

‘ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಇಂದು ಅದೇ ಗೋವರ್ಧನ ಗಿರಿಧಾರಿಯಾಗುತ್ತದೆ!’ ಎಂಬ ಕುವೆಂಪು ಅಮೃತವಾಣಿ ಚಿಕ್ಕ-ದೊಡ್ಡ ಭೇದವಿಲ್ಲದೆ ಕನ್ನಡಪರ ಕೆಲಸಗಳೆಲ್ಲದಕ್ಕೂ ಅನ್ವಯವಾಗುತ್ತದೆ ಅಲ್ಲವೇ? ಕನ್ನಡ ಪದ ಕಟ್ಟುವ, ಕಟ್ಟಿದ್ದನ್ನು ಬಳಸುವ, ಇದೇ ಆಸಕ್ತಿ ಉತ್ಸಾಹ ನಿರಂತರವಾಗಿದ್ದರೆ ಸಹಜವಾಗಿಯೇ ನಮ್ಮ ದೈನಂದಿನ ಮಾತುಕತೆಯಲ್ಲಿ, ಓದು-ಬರಹಗಳಲ್ಲಿ ಹೆಚ್ಚುಹೆಚ್ಚು ಕನ್ನಡದ ಬಳಕೆಯಾಗುತ್ತದೆ.
ನವೆಂಬರ್ ತಿಂಗಳಿಡೀ ಮೂಡಿಬಂದ ಸರಣಿಗೆ ‘ವಿಜಯವಾಣಿ’ ಓದುಗರಿಂದ ದೊರೆತ ಅಭೂತಪೂರ್ವ ಸ್ಪಂದನ ನಿರೀಕ್ಷೆಗೂ ಮೀರಿದ್ದು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ... ಎಂಬಂತೆ ಹರಿದುಬಂದ ಪ್ರತಿಕ್ರಿಯೆಗಳು, ಪ್ರಶಂಸೆಯ ಮಾತುಗಳು ತಂದುಕೊಟ್ಟ ಸಾರ್ಥಕ್ಯ, ಧನ್ಯತೆಯ ಭಾವನೆ ಈಗಲೂ ಪುಳಕ ತರುವಂಥದ್ದು. ಪ್ರಶಂಸೆಗಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಕನ್ನಡ ಪದ ಕಟ್ಟುವ ಚಟುವಟಿಕೆಯನ್ನು ಮತ್ತು ಕಟ್ಟಿದ ಪದಗಳನ್ನು ಪ್ರಯೋಗಕ್ಕೆ ತಂದ ನಿದರ್ಶನಗಳು. ಸರಣಿಯಲ್ಲಿ ಕಟ್ಟಲಾದ ಒಟ್ಟು 28 ಪದಗಳೆಲ್ಲವನ್ನೂ ಬಳಸಿ ಸಣ್ಣಕಥೆ ಬರೆದವರು ಒಬ್ಬರಲ್ಲ ಇಬ್ಬರು! ತುರುವೇಕರೆ ಪ್ರಸಾದ್ ಮತ್ತು ಬೆಂಗಳೂರಿನಿಂದ ಸು.ನಾಗರಾಜ್. ಹಾಗೆಯೇ ‘‘ನಮ್ಮ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿನಿಯರು ‘ಕಟ್ಟುವೆವು ನಾವು...’ ಅಂಕಣ ಪ್ರಕಟವಾದ ಪತ್ರಿಕೆಯ ಪುಟಗಳನ್ನೆಲ್ಲ ಒಟ್ಟುಸೇರಿಸಿ ಪುಸ್ತಕ ಮಾಡಿಟ್ಟಿದ್ದಾರೆ. ದಿನಬಳಕೆಯ ಮತ್ತಷ್ಟು ಇಂಗ್ಲಿಷ್ ಪದಗಳಿಗೂ ಕನ್ನಡ ಪದಗಳ ಹುಡುಕಾಟ ನಡೆಸಿದ್ದಾರೆ. ಕನ್ನಡ ಪದಗಳನ್ನೇ ಬಳಸುವ ಪರಿಪಾಟ ಮಾಡಿಕೊಂಡಿದ್ದಾರೆ. ಇಂಗ್ಲಿಷ್ ಭಾಷೆಯಡಿ ಸಿಲುಕಿರುವ ಕನ್ನಡ ಭಾಷೆಯ ಪ್ರಾಮುಖ್ಯವನ್ನು ಮನಗಾಣುತ್ತಿದ್ದಾರೆ. ಕನ್ನಡದ ಅಸ್ಮಿತೆ, ಅಸೀಮತೆಯ ಬಗೆಗೆ ಹೊಸ ಸಾಧ್ಯತೆಗಳನ್ನು ನನಗೂ ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ, ಮಕ್ಕಳು ರಚಿಸಿದ ಪುಸ್ತಕದ ವಿಡಿಯೊ!’ ಎಂದು ಬೆಂಗಳೂರಿನ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಶಿಕ್ಷಕಿ ನಿಖಿತಾ ಅಡವೀಶಯ್ಯ ಬರೆದರೆ, ‘ಕನ್ನಡ ಪದ ಕಟ್ಟುವ ಚಟುವಟಿಕೆ ನಮ್ಮ ಮನೆಯಲ್ಲಿ ಚರ್ಚೆಯಷ್ಟೇ ಅಲ್ಲ ಜಗಳಕ್ಕೂ ದಾರಿಯಾಗಿದೆ! ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಇತ್ತೀಚಿನವರೆಗೆ ಸದಾ ಕೈಯಲ್ಲಿ ಮೊಬೈಲ್ ಹಿಡಿದು ಸೋಫಾ ಮೂಲೆಯಲ್ಲಿ ಮೊಟ್ಟೆ ಇಟ್ಟ ಕೋಳಿಯಂತೆ ಕುಳಿತಿರುತ್ತಿದ್ದ ನಮ್ಮ ಮಕ್ಕಳು/ಮೊಮ್ಮಕ್ಕಳು ಈಗ ಮೊಬೈಲ್ಅನ್ನು ಬದಿಗೊತ್ತಿ ಎಲ್ಲೋ ಕಪಾಟಿನಲ್ಲಿ ಧೂಳು ತಿನ್ನುತ್ತ ಬಿದ್ದಿದ್ದ ಕನ್ನಡ ಇಂಗ್ಲಿಷ್ ನಿಘಂಟುಗಳನ್ನು ಹೊರತೆಗೆದು ಅಧ್ಯಯನ ಮಾಡಿ ಆಧುನಿಕ ಇಂಗ್ಲಿಷ್ ಪದಕ್ಕೆ ಕನ್ನಡದ ಪದವನ್ನು ಕಟ್ಟುವ ಕ್ರಿಯಾತ್ಮಕ, ಚಿಂತನ-ಮಂಥನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ವಾಟ್ಸ್ಆಪ್ ಗ್ರೂಪ್ಗಳಲ್ಲಿ ಹಾಡುಗಳ ಅಂತ್ಯಾಕ್ಷರಿ ಆಟದಂತೆ ಕನ್ನಡ ಪದ ಕಟ್ಟುವ ಚಟುವಟಿಕೆಯೂ ಒಂದು ಆಟವಾಗಿ ಪರಿಚಲಿಸುತ್ತಿದೆ...’ ಎಂದು ಬರೆದಿದ್ದಾರೆ ಬೆಂಗಳೂರಿನಲ್ಲಿ ವಕೀಲ ವೃತ್ತಿಯಲ್ಲಿರುವ ಹಿರಿಯ ನಾಗರಿಕ ಎಂ.ಆರ್. ನರೇಂದ್ರಸಿಂಹ.
ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಉತ್ತರಭಾರತ ಪ್ರವಾಸಕ್ಕೆ ಹೋದಾಗ ಮನೋರಂಜನೆ ಮತ್ತು ಸಮಯದ ಸದುಪಯೋಗಕ್ಕೆಂದು ಕನ್ನಡ ಪದ ಕಟ್ಟುವಿಕೆಯನ್ನು ರಸಪ್ರಶ್ನೆಯಂತೆ ಬಳಸಿಕೊಂಡಿದ್ದಾರೆ ಮೈಸೂರಿನ ಡಾ.ಪ್ರಫುಲ್ಲಾ ಬಾಲಸುಬ್ರಹ್ಮಣ್ಯ. ಇವೆಲ್ಲಕ್ಕಿಂತಲೂ ಹೃದಯರ್ಸ³ಯೆನಿಸಿದ್ದು ‘‘ಕ್ಯಾನ್ಸರ್ನಿಂದ ಬಳಲುತ್ತಿರುವ ನನ್ನಮ್ಮನಿಗೆ ಒಂದು ತಿಂಗಳಿಡೀ ಪ್ರತಿದಿನವೂ ನೋವನ್ನು ಮರೆಸಿ ಉಲ್ಲಾಸ ತುಂಬುವ ಚಟುವಟಿಕೆಯಾಗಿತ್ತು ಕನ್ನಡ ಪದ ಕಟ್ಟುವ ಆಟ. ಏಕೆ ಹಠಾತ್ತನೆ ನಿಲ್ಲಿಸಿದಿರಿ?’ ಎಂದು ಓದುಗರೊಬ್ಬರು (ಅವರ ಖಾಸಗಿತನವನ್ನು ಗೌರವಿಸುವುದಕ್ಕಾಗಿ ನಾನಿಲ್ಲಿ ಹೆಸರು/ಊರು ನಮೂದಿಸುತ್ತಿಲ್ಲ) ಕಳುಹಿಸಿದ ಸಂದೇಶ.
ಇನ್ನೊಂದು ಉಲ್ಲೇಖಾರ್ಹ ಪ್ರತಿಕ್ರಿಯೆ ಶತಾವಧಾನಿ ಡಾ.ರಾ.ಗಣೇಶ ಅವರದು. ‘‘ವಿಜಯವಾಣಿಯಲ್ಲಿ ಈ ಹೊಸ ಅಭಿಯಾನವನ್ನು ನಾನೂ ಗಮನಿಸುತ್ತಿದ್ದೇನೆ. ಕೆಲವೆಲ್ಲ ತುಂಬ ಚೆನ್ನಾಗಿರುವ ಪದಗಳು ಬಂದಿವೆ. ಇನ್ನು ಕೆಲವಕ್ಕೆ ಸ್ವಲ್ಪ ಪರಿಷ್ಕಾರ, ತಿದ್ದುಪಡಿ ಬೇಕಾದೀತು. ಸ್ವಲ್ಪ ವ್ಯಾಕರಣವನ್ನೂ ಸರಿಯಾಗಿ ಗಮನಿಸಿಕೊಳ್ಳಬೇಕು. ಮತ್ತೆ ಇಂಗ್ಲಿಷ್ನಿಂದ ಪದಶಃ ಅನುವಾದ ಮಾಡಿ ಕನ್ನಡ ಪದರಚನೆಗೆ ಹೋಗಬಾರದು. ಒಟ್ಟಿನಲ್ಲಿ ಕನ್ನಡ ನುಡಿಯ ಸರಳತೆ, ಸೌಲಭ್ಯ, ಮಾಧುರ್ಯ ಇತ್ಯಾದಿಯನ್ನು ಗೌರವಿಸಿ ಚಂದದ ಕನ್ನಡ ಪದಗಳನ್ನು ಜನಸಾಮಾನ್ಯರೂ ಕಟ್ಟಬಹುದೆಂದು ಇದರಿಂದ ಸಾಬೀತಾಗಿದೆ. ಇವುಗಳಿಗೆ ಇನ್ನೊಂಚೂರು ಒಪ್ಪಓರಣ ಕೊಟ್ಟರೆ ಒಳ್ಳೆಯದು. ಇದು ನಿಜಕ್ಕೂ ಬೇಕಾಗಿರತಕ್ಕಂಥದ್ದು, ಬಹಳ ಒಳ್ಳೆಯ ಪ್ರಕಲ್ಪ. ತುಂಬ ಸಂತೋಷವಾಯಿತು’ ಎಂದು ಧ್ವನಿಸಂದೇಶ ಕಳುಹಿಸಿ ಮಾರ್ಗದರ್ಶನದಿಂದ ಕೂಡಿದ ಮೆಚ್ಚುಗೆಯ ಮಾತಾಡಿದ್ದಾರೆ. ಅಷ್ಟೇಅಲ್ಲ, ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಭಾಷಣದಲ್ಲಿಯೂ ಶತಾವಧಾನಿಯವರು ‘ಕಟ್ಟುವೆವು ನಾವು ಕನ್ನಡದ ಪದವೊಂದನು’ ರೀತಿಯ ಚಟುವಟಿಕೆಗಳ ಔಚಿತ್ಯ ಮತ್ತು ಅಗತ್ಯಗಳನ್ನು ಸಾಂರ್ದಭಿಕವಾಗಿ ಪ್ರಸ್ತಾವಿಸಿ ಪ್ರಶಂಸಿಸಿದ್ದಾರೆ.
ಇದೆಲ್ಲವನ್ನೂ ನಾನಿಲ್ಲಿ ದಾಖಲಿಸುತ್ತಿರುವುದಕ್ಕೆ ಕಾರಣಗಳಿವೆ. ಕನ್ನಡ ಪದ ಕಟ್ಟುವ ಚಟುವಟಿಕೆಗೆ ಉತ್ಸಾಹ-ಲವಲವಿಕೆ ತುಂಬುವಲ್ಲಿ ಬಹುಮುಖ್ಯ ಪಾತ್ರ ವಿಜಯವಾಣಿ ಪತ್ರಿಕೆಯ ಓದುಗರದು. ಆದ್ದರಿಂದ ಶ್ರೇಯಸ್ಸು ಸಲ್ಲಬೇಕಾದ್ದೂ ಅವರಿಗೇ. ಕನ್ನಡ ನುಡಿಯ ಬಗೆಗಿನ ಪ್ರೀತಿ, ಗೌರವ, ಅಭಿಮಾನಗಳನ್ನು ಹೀಗೂ ಉದ್ದೀಪನಗೊಳಿಸಬಹುದು, ಆಚರಣೆಗೆ ತರಬಹುದು, ಮತ್ತು ಆನಂದಿಸಬಹುದು ಎಂದು ತೋರಿಸಿದ ವಿದ್ಯಮಾನವಿದು. ‘ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಇಂದು ಅದೇ ಗೋವರ್ಧನ ಗಿರಿಧಾರಿಯಾಗುತ್ತದೆ!’
ಎಂಬ ಕುವೆಂಪು ಅಮೃತವಾಣಿ ಚಿಕ್ಕ-ದೊಡ್ಡ ಭೇದವಿಲ್ಲದೆ ಕನ್ನಡಪರ ಕೆಲಸಗಳೆಲ್ಲದಕ್ಕೂ ಅನ್ವಯವಾಗುತ್ತದೆ ಅಲ್ಲವೇ? ಕನ್ನಡ ಪದ ಕಟ್ಟುವ, ಕಟ್ಟಿದ್ದನ್ನು ಬಳಸುವ, ಇದೇ ಆಸಕ್ತಿ ಉತ್ಸಾಹ ನಿರಂತರವಾಗಿದ್ದರೆ ಸಹಜವಾಗಿಯೇ ನಮ್ಮ ದೈನಂದಿನ ಮಾತುಕತೆಯಲ್ಲಿ, ಓದು-ಬರಹಗಳಲ್ಲಿ ಹೆಚ್ಚುಹೆಚ್ಚು ಕನ್ನಡದ ಬಳಕೆಯಾಗುತ್ತದೆ. ಬೇರೆ ಭಾಷೆಗಳನ್ನು ದ್ವೇಷಿಸದೆಯೇ ಕನ್ನಡವನ್ನು ಹೆಚ್ಚು ಪ್ರೀತಿಸುವುದು ಸಾಧ್ಯವಾಗುತ್ತದೆ. ಹಾಗೆ ನೋಡಿದರೆ, ಆಂಗ್ಲ ಪದಗಳಿಗೆ/ಪದಪುಂಜಗಳಿಗೆ ಸಮಾನಾರ್ಥಕ ಪರ್ಯಾಯ ಕನ್ನಡ ಪದಗಳನ್ನು ಕಟ್ಟುವುದಕ್ಕಿಂತಲೂ ಮೊದಲಾಗಿ ಅಚ್ಚಕನ್ನಡದ ಸುಂದರ ಪದಗಳಿರುವಾಗಲೇ ಅವುಗಳ ಬದಲಿಗೆ ಆಂಗ್ಲ ಪದಗಳನ್ನು ಬಳಸುವ ವ್ಯಾಮೋಹ ಕಡಿಮೆಯಾಗಬೇಕಿದೆ. ಅಂಕಲ್, ಆಂಟಿ, ನೆವ್ಯೂ, ನೀಸ್, ಕಸಿನ್, ಸಿಸ್ಟರ್-ಇನ್-ಲಾ, ಕೋ-ಬ್ರದರ್ ಅಂತ ಸಂಬಂಧವಾಚಕಗಳೆಲ್ಲ ಆಂಗ್ಲಮಯವಾಗುವ ಬದಲಿಗೆ ದೊಡ್ಡಪ್ಪ, ದೊಡ್ಡಮ್ಮ, ಸೋದರಳಿಯ, ಸೋದರಸೊಸೆ, ಅತ್ತಿಗೆ, ನಾದಿನಿ, ವಾರಗಿತ್ತಿ, ನೆಗಣ್ಣಿ, ಬಾವ, ಬಾಮೈದ ಮುಂತಾದ ಸಂಬಂಧ-ಬಂಧುರ ಪದಗಳು ನಮ್ಮೆಲ್ಲರ ನಾಲಗೆ ಮೇಲೆ ನಲಿದಾಡಬೇಕಿದೆ. ಇಂಗ್ಲಿಷ್ ಪದಗಳ ಬದಲಿಗೆ ಕನ್ನಡ ಪದಗಳನ್ನು ಬಳಸುವುದು ಪ್ರತಿಷ್ಠೆಗೆ ಕುಂದು ಎಂಬ ಪೊಳ್ಳುಪ್ರತಿಷ್ಠೆ ತೊಲಗಬೇಕಿದೆ.
ಈ ನಿಟ್ಟಿನಲ್ಲಿ ಮಾಧ್ಯಮಗಳ, ಮುಖ್ಯವಾಗಿ ಸುದ್ದಿವಾಹಿನಿಗಳ ಮತ್ತು ಪತ್ರಿಕೆಗಳ ಪಾತ್ರ/ಜವಾಬ್ದಾರಿ ಹಿರಿಯದಿದೆ. ಈಗ ಕನ್ನಡ ದಿನಪತ್ರಿಕೆಗಳ ಮುಖಪುಟದ ಕೆಲವು ತಲೆಬರಹಗಳನ್ನು ನೋಡಿದರೆ ಇದು ಕನ್ನಡಿಗರಿಗಾಗಿ ಇರುವ ಕನ್ನಡ ಪತ್ರಿಕೆ ಹೌದೇ ಎಂಬ ಅನುಮಾನ ಕಾಡುತ್ತದೆ. ಏಕೆಂದರೆ ತಲೆಬರಹಗಳ ತುಂಬೆಲ್ಲ ಇಂಗ್ಲಿಷ್ ಪದಗಳ ಹಾವಳಿ! ‘‘ಸೇಫಲ್ಲದ ಸ್ಕೂಲ್ ಬಸ್ ವಿರುದ್ಧ ಕೇಸ್’, ‘‘ಕೆಆರ್ಎಸ್ ಡ್ಯಾಂ: ಎಕ್ಸ್ಪ್ರೆಸ್ ಪೈಪ್ಲೈನ್ಗೆ ಬಜೆಟ್ ಘೊಷಣೆ’, ‘‘ಚುನಾವಣೆಯಲ್ಲಿ ಜೆಡಿಎಸ್ ಸೈಲೆಂಟ್ ಸ್ಟ್ರಾ್ಯಟಜಿ’, ‘‘ಹೈಕಮಾಂಡ್ ವಾರ್ನಿಂಗ್: ನಿಲ್ಲದ ಟಾಕ್ ವಾರ್’ -ಇದೆಂಥ ಕನ್ನಡ? ಹಾಗಾದರೆ ‘ಅಸುರಕ್ಷಿತ’, ‘ಶಾಲಾವಾಹನ’, ‘ದೂರು’, ‘ಕೃಷ್ಣರಾಜಸಾಗರ’, ‘ಅಣೆಕಟ್ಟು’, ‘ತ್ವರಿತ ಕೊಳವೆಮಾರ್ಗ’, ‘ಆಯವ್ಯಯ’, ‘ಮೌನತಂತ್ರಗಾರಿಕೆ’, ‘ವರಿಷ್ಠರ ಎಚ್ಚರಿಕೆ’, ‘ಮಾತಿನ ಚಕಮಕಿ’, ‘ನಾಲ್ಕರ ಘಟ್ಟ’, ‘ಬಹುತೇಕ ಖಚಿತ’ ಮುಂತಾದ ಆಪ್ತ-ಆತ್ಮೀಯ-ನಮ್ಮದೆನಿಸುವ ಕನ್ನಡದ ಪದಗಳನ್ನೆಲ್ಲ ನಾವು ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಟೈಮ್ಸ್ ಆಫ್ ಇಂಡಿಯಾ ಮತ್ತಿತರ ಆಂಗ್ಲ ಪತ್ರಿಕೆಗಳಲ್ಲಿ ನಿರೀಕ್ಷಿಸಬೇಕೇ? ಇದು ಒಂದು ಆಯಾಮವಾದರೆ, ದೊಡ್ಡದೊಡ್ಡ ವಾಣಿಜ್ಯ ಸಮುಚ್ಚಯಗಳಲ್ಲಿ, ಅಂಗಡಿಮುಂಗಟ್ಟುಗಳಲ್ಲಿ ರಾರಾಜಿಸುವ ಕನ್ನಡ ಫಲಕಗಳದು ಇನ್ನೊಂದು ರೀತಿಯ ದುರವಸ್ಥೆ. ಓ(ಹೋ)ರಾಟಗಾರರ ದಾಂಧಲೆ ತಪ್ಪಿಸಲಿಕ್ಕೆಂದು ಕಾಟಾಚಾರದ ಕನ್ನಡ ಪ್ರದರ್ಶನ. ಪದಗಳೆಲ್ಲವೂ ಇಂಗ್ಲಿಷ್ನವೇ, ಲಿಪಿ ಮಾತ್ರ ಕನ್ನಡ. ಅಥವಾ ಗೂಗಲ್ ಟ್ರಾನ್ಸ್ಲೇಟರ್ ಬಳಸಿ ಮಾಡಿದ ಕೆಟ್ಟ ಅನುವಾದ. ‘‘ಪುರುಷರ ಬಿಡಿಭಾಗಗಳು’, ‘‘ಮಹಿಳೆಯರ ಬೆರಳು’, ‘‘ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ’ ಅಂತೆ! ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ... ಎಂಬ ಪದ್ಯದಲ್ಲಿದ್ದಂತೆ ‘ಆಂಗ್ಲವ್ಯಾಮೋಹಕೆ ಸಿಕ್ಕಿ ಸತ್ತಿದೆ ಕನ್ನಡ...’ ಎನ್ನುವಂತಾಗಿದೆ. ಅಯ್ಯೋ ಇದ ಗಮನಿಸುವರೇ ಇಲ್ಲವೇನಿಲ್ಲಿ, ಕನ್ನಡ ಯಾರಿಗೂ ಬೇಕಾಗಿಲ್ಲ ಕರ್ನಾಟಕದಲ್ಲಿ... ಎಂದು ಮರುಗುವುದೊಂದೇ ನಮಗಿರುವ ದಾರಿಯೇ?
ಹಾಗೆ ಆಗಲಿಕ್ಕೆ ಬಿಡಬಾರದು. ಕನ್ನಡ ಪ್ರೀತಿಯನ್ನು ನವೆಂಬರ್ಗಷ್ಟೇ ಸೀಮಿತಗೊಳಿಸಬಾರದು. ಅವಕಾಶ ಮತ್ತು ಅಗತ್ಯ ಇರುವೆಡೆಯಲ್ಲೆಲ್ಲ ಕನ್ನಡವನ್ನೇ ಬಳಸುತ್ತೇನೆಂಬ ಪ್ರತಿಜ್ಞೆಯನ್ನು ನಾವೆಲ್ಲರೂ ಮಾಡಬೇಕು. ಅದರಂತೆಯೇ ನಡೆದುಕೊಳ್ಳಬೇಕು. ಈ ದಿಸೆಯಲ್ಲಿ, ಅಂದರೆ ಕನ್ನಡ ಸೇತುಬಂಧದಲ್ಲಿ ಇದೀಗ ಮತ್ತೊಮ್ಮೆ ಚಾಲನೆ ದೊರೆತಿರುವ ‘ಕಟ್ಟುವೆವು ನಾವು...’ ಅಭಿಯಾನದ್ದೂ ಅಳಿಲುಸೇವೆ ಎಂದೆನಿಸಬೇಕು. ನಿಮ್ಮೆಲ್ಲರ ಪ್ರೋತ್ಸಾಹ, ಭಾಗವಹಿಸುವಿಕೆ, ಸಲಹೆ-ಸೂಚನೆಗಳೂ ಅವಶ್ಯವಾಗಿ ಇರಬೇಕು. ಇಂದಿನಿಂದಲೇ ಇದು ಕಾರ್ಯೋನ್ಮುಖವಾಗಬೇಕು.
ಈ ವಾರದ ಮೂರು ಪದಗಳು
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945.
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)