

ಆಗ ಶ್ರೀಕೃಷ್ಣನು, ‘ಇಲ್ಲಿಂದ ಉತ್ತರ ದಿಕ್ಕಿನತ್ತ ಸಾಗು. ಅಲ್ಲಿ ಪುರಾತನ ದೇವಾಲಯದ ವಠಾರದಲ್ಲಿ ಒಂದು ಪಾರಿವಾಳ ವಾಸಿಸುತ್ತಿದೆ. ಅದರ ಹತ್ತಿರ ಈ ಪ್ರಶ್ನೆ ಕೇಳು’ ಎಂದನು. ನಾರದನು ಆ ದೇವಾಲಯಕ್ಕೆ ಹೋಗಿ ಪ್ರಶ್ನೆ ಕೇಳಿದ ತಕ್ಷಣ ಪಾರಿವಾಳವು ಮೇಲಕ್ಕೆ ಹಾರಿ ಮರುಕ್ಷಣವೇ ನಾರದನ ಪಾದದ ಬಳಿ ಸತ್ತು ಬಿದ್ದಿತು.ತಾನು ವ್ಯರ್ಥವಾಗಿ ಎರಡು ಜೀವಿಗಳ ಮರಣಕ್ಕೆ ಕಾರಣನಾದೆನೆಂದು ನೊಂದುಕೊಂಡ ನಾರದನು ಹಿಂತಿರುಗಿದಾಗ, ‘ನಿನ್ನ ಪ್ರಶ್ನೆಗೆ ಸಮಾಧಾನದ ಉತ್ತರ ದೊರಕಿತೆ?’ ಎಂದು ಶ್ರೀಕೃಷ್ಣನು ಕೇಳಿದನು. ‘ಪರಮಾತ್ಮಾ, ಪ್ರಶ್ನೆ ಕೇಳಿದೊಡನೆ ಅವು ಸತ್ತು ಬೀಳುತ್ತಿವೆ. ನನ್ನ ಪ್ರಶ್ನೆಗೆ ಉತ್ತರ ದೊರೆಯಲೇ ಇಲ್ಲ’ ಎಂದನು. ‘ಹಾಗಾದರೆ ನಾರದಾ ದಕ್ಷಿಣದ ದಾರಿಯಲ್ಲಿ ಒಂದು ಅರಮನೆಯು ದೊರೆಯುತ್ತದೆ. ಅಲ್ಲಿಯ ರಾಜನಿಗೆ ಇದೇ ಈಗ ಜನಿಸಿದ ಒಬ್ಬ ಪುತ್ರನಿದ್ದಾನೆ. ಆ ಶಿಶುವಿಗೆ ಪ್ರಶ್ನೆ ಕೇಳು’ ಎಂದು ಶ್ರೀಕೃಷ್ಣನು ಹೇಳಿದಾಗ ನಾರದನು, ‘ಬೇಡ ದೇವಾ, ಮೊದಲಿನ ಘಟನೆಗಳಂತೆ ಈ ಬಾರಿಯೂ ಆ ಹಸುಗೂಸಿನ ನಿಧನವಾದರೆ ನಾನು ಇಕ್ಕಟ್ಟಿನಲ್ಲಿ ಸಿಲುಕುವೆನು’ ಎಂದ. ‘ಹಾಗೇನೂ ಭಯಪಡುವ ಕಾರಣವಿಲ್ಲ. ನೀನು ನಿಶ್ಚಿಂತನಾಗಿ ಅಲ್ಲಿಗೆ ಹೋಗು’ ಎಂದ ಕೃಷ್ಣ.
ನಾರದನು ಅರಮನೆಯತ್ತ ಸಾಗಿ ರಾಜಕುವರನ ತೊಟ್ಟಿಲ ಬಳಿ ನಿಂತು ಪ್ರಶ್ನೆ ಕೇಳಿದನು. ಆ ಹಸುಗೂಸು ಒಮ್ಮಿಂದೊಮ್ಮೆ ತೊಟ್ಟಿಲಿನಿಂದ ಕೆಳಗೆ ಹಾರಿತು. ಆದರೆ, ನಾರದನು ಎಣಿಸಿದಂತೆ ಸಾವನ್ನಪ್ಪದೆ ಸುರ ರೂಪ ಧರಿಸಿತು. ಆಗ ಸುರ ರೂಪಧಾರಿಯು ‘ಮಹಾತ್ಮರೇ ನಾನು ಮೊದಲು ಸಗಣಿಯ ಹುಳುವಾಗಿದ್ದೆ. ಆಗ ನೀವು ನನ್ನ ಹತ್ತಿರ ಬಂದಿದ್ದಿರಿ. ನಾನು ನಿಮ್ಮಂಥ ಸಜ್ಜನರ ಸಂಗದಿಂದ ಆ ರೂಪ ತ್ಶಜಿಸಿ ಪಾರಿವಾಳವಾದೆ. ಪುನಃ ನಿಮ್ಮ ಸಂಗದಿಂದ ರಾಜಕುಮಾರನಾಗಿ ಜನ್ಮವೆತ್ತಿದೆ. ನೀವು ಇನ್ನೊಮ್ಮೆ ನಿಮ್ಮ ಸುಸಂಗತಿಯ ಭಾಗ್ಯವನ್ನು ನನಗೆ ಕರುಣಿಸಿದ್ದರಿಂದ ನಾನು ಈಗ ದೈವತ್ವ ಪಡೆದೆ. ಇದೇ ಸಜ್ಜನರ ಸಂಗದ ಫಲ’ ಎಂದು ಹೇಳಿದನು.
ನಮ್ಮ ದಾಸಶ್ರೇಷ್ಠರಾದ ಕನಕದಾಸರ ಸಜ್ಜನರ ಸಂಗದ ಬಗ್ಗೆ ಹೀಗೆ ಹೇಳಿದ್ದಾರೆ.
ಸಜ್ಜನರ ಸಂಗದೊಳು ಇರಿಸೆನ್ನ ರಂಗ
ದುರ್ಜನರ ಸಂಗನಾನೊಲ್ಲೆ ಮಂಗಳಾಂಗ.
(ಲೇಖಕರು ಸಹ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)