್ತು ಮತ್ತು ಅದನ್ನು ಕೆಲ ಸ್ನೇಹಿತರೊಂದಿಗೂ ಖುಷಿಯಿಂದ ಹಂಚಿಕೊಂಡಿದ್ದೆ. ಆದರೆ, ಅಚಾನಕ್ಕಾಗಿ ನಾನು ಬರುವುದು ಬೇಡ ಎಂದು ನಿರ್ಧಾರವಾದ್ದರಿಂದ ತುಂಬಾ ಬೇಸರಗೊಂಡಿದ್ದೆ. ಆಮೇಲೆ, ಶಾಸ್ತ್ರೀಜಿ ನನ್ನ ತಲೆ ಸವರಿ ಸಮಾಧಾನ ಮಾಡಿ, ಮುಂದಿನ ಪ್ರವಾಸದಲ್ಲಿ ಕರೆದೊಯ್ಯುವುದಾಗಿ ತಿಳಿಸಿದರು. ಆದರೂ ಬೇಸರ ತಗ್ಗಿರಲಿಲ್ಲ. 1966ರ ಜ.3 ಬೆಳಗ್ಗೆ 7 ಗಂಟೆಗೆ ತಾಷ್ಕೆಂಟ್ ವಿಮಾನ ಹತ್ತಲಿದ್ದ ಶಾಸ್ತ್ರಿಯವರಿಗೆ ಕುಟುಂಬದ ಇತರೆ ಎಲ್ಲ ಸದಸ್ಯರು ವಿಮಾನ ನಿಲ್ದಾಣಕ್ಕೆ ತೆರಳಿ ಶುಭ ಹಾರೈಸಿದ್ದರು. ಬೇಸರದ ಗುಂಗಿನಲ್ಲಿದ್ದ ನಾನು ಹಾಸಿಗೆಯಲ್ಲೇ ಬಿದ್ದುಕೊಂಡಿದ್ದೆ. ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ನನ್ನ ಹಾಸಿಗೆ ಬಳಿ ಬಂದಿದ್ದ ಶಾಸ್ತ್ರೀಜಿ, ಹಣೆ ಸವರಿ ಮುತ್ತಿಕ್ಕಿ ತೆರಳಿದ್ದರು. ನನಗವರು ನೀಡಿದ್ದ ಕೊನೆಯ ಮುತ್ತು ಅದೇ ಆಗಿತ್ತು!
ಪ್ರಧಾನಿಯಾದಾಗಲೂ ಶಾಸ್ತ್ರಿಯವರ ಬಳಿ ಸ್ವಂತ ಕಾರಿರಲಿಲ್ಲ. ಮನೆಗೊಂದು ಕಾರು ಬೇಕೆಂಬ ಆಸೆ. ಹೀಗಾಗಿ, ತಮ್ಮ ಸಹಾಯಕನಿಗೆ ಕಾರು ಬುಕ್ ಮಾಡುವಂತೆ ತಿಳಿಸಿದಾಗ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ರೂ 7000ವಷ್ಟೇ ಇದೆ. ರೂ 5000 ಸಾಲ ಮಾಡಬೇಕು ಎಂದಾಗ ನಮಗೆಲ್ಲರಿಗೂ ಆಶ್ಚರ್ಯ! ಪ್ರಧಾನಿಯಾಗಿರುವ ಅಪ್ಪನ ಬ್ಯಾಂಕ್ನಲ್ಲಿರುವುದು ಇಷ್ಟೇ ದುಡ್ಡಾ ಎಂದು ನಾವು ನಕ್ಕಿದ್ದೆವು. 1964ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಸಾಲ ಮಾಡಿ ನಮಗಾಗಿ ಡಿಎಲ್ಇ-6 ನಂಬರಿನ ಫಿಯೆಟ್ ಕಾರು ಖರೀದಿಸಿದ ಅವರು, ಮೃತಪಟ್ಟಾಗ ಬ್ಯಾಂಕ್ ಸಾಲ ಬಾಕಿ ಉಳಿಸಿಕೊಂಡಿದ್ದರು. ಸಾಲಮನ್ನಾಕ್ಕೆ ಸರ್ಕಾರ ಒಪ್ಪಿಕೊಂಡಿದ್ದರೂ, ಸ್ವಾಭಿಮಾನಿ ಅಮ್ಮ (ಲಲಿತಾ ಶಾಸ್ತ್ರಿ) ಪತಿಯ ಹೆಸರಲ್ಲಿ ಬರುತ್ತಿದ್ದ ಪಿಂಚಣಿ ಹಣದಲ್ಲಿ ಆ ಸಾಲ ತೀರಿಸಿದರು! ನಾನು ಈ ಕಾರನ್ನು ದೇಶದ ವಿವಿಧ ರಾಜ್ಯಗಳಿಗೆ ಕೊಂಡೊಯ್ದಿದ್ದೇನೆ. 2004ರ ತನಕ ಬಳಸಿಕೊಂಡೆ. 2005ರಿಂದ ಸ್ಮಾರಕದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇಟ್ಟಿದ್ದೇವೆ.
ಭಾರತ ವಿಭಜನೆ ಬಗ್ಗೆ ಲಾಲ್ ಬಹಾದೂರ್ ಶಾಸ್ತ್ರಿಯವರ ನಿಲುವು ಏನಿತ್ತು ಎಂಬ ಬಗ್ಗೆ ಅಧಿಕೃತ ದಾಖಲೆಗಳಿಲ್ಲ. ಆದರೆ, ಹಿಂದು-ಮುಸ್ಲಿಂ ಆಧಾರದಲ್ಲಿ ದೇಶ ವಿಭಜನೆಯನ್ನು ಆಗಿನ ಬಹುತೇಕ ಕಾಂಗ್ರೆಸ್ಸಿಗರು ವಿರೋಧಿಸಿದ್ದು ನಿಜ. ಬ್ರಿಟಿಷರ ಒಡೆದು ಆಳುವ ನೀತಿಯನ್ನೇ ಪ್ರತಿಪಾದಿಸಿದ್ದರಿಂದ ಅಂದು ವಿಭಜನೆ ಅನಿವಾರ್ಯವಾಗಿತ್ತು.
ಶಾಸ್ತ್ರಿಯವರು ಗಾಂಧೀಜಿಯವರ ಅನುಯಾಯಿ ಎನ್ನುವುದಕ್ಕಿಂತ ಭಕ್ತರೇ ಆಗಿದ್ದರು. ಅವರ ಪ್ರಭಾವದಿಂದಲೇ ಸತ್ಯಾಗ್ರಹ ಚಳವಳಿಗೆ ಧುಮುಕಿದ್ದರು. ಶಾಸ್ತ್ರಿಯವರ ರಾಜಕಾರಣದ ಸಾಧನೆಗೆ ಪಂಡಿತ್ ನೆಹರೂ ಕಾರಣ. ಶಾಸ್ತ್ರಿಯವರನ್ನು ಉತ್ತರ ಪ್ರದೇಶದಿಂದ ಕರೆತಂದು, ದಿಲ್ಲಿ ರಾಜಕಾರಣದಲ್ಲಿ ಮಾನ್ಯತೆ ನೀಡಿದ್ದು ಅವರೇ. ನನ್ನ ನಂತರ ಲಾಲ್ ಬಹಾದೂರ್ ಶಾಸ್ತ್ರಿ ಪ್ರಧಾನಿಯಾಗಬೇಕು ಎಂದದ್ದೂ ಪಂಡಿತ್ ನೆಹರು ಎಂದು ನೆನಪಿಸಿಕೊಳ್ಳುತ್ತಾರೆ ಅನಿಲ್ ಶಾಸ್ತ್ರಿ.
ಶಾಸ್ತ್ರಿಯವರು ಪ್ರಧಾನಿಯಾದಾಗ ಅವರಿಗೆ ಅಕ್ಬರ್ ರಸ್ತೆಯಲ್ಲಿರುವ ಬಂಗಲೆ ವಾಸ್ತವ್ಯಕ್ಕೆ ಹಂಚಿಕೆಯಾಗಿತ್ತು. ಮನೆಯ ಎಡಭಾಗದಲ್ಲಿದ್ದ ಕಟ್ಟಡ ಅವರ ಕಚೇರಿಯಾಗಿತ್ತು. ಪ್ರಧಾನಿಯಾದರೂ ಶಾಸ್ತ್ರಿಯವರಿಗೆ ಸ್ವಂತ ಆಸ್ತಿ, ಜಮೀನಿರಲಿಲ್ಲ. ಹೀಗಾಗಿ, ತಾಷ್ಕೆಂಟ್ನಲ್ಲಿ ಮೃತಪಟ್ಟ ಬಳಿಕ ನಮ್ಮ ಕುಟುಂಬ ಅಕ್ಷರಶಃ ಬೀದಿಯಲ್ಲಿತ್ತು. ಅಂದಿನ ಸರ್ಕಾರ ಅಕ್ಬರ್ ರಸ್ತೆಯ ಬಂಗಲೆಯನ್ನು ಕುಟುಂಬಕ್ಕೆ ನೀಡಿದ್ದರಿಂದ ಅಮ್ಮನೊಂದಿಗೆ ನಾವು ಇಲ್ಲಿಯೇ ನೆಲೆಸಿದೆವು. ಮನೆಯಿಂದ ಎಡಬದಿಯಲ್ಲಿದ್ದ ಶಾಸ್ತ್ರೀಜಿಯವರ ಕಚೇರಿಯಿದ್ದ ಕಟ್ಟಡ ನಮಗೆ ಅವಶ್ಯಕತೆ ಇಲ್ಲ ಎಂದು ಅಮ್ಮ ಅದನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದರು. ನಂತರ ಆ ಕಚೇರಿ ಕಟ್ಟಡವನ್ನು ಮನೆಯನ್ನಾಗಿ ಪರಿವರ್ತಿಸಿ ಇತರರಿಗೆ ನೀಡಲಾಯ್ತು. ವಿಚಿತ್ರ ಎಂದರೆ, ಆ ಮನೆಯಲ್ಲಿದ್ದ ರಾಜಕಾರಣಿಗಳು ಅಕಾಲ ನಿಧನಕ್ಕೀಡಾಗುತ್ತಿದ್ದರು. ಪ್ರೆಸ್ ಕೌನ್ಸಿಲ್ ಕಚೇರಿ ಕೆಲಸಕ್ಕೆ ಬಳಸಿಕೊಂಡಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಘೊಷಣೆಯಾಗಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹಾನಿಯಾಗಿತ್ತು! ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜೀವ್ ಗಾಂಧಿಯವರಿಗೆ 1990ರಲ್ಲಿ ಈ ಮನೆ ಹಂಚಿಕೆಯಾಗಿತ್ತು. ಆಗ ನನ್ನ ಅಮ್ಮ, ‘ರಾಜೀವ್ ಜೀ ನೀವು ಈ ಮನೆಗೆ ಬರಬೇಡಿ. ಇಲ್ಲಿಗೆ ಬಂದವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದು ಶುಭಶಕುನದ ಮನೆಯಲ್ಲ’ ಎಂದು ಸಲಹೆ ನೀಡಿದ್ದರು. ಆದರೆ, ರಾಜೀವ್ ಗಾಂಧಿ ಅದನ್ನೆಲ್ಲ ನಂಬಲಿಲ್ಲ. ದುರದೃಷ್ಟವಶಾತ್ ರಾಜೀವ್ ಗಾಂಧಿ 1992ರಲ್ಲಿ ಶ್ರೀ ಪೆರಂಬದೂರ್ನಲ್ಲಿ ಹತ್ಯೆಗೀಡಾದರು! ಈಗ ಸೋನಿಯಾ ಗಾಂಧಿ ಇದೇ ಮನೆಯಲ್ಲಿದ್ದಾರೆ.