ಅಮೃತಧಾರೆ ಅಂಕಣ: ಅಧ್ಯಾತ್ಮಕ್ಕೆ ತೆರೆದುಕೊಳ್ಳಲು ಬೇಕು ಸಿದ್ಧತೆ

E 1
Published on

ನಿಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾತ್ರ ಮಾಡಿ, ಏನು ಮಾಡಲು ಸಾಧ್ಯವಿಲ್ಲವೋ ಅದನ್ನು ಅರ್ಥಮಾಡಿಕೊಂಡು, ಅಲ್ಲೇ ಎಚ್ಚರಿಕೆಯಿಂದ ಇರುವುದು. ಅದೇ ಯೋಗದ ಸಾರ. ಅನುಗ್ರಹವನ್ನು ಸ್ವೀಕರಿಸುವ ಪಾತ್ರೆ ಅಥವಾ ಹೆಬ್ಬಾಗಿಲು ಆಗುವುದು ಇದರಿಂದಲೇ. ಯಾವಾಗ ಬೇಕಾದರೂ ಅದು ನಿಮ್ಮೊಡನೆಯೇ ಇರುತ್ತದೆ, ಆಕಸ್ಮಿಕವಾಗಿ ಯಾವಾಗಲೋ ಆಗುವುದಲ್ಲ.

ಬೇರೊಬ್ಬರ ಜೀವವನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ! ಏಕೆಂದರೆ ಅದು ನಿಮ್ಮ ಮೇಲೆ ಒಂದು ರೀತಿಯಲ್ಲಿ ಹೇರಿಕೊಳ್ಳುತ್ತದೆ. ನಿಮ್ಮದೇ ಜೀವವನ್ನು ಸ್ವಲ್ಪ ಸ್ವೇಚ್ಛೆಯಾಗಿ ಬಳಸಬಹುದು. ಆದರೆ ಬೇರೆ ಒಂದು ಜೀವ ನಿಮ್ಮ ಕೈಗೆ ಬಂದಾಗ ಅದನ್ನು ಹಾಗೆ ಸ್ವೇಚ್ಛೆಯಾಗಿ ಬಳಸಲಾಗುವುದಿಲ್ಲ. ನೀವು ಡಾಕ್ಟರ್ ಆಗಿರಬಹುದು (ಅಥವಾ ಡ್ರೈವರ್ ಆಗಿರಬಹುದು!), ಬೇರೆಯವರ ಜೀವವನ್ನು ಕೈಗೆ ತೆಗೆದುಕೊಳ್ಳುತ್ತಿದ್ದೀರಿ. ಅದರಲ್ಲೂ ಗುರು ಆಗಿದ್ದರೆ ಬಹಳ ಕಷ್ಟ! ತುಂಬ ಜನರ ಜೀವಗಳನ್ನು ಕೈಗೆ ತೆಗೆದುಕೊಂಡಾಗ-ಅದೂ ಅವರು ನಿಮ್ಮ ಮುಂದೆ ಒಂದು ಬಗೆಯಲ್ಲಿ ಕುಳಿತುಕೊಂಡಿದ್ದರೆ ಅಥವಾ ಅವರು ಆಪರೇಷನ್ ಟೇಬಲ್ ಮೇಲೆ ಪೂರ್ತಿ ನಿಸ್ಸಹಾಯಕರಾಗಿ ಮಲಗಿದ್ದರೆ- ನಿಮ್ಮ ತಲೆಯ ಮೇಲೆ ಹೊತ್ತುಕೊಳ್ಳಲು ಅದು ಬಹಳ ದೊಡ್ಡದು.

ಯಾವುದೇ ವೈದ್ಯಕೀಯ ವ್ಯವಸ್ಥೆಯನ್ನು ಸಾಕಷ್ಟು ಅನ್ವೇಷಿಸಿದ್ದರೆ- ಅದು ಆಯುರ್ವೆದ, ಸಿದ್ಧ, ಅಲೋಪಥಿ ಅಥವಾ ಮತ್ಯಾವುದೋ ಆಗಿರಬಹುದು- ನಿಮ್ಮ ಪಾತ್ರ ಶೇಕಡ 50ರಷ್ಟೂ ಇಲ್ಲವೆಂದು ನಿಮಗೆ ಅರಿವಾಗಿರುತ್ತದೆ. ಬರೀ ಪಠ್ಯಪುಸ್ತಕವನ್ನು ಓದಿದ್ದರೆ, ನೀವೇ ಅದರ ಯಜಮಾನ ಅಂದುಕೊಳ್ಳುತ್ತೀರ, ಇಲ್ಲದಿದ್ದರೆ ತಿಳಿವಳಿಕೆ ಇರುವ ಯಾವ ಮನುಷ್ಯನಾದರೂ ಅಂತಹ ಪರಿಸ್ಥಿಗಳನ್ನು ಸತತವಾಗಿ ನಿಭಾಯಿಸುತ್ತಿದ್ದಾಗ ತನ್ನ ಪಾತ್ರ ಅದರಲ್ಲಿ ಶೇಕಡ 50 ಭಾಗವೂ ಇಲ್ಲವೆಂದು ಅರಿತಿರುತ್ತಾನೆ. ಇನ್ನುಳಿದ ಭಾಗ- ನಿಮಗೆ ಸುಳಿವು ಸಹ ಇರುವುದಿಲ್ಲ! ಇದೇ ಜಗತ್ತಿನಾದ್ಯಂತ ಮಹಾನ್ ವೈದ್ಯರ ಅನುಭವ ಆಗಿರುತ್ತದೆ, ಜನರೊಡನೆ ಅತ್ಯದ್ಭುತವಾಗಿ ಕೆಲಸ ಮಾಡಿರುವ ವೈದ್ಯರು ಇವರು. ಸಾಮಾನ್ಯವಾಗಿ ಅವರು ಇದೇ ಭಾಷೆಯಲ್ಲಿ ಮಾತನಾಡುವುದು.

ದೇವರಲ್ಲಿ ನಂಬಿಕೆ ಇಟ್ಟವರಾಗಿದ್ದರೆ, ಇದು ಬಹಳ ಸುಲಭ. ಮೇಲೆ ನೋಡಿ ‘ಶಿವ, ರಾಮ’ ಎನ್ನುತ್ತೀರಿ. ರೋಗಿ ಸತ್ತರೆ, ಅವರು ಹೇಗಿದ್ದರೂ ದೇವರ ಮಡಿಲಿಗೇ ಹೋಗುತ್ತಾರಲ್ಲವೇ, ಪರವಾಗಿಲ್ಲ! ಹೀಗೆ ನಂಬಿಕೆ ಇಟ್ಟವರು ಸಾಮಾನ್ಯವಾಗಿ ಅನುಗ್ರಹವನ್ನು ಅನುಭವಿಸಲು ಆಗುವುದಿಲ್ಲ, ಅವರು ಕೇವಲ ನಂಬುತ್ತಾರಷ್ಟೇ. ಅದು ಅವರಿಗೆ ಅನುಕೂಲ. ಆದರೆ ಯಾವಾಗ ಈ ನಂಬಿಕೆಗಳ ಕಟ್ಟುಪಾಡುಗಳನ್ನು ಒಪ್ಪುವುದಿಲ್ಲವೋ, ಜರುಗುವ ಪರಿಸ್ಥಿತಿಯಲ್ಲಿ ನಿಮ್ಮ ಪಾತ್ರ ಅಲ್ಪ ಎಂದುಕೊಳ್ಳುತ್ತೀರೋ, ಆಗ ಅನುಗ್ರಹದ ಇರುವಿಕೆಯನ್ನು ಅರಿಯುತ್ತೀರಿ. ನಿಜವಾದ ಪ್ರಶ್ನೆ ಮತ್ತು ಹೋರಾಟ ಶುರುವಾಗುವುದು ಯಾರನ್ನು ನಂಬುವುದೋ, ಬಿಡುವುದೋ ಗೊತ್ತಾಗದಿದ್ದಾಗ- ಅವರ ಬುದ್ಧಿಶಕ್ತಿ ಎರಡರ ನಡುವೆ ತಿಣಕಾಡುತ್ತಿರುತ್ತದೆ. ಯಾರು ಕೆಲವೊಮ್ಮೆ ನಂಬಿ ಮತ್ತು ಕೆಲವೊಮ್ಮೆ ನಂಬದೇ ಹೋಗುತ್ತಾರೋ, ಯಾರು ತಮ್ಮದೇ ತರ್ಕ ಮತ್ತು ಸಾಮರ್ಥ್ಯಗಳ ಮಿತಿಗಳೊಡನೆ ಒದ್ದಾಡುತಿರುತ್ತಾರೋ, ಯಾರು ಮುಟ್ಟಲಾಗದು ಎನಿಸುವಂಥ ಇನ್ನೊಂದು ಆಯಾಮದೊಡನೆ ಹೋರಾಡುತ್ತಿರುತ್ತಾರೋ, ಅಂತಹ ವ್ಯಕ್ತಿಗೆ ಜೀವನದಲ್ಲಿ ಅನುಗ್ರಹದ ಇರುವಿಕೆ ಸಂಪೂರ್ಣ ನಿಚ್ಚಳವಾಗಿ ತೋರುತ್ತದೆ. ತಾನು ಇಕ್ಕಟ್ಟಾದ ಸೇತುವೆಯನ್ನು ದಾಟಬೇಕಾದರೆ, ಆ ಇನ್ನೊಂದು ಆಯಾಮದ ನೆರವಿಲ್ಲದೆ ಏನೂ ಸಾಧ್ಯವಿಲ್ಲ ಎಂದು ಅವನಿಗೆ ಸ್ಪಷ್ಟವಾಗಿ ಗೊತ್ತು.

ದೈವಕ್ಕೆ ಒಂದು ಆಹ್ವಾನ: ಈಗ ಪ್ರಶ್ನೆ ಏನೆಂದರೆ, ‘ಈ’ ಸಾನಿಧ್ಯವನ್ನು ಹೇಗೆ ಆಹ್ವಾನಿಸುವುದು? ಇದು ಆಕಸ್ಮಿಕವೇ ಅಥವಾ ಏನಾದರೂ ದಾರಿ ಇದೆಯೇ? ನಾವು ಒಂದು ಈಶ ಯೋಗ ಟೀ ಶರ್ಟ್ ಮಾಡುತ್ತಿದ್ದೆವು-‘ದೈವಕ್ಕೆ ಒಂದು ಆಹ್ವಾನ’! ನಾವು ಸಾಧನೆ ಮಾಡುತ್ತಿದ್ದೇವೆ ಎಂದು ಹೇಳಿದಾಗ, ಅದರರ್ಥ ನಾವು ಒಂದು ಪಾತ್ರೆಯಾಗಲು ಮಾತ್ರ ಪ್ರಯತ್ನಿಸುತ್ತಿದ್ದೇವೆ, ದೈವಕ್ಕೆ ಆಹ್ವಾನ ಕೊಡುತ್ತಿದ್ದೇವೆ ಎಂದು. ಉದಾಹರಣೆಗೆ, ಶಾಂಭವಿ ಮಹಾಮುದ್ರ ಅಭ್ಯಾಸ ನಿಜಾರ್ಥದಲ್ಲಿ ಏನನ್ನೂ ಮಾಡುವುದಿಲ್ಲ. ಅದರ ಇಡೀ ಪ್ರಕ್ರಿಯೆ ಹೇಗೆ ತಯಾರಿಸಲ್ಪಟ್ಟಿದೆ ಎಂದರೆ ನೀವು ದೈವಕ್ಕೆ ಆಹ್ವಾನವಾಗುತ್ತ ಬರುತ್ತೀರ. ನಿಮ್ಮಿಂದ ಆಚೆಗೆ ಯಾವುದೋ ಒಂದು, ಕೆಲಸ ಮಾಡಲು ತೊಡಗಿದೆ. ಮತ್ತು ಅದನ್ನು ಹಾಗೆಯೇ ಕೆಲಸ ಮಾಡಲು ಬಿಡುವುದು- ನಿಮ್ಮಿಂದ ಏನು ಮಾಡಲು ಸಾಧ್ಯ ಅದನ್ನು ಮಾತ್ರ ಮಾಡಿ, ಏನು ಮಾಡಲು ಸಾಧ್ಯವಿಲ್ಲವೋ ಅದನ್ನು ಅರ್ಥಮಾಡಿಕೊಂಡು, ಅಲ್ಲೇ ಎಚ್ಚರಿಕೆಯಿಂದ ಇರುವುದು. ಅದೇ ಯೋಗದ ಸಾರ. ಅನುಗ್ರಹವನ್ನು ಸ್ವೀಕರಿಸುವ ಪಾತ್ರೆ ಅಥವಾ ಹೆಬ್ಬಾಗಿಲು ಆಗುವುದು ಇದರಿಂದಲೇ. ಯಾವಾಗ ಬೇಕಾದರೂ ಅಥವಾ ಸದಾ ಕಾಲ ಬೇಕಾದರೂ, ಅದು ನಿಮ್ಮೊಡನೆಯೇ ಇರುತ್ತದೆ, ಆಕಸ್ಮಿಕವಾಗಿ ಯಾವಾಗಲೋ ಆಗುವುದಲ್ಲ.

ಗುರುತ್ವಾಕರ್ಷಣೆ ನಿಮ್ಮ ಮೇಲೆ ಸದಾ ಕೆಲಸ ಮಾಡುತ್ತಿರುತ್ತದೆ-ಎಚ್ಚರಿಕೆಯಿಂದ ಇದ್ದಾಗಲೂ ಮತ್ತು ಇಲ್ಲದ್ದಿದಾಗಲೂ. ಆದರೆ ಅನುಗ್ರಹ ಸೂಕ್ಷ್ಮವಾದುದು. ಎಚ್ಚರಿಕೆಯಿಂದ ಇಲ್ಲದಿದ್ದರೆ, ಅದು ನಿಲುಕುವುದಿಲ್ಲ. ಅನುಗ್ರಹ ನಿಮ್ಮ ಇರುವಿಕೆಯ ಸೂಕ್ಷ್ಮಗ್ರಾಹಿ. ನಿಮ್ಮ ಇರುವಿಕೆ ಇಲ್ಲದಿದ್ದರೆ ಅದರ ಇರುವಿಕೆಯೂ ಇರುವುದಿಲ್ಲ. ಇದು ದೈವತ್ವದ ಸ್ವಭಾವ. ಹೀಗಾಗಿಯೇ ಬಹಳ ಜನರಿಗೆ ಇದು ತಪ್ಪಿಹೋಗುತ್ತದೆ, ಏಕೆಂದರೆ ಅವರ ಇರುವಿಕೆಯೇ ಹೆಚ್ಚಾಗಿ ಇರುವುದಿಲ್ಲ. ಯೋಚನೆಗಳು ಅಥವಾ ಭಾವನೆಗಳು ಅಥವಾ ಚಟುವಟಿಕೆಗಳು ನಿಮ್ಮನ್ನು ಆಳುತ್ತಿವೆ. ನಿಮ್ಮ ಇರುವಿಕೆ (ಅಸ್ತಿತ್ವ) ನಿಮ್ಮನ್ನು ಆಳುತ್ತಿಲ್ಲ. ಆಧ್ಯಾತ್ಮಿಕ ಪ್ರಕ್ರಿಯೆಯಿಂದ ಮಾಡಲು ಪ್ರಯತ್ನಿಸುತ್ತಿರುವುದು ಇದರ ಪರಿವರ್ತನೆಯನ್ನೇ. ದೇಹ, ಮನಸ್ಸು ಮತ್ತು ಭಾವನೆ ನಿಮ್ಮನ್ನು ಹಿಂಬಾಲಿಸಬಹುದು ಆದರೆ ಬೇಕಾಗಿರುವುದು ಅಸ್ತಿತ್ವ ಪ್ರಧಾನವಾಗಿರಬೇಕು ಎನ್ನುವುದು. ಅಸ್ತಿತ್ವದಲ್ಲಿರುವ ಕಾರಣದಿಂದ ಒಂದು ದೇಹ, ಯೋಚನೆ ಮತ್ತು ಭಾವನೆ ಎಂದು ಇವೆ. ಆದರೆ ಇದೀಗ ನಿಮಗಿಂತ ದೇಹ, ಯೋಚನೆ ಮತ್ತು ಭಾವನೆಗಳನ್ನೂ ಮುಖ್ಯವನ್ನಾಗಿ ಮಾಡಿಬಿಟ್ಟಿದ್ದೀರ. ಈ ರೀತಿ ತಲೆಕೆಳಗಾಗಿರುವ ಸ್ಥಿತಿಯಲ್ಲಿ ಅನುಗ್ರಹವನ್ನು ಅನುಭವಿಸಲು ಆಗುವುದಿಲ್ಲ.

ನಿಮ್ಮೊಳಗೆ ಈ ಸ್ಥಿತಿಯನ್ನು ಬದಲಿ ಮಾಡಿಕೊಂಡರೆ, ಇದ್ದಕ್ಕಿದ್ದಂತೆ ಸಾಧಾರಣವಾಗಿರುವುದೆಲ್ಲವೂ ಅಸಾಧಾರಣವಾಗುವುದು. ಜೀವನದ ಪ್ರತಿಯೊಂದು ಅಂಶವೂ ಸಂಪೂರ್ಣ ಬೇರೆಯೇ ಜೀವನಾನುಭವವಾಗಿ ರವಾನೆ ಆಗಿಬಿಡುತ್ತದೆ. ಆದರೆ ಹೀಗೆ ಆಗುವುದಿಲ್ಲ. ಏಕೆಂದರೆ ಯಾವುದನ್ನೋ ನಂಬಿದ್ದೀರಿ. ನಂಬಿಕೆಗಳ ಕಟ್ಟುಪಾಡಿನಲ್ಲಿ ಕಲ್ಪನೆ ಮಾಡಿಕೊಳ್ಳಬಹುದು, ಇದೇ ಸಮಸ್ಯೆ ಹೀಗೆ ನಂಬುವವರದ್ದು. ತರ್ಕದ ಭದ್ರ ತಳಹದಿ ಇದ್ದೂ ಅನುಗ್ರಹಕ್ಕೆ ತೆರೆದುಕೊಂಡಿರುವಂತೆ ಪ್ರತಿಯೊಬ್ಬರೂ ಇರಬೇಕು. ತರ್ಕದ ತಳಹದಿ ಭದ್ರವಾಗಿಲ್ಲದಿದ್ದರೆ, ಕಲ್ಪನೆಗೆ ಹಾರುವ ಸಾಧ್ಯತೆಗೆ ಒಳಗಾಗಬಹುದು ಮತ್ತು ಅದನ್ನೇ ಅನುಗ್ರಹ ಎಂದು ಭಾವಿಸಿಬಿಡಬಹುದು.

ಅಧ್ಯಾತ್ಮಕ್ಕೆ ಮುಕ್ತವಾಗಿ ತೆರೆದುಕೊಂಡಿರುವುದು: ಅಧ್ಯಾತ್ಮ ಮತ್ತು ತರ್ಕ ಇವೆರಡೂ ರಂಗಗಳು ಸಮವಾಗಿ ಮುಖ್ಯ. ತರ್ಕದ ರಂಗ ಚೆನ್ನಾಗಿ ವ್ಯವಸ್ಥಿತಗೊಂಡಿದ್ದರೆ, ಬದುಕಿನ ಲೌಕಿಕವಾದ ಅಂಶಗಳು ಚೆನ್ನಾಗಿ ನಡೆಯುತ್ತವೆ. ಜೀವನದ ಆಧ್ಯಾತ್ಮಿಕ ಆಯಾಮ ತೆರೆದುಕೊಂಡಿದ್ದರೆ, ಜೀವನದ ಅನುಭವ ಅತ್ಯದ್ಭುತವಾಗಿ, ವರ್ಣಿಸಲಾರದಂತಿರುತ್ತದೆ. ಇಲ್ಲದಿದ್ದರೆ ಕೇವಲ ತರ್ಕವನ್ನು ನಿಭಾಯಿಸಿದರೆ, ಜೀವನದ ಏರ್ಪಾಡುಗಳು ಸೊಗಸಾಗಿರುತ್ತದೆ, ಆದರೆ ಅನುಭವ ಚೆನ್ನಾಗಿರುವುದಿಲ್ಲ. ತರ್ಕವನ್ನು ನಿರ್ಲಕ್ಷಿಸಿದರೆ, ಅನುಭವ ಏನೋ ವಿಶೇಷವಾಗಿರುತ್ತದೆ ಆದರೆ ಜೀವನದ ಏರ್ಪಾಡುಗಳು ಅಸಹನೀಯವಾಗಿರುತ್ತವೆ. ತರ್ಕವನ್ನು ಚೆನ್ನಾಗಿ ಸ್ಥಾಪಿಸಿ, ಹಾಗೇ ಅಧ್ಯಾತ್ಮಕ್ಕೂ ಮುಕ್ತವಾಗಿ ತೆರೆದುಕೊಳ್ಳಬಲ್ಲ ಪ್ರಕ್ರಿಯೆಯನ್ನು ಇದುವರೆಗೆ ಯಾವ ಸಮಾಜವೂ ಸರಿಯಾಗಿ ನಿರ್ವಹಿಸಿಲ್ಲ. ನಾವು ಇದನ್ನು ಕಳೆದುಕೊಳ್ಳುತ್ತೇವೆ ಅಥವಾ ಅದನ್ನು ಕಳೆದುಕೊಳ್ಳುತ್ತೇವೆ. ಇವೆರಡಿಲ್ಲದೆ ಜೀವನವು ಸುಂದರವಾಗಿರುವುದಿಲ್ಲ.

ಲೌಕಿಕವನ್ನು ಸಾಕಷ್ಟು ಚೆನ್ನಾಗಿ ನಿಭಾಯಿಸಿದ ನಂತರ, ಅಧ್ಯಾತ್ಮಕ್ಕೆ ತೆರೆದುಕೊಳ್ಳಲು ಸಮಯವಾಗಿರುತ್ತದೆ. ಇಲ್ಲಿ ತರ್ಕ ಕೆಲಸ ಮಾಡುವುದಿಲ್ಲ, ನಿಮ್ಮನ್ನು ಸುಮ್ಮನೆ ತಡೆಹಾಕುತ್ತದೆ. ‘ನಾನು ನನ್ನ ತರ್ಕದೊಡನೆ ಹೋರಾಡುವುದು ಹೇಗೆ?’ ಕೇವಲ ತರ್ಕದ ಉತ್ಪತ್ತಿಯನ್ನು ದೂರ ತಳ್ಳಿ, ತರ್ಕದ ಉದ್ಯಮವನ್ನು ಅಲ್ಲ. ಹತ್ತು ಜನ್ಮಗಳು ಪ್ರಯತ್ನಿಸಿದರೂ ಮನಸ್ಸನ್ನು ಕೊಲ್ಲಲು ಆಗುವುದಿಲ್ಲ, ಆದರೆ ಅದು ಏನನ್ನು ಉತ್ಪಾದಿಸುತ್ತದೋ ಅದನ್ನು ನಿರ್ಲಕ್ಷಿಸಬಹುದು. ಅದು ಯೋಚನೆಯನ್ನು ಹುಟ್ಟುಹಾಕುತ್ತದೆ, ಅದನ್ನು ನಿರ್ಲಕ್ಷಿಸಿ. ಅದು ಭಾವನೆಯನ್ನು ಹುಟ್ಟುಹಾಕುತ್ತದೆ, ಅದನ್ನು ನಿರ್ಲಕ್ಷಿಸಿ. ಅದು ಅಭಿಪ್ರಾಯವನ್ನು ಹುಟ್ಟುಹಾಕುತ್ತದೆ, ಅದನ್ನೂ ನಿರ್ಲಕ್ಷಿಸಿ. ಅದು ಒಂದು ಇಡೀ ಸಿದ್ಧಾಂತವನ್ನು ಕಡೆದು ಕೊಡುತ್ತದೆ, ಅದನ್ನು ನಿರ್ಲಕ್ಷಿಸಿ.

ಹೀಗೆ ಮಾಡಿದರೆ, ಸ್ವಾಭಾವಿಕವಾಗಿ ಭಕ್ತಿಯ ಸ್ಥಿತಿಯಲ್ಲಿ ಇರುತ್ತೀರಾ. ಭಕ್ತಿ ಯೆಂದರೆ ಯಾರನ್ನೋ ಆರಾಧಿಸುವುದಲ್ಲ. ಯಾವುದರಲ್ಲಿ ನೀವು ಎಂಬುದು ಇರುವುದಿಲ್ಲವೋ ಅದು ಭಕ್ತಿ. ‘ನಾನು’ ಎಂದು ಈಗ ನೀವು ಏನನ್ನು ಕರೆಯುತ್ತೀರೋ ಅದು ಕೇವಲ ಯೋಚನೆ, ಭಾವನೆ ಮತ್ತು ಅಭಿಪ್ರಾಯದ ಮೂಟೆ, ಅಲ್ಲವೇ? ಈ ಮೂರಕ್ಕೆ ವಿರಾಮ ಕೊಟ್ಟರೆ, ವ್ಯಕ್ತಿತ್ವ ಇಲ್ಲವಾಗುತ್ತದೆ. ಆಗ ನಿಮ್ಮೊಳಗಿರುವ ಜೀವ ಉಪಸ್ಥಿತವಾಗಿರುತ್ತದೆ. ಇದು ಉಪಸ್ಥಿತವಾಗಿದ್ದರೆ ಅನುಗ್ರಹ ತಪ್ಪಿಹೋಗಲು ಸಾಧ್ಯವೇ ಇಲ್ಲ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.www.isha.sadhguru.org) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- kannadapublications@ishafoundation.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net