ಬೇಷರತ್ತಾಗಿ ಪ್ರೀತಿಸುವುದು ಹೇಗೆ?

Sadguru 11 June 20
Published on

ಏನನ್ನು ಕೊಡುವಿರೋ ಅದನ್ನು ಲೆಕ್ಕಿಸದೆ ನಿಮಗೇನು ಸಿಗುತ್ತದೆಯೋ ಅದನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಂಡರೆ ಸಹಜವಾಗಿಯೇ ಕೃತಜ್ಞತೆಯ ಸಾಗರ ಆಗುವಿರಿ.

‘ನಾನು ಎಷ್ಟು ಮಾಡಿದ್ದೇನೆ’ ಎಂಬ ಅವಿವೇಕವನ್ನು ಬಿಡಿ. ಯಾರಿಂದಲೂ ಏನನ್ನೂ ಆಶಿಸದಿದ್ದರೆ, ಬದುಕು ಸುಲಭ. 'ನಾವು ಬೇಷರತ್ತಾಗಿ ಪ್ರೀತಿಸುವುದು ಹೇಗೆ? ಸಂಗಾತಿಯೊಡನೆ ನಡೆದುಕೊಳ್ಳುವುದು ಹೇಗೆ?’ ಜನರಿಗೆ ಈ ವಿಷಯದಲ್ಲಿ ಯಾವಾಗಲೂ ಸಮಸ್ಯೆ ಇರುತ್ತದೆ. ಷರತ್ತುಗಳು ಇಲ್ಲದಿದ್ದರೆ ಅವರು ನಿಮ್ಮ ಸಂಗಾತಿಯಾಗುವುದಿಲ್ಲ. ಮದುವೆಯ ಷರತ್ತೇ ಅವರು ಯಾವಾಗಲೂ ನಿಮ್ಮ ಸಂಗಾತಿಯಾಗಿ ಇರಬೇಕೆಂದು. ಈ ಷರತ್ತಿನೊಳಗೆ ಹೇಗೆ ‘ಷರತ್ತುಗಳಿಲ್ಲದೆ’ ಇರಬೇಕು? ಈ ಕ್ಷಣ, ಬದುಕೇ ಒಂದು ಷರತ್ತು. ಕೆಲವು ಷರತ್ತುಗಳನ್ನು ಪೂರೈಸಿದರೆ ಮಾತ್ರ ಬದುಕಲು ಸಾಧ್ಯ. ಪ್ರೀತಿ ಎಂಬ ಭಾವನೆಯ ವಿಷಯಕ್ಕೆ ಬಂದಾಗ ಅಲ್ಲಿ ಷರತ್ತುಳ್ಳ ಅಥವಾ ಬೇಷರತ್ತಿನ ಪ್ರೀತಿ ಎಂಬುವುದಿಲ್ಲ. ಅಲ್ಲಿ ಪ್ರೀತಿ ಇದೆ ಅಥವಾ ಇಲ್ಲ. ನಿಮಗೆ ಜೀವನದಲ್ಲಿ ಪ್ರೀತಿ ಇದೆ ಅಥವಾ ಪರಸ್ಪರ ಲಾಭ ಯೋಜನೆ ತಿಳಿದಿದೆ. ‘ನಾನು ನಿನಗೆ ಇದನ್ನು ಕೊಡುತ್ತೇನೆ- ನೀನು ನನಗೆ ಅದನ್ನು ಕೊಡುತ್ತೀಯೆ. ನೀನು ಇದನ್ನು ನನಗೆ ಕೊಡದಿದ್ದರೆ ನಾನು ನಿನಗೆ ಅದನ್ನು ಕೊಡುವುದಿಲ್ಲ.’ ಅದು ಪರಸ್ಪರ ಲಾಭಯೋಜನೆ ಆಗಿದ್ದರೆ ಅದನ್ನು ಲಾಲಿತ್ಯದಿಂದ ನಡೆಸಬೇಕು.

ಲಾಭದ ಯೋಜನೆಗಳ ಅವಶ್ಯಕತೆ ಇದೆ. ವ್ಯಾಪಾರದ ಪಾಲುದಾರರು, ನೆರೆಮನೆಯವರು, ಗಂಡ, ಹೆಂಡತಿ, ಮಕ್ಕಳು, ತಂದೆ, ತಾಯಿಯೊಂದಿಗೆ, ಸ್ವಲ್ಪ ಬೆರೆಯುವಿಕೆ ಇರಬೇಕು. ಇದನ್ನು ತುಂಬಿ ತುಳುಕುತ್ತಿರುವ ಪ್ರೇಮಪ್ರಸಂಗವೆಂದು ಯೋಚಿಸಿದರೆ ಇನ್ನೂ ಊಹಾಲೋಕದಲ್ಲಿ ಇದ್ದೀರಿ ಎಂದಾಯಿತು. ಆಗ ನಿಮ್ಮ ಹೆಂಡತಿ ನಿಮ್ಮನ್ನು ಭೂಮಿಗೆ ಇಳಿಸಬೇಕು. ಪ್ರೇಮಪ್ರಸಂಗ ಪರವಾಗಿಲ್ಲ, ಆದರೆ ಅದು ಸಂಬಂಧಗಳ ವಿಷಯಕ್ಕೆ ಬಂದಾಗ, ಅಲ್ಲಿ ವ್ಯವಹಾರ ಇರುತ್ತದೆ. ನೀವದನ್ನು ಸ್ವೀಕರಿಸದಿದ್ದರೆ, ಸಂಕಟಕ್ಕೆ ಒಳಗಾಗುವಿರಿ. ಅದನ್ನು ಸ್ವೀಕರಿಸಿದರೆ, ಆ ಸಂಬಂಧವನ್ನು ಹೇಗೆ ಸುಲಲಿತವಾಗಿ ನಡೆಸಬೇಕೆಂದು ಕಲಿತುಕೊಳ್ಳುವಿರಿ. ‘ನಾನು ನಿನಗೆ ಎಷ್ಟೊಂದು ಕೊಟ್ಟೆ- ನನಗೆ ನೀನೇನು ಕೊಡುತ್ತಿದ್ದೀಯ’ ಎಂದು ಹೇಳಿದರೆ, ಅದು ಅಸಹ್ಯವಾಗಿರುತ್ತದೆ. ಅದನ್ನು ಸುಗಮವಾಗಿ ನಡೆಸಲು, ಒಂದು ಮಾರ್ಗ ಇದೆ. ನೀವು ಏನನ್ನು ಕೊಡುವಿರೋ ಅದು ಯಾರಿಗೂ ತಿಳಿಯದಂತೆ ಕೊಡುವುದು.

ಉದಾರಿ ಸಹೋದರರು: ನನ್ನ ಮುತ್ತಜ್ಜಿ ನನಗೆ ಬಹಳ ಕಥೆಗಳನ್ನು ಹೇಳುತ್ತಿದ್ದಳು. ಆದರೆ ಇದೊಂದು ನನ್ನ ಮನಸ್ಸಿನಲ್ಲಿ ನಾಟಿಹೋಯಿತು. ಈ ಕಥೆ ನನ್ನ ಜೀವನದ ಆಧಾರವಲ್ಲ. ಆದರೆ ಖಂಡಿತ ನನ್ನ ಬದುಕನ್ನು ರೂಪಿಸುವುದರಲ್ಲಿ ಉಪಯೋಗವಾಯಿತು. ಒಂದ ಊರಲ್ಲಿ ದಂಪತಿಗಳಿದ್ದರು. ಆ ಕಾಲದಲ್ಲಿ ಜನರು ಹೊಲದಲ್ಲಿ ಕೆಲಸ ಮಾಡಿ ಬೆಳೆ ಬೆಳೆದು ಸಂಪಾದಿಸುತ್ತಿದ್ದರು. ಆ ದಂಪತಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ಗಟ್ಟಿಮುಟ್ಟಾದ ಯುವಕರಾಗಿ ಬೆಳೆದರು. ತಂದೆಯೊಡನೆ ಕಷ್ಟ ಪಟ್ಟು ಕೆಲಸ ಮಾಡಿದರು. ಮತ್ತು ಸಾಹುಕಾರರಾದರು. ತಂದೆ ವೃದ್ಧಾವಸ್ಥೆಗೆ ಬಂದಾಗ ಇಬ್ಬರು ಮಕ್ಕಳನ್ನೂ ಕರೆದು ಹೇಳಿದ- ‘ನಾನು ಯಾವುದೇ ಕ್ಷಣದಲ್ಲೂ ಮರಣಿಸಬಹುದು. ನಾನು ಸತ್ತ ಮೇಲೆ ನೀವಿಬ್ಬರೂ ಈ ಭೂಮಿಯಿಂದ ಬರುವ ವರಮಾನವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಯಾವ ಸಮಯದಲ್ಲೂ ಅದರ ಬಗ್ಗೆ ಚರ್ಚೆಯಾಗಲೀ, ವಾಗ್ವಾದವಾಗಲೀ, ಜಗಳವಾಗಲೀ, ನಡೆಯಬಾರದು’ ಎಂದು ಹೇಳಿದ. ಇದನ್ನೂ ಓದಿ: ಅಮೃತಧಾರೆ ಅಂಕಣ: ಅಧ್ಯಾತ್ಮಕ್ಕೆ ತೆರೆದುಕೊಳ್ಳಲು ಬೇಕು ಸಿದ್ಧತೆ

ಆ ಮುದುಕ ಮರಣಿಸಿದ ಮೇಲೆ ಮಕ್ಕಳು ಅವನ ಅಂತಿಮ ಕ್ರಿಯೆಗಳನ್ನು ನಡೆಸಿದರು. ಆ ಕಾಲದಲ್ಲಿ ಭಾರತದಲ್ಲಿ ಮತ್ತು ಎಷ್ಟೋ ಪ್ರದೇಶಗಳಲ್ಲಿ ಭೂಮಿಯನ್ನು ಭಾಗಮಾಡುವ ಪ್ರಶ್ನೆಯೇ ಇರಲಿಲ್ಲ. ಅದರಿಂದ ಬರುವ ವರಮಾನವನ್ನು ಮಾತ್ರ ಹಂಚಿಕೊಳ್ಳುತ್ತಿದ್ದರು. ಈ ನಾಲ್ಕು ತಲೆಮಾರುಗಳಿಂದ ಮಾತ್ರ ಬಹಶಃ ಬ್ರಿಟಿಷರು ಬಂದ ಮೇಲೆ ನಾವು ಭೂಮಿಯನ್ನು ಭಾಗ ಮಾಡಲು ಶುರು ಮಾಡಿದೆವು. ಹಾಗಾಗಿ ಆ ಇಬ್ಬರು ಸಹೋದರರು ಸದಾ ಫಸಲನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬ ಮದುವೆ ಮಾಡಿಕೊಂಡ. ಅವನಿಗೆ ಐದು ಮಕ್ಕಳಾದರು. ಇನ್ನೊಬ್ಬ ಮದುವೆ ಮಾಡಿಕೊಳ್ಳಲಿಲ್ಲ. ಆದರೂ ಅವರು ವರಮಾನವನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದರು.

ಮದುವೆಯಾಗದಿದ್ದ ಸಹೋದರನ ತಲೆಯಲ್ಲಿ ಒಂದು ದಿನ ಯೋಚನೆ ಬಂತು. ‘ನನ್ನ ಸಹೋದರನಿಗೆ ಪತ್ನಿ ಮತ್ತು ಐದು ಮಕ್ಕಳಿದ್ದಾರೆ. ಅವನು ಅವರನ್ನು ನೋಡಿಕೊಳ್ಳಬೇಕು, ನಾನೋ ಒಬ್ಬನೇ. ಆದರೂ ಅರ್ಧಭಾಗ ತೆಗೆದುಕೊಳ್ಳುತ್ತಿದ್ದೇನೆ. ಇದು ಸರಿಯಲ್ಲ. ಆದರೆ ತಂದೆಯ ಬಯಕೆ, ಅದಲ್ಲದೆ ಸಹೋದರನಿಗೆ ಸ್ವಾಭಿಮಾನ ಹೆಚ್ಚು, ನಾನು ಅವನಿಗೆ ಜಾಸ್ತಿ ಪಾಲು ಕೊಟ್ಟರೂ ಅವನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಬೇರೆ ಏನಾದರೂ ಉಪಾಯ ಮಾಡಬೇಕು’ ಅಂದುಕೊಂಡ. ಫಸಲು ಬಂದ ಮೇಲೆ, ಯಾರಿಗೂ ತಿಳಿಯದಂತೆ ಪ್ರತೀ ರಾತ್ರಿ ಧಾನ್ಯಗಳ ಮೂಟೆಯೊಂದನ್ನು ಬೆನ್ನಿನ ಮೇಲೆ ಹಾಕಿಕೊಂಡು ಸಹೋದರನ ಭಂಡಾರದಲ್ಲಿ ಹಾಕತೊಡಗಿದ. ಅದೇ ಹುಳು ಅವನ ಸಹೋದರನ ತಲೆಯಲ್ಲೂ ನುಸುಳಿತು. ‘ನನಗೆ ಬೆಳೆದ ಐದು ಗಂಡು ಮಕ್ಕಳಿದ್ದಾರೆ. ಕೆಲವು ವರ್ಷಗಳಲ್ಲಿ ನನಗೆ ಬೇಕಾಗುವುದಕ್ಕಿಂತ ಹೆಚ್ಚು ಸಿಗುತ್ತದೆ. ನನ್ನ ಸಹೋದರನಿಗೆ ಯಾರೂ ಇಲ್ಲ. ಅವನು ಆಮೇಲೆ ಏನು ಮಾಡಬಲ್ಲ? ಆದರೂ ಅವನು ಅರ್ಧ ಭಾಗವನ್ನೇ ತೆಗೆದುಕೊಳ್ಳುತ್ತಾನೆ. ಅವನಿಗೆ ಏನಾದರೂ ಕೊಡಲು ಹೋದರೆ ತೆಗೆದುಕೊಳ್ಳುವುದಿಲ್ಲ’. ಹೀಗೆಂದುಕೊಂಡು ಇವನೂ ಒಂದೊಂದು ಮೂಟೆ ಧಾನ್ಯವನ್ನು ಸಹೋದರನ ಭಂಡಾರದಲ್ಲಿ ಹಾಕತೊಡಗಿದ. ಹೀಗೆ ಧಾನ್ಯದ ಮೂಟೆಗಳು ಬದಲಾವಣೆಯಾಗತೊಡಗಿದವು. ಇಬ್ಬರಿಗೂ ಇದು ಬಹಳ ಕಾಲ ತಿಳಿದು ಬರಲಿಲ್ಲ. ಇದನ್ನೂ ಓದಿ: ಅಮೃತಧಾರೆ ಅಂಕಣ: ಅಸ್ತಿತ್ವದ ಭವ್ಯತೆಯೇ ವಿಶಾಲ ಎಂಬುದನ್ನು ಅರಿಯೋಣ

ಅವರಿಗೆ ವಯಸ್ಸಾಗುತ್ತಿತ್ತು. ಮತ್ತವರು ಇದನ್ನು ಮಾಡುತ್ತಲೇ ಇದ್ದರು. ಒಂದು ದಿನ, ಅವರು ಧಾನ್ಯದ ಮೂಟೆಯನ್ನು ಎತ್ತಿಕೊಂಡು ಹೋಗುತ್ತಿದ್ದಾಗ, ಒಬ್ಬರಿಗೊಬ್ಬರು ಎದುರು ಬಂದರು! ಒಬ್ಬರನ್ನೊಬ್ಬರು ನೋಡಿಕೊಂಡ ತಕ್ಷಣವೇ ಅವರಿಗೆ ಇಲ್ಲಿಯವರೆಗೂ ಏನಾಗುತ್ತಿತ್ತು ಎಂಬುದು ಅರ್ಥವಾಯಿತು. ಶೀಘ್ರವಾಗಿ ಅವರು ಕಣ್ಣುತಪ್ಪಿಸಿ ಹೊರಟು, ಮೂಟೆಯನ್ನು ಅದರ ಜಾಗಕ್ಕೆ ತಲುಪಿಸಿ, ಅವರವರ ಮನೆಗೆ ಹೋದರು. ಸಮಯ ಕಳೆಯಿತು, ಅವರು ವೃದ್ಧರಾದರು ಮತ್ತು ಮರಣಿಸಿದರು. ಸ್ವಲ್ಪಕಾಲದ ನಂತರ ಆ ಊರಿನ ಜನ ಒಂದು ದೇವಸ್ಥಾನವನ್ನು ಕಟ್ಟಬೇಕು ಎಂದು ನಿಶ್ಚಯಿಸಿ, ಅದಕ್ಕೆ ಒಳ್ಳೆಯ ಸ್ಥಳ ಹುಡುಕುತ್ತಿದ್ದರು. ದೀರ್ಘಕಾಲದ ಹುಡುಕಾಟದ ನಂತರ, ಆ ಸಹೋದರರು ಧಾನ್ಯದ ಮೂಟೆ ಹಿಡಿದು, ಎದುರುಬದಿರು ಬಂದು ಅವರ ಉದಾರತನದ ಬಗ್ಗೆ ಅವರಿಗೆ ನಾಚಿಕೆಯಾಯಿತೋ ಆ ಸ್ಥಳವೇ ದೇವಸ್ಥಾನಕ್ಕೆ ಒಳ್ಳೆಯ ಸ್ಥಳ ಎಂಬ ನಿರ್ಧಾರಕ್ಕೆ ಬಂದರು. ನೀವು ಈ ರೀತಿಯಲ್ಲಿ ಬದುಕಿದರೆ, ನೀವೇ ಒಂದು ದೇವಸ್ಥಾನದಂತೆ ಬದುಕುತ್ತೀರಿ. ಆಗ ನೀವು ಬೇಷರತ್ತಿನ ಪ್ರೀತಿಯ ಬಗ್ಗೆ, ಷರತ್ತಿನ ಪ್ರೀತಿಯ ಬಗ್ಗೆ ಹಾಗೂ ಇದೆಲ್ಲದರ ಬಗ್ಗೆ ಚಿಂತಿಸಬೇಕಾಗಿಲ್ಲ.

ಕೃತಜ್ಞತೆಯ ಸಾಗರ: ಏನನ್ನು ಕೊಡುವಿರೋ ಅದನ್ನು ಲೆಕ್ಕಿಸದೆ ನಿಮಗೇನು ಸಿಗುತ್ತದೆಯೋ ಅದನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಂಡರೆ ಸಹಜವಾಗಿಯೇ ಕೃತಜ್ಞತೆಯ ಸಾಗರ ಆಗುವಿರಿ. ‘ನಾನು ಎಷ್ಟು ಮಾಡಿದ್ದೇನೆ’ ಎಂಬ ಅವಿವೇಕವನ್ನು ಬಿಡಿ. ಯಾರಿಂದಲೂ ಏನನ್ನೂ ಆಶಿಸದಿದ್ದರೆ, ಬದುಕು ಸುಲಭ. ಯಾರಿಂದಾದರೂ ಏನಾದರೂ ಆಶಿಸಿದರೆ ಅಥವಾ ಅವರು ನಿಮ್ಮನ್ನು ಪ್ರೀತಿಸುತ್ತಿದ್ದರೋ ಇಲ್ಲವೋ ಎಂದು ನೀವು ನಿಮ್ಮನ್ನೇ ಕೇಳಿಕೊಂಡರೆ ಸಮಸ್ಯೆಗಳು ಎದುರಾಗುತ್ತವೆ. ಯಾರಿಂದಲೂ ಏನನ್ನೂ ಬಯಸದೆ ಇರುವಾಗ, ಅವರು ಮಾಡಿದರೆ ಅದು ಅವರಿಗೆ ಅದ್ಭುತ. ಅವರು ಮಾಡದಿದ್ದರೆ, ಏನು ಸಮಸ್ಯೆ?

ಸಂಬಂಧ ಒಂದು ವ್ಯವಹಾರ, ಅದನ್ನು ಚೆನ್ನಾಗಿ ನಡೆಸಲು ಕಲೆ ಬೇಕು. ಇಲ್ಲದಿದ್ದರೆ ಅದು ಹದಗೆಡಬಹುದು. ದುರದೃಷ್ಟವೇನೆಂದರೆ, ಬಹಳ ಜನರು ಸಂಬಂಧ ಒಂದು ವ್ಯವಹಾರವೆಂದು ಒಪ್ಪಿಕೊಳ್ಳಲು ತಯಾರಾಗಿಲ್ಲ. ಅದಕ್ಕೆ ಕೆಲವು ನಿಯಮ, ನಿಷ್ಠೆಗಳಿವೆ. ಆ ನಿಯಮ, ನಿಷ್ಠೆಗಳ ಒಳಗೆ ಇದ್ದರೆ ಮಾತ್ರ ಆ ಸಂಬಂಧವನ್ನು ಯಶಸ್ವಿಯಾಗಿಸಬಹುದು. ಹುಚ್ಚು ಕಲ್ಪನೆಗಳಿದ್ದರೆ ‘ನಮ್ಮ ಪ್ರೀತಿ ಬೇಷರತ್ತಿನ ಪ್ರೀತಿ ಎಂದು’ ಯಾವುದೊ ಒಂದು ದಿನ ಅದು ಮುರಿದು ಬೀಳುತ್ತದೆ. ಇದನ್ನೂ ಓದಿ: ಮನೋಲ್ಲಾಸ: ಹಸಿದವರಿಗೆ ಉಪದೇಶ ಬೇಡ

ಬೇಷರತ್ತಾದ ಪ್ರೀತಿಯ ವಿಚಾರಗಳಲ್ಲಿ ಕಳೆದುಹೋಗಬೇಡಿ. ಪ್ರೀತಿಯೇ ಒಂದು ಷರತ್ತಿನಂತೆ. ನೀವು ಯಾಕೆ ಪ್ರೀತಿಸಬೇಕು? ನಿಮ್ಮ ಭಾವನೆಗಳು ಸಿಹಿಯಾಗಿದ್ದರೆ, ನೋಡುವ ಯಾವುದನ್ನಾದರೂ ಪ್ರೀತಿಯಿಂದ ನೋಡುತ್ತೀರಿ- ಅದು ಆಕಾಶ, ಕೊಳ, ಗಂಡಸು ಅಥವಾ ಹೆಂಗಸು ಏನು ಬೇಕಾದರೂ ಆಗಿರಬಹುದು, ಯಾಕೆಂದರೆ ಸ್ವಭಾವವೇ ಪ್ರೇಮಮಯವಾದದ್ದು. ಅದರ ಮೇಲೆ ಯಾವುದೇ ಷರತ್ತು ಇಲ್ಲ. ಇದು ನಿಮ್ಮ ಗುಣ, ಬೇರೊಬ್ಬರದ್ದಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net