ಅನುಷ್ಠಾನವೇ ಮುಖ್ಯ: ಸುಧಾರಣೆಗಳು ಆಶ್ವಾಸನೆಗೆ ಸೀಮಿತವಾಗದಿರಲಿ..

Vidhanasoudha
Published on

ನಮ್ಮಲ್ಲಿ ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಹಲವು ಪ್ರಯತ್ನಗಳು, ಹೊಸ ಪ್ರಯೋಗಗಳು ಕೈಗೊಳ್ಳುವುದು ಸಾಮಾನ್ಯ. ಆದರೆ, ಇವು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತವೆ ಎಂದು ಅವಲೋಕಿಸಿದರೆ ವಾಸ್ತವ ಗೋಚರಿಸುತ್ತದೆ. ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತೆ ಯೋಜನೆಗಳ ಜಾರಿಯಲ್ಲೂ ಕೆಲವೊಮ್ಮೆ ಲೋಪಗಳಾಗುವುದುಂಟು. ಮಾಹಿತಿ-ತಂತ್ರಜ್ಞಾನದ ಅಳವಡಿಕೆ, ಬಳಕೆಯ ಬಳಿಕ ಸರ್ಕಾರಿ ಕಚೇರಿಗಳಲ್ಲಿ ಕಾರ್ಯವೈಖರಿ ಬದಲಾಗಿ, ಜನರಿಗೆ ಹತ್ತಿರವಾಗಬಹುದು ಎಂದೇ ಭಾವಿಸಲಾಗಿತ್ತು. ಇಚ್ಛಾಶಕ್ತಿಯ ಕೊರತೆ ಇಲ್ಲಿ ಕೂಡ ಕಂಡುಬರುತ್ತಿದೆ. ಸರ್ವರ್ ಇಲ್ಲ, ನೆಟ್​ವರ್ಕ್ ಇಲ್ಲ, ಹಿರಿಯ ಅಧಿಕಾರಿ ರಜೆಯಲ್ಲಿದ್ದಾರೆ...

ಹೀಗೆ ಅನೇಕ ಕಾರಣಗಳನ್ನು ನೀಡುತ್ತ ಜನರು ಮತ್ತೆಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಲಾಗುತ್ತದೆ. ಇಂಥ ತೊಂದರೆಗಳಿಂದ ನೈಜ ಫಲಾನುಭವಿಗಳು ಜನಪರ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ. ಮುಖ್ಯಮಂತ್ರಿಗಳು ಜನತಾ ದರ್ಶನ ನಡೆಸುವ ಸಮಯದಲ್ಲಿ ಬರುವ ಸಮಸ್ಯೆಗಳು, ಅಹವಾಲುಗಳು ಜಿಲ್ಲೆ ಮತ್ತು ತಾಲೂಕು ಸ್ತರದ್ದೇ ಹೆಚ್ಚಾಗಿರುತ್ತವೆ ಎಂಬುದು ಗಮನಾರ್ಹ. ‘ಇಷ್ಟು ಸಣ್ಣ ಸಮಸ್ಯೆಯ ಪರಿಹಾರಕ್ಕಾಗಿ ಬೆಂಗಳೂರುವರೆಗೆ ಬರುವಂತಾಯ್ತಲ್ಲ, ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೆ?’ ಎಂದು ಮುಖ್ಯಮಂತ್ರಿಗಳು ಕೆಲ ಸಂದರ್ಭಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಿದೆ.

ಆಡಳಿತಕ್ಕೆ ಚುರುಕು ನೀಡಲು, ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ತಾಲೂಕು ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಿ, ಅವರಿಗೆ 23 ಬಗೆಯ ಹೊಣೆಗಾರಿಕೆಗಳನ್ನು ನೀಡುವ ಹೊಸ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಅಧಿಕಾರಿಗಳು ತಿಂಗಳಲ್ಲಿ ಎರಡು ಬಾರಿ ತಾಲೂಕಿಗೆ ಭೇಟಿ ನೀಡಬೇಕು. ಮುಖ್ಯವಾಗಿ, ತಾಲೂಕಿನ ಶೈಕ್ಷಣಿಕ, ಆರೋಗ್ಯ, ಅಭಿವೃದ್ಧಿ ಸೂಚ್ಯಾಂಕ ಉತ್ತಮಪಡಿಸುವುದು, ಸಿಎಸ್​ಆರ್​ನಡಿ ಹಣ ತಂದು ಆರೋಗ್ಯ, ಶಿಕ್ಷಣ ಕ್ಷೇತ್ರದ ಜತೆಗೆ ಸ್ಥಳೀಯ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುವುದು, ಸಿಬ್ಬಂದಿ ಕೊರತೆ ಇದ್ದಲ್ಲಿ ನಿವಾರಿಸುವುದು ಸೇರಿದಂತೆ ಹಲವು ಮಹತ್ತರ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಈಗಾಗಲೇ ಅಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು, ಜನವರಿಯಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದಿವೆ ಸರ್ಕಾರದ ಮೂಲಗಳು.

ಯೋಜನೆಯ ಆಶಯ ಉತ್ತಮವಾದದ್ದೇ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಜಾರಿಯ ಹಂತದಲ್ಲಿ ಇದು ಹಳಿ ತಪ್ಪಬಾರದಷ್ಟೇ. ಈಗಾಗಲೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಇದ್ದರೂ, ಸಮಸ್ಯೆ ನಿವಾರಣೆ ಅಥವಾ ಆಡಳಿತಕ್ಕೆ ವೇಗ ನೀಡುವ ಆಶಯ ಈಡೇರಿಲ್ಲ ಎಂಬುದು ಗೊತ್ತಿರುವಂಥದ್ದೇ. ಈ ಪ್ರಯೋಗವು ಮತ್ತೆ ಅದೇ ರೀತಿ ಆಗಬಾರದು. ಅಧಿಕಾರಿಗಳು ಎಷ್ಟರ ಮಟ್ಟಿಗೆ ಒಳಗೊಳ್ಳುತ್ತಾರೆ ಮತ್ತು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದರ ಮೇಲೆ ಈ ಯೋಜನೆಯ ಯಶಸ್ಸು ಅವಲಂಬಿತವಾಗಿದೆ. ಒಟ್ಟಾರೆ, ಯೋಜನೆ ಘೋಷಣೆ ಹೊತ್ತಿನ ಉತ್ಸಾಹ ಅದರ ಜಾರಿಯಲ್ಲೂ ಇರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net