ಕೋಳಿ ಸಾಕಣೆಗೆ ಕೊರಿಯನ್ ಪದ್ಧತಿ: ಮಲೆನಾಡಲ್ಲಿ ವಿನೂತನ ಪ್ರಯತ್ನ; ಕಡಿಮೆ ಖರ್ಚು, ಅಧಿಕ ಆದಾಯ

Hen
Published on
ಹಲವು ಸಮಸ್ಯೆಗಳಿಂದ ನಲುಗುತ್ತಿರುವ ಮಲೆನಾಡಿನ ಅಡಕೆ ಬೆಳೆಗಾರರು ಸಮಗ್ರ ಬೆಳೆ ಹಾಗೂ ಉಪಕಸುಬಿನತ್ತ ಮುಖ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಸಾಗರ ತಾಲೂಕು ಕೆಳದಿಯ ರೈತರೊಬ್ಬರು ನಾಟಿ ಕೋಳಿ ಸಾಕಣೆಗೆ ವಿನೂತನ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಅದುವೇ ಕೊರಿಯನ್ ಪದ್ಧತಿ!

| ಅರವಿಂದ ಅಕ್ಲಾಪುರ ಶಿವಮೊಗ್ಗ

ಎಲ್ಲಿಯ ಮಲೆನಾಡು, ಎಲ್ಲಿಯ ಕೊರಿಯಾ ಎಂದು ಅನೇಕರು ಮೂಗು ಮುರಿಯಬಹುದು. ಆದರೆ, ಮಲೆನಾಡಿನಲ್ಲಿ ಪಾರಂಪರಿಕವಾಗಿ ಕೋಳಿ ಸಾಕುವುದಕ್ಕಿಂತಲೂ ಕೊರಿಯನ್ ಪದ್ಧತಿಯಲ್ಲಿ ಸಾಕಣೆ ಮಾಡುವುದು ವಿಭಿನ್ನವೇ ಸರಿ! ಇಂಥದೊಂದು ಸಾಹಸಕ್ಕೆ ಮುಂದಾಗಿ ಯಶಸ್ಸು ಕಂಡುಕೊಂಡಿರುವುದು ಸಾಗರ ತಾಲೂಕು ಕೆಳದಿಯ ಕೃಷಿಕ ನಾಗರಾಜ್.

ರೈತ ನಾಗರಾಜ್ ಅಡಕೆ, ಕಾಳುಮೆಣಸು ಬೆಳೆಯುತ್ತಿದ್ದರು. ಸ್ಥಳೀಯ ಗ್ರಾಪಂನಲ್ಲಿ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡುವ ಮೂಲಕ ಗುತ್ತಿಗೆದಾರರಾಗಿಯೂ ಹೆಸರು ಮಾಡಿದ್ದರು. ವೈವಿಧ್ಯಮಯವಾಗಿ ಕೃಷಿ ಮಾಡ ಬಯಸಿ ಅನೇಕ ಪ್ರಯೋಗಗಳನ್ನೂ ಮಾಡಿದ್ದರು. ಕೆಲವು ಯಶಸ್ಸು ಕಂಡರೆ ಮತ್ತೆ ಕೆಲವು ಕೈ ಸುಟ್ಟವು. ಆದರೂ ಸಾಹಸಿ ಮನೋಭಾವ ದೂರವಾಗಿರಲಿಲ್ಲ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿಕಟ ಸಂಪರ್ಕ ಕೃಷಿಯಲ್ಲಿ ನಾವೀನ್ಯಕ್ಕೆಂದು ಅವರ ಒಡನಾಟ ಹೊಂದಿದ್ದ ನಾಗರಾಜ್​ಗೆ ಕೊರಿಯನ್ ಪದ್ಧತಿಯನ್ನು ಪರಿಚಯಿಸಿದ್ದೇ ಕೃಷಿ ಅಧಿಕಾರಿಗಳು. ಅವರು ನೀಡಿದ ಹೊಸ ಐಡಿಯಾವನ್ನು ಹಿಂದುಮುಂದೆ ನೋಡದೆ ಅಳವಡಿಸಿಕೊಂಡ ನಾಗರಾಜ್ ಈಗ ಕೋಳಿ ಸಾಕಣೆಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿದ್ದಾರೆ.

ಲಾಭವೇನು?: ಕಡಿಮೆ ಜಾಗದಲ್ಲಿ ಹೆಚ್ಚು ಕೋಳಿ ಸಾಕಣೆ ಮಾಡುವುದು, ಆ ಕೋಳಿಗಳಿಗೆ ಅಗತ್ಯವಿರುವ ಆಹಾರವನ್ನು ಅಲ್ಲಿಯೇ ದೊರೆಯುವಂತೆ ಮಾಡುವುದೇ ಕೊರಿಯನ್ ಪದ್ಧತಿಯ ವಿಶೇಷತೆ. ಕಡಿಮೆ ಖರ್ಚಿನಲ್ಲಿ ಕೋಳಿ ಸಾಕಣೆ ಮಾಡಬಯಸುವವರ ಪಾಲಿಗೆ ಈ ವಿಧಾನ ಸಹಕಾರಿಯಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಹೆಚ್ಚು ಮಾನವಶ್ರಮದ ಅಗತ್ಯವೂ ಇಲ್ಲ. ಖರ್ಚು ಕೈ ಸುಡುವುದಿಲ್ಲ. ಲಕ್ಷಾಂತರ ರೂ. ಬಂಡವಾಳ ಹೂಡುವ ಅವಶ್ಯಕತೆಯೂ ಇಲ್ಲ.

ಮೇವಿನ ಖರ್ಚಿಲ್ಲ: ವರ್ಷದ ಹಿಂದೆ ನಾಗರಾಜ್ 25 ಕೋಳಿಗಳನ್ನು ಈ ಪದ್ಧತಿಯಲ್ಲಿ ಸಾಕಲು ಶುರು ಮಾಡಿದ್ದಾರೆ. ಪರಿಣಾಮ ಕೋಳಿ ಆಹಾರಕ್ಕೆ ಖರ್ಚಾಗುತ್ತಿದ್ದ ಸುಮಾರು ಐದಾರು ಸಾವಿರ ರೂ. ಉಳಿತಾಯವಾಗಿದೆ. ವರ್ಷದಲ್ಲಿ ಸುಮಾರು 30 ಸಾವಿರ ರೂ. ಮೌಲ್ಯದ ಗೊಬ್ಬರ ಉತ್ಪಾದನೆಯಾಗುತ್ತಿದೆ. ಅದನ್ನು ತೋಟಕ್ಕೆ ಬಳಸುವ ಮೂಲಕ ಸಾವಯವ ಕೃಷಿಗೆ ಮತ್ತಷ್ಟು ಬಲ ಬರುವಂತೆ ನೋಡಿಕೊಂಡಿದ್ದಾರೆ.

ಕೃಷಿ ಇಲಾಖೆಯಿಂದ ಪರಿಚಯ: ಸಾಗರ ತಾಲೂಕಿನ ಕೃಷಿ ಅಧಿಕಾರಿಗಳು ನಾಗರಾಜ್ ಅವರನ್ನು ಸಂರ್ಪಸಿ ಕೊರಿಯನ್ ಪದ್ಧತಿಯಲ್ಲಿ ಕೋಳಿ ಸಾಕಣೆ ಮಾಡುವಂತೆ ವಿವರಣೆ ನೀಡಿದರು. ಇದಕ್ಕಾಗಿ ಇಲಾಖೆಯಿಂದ 4 ಸಾವಿರ ರೂ. ಸಹಾಯಧನವನ್ನೂ ಒದಗಿಸಿದರು. ಇದೆಲ್ಲ ನಡೆದಿದ್ದು ವರ್ಷದ ಹಿಂದೆ. ಕೊರಿಯನ್ ವ್ಯವಸ್ಥೆಯಲ್ಲಿ ಕೋಳಿ ಸಾಕಲು ನಾಗರಾಜ್ ಆರಂಭಿಕವಾಗಿ ಸುಮಾರು 20 ಸಾವಿರ ರೂ. ಖರ್ಚು ಮಾಡಿದ್ದರು. ಅದಕ್ಕೆ ಬೇಕಾದ ವಸ್ತುಗಳೆಲ್ಲವೂ ಮನೆಯ ಹಿತ್ತಲಿನಲ್ಲೇ ಸಿಕ್ಕ ಕಾರಣ ಪದ್ಧತಿ ಅಳವಡಿಕೆಗೆ ಯಾವುದೇ ಸಮಸ್ಯೆಯಾಗಲಿಲ್ಲ.

ಆದಾಯದ ಜತೆ ಗೊಬ್ಬರ ಫ್ರೀ!: ಒಂದು ಕಡೆ ಕೋಳಿ ಸಾಕಣೆಯಿಂದ ಆದಾಯ ಬಂದರೆ 8-10 ತಿಂಗಳಿಗೇ ಯಥೇಚ್ಛ ಗೊಬ್ಬರ ಸಿಗುತ್ತದೆ. ಈ ಗೊಬ್ಬರವನ್ನು ಜಮೀನಿಗೆ ಬಳಕೆ ಮಾಡಿದರೆ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಹೀಗೆ ಕೋಳಿ ಸಾಕುವ ಜಾಗದಲ್ಲಿ ಗೊಬ್ಬರವನ್ನು ತೆರವುಗೊಳಿಸಿದ ಬಳಿಕ ಮತ್ತೆ ಆರಂಭದಂತೆಯೇ ಮಣ್ಣು, ಅಡಕೆ ಸಿಪ್ಪೆಯ ಅಂಕಣ ಸಿದ್ಧಪಡಿಸಿ ಅದನ್ನು ತೇವಗೊಳಿಸಬೇಕು. ವರ್ಷಕ್ಕೊಮ್ಮೆಯಾದರೂ ಇದನ್ನು ತೆರವು ಮಾಡಲೇಬೇಕು.

ನಾನು ಕೊರಿಯನ್ ಪದ್ಧತಿಯಲ್ಲಿ ಕೋಳಿ ಸಾಕುವುದನ್ನು ಅನೇಕರು ಬಂದು ನೋಡಿದ್ದಾರೆ. ಇಂತಹದ್ದೇ ವ್ಯವಸ್ಥೆ ಅಳವಡಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ನನಗೆ ಕೊರಿಯನ್ ಪದ್ಧತಿ ಆರ್ಥಿಕ ಹೊರೆ ಎನಿಸಿಲ್ಲ. ಆದಾಯದೊಂದಿಗೆ ಗೊಬ್ಬರವೂ ಸಿಗುವುದರಿಂದ ಎಲ್ಲ ರೀತಿಯಲ್ಲೂ ಲಾಭವೇ ಆಗಿದೆ. | ನಾಗರಾಜ್, ಕೃಷಿಕ

ಏನಿದು ಕೊರಿಯನ್ ಪದ್ಧತಿ?

ಕೊರಿಯನ್ ಪದ್ಧತಿ ಅಳವಡಿಸಿಕೊಳ್ಳಲು ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ. ಕೇವಲ 10ಗಿ10 ವಿಸ್ತೀರ್ಣದ ಜಾಗದಲ್ಲಿ ಸುಮಾರು ಮೂರು ಅಡಿ ಆಳದ ಸಮತಟ್ಟಾದ ಭೂಮಿಯನ್ನು ಮೊದಲು ಅಣಿಗೊಳಿಸಬೇಕು. ಅದರಲ್ಲಿ ಒಂದೂವರೆ ಅಡಿ ಆಳಕ್ಕೆ ಮಣ್ಣನ್ನು ತುಂಬಬೇಕು. ಅದರಲ್ಲೂ ಗೆದ್ದಲು ಹುತ್ತದ ಮಣ್ಣಾಗಿದ್ದರೆ ಇನ್ನೂ ಉತ್ತಮ. ಹೀಗೆ ಮಣ್ಣು ತುಂಬಿದ ಬಳಿಕ ದರಗು(ಒಣಗಿದ ಎಲೆಗಳು), ಕ್ರಮೇಣ ತೇವಾಂಶದಲ್ಲಿ ಕೊಳೆಯಬಹುದಾದ ಸಣ್ಣ ಸೌದೆ ತುಂಡುಗಳನ್ನು ತುಂಬಬೇಕು. ಅದರ ಮೇಲೆ ಒಣಗಿದ ಅಡಕೆ ಸಿಪ್ಪೆ ಹಾಕಬೇಕು. ಇಷ್ಟೆಲ್ಲ ಆದ ಬಳಿಕ ಕೆಲವು ದಿನ ಇದಕ್ಕೆ ನೀರು ಬಿಟ್ಟು ಹೆಚ್ಚಿನ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಯಾವಾಗಲೂ ಒಂದು ಹಂತದ ತೇವಾಂಶ ಕಾಪಾಡಿಕೊಳ್ಳುವುದು ಅವಶ್ಯ. ಕೆಲವೇ ದಿನಗಳಲ್ಲಿ ಈ ಜಾಗವು ಗೆದ್ದಲು, ಇರುವೆ ವಾಸಕ್ಕೆ ಯೋಗ್ಯವಾಗುತ್ತದೆ. ಬಳಿಕ ಈ ಜಾಗದಲ್ಲಿ ಕೋಳಿಗಳನ್ನು ಬಿಟ್ಟರೆ ಗೆದ್ದಲು, ಇರುವೆ ಕೋಳಿಗೆ ಆಹಾರವಾಗುತ್ತದೆ. ಕೋಳಿ ಸಾಕಣೆಯ ವೆಚ್ಚ ತಗ್ಗುತ್ತದೆ. ಇದೇ ಕೊರಿಯನ್ ಪದ್ಧತಿ.

ಸಮಸ್ಯೆಗೆ ಸ್ವತಃ ಪರಿಹಾರ: ಕೊರಿಯನ್ ಪದ್ಧತಿಯಲ್ಲಿ ನಾಗರಾಜ್ ಅವರಿಗೆ ಹೆಚ್ಚು ತೊಂದರೆಯಾಗಿಲ್ಲ. ಆದರೆ ಕೋಳಿಗಳು ಮೊಟ್ಟೆ ಇಡುವ ಸಂದರ್ಭದಲ್ಲಿ ಮಾತ್ರ ಹಾವುಗಳ ಕಾಟ ಹೆಚ್ಚಾಗಿತ್ತು. ಇದಕ್ಕೆ ಸ್ವತಃ ಪರಿಹಾರ ಕಂಡುಕೊಂಡ ಅವರು ಆ ಸ್ಥಳವನ್ನು ಕಬ್ಬಿಣದ ಮೆಶ್ ಮೂಲಕ ಮುಚ್ಚಿದ್ದಾರೆ. ಇದರಿಂದ ಹಾವಿನ ಕಾಟದಿಂದ ಮುಕ್ತಿ ಸಿಕ್ಕಿದೆ.

ಮಾಹಿತಿಗಾಗಿ ಸಂಪರ್ಕಿಸಿ: ನಾಗರಾಜ್ ಮೊ.ಸಂ.: 9731656972

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net