

ದುಬೈನಗರ ಅಮರಾವತಿಯಂತೆ ಕಂಗೊಳಿಸುತ್ತಿದೆ. ಶಾರ್ಜಾ ಏನೂ ಕಡಿಮೆಯಿಲ್ಲ. ಆದರೆ, ದುಬೈನ ಗತ್ತೇ ಬೇರೆ! ಈ ಮಧ್ಯ ಏಷ್ಯಾದ ಕೆಲರಾಷ್ಟ್ರಗಳು U.A.E (United Arab Emirates) ಎಂಬ ಫೆಡರಲ್ ಒಕ್ಕೂಟ ಮಾಡಿಕೊಂಡಿವೆ. ಇದರ ಅಧ್ಯಕ್ಷ ಅಬುಧಾಬಿಯ ಮುಖ್ಯಸ್ಥರೇ. ಏಕೆಂದರೆ, ಅಬುಧಾಬಿ ಈ ಬೇರೆಲ್ಲಾ ರಾಷ್ಟ್ರಗಳಿಗಿಂತ ಪ್ರಮುಖ ಮತ್ತು ಬಹಳ ಪ್ರಭಾವಶಾಲಿ ಕೂಡ. ಇವರೇ ಗುಜರಾತ್ ಮೂಲದ ಸ್ವಾಮಿ ನಾರಾಯಣ್ ಪಂಥದವರಿಗೆ ಬಂದು ಬೃಹತ್ ದೇವಾಲಯ ನಿರ್ವಿುಸಲು ಅಂದಾಜು 30 ಎಕರೆ ಜಾಗ ಕೊಟ್ಟಿದ್ದಾರೆ. ಇದರ ಭೂಮಿಪೂಜೆಗಾಗಿ ಶ್ರೀ ನರೇಂದ್ರ ಮೋದಿಯವರೇ ಸ್ವತಃ ಬಂದಿದ್ದರು ಮತ್ತು ಈ ದೇವಾಲಯ ಭಾರತದ ಮಣ್ಣಿಗೇ ಅಂಟಿಕೊಂಡಿರತಕ್ಕಂಥ ಸರ್ವಧರ್ಮ ಸಮಭಾವವನ್ನು ಎಲ್ಲೆಡೆ ಪಸರಿಸುವ ಕೇಂದ್ರ ಬಿಂದುವಾಗಲಿ ಎಂದು ಆ ಸಂದರ್ಭದಲ್ಲೇ ಹಾರೈಸಿದ್ದರು. ಅಷ್ಟೇ ಅಲ್ಲ! ಇಲ್ಲೇ ಸಮೀಪದಲ್ಲಿರುವ ಒಮಾನಿನ ಸುಲ್ತಾನ ತನ್ನ ಶಿಕ್ಷಣವನ್ನು ಪೂರೈಸಿದ್ದು ನಮ್ಮ ಮಹಾರಾಷ್ಟ್ರದ ಪುಣೆಯಲ್ಲಿ. ಆಗ ಅವನ ಬೋಧಕರಲ್ಲೊಬ್ಬರು ಡಾ| ಶಂಕರದಯಾಳು ಶರ್ಮರು. ಇದೇ ಶರ್ಮರು ಮುಂದೆ ಭಾರತದ ರಾಷ್ಟ್ರಾಧ್ಯಕ್ಷರಾಗಿ ಒಮಾನಿಗೆ ಭೇಟಿಯಿತ್ತಾಗ ಎಲ್ಲ ಶಿಷ್ಟಾಚಾರಗಳನ್ನೂ ಬದಿಗೊತ್ತಿ ಸುಲ್ತಾನ ಅವರನ್ನು ಸ್ವಾಗತಿಸಲು ಸ್ವಯಂ ತಾನೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಲ್ಲದೆ, ಕಾರಿನ ಚಾಲನೆಯನ್ನು ಸ್ವತಃ ಅವನೇ ಮಾಡಿದ್ದ. ಈಗ ಶಂಕರದಯಾಳು ಶರ್ಮರೂ ಇಲ್ಲ ಆ ಸುಲ್ತಾನನೂ ಇಲ್ಲ. ಇಬ್ಬರೂ ವಿಧಿವಶರಾಗಿದ್ದಾರೆ. ಆದರೆ, ಭಾರತೀಯ ಸಂಸ್ಕೃತಿಯ ಮೈಲುಗಲ್ಲುಗಳಲ್ಲೊಂದಾದ ಗುರು- ಶಿಷ್ಯ ಸಂಬಂಧ ಮಾತ್ರ ಈ ನಾಡಿನ ಸಾಂಸ್ಕೃತಿಕ ಪ್ರಜ್ವಲವನ್ನು ಮತ್ತಷ್ಟು ಬೆಳಗುವ ದಿಶೆಯಲ್ಲಿ ನಾವೀನ್ಯತೆ ಮತ್ತು ಪ್ರಾಬಲ್ಯವನ್ನು ಪಡೆದ್ದಿದಂತೂ ದಿಟ!
ದುಬೈನ ಸುಲ್ತಾನರು ಕೂಡ ಸಾಕಷ್ಟು ವಿಶಾಲ ಮನೋಭಾವದವರು. ಬದಲಾಗುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ರಾಜಕೀಯ ಸನ್ನಿವೇಶಗಳಲ್ಲಿ ಭಾವಿಕಪ್ಪೆಗಳಂತೆ ಬದುಕುತ್ತೇವೆ ಎಂದರೆ ಸಾಧ್ಯವಿಲ್ಲದ ಮಾತು. ಆಧುನಿಕ ಯುಗದಲ್ಲಿ ಪ್ರಪಂಚದ ಮುಂದೆ ಇರುವುದು ಎರಡೇ ಆಯ್ಕೆಗಳು. ಒಂದೋ ವಿಶಾಲ ದೃಷ್ಟಿಯುಳ್ಳವರಾಗಬೇಕು. ಒಳಿತನ್ನು ತರುವ ಎಲ್ಲಕ್ಕೂ ಬಾಗಿಲನ್ನು ತೆರೆದಿಡಬೇಕು. ಇಲ್ಲವೇ ಅಭಿವೃದ್ಧಿಹೀನ ದೇಶವಾಗಿ ನರಕನಿರ್ವಣದ ನಾಂದಿ ಹಾಡಬೇಕು. ಇದನ್ನು ಈ ಭಾಗದ ಆಳುಗರು ಬೇಗನೆ ಹಾಗೂ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈ U.A.E ದೇಶದಲ್ಲಿ ಒಟ್ಟು 35 ಲಕ್ಷ ಭಾರತೀಯರಿದ್ದಾರೆ. ಇದರಲ್ಲಿ ಅಂದಾಜು ಶೇ.70ರಷ್ಟು ಸಾಮಾನ್ಯ ಉದ್ಯೋಗಗಳಲ್ಲಿ (Blue callar jobs) ತೊಡಗಿಸಿಕೊಂಡಿದ್ದರೆ ಮಿಕ್ಕವರೆಲ್ಲಾ ಸಾಕಷ್ಟು ಉತ್ತಮ ಜಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವವಿಲ್ಲ. ಇರುವುದು ರಾಜಪ್ರಭುತ್ವ. ಬಹುಶಃ U.A.E ಇಂದು ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೊಂದಾಗಿರುವುದಕ್ಕೆ ಇದೂ ಕೂಡ ಪ್ರಮುಖ ಕಾರಣವೆಂದು ನನ್ನ ಅಭಿಪ್ರಾಯ. ಪ್ರಜೆಗಳು ಅವಿದ್ಯಾವಂತರಾಗಿದ್ದರೆ, ಪ್ರಜ್ಞಾಹೀನರಾಗಿದ್ದರೆ, ಒಂದು ಓಟಿನ ಬೆಲೆ ಎಷ್ಟು ಎಂದು ಅರಿಯದಿದ್ದರೆ ವೈಯಕ್ತಿಕ ಲಾಭವನ್ನೇ ಪ್ರಮುಖ ವಿಷಯವನ್ನಾಗಿಸಿಕೊಂಡು ರಾಷ್ಟ್ರದ ಆಗುಹೋಗುಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ವರ್ಗವಾಗಿದ್ದರೆ, ಇದನ್ನೆಲ್ಲಾ ಉಪಯೋಗಿಸಿಕೊಂಡು ಪ್ರಜೆಗಳ ದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡು ಯಾವ ಮಾರ್ಗದಿಂದಲಾದರೂ ಸರಿಯೇ ಗುರಿ ಮುಟ್ಟುವುದೇ ಮುಖ್ಯ ಎಂದು ಭಾವಿಸುವ ಜನರೇ ಚುನಾವಣೆಗಳಲ್ಲಿ ಸ್ಪರ್ಧಿಸಿದರೆ ಆ ದೇಶವೊಂದು ಶಾಶ್ವತ ನರಕವಾಗುವತ್ತ ಸಾಗುತ್ತದೆ.
ಪ್ರಜಾಪ್ರಭುತ್ವ ಪ್ರಜ್ಞಾಪ್ರಭುತ್ವವಾದಾಗ ಮಾತ್ರ ಅದಕ್ಕೆ ಅರ್ಥ. ಈ ಕಡೆ ಪ್ರಜೆಯೂ ಪ್ರಜ್ಞಾಹೀನ ಆ ಕಡೆ ನಾಯಕನೂ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿದ ಸ್ವಾರ್ಥಿ, ಜಾತಿವಾದಿ ಆಗಿಬಿಟ್ಟರೆ ಅಧಿಕಾರಿ ವರ್ಗಕ್ಕೆ ಹೇಳುವವರು, ಕೇಳುವವರೇ ಇಲ್ಲದಂತಾಗಿ ಆಡಳಿತ ಯಂತ್ರವನ್ನು ಹೇಗೆ ಹಳಿ ತಪ್ಪುವಂತೆ ಮಾಡಿ ಹದಗಡಿಸುತ್ತದೆ ಎಂಬುದನ್ನು ನನಗೆ ಬುದ್ಧಿ ಬಂದಾಗಿನಿಂದಲೂ ನೋಡುತ್ತಿದ್ದೇನೆ. ಏಕೆಂದರೆ, ಕೇವಲ ಐವತ್ತು ವರ್ಷಗಳ ಹಿಂದೆ ಈ ದೇಶಗಳೆಲ್ಲಾ ಮರುಭೂಮಿಗಳು, ಮರಳುಗಾಡುಗಳು. ತಿನ್ನುವುದಕ್ಕೇ ಗತಿಯಿಲ್ಲದ, ವಿದ್ಯೆ ವಿಜ್ಞಾನ, ತಂತ್ರಜ್ಞಾನಗಳ ಗಂಧಗಾಳಿಯೂ ಇಲ್ಲದ ದೇಶಗಳು. ಆದರೆ ಇಂದು ಈ ನಗರಗಳು ಯಾವ ಅಮೆರಿಕ, ಯುರೋಪ್ ನಗರಗಳಿಗಿಂತಲೂ ಕಡಿಮೆಯಿಲ್ಲ. ತೈಲ ನಿಕ್ಷೇಪಗಳು ಸಿಕ್ಕಿರಬಹುದು. ಕೇವಲ ಅದೊಂದೇ ಇದರ ಸಂಪತ್ತು ಸಮೃದ್ಧಿಗೆ ಕಾರಣವೆಂದೇನೂ ಅನ್ನಿಸುವುದಿಲ್ಲ. ನಮ್ಮ ದೇಶದಲ್ಲಿ ತೈಲ ಪತ್ತೆಯಾಗಿಲ್ಲದಿರಬಹುದು. ಆದರೆ, ಅಲ್ಲಿ ಬೇರೆ ಬೇರೆ ಖನಿಜ ನಿಕ್ಷೇಪಗಳಿಗೇನೂ ಕೊರತೆಯಿಲ್ಲ. ಭಾರತದಲ್ಲಿ ಸಮೃದ್ಧವಾಗಿರುವ ಮಾನವ ಸಂಪನ್ಮೂಲ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಸಮುದಾಯ, ಭಾರತೀಯರ ಅಪಾರ ಬುದ್ಧಿಮತ್ತೆ ಮತ್ತು ಕಾರ್ಯದಕ್ಷತೆ ಯಾವ ತೈಲ ನಿಕ್ಷೇಪಗಳಿಗೂ ಕಡಿಮೆಯಿಲ್ಲ. ಸಮುದ್ರವೇ ಹರಿದು ಬಂದಿದೆಯೇನೋ ಎಂಬಂಥ ಲೆಕ್ಕವಿಲ್ಲದಷ್ಟು ನದಿಗಳು ನಮ್ಮಲ್ಲಿವೆ. ಇಡೀ ವಿಶ್ವದಲ್ಲೇ ಅತ್ಯಂತ ಫಲವತ್ತಾದ ಪ್ರಸ್ಥಭೂಮಿಗಳು ನಮ್ಮಲ್ಲಿವೆ. ಇಲ್ಲಿಯಾದರೋ ಬರೀ ಮರಳು. ಖರ್ಜೂರ ಬಿಟ್ಟರೆ ಬೆಳೆಯೇ ಇಲ್ಲ. ಒಂದು ನದಿಯಾದರೂ ಇದೆ ಎಂದೇನೂ ನನಗೆ ಅನ್ನಿಸುವುದಿಲ್ಲ. ಅಷ್ಟೇಕೆ ಕುಡಿಯುವ ನೀರಿಗೂ ಬರ. ಸಮುದ್ರದ ನೀರಿನಿಂದ ಲವಣಾಂಶವನ್ನು ತೆಗೆದು ಅದನ್ನೇ ಕುಡಿಯುವುದಕ್ಕೂ ಹಾಗೂ ಇನ್ನಿತರ ಉದ್ದೇಶಗಳಿಗೂ ಉಪಯೋಗಿಸಬೇಕು. ಆದರೆ, ಇಡೀ ನಗರದಲ್ಲಿ ಖಾಲಿಯಿರುವ ಜಾಗಗಳಲ್ಲೆಲ್ಲಾ ಹಸಿರು ಹುಲ್ಲಿನ ಹಾಸು(lawn)ಗಳನ್ನು ನೋಡುತ್ತೇವೆ. ಊರು ಅತ್ಯಂತ ಸ್ವಚ್ಛ , ಸುಂದರ. ಹಿಂದುಗಳ ಸಂಖ್ಯೆ ಸಾಕಷ್ಟೇ ಇದ್ದರೂ ಇಲ್ಲಿ ಯಾವುದೇ ರೀತಿಯ ಕೋಮು ಗಲಭೆಗಳಿಲ್ಲ. ಹಿಂದು ಸ್ವಭಾವತಃ ಸೌಮ್ಯ ಎನ್ನುವುದು ಒಂದು ವಿಷಯವಾದರೆ ದೇಶದ ಕಾನೂನುಗಳು ಬಹಳ ಬಿಗಿ. ಕಾನೂನು ಮತ್ತು ಸುವ್ಯವಸ್ಥೆ (law and order) ಎದ್ದು ಕಾಣುತ್ತದೆ. ನಿಯಮಬಾಹಿರರಾದವರಿಗೆ ಸರಿಯಾಗಿ ಬುದ್ಧಿ ಕಲಿಸಲಾಗುತ್ತದೆ. ವಾಕ್ ಸ್ವಾತಂತ್ರ್ಯವೋ ಅಥವಾ ಇನ್ನಾವುದೋ ಸ್ವಾತಂತ್ರ್ಯದ ಹೆಸರಿನಲ್ಲಿ ನಿರಂತರ ಕುಣಿಯುವ ಬೇಜವಾಬ್ದಾರಿತನಕ್ಕೆ ಇಲ್ಲಿ ಸ್ಥಾನವಿಲ್ಲ. ರಾಜ ಕಟ್ಟುನಿಟ್ಟಾಗಿ ಕಾನೂನುಗಳನ್ನು ಹೇರುತ್ತಾನೆ ಏಕೆಂದರೆ ಅವನಿಗೆ ಓಟು ಕೈತಪ್ಪಿಹೋಗುವ ಭಯವಿಲ್ಲ. ಓಟುಗಳಿಗಾಗಿ ಅವಿವೇಕಿಗಳ, ಅಜ್ಞಾನಿಗಳ ತಾಳಕ್ಕೆ ತಕ್ಕಂತೆ ಕುಣಿಯುವ, ಎಲ್ಲ ಆದರ್ಶಗಳನ್ನು ಗಾಳಿಗೆ ತೂರಿ ಆಮೇಲೆ ಅದನ್ನು ತನಗೆ ಅನುಕೂಲವಾಗುವ ವಾದಗಳಿಂದ ಸಮರ್ಥಿಸಿಕೊಳ್ಳುವ ದರ್ದಿಲ್ಲ. ಈ ಏಳೂ ನಗರಗಳು ಅಭಿವೃದ್ಧಿಗಾಗಿ ತಮ್ಮ ತಮ್ಮಲ್ಲೇ ಸ್ಪರ್ಧಿಸುತ್ತವೆ. ದುಬೈ ಅಂತೂ ಪ್ರತಿಯೊಂದರಲ್ಲೂ ವಿಶ್ವದಲ್ಲೇ ಪ್ರಥಮಸ್ಥಾನ ಗಿಟ್ಟಿಸುವ ಹವಣಿಕೆಯಲ್ಲಿದೆ. ಸ್ಥಳೀಯರು ಹೆಚ್ಚೆಂದರೆ ಶೇ 15ರಷ್ಟು ಜನರಿರುವುದಷ್ಟೇ. ಮಿಕ್ಕ ಶೇ 85ರಷ್ಟು ಜನ ಪರಕೀಯರು. ಬಹಳ ಜನ ಭಾರತೀಯರು. ಆದರೆ, ಎಲ್ಲರೂ ನೆಮ್ಮದಿಯಿಂದಿದ್ದಾರೆ. ಸರ್ಕಾರಿ ಕಚೇರಿಗಳಿಗೆ ತಡವಾಗಿ ಬರುತ್ತಿದ್ದ ಅಧಿಕಾರಿಗಳನ್ನು ಸುಲ್ತಾನ ಮುಲಾಜಿಲ್ಲದೇ ವಜಾ ಮಾಡಿ ಮನೆಗೆ ಕಳಿಸಿದ್ದಿದೆ. ಇದನ್ನು ಊಹಿಸಿಕೊಳ್ಳಲಾದರೂ ಸಾಧ್ಯವೇನು? ನಮ್ಮ ದೇಶದಲ್ಲಿ! ಅಮೆರಿಕಾವನ್ನೂ ಸೇರಿಸಿಕೊಂಡು ಯಾವುದೇ ದೇಶದ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತು ಶೇ 80ರಷ್ಟು ಜನ ಶಿಕ್ಷೆಯ ಹೆದರಿಕೆಯಿಂದ ಮಾತ್ರವೇ ಶಿಸ್ತನ್ನು ಪಾಲಿಸುತ್ತಾರೆ ಎಂದು. ಇದನ್ನು ಇನ್ನೂ ಅರಿಯದವರು ನಮ್ಮ ದೇಶದವರು ಮಾತ್ರ. ಮೈತುಂಬ ಉತ್ಸಾಹವನ್ನು ತುಂಬಿಕೊಂಡು ಮಾತೃ ಭೂಮಿಗಾಗಿ ಏನಾದರೂ ಸೇವೆ ಸಲ್ಲಿಸಬೇಕೆಂಬ ಉತ್ಸುಕತೆಯಿಂದ ಅಮೇರಿಕಾದಲ್ಲಿದ್ದ lucrative ಕೆಲಸಗಳನ್ನು ಬಿಟ್ಟು ಭಾರತಕ್ಕೆ ಓಡಿ ಬಂದಿದ್ದ ಆಶ್ರಮದ ಭಕ್ತರಾದ ಮೂವರು ಯುವಕರು ಎರಡೇ ವರ್ಷದಲ್ಲಿ ವಾಪಸ್ ಅಮೆರಿಕಾಗೇ ಓಡಿ ಹೋಗಿದ್ದು ನನ್ನ ಸ್ಮೃತಿಯಲ್ಲಿ ಇನ್ನೂ ಹಚ್ಚಹಸಿರಾಗಿದೆ. ಭ್ರಷ್ಟ ವ್ಯವಸ್ಥೆಗೆ ಹೊಣೆಗಾರರಾದವರೆಲ್ಲಾ ಈ ಸಣ್ಣ ಪುಟ್ಟ ದೇಶಗಳಿಂದ ಕಲಿಯಬೇಕಾದದ್ದು ಸಾವಿರ ಪಾಠಗಳಿವೆ. ಭಾರತೀಯ ಭ್ರಷ್ಟ ರಾಜಕಾರಣಿಗಳೂ ಹಾಗೂ
ಅವರ ಚೇಲಾಗಳು ಈ ದೇಶಗಳಲ್ಲೂ ಸಾಕಷ್ಟು ತಮ್ಮ ’ಅದ್ಭುತ ಗಳಿಕೆ ’ಗಳ ಹೂಡಿಕೆಯನ್ನು ಮಾಡಿದ್ದಾರೆ. ಇಂಥ ದೇಶಗಳ ಉಪಯೋಗಗಳು ಅವರಿಗೆ ಕಾಣುವುದು ಹಾಗೆ ಮಾತ್ರ. ಇದರ ನಡುನಡುವೆಯೇ ಸುತ್ತೂರು ಮಠದ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಇಲ್ಲಿ ಅದ್ಭುತವಾದ ಶಿಕ್ಷಣ ಸಂಸ್ಥೆಯೊಂದನ್ನು ತೆರೆದಿದ್ದಾರೆ. ಅಂದಾಜು ಐದು ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಯೆಂದರೆ ಹೀಗಿರಬೇಕು ಎನ್ನುವಂತೆ ಅತ್ಯಂತ ಸುಸಜ್ಜಿತ ವ್ಯವಸ್ಥೆಗಳಿಂದೊಡಗೂಡಿದೆ ಇದು.
ನಿನ್ನೆ ನಡೆದ ಘಟನೆಯೊಂದು ಸಾಮಾನ್ಯವೆನಿಸಿದರೂ ಉಲ್ಲೇಖಾರ್ಹ. ಪ್ರಪಂಚದ ಮೂರನೇ ಅತಿದೊಡ್ಡ ಮಸೀದಿ ಶೇಖ್ ಝೇಯಾದ್ ಅಬುಧಬಿ ನಗರದಲ್ಲಿದೆ. ತಾಜ್ವುಹಲ್ನಿಂದ ಸ್ಪೂರ್ತಿ ಹೊಂದಿ ಇದನ್ನು ನಿರ್ವಿುಸಲಾಗಿದೆ. ಇಲ್ಲಿಯ ವಿನ್ಯಾಸ ಮತ್ತು ಬೃಹತ್ತತೆ ಅದ್ಭುತವೇ ಸರಿ. ಇದನ್ನು ನೋಡಿಕೊಂಡು ಮುಂದೆ ನಾವು ಹೋಗಬೇಕಾಗಿದ್ದುದು ಹುತಾತ್ಮರ ಸ್ಮೃತಿ ಮಂದಿರ (Martyrs' memorial) ದೆಡೆಗೆ. ಸ್ವಲ್ಪ ದಾರಿ ತಪ್ಪಿದಂತಾಗಿ ಪಾದಚಾರಿಯೊಬ್ಬರನ್ನು ಕೇಳಬೇಕಾಯ್ತು. ಅವನೊಬ್ಬ ನೀಗ್ರೊ ಯುವಕ, ಕಾರಿನಲ್ಲಿ ಕುಳಿತಿದ್ದ ನಮ್ಮನ್ನು ಕಂಡು ತಾವು ಸಂನ್ಯಾಸಿಗಳೇ (Are you monks) ಎಂದು ಕೇಳಿದ. ಹೌದೆಂದು ನಾವು ಉತ್ತರಿಸಿದಾಗ ಬಂದ ಪ್ರತಿಕ್ರಿಯೆ ಮಾರ್ವಿುಕವಾಗಿತ್ತು. Oh! You are good people please bless me ಎಂದ. ಭಾರತೀಯ ಸಂನ್ಯಾಸಿ, ಸಂನ್ಯಾಸ ಪರಂಪರೆಯ ಬಗ್ಗೆ ಹೆಮ್ಮೆ ಎನಿಸಿತು.
ಭಾರತೀಯ ಸಮುದಾಯ ಬೇರೆಲ್ಲಾ ದೇಶಗಳಲ್ಲೂ ನಾನು ನೋಡಿರುವಂತೆ ಈ ದೇಶದ ಏಳ್ಗೆಗಾಗಿಯೂ ಮೌನವಾಗಿ ಆದರೆ ಅತ್ಯಂತ ಪರಿಣಾಮಕಾರಿಯಾಗಿ ತನ್ನ ಕೊಡುಗೆಯನ್ನು ನೀಡುತ್ತಿದೆ. ಭಾರತೀಯ ಇಂಜಿನಿಯರ್, ಡಾಕ್ಟರ್, ಅಕೌಂಟೆಂಟ್, ಶಿಕ್ಷಕ, ಪ್ರಬಂಧಕ ಇತ್ಯಾದಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಪಾದಾರ್ಪಣೆಗೊಳ್ಳುತ್ತಿದ್ದಂತೆ ಆ ಸ್ಥಾನಗಳನ್ನು ಮೊದಲು ಆಕ್ರಮಿಸಿಕೊಂಡಿದ್ದ ಯುರೋಪಿಯನ್ನರು ಕಾಲ್ಕೀಳá-ವಂತಾಗಿದೆ. ಅವರ ದುಬಾರಿ ವೇತನಗಳಿಂದ ಸುಲ್ತಾನ ಪಾರಾಗಿದ್ದಾನೆ. ಅವನು ಭಾರತೀಯರನ್ನು ಇಷ್ಟಪಡುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿದೆ. ಆದ್ದರಿಂದಲೇ ಸ್ವಯಂ ಪ್ರೇರಿತನಾಗಿ ಭಾರತೀಯರಿಗೆ ದೇವಾಲಯ ಕಟ್ಟಲು ಹಬ್ಬ ಹರಿದಿನಗಳನ್ನು ಆಚರಿಸಲು ಪೂರ್ಣಪ್ರಮಾಣದ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಶಾಂತಿಪ್ರಿಯ ಭಾರತೀಯ ಇದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದ್ದಾನೆ ಕೂಡ. ತೆರಿಗೆರಹಿತ ಧಾರಾಳ ವೇತನ, ಧಾರ್ವಿುಕ ಸ್ವಾತಂತ್ರ್ಯ ಅವನನ್ನು ಖಷಿಪಡಿಸಿದೆ. ಆದ್ದರಿಂದ ಭಾರತೀಯ ಪುರೋಹಿತರು ದೇವಾಲಯಗಳಲ್ಲಿ ಮತ್ತು ತಮ್ಮ ಪ್ರತಿನಿತ್ಯದ ಪೂಜೆಗಳಲ್ಲಿ ಸಂಕಲ್ಪ ಮಾಡುವಾಗ ಸುಲ್ತಾನನ ಹೆಸರು, ಅವನ ದೇಶ ಎರಡನ್ನೂ ಪ್ರಸ್ತಾಪಿಸಿ ಭಗವಾನ್ ಚಿರಕಾಲ ನಿನ್ನ ಕೃಪೆ ಈ ದೇಶ ಹಾಗೂ ಅದರ ಒಡೆಯನ ಮೇಲಿರಲಿ ಎಂದು ಪ್ರಾರ್ಥಿಸುವುದನ್ನು ನನ್ನ ಕಿವಿಯಾರೆ ಕೇಳಿದೆ, ಕಣ್ಣಾರೆ ಕಂಡೆ. ಇದು ಭಾರತೀಯ ಸಂಸ್ಕೃತಿ ಅನಾದಿಕಾಲದಿಂದಲೂ ವೇದ ಮಂತ್ರಗಳಲ್ಲಿ ರಾಜಾಧಿರಾಜಾಯ ಪ್ರಸಹ್ಯಸಾಹಿನೇ. ಮಹಾರಾಜಾಯ ನಮಃ ಎಂದು ಪ್ರಾರ್ಥಿಸುವ ಪರಂಪರೆಯ ಮುಂದá-ವರಿಕೆಯೇ ಆಗಿದೆ. ನಮ್ಮನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿರುವ ರಾಜನಿಗೆ, ಅವನ ರಾಜ್ಯಕ್ಕೆ ಒಳಿತಾಗಲಿ ಎಂತಲೇ ಇದರ ಅರ್ಥ. ಎಷ್ಟಾದರೂ ಅವನು ಪುರೋಹಿತ! ಪುರದ ಹಿತವನ್ನು ನಿರಂತರ ಬಯಸುವವನು. ಕೃತಜ್ಞತೆಯಿಂದ ಸ್ಮರಿಸುವವನು ಇದನ್ನೆಲ್ಲಾ ಕಂಡಾಗ ನನಗನ್ನಿಸಿದ್ದು ಭಾರತೀಯ ಸಂಸ್ಕೃತಿ ಭಾರತದ ಹೊರಗಡೆಯೇ ಚೆನ್ನಾಗಿ ಬೆಳೆಯುತ್ತಿದೆ; ಭಾರತದ ಹೊರಗಿನವರೇ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು. ಅದೂ ಸರಿಯೇ. ವಿವೇಕಾನಂದರು ಸುಮ್ಮಸುಮ್ಮನೇ ಅಮೆರಿಕಾಕ್ಕೆ ಹೋದರೆ? ಸುಮ್ಮ ಸುಮ್ಮನೆ ಅವರಿಗೆ ವೇದಾಂತದ ಸಾರವನ್ನು ಧಾರೆಯೆರೆದರೇ!?
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)