ಐಟಿ ಉದ್ಯೋಗಿಗಳ ಸಂಖ್ಯೆ 50,00,000; ಈ ವರ್ಷವೂ ನಡೆಯಲಿದೆ ಭಾರಿ ನೇಮಕಾತಿ

IT
Published on
ಮಾಹಿತಿ ತಂತ್ರಜ್ಞಾನ ಅಥವಾ ಐಟಿ ಉದ್ಯೋಗಿಗಳ ಪಾಲಿಗೆ ಸದ್ಯ ಅವಕಾಶಗಳ ಸುರಿಮಳೆ. ಕೋವಿಡ್ 19 ಸಂಕಷ್ಟದ ನಂತರದಲ್ಲಿ ಆದ ಬದಲಾವಣೆ ಇದಕ್ಕೆ ಕಾರಣ. ಕಳೆದ ವರ್ಷ ಐಟಿ ಉದ್ಯೋಗಿಗಳ ಸಂಖ್ಯೆ 50,00,000 ದಾಟಿದೆ. ಒಂದೇ ವರ್ಷ ಹೆಚ್ಚಿನ ಸಂಖ್ಯೆಯ ಉದ್ಯೋಗ ನೇಮಕಾತಿಯೂ ಕಳೆದ ವರ್ಷ ಆಗಿತ್ತು.

ಯಾವ ಐಟಿ ಕೌಶಲವಿದ್ದರೆ ಹೆಚ್ಚಿನ ಬೇಡಿಕೆ ಎಂಬ ಕುರಿತ ಹುಡುಕಾಟದಲ್ಲಿದ್ದಾರೆ ಹೊಸಬರು ಮತ್ತು ಈಗಾಗಲೇ ಐಟಿ ಕ್ಷೇತ್ರದಲ್ಲಿದ್ದವರು ಕೂಡ. 2021ರಿಂದೀಚೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಮುಂತಾದ ಕೌಶಲ ಹೊಂದಿದವರು ಐಟಿ ಉದ್ಯೋಗ ಬಿಟ್ಟು, ನವೋದ್ಯಮಗಳ ಕಡೆಗೆ ಮುಖ ಮಾಡಲಾರಂಭಿಸಿದ್ದಾರೆ. ಇದರಿಂದಾಗಿ, ಐಟಿ ಸಂಸ್ಥೆಗಳು ಮತ್ತು ನವೋದ್ಯಮಗಳ ನಡುವೆ ಸೂಕ್ತ ಪ್ರತಿಭೆಗಳ ನೇಮಕಕ್ಕೆ ಪೈಪೋಟಿ ಶುರುವಾಗಿದೆ. ನಾಸ್ಕಾಂ ವರದಿ ಪ್ರಕಾರ, ಐಟಿ ಕ್ಷೇತ್ರ ಕಳೆದ ಒಂದೇ ವರ್ಷ ಸಾರ್ವಕಾಲಿಕ ಗರಿಷ್ಠ 4,50,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಇದರೊಂದಿಗೆ ಐಟಿ ಉದ್ಯೋಗಿಗಳ ಸಂಖ್ಯೆ ಇದೇ ಮೊದಲ ಸಲ 50 ಲಕ್ಷ ದಾಟಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಸ ಪ್ರತಿಭೆಗಳ ನೇಮಕವಾಗಿದ್ದರೂ ಕೂಡ ಐಟಿ ಕ್ಷೇತ್ರದಲ್ಲಿ ಪ್ರತಿಭಾ ವಲಸೆ ದರ ಕಡಿಮೆ ಏನಲ್ಲ. ಇನ್ಪೋಸಿಸ್ ಸಂಸ್ಥೆಯಿಂದ ಕಳೆದ ವರ್ಷ ಬಿಟ್ಟು ಹೋದ ಉದ್ಯೋಗಿಗಳ ಪ್ರಮಾಣ ಶೇಕಡ 27.7. ಇದೇ ರೀತಿ, ಟಿಸಿಎಸ್​ನಲ್ಲೂ ಮಾರ್ಚ್​ಗೆ ಕೊನೆಗೊಂಡ ತ್ರೖೆಮಾಸಿಕದಲ್ಲಿ ಶೇಕಡ 17.4ರಷ್ಟು ಪ್ರತಿಭಾ ವಲಸೆ ನಡೆದಿದೆ.

ಪ್ರತಿಭಾ ವಲಸೆ ತಡೆಗೆ ಕ್ರಮ ದೊಡ್ಡ ಪ್ರಮಾಣದ ಪ್ರತಿಭಾ ವಲಸೆ ತಡೆಯುವುದಕ್ಕಾಗಿ ಐಟಿ ಕಂಪನಿಗಳು ಬೇರೆ ಬೇರೆ ರೀತಿಯ ಮಾಗೋಪಾಯಗಳನ್ನು ಕಂಡುಕೊಳ್ಳುತ್ತಿವೆ. ಮೂಲಗಳ ಪ್ರಕಾರ, ಪ್ರತಿಭಾವಂತರಿಗೆ ಶೇಕಡ 100ರಷ್ಟು ವೇತನ ಹೆಚ್ಚಳ, ಇತರೆ ಸವಲತ್ತುಗಳನ್ನು ಒದಗಿಸುವುದು ಮುಂತಾದ ಕ್ರಮಗಳನ್ನು ಘೋಷಿಸಿವೆ. ಇದಲ್ಲದೆ, ಸಾಫ್ಟ್ ವೇರ್ ಇಂಜಿನಿಯರ್​ಗಳಾದರೆ ಅವರಿಗೆ ಕಂಪನಿಯಲ್ಲಿ ಉದ್ಯೋಗಿ ಷೇರು ಘೋಷಿಸುವುದು ಮಾಡಲಾಗಿದೆ. ಭಾರತಪೇ ಎಂಬ ಫಿನ್​ಟೆಕ್ ನವೋದ್ಯಮ ತನ್ನ ಹೊಸ ಉದ್ಯೋಗಿಗಳಿಗೆ ಬಿಎಂಡಬ್ಲ್ಯು ಬೈಕ್​ಗಳನ್ನು ಕೊಡುಗೆಯಾಗಿ ನೀಡಿದೆ. ಸ್ವಲ್ಪ ವರ್ಷ ಅನುಭವ ಪಡೆದ ಟೆಕಿಗಳಿಗೆ ಹಲವು ಉದ್ಯೋಗಾವಕಾಶಗಳಿವೆ. ಇನ್ನು ಕೆಲವು ಐಟಿ ಕಂಪನಿಗಳು, ಫಿನ್​ಟೆಕ್​ಗಳು, ನವೋದ್ಯಮಗಳು ಕೂಡ ತಮ್ಮ ಉದ್ಯೋಗಿಗಳಿಗೆ ವೇತನ ಹೆಚ್ಚಳ, ಫರ್ಫಾರ್ವೆನ್ಸ್ ಬೋನಸ್ ನೀಡುವುದನ್ನು ವಿಳಂಬ ಮಾಡಿವೆ. ಆ ಮೂಲಕ ಉದ್ಯೋಗಿಗಳು ಬಿಟ್ಟು ಹೋಗುವುದನ್ನು ವಿಳಂಬಗೊಳಿಸಲು ಪ್ರಯತ್ನಿಸಿದ್ದು, ಪರ್ಯಾಯ ವ್ಯವಸ್ಥೆಗೆ ಸಮಯವನ್ನು ಕಂಡುಕೊಳ್ಳುತ್ತಿವೆ.

ಯಾಕೆ ಇಷ್ಟೊಂದು ಬೇಡಿಕೆ?: ಕ್ಷೇತ್ರ ಪರಿಣತರ ಸಂಶೋಧನೆಯ ಪ್ರಕಾರ, ಕರೊನಾ ಸಂಕಷ್ಟದ ಪರಿಣಾಮ ಎಲ್ಲೆಡೆ ಡಿಜಿಟಲೀಕರಣದ ಬೇಡಿಕೆ ಹೆಚ್ಚಾಗಿದೆ. ಪೂರಕವಾಗಿ ಐಟಿ ಕ್ಷೇತ್ರದಲ್ಲಿ ಪ್ರತಿಭಾವಂತರ ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ದೊಡ್ಡ ದೊಡ್ಡ ಐಟಿ ಸಂಸ್ಥೆಗಳಿಗೆ ಪೈಪೋಟಿ ನೀಡುವುದಕ್ಕೆ ನವೋದ್ಯಮಗಳು ಹುಟ್ಟಿಕೊಂಡಿವೆ. ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಆಗುತ್ತಿರುವ ಇಂತಹ ವಿದ್ಯಮಾನಗಳು ಪ್ರತಿಭಾವಂತರ ಬೇಡಿಕೆಯನ್ನು ಹೆಚ್ಚಿಸಿದೆ. ಆದಾಗ್ಯೂ, ಪ್ರತಿಭಾ ವಲಸೆ ಬಹು ದೀರ್ಘ ಅವಧಿಗೆ ಮುಂದುವರಿಯದು. ಅದು ಇನ್ನು ಆರು ತಿಂಗಳಲ್ಲಿ ಕೊನೆಗೊಳ್ಳಲಿದೆ ಎನ್ನುತ್ತಾರೆ ಪರಿಣತರು.

ಐಟಿ ಇಂಡಸ್ಟ್ರಿ ಬೆಳವಣಿಗೆ 15.5%: ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಭಾರತದ ಐಟಿ ಇಂಡಸ್ಟ್ರಿ ಪರಿಣಾಮಕಾರಿಯಾಗಿ ತೋರಿಸಿದ್ದು, 195 ಶತಕೋಟಿ ಡಾಲರ್ ಮೌಲ್ಯ ಹೊಂದಿದೆ. ಕಳೆದ ಹಣಕಾಸು ವರ್ಷ ಐಟಿ ಇಂಡಸ್ಟ್ರಿಯ ಆದಾಯ 30 ಶತಕೋಟಿ ಡಾಲರ್ ಏರಿದ್ದು, 227 ಶತಕೋಟಿ ಡಾಲರ್ ತಲುಪಿದೆ. ನಾಸ್ಕಾಂ ವರದಿ ಪ್ರಕಾರ, ಐಟಿ ಇಂಡಸ್ಟ್ರಿಯ ಬೆಳವಣಿಗೆ ದರ ಶೇಕಡ 15.5 ಮತ್ತು ಇದು 2011ರಿಂದೀಚೆಗೆ ಗರಿಷ್ಠ ಪ್ರಮಾಣದ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net