

| ಡಾ.ಕೆ.ಪಿ.ಪುತ್ತೂರಾಯ
ಅಂಗಡಿಯಿಂದ ಬ್ರೆಡ್ಡನ್ನು ಕದ್ದ ಆರೋಪದ ಮೇಲೆ ವೃದ್ಧೆಯ ವಿಚಾರಣೆ 1935ರ ಜನವರಿ ತಿಂಗಳಿನ ಒಂದು ದಿನ ಅಮೆರಿಕದ ನ್ಯೂಯಾರ್ಕ್ನ ಕೋರ್ಟ್ವೊಂದರಲ್ಲಿ ಆರಂಭವಾಗಿತ್ತು. ದುಃಖ ಹಾಗೂ ಅಪರಾಧ ಪ್ರಜ್ಞೆಯೊಂದಿಗೆ ನಿಂತಿದ್ದ ಆ ಮುದುಕಿಯನ್ನು ನ್ಯಾಯಮೂರ್ತಿ ಲಾ ಗಾರ್ಡಿಯಾ, ‘ನೀನು ಅಂಗಡಿಯಿಂದ ಬ್ರೆಡ್ಡನ್ನು ಕದ್ದದ್ದು ನಿಜವೇ?’ ಎಂದು ಕೇಳಿದರು. ‘ಹೌದು’ ಎಂಬ ಉತ್ತರಕ್ಕೆ ಪ್ರತಿಯಾಗಿ ನ್ಯಾಯಮೂರ್ತಿಗಳು, ‘ನಿನ್ನ ಈ ಕಳ್ಳತನಕ್ಕೆ ಕಾರಣವೇನು? ಹಸಿವು ಆಗಿತ್ತೆ?’ ಎಂದು ಪ್ರಶ್ನಿಸಿದರು. ಆ ವೃದ್ಧೆ ಕ್ಷೀಣದನಿಯಲ್ಲಿ ಹೇಳಿದಳು- ‘ನನಗೂ ಹಸಿವಾಗಿತ್ತೇನೋ ನಿಜ. ಆದರೆ ನನಗಾಗಿ ಆ ಬ್ರೆಡ್ಡನ್ನು ಕದಿಯಲಿಲ್ಲ. ಮನೆಯಲ್ಲಿ ಗಂಡನನ್ನು ಕಳಕೊಂಡ ನನ್ನ ಮಗಳಿದ್ದಾಳೆ. ಅವಳ ಎರಡು ಪುಟ್ಟ ಮಕ್ಕಳು ಹಸಿವಿನಿಂದ ಒದ್ದಾಡುತ್ತಿದ್ದರು. ಅದನ್ನು ನೋಡಲಾಗದೆ, ಅವರಿಗೋಸ್ಕರ ಕಳ್ಳತನ ಮಾಡಬೇಕಾಯಿತು, ಕ್ಷಮಿಸಿ’.
ಈ ಮಾತುಗಳನ್ನು ಕೇಳಿ ನ್ಯಾಯಾಲಯದಲ್ಲಿ ಇದ್ದವರೆಲ್ಲರೂ ಒಂದು ಕ್ಷಣ ತಲೆತಗ್ಗಿಸಿದರು. ಆದರೂ ವಿಚಲಿತರಾಗದ ನ್ಯಾಯಮೂರ್ತಿ- ‘ನ್ಯಾಯದ ಎದುರು ಎಲ್ಲರೂ ಸರಿಸಮಾನರು. ನೀನು ಗೈದ ಕಳ್ಳತನಕ್ಕಾಗಿ ಹತ್ತು ಡಾಲರ್ ದಂಡ ಪಾವತಿಸಬೇಕು, ಇಲ್ಲವೇ ಹತ್ತು ದಿನಗಳ ಜೈಲುವಾಸ ಅನುಭವಿಸಬೇಕು. ಯಾವುದನ್ನು ಆರಿಸುವೆ?’ ಎಂದು ಪ್ರಶ್ನಿಸಿದರು. ‘ಮೈ ಲಾರ್ಡ್, ನನ್ನ ಬಳಿ ಅಷ್ಟೊಂದು ಹಣ ಇರುತ್ತಿದ್ದರೆ, ಕಳ್ಳತನ ಮಾಡುತ್ತಿದ್ದೆನೇ? ಹತ್ತು ದಿನಗಳ ಜೈಲುವಾಸವನ್ನೇ ಅನುಭವಿಸಿ, ಈ ಅಪರಾಧದಿಂದ ಮುಕ್ತಳಾಗುವೆ. ಆದರೆ, ತಾವು ಕೊಟ್ಟ ತೀರ್ಪ ಆ ನನ್ನ ಪುಟ್ಟ ಮೊಮ್ಮಕ್ಕಳ ಹಸಿವೆಗೆ ಉತ್ತರವಲ್ಲ! ಅವರೇನು ಮಾಡಬೇಕು?’ ಕಣ್ಣೀರಹನಿಯೊಂದಿಗೆ ನುಡಿದ ವೃದ್ಧೆಯ ಮಾತುಗಳಿಂದ ಮನಸ್ಸು ಕರಗಿದ ನ್ಯಾಯಮೂರ್ತಿ, ಜೇಬಿನಿಂದ ಹತ್ತು ಡಾಲರ್ ಹಣ ತೆಗೆದು ‘ನಿನ್ನ ಪರವಾಗಿ ದಂಡದ ಹಣವನ್ನು ನಾನು ಕಟ್ಟುತ್ತಿದ್ದೇನೆ. ನೀನಿನ್ನು ಹೋಗಬಹುದು ತಾಯಿ’ ಎಂದರು.
ಎಲ್ಲರೂ ಹೊರಡಲು ಅನುವಾದಾಗ ನ್ಯಾಯಮೂರ್ತಿಗಳು ಇನ್ನೊಂದು ಆಜ್ಞೆಯನ್ನು ಪ್ರಕಟಿಸಿ, ‘ಕಳ್ಳತನ ಮಾಡಬೇಕಾದ ವೃದ್ಧೆಯ ಈ ಅನಿವಾರ್ಯ ಪರಿಸ್ಥಿತಿಗೆ, ನಾವೆಲ್ಲರೂ ಪರೋಕ್ಷವಾಗಿ ಕಾರಣೀಭೂತರಾಗಿದ್ದೇವೆ. ಎಲ್ಲರೂ ತಲಾ 50 ಸೆಂಟ್ಸ್ ನೀಡಿ ಸಹಕರಿಸಿ’ ಎಂದರು. ದೇಣಿಗೆಯಿಂದಾಗಿ 47 ಡಾಲರ್ 50 ಸೆಂಟ್ಸ್ ಸಂಗ್ರಹವಾಯಿತು. ಇದರಿಂದ ಬ್ರೆಡ್ನ ಬೆಲೆಯನ್ನು ತೆತ್ತು ಉಳಿದ ಹಣವನ್ನು ವೃದ್ಧೆಗೆ ಧನಸಹಾಯವಾಗಿ ನೀಡಲಾಯಿತು. ಬಡವರ ಬಡತನಕ್ಕೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾರಣ ಎಂಬ ಸತ್ಯವನ್ನು ಸಾರಲಾಯಿತು.
ಇದನ್ನೂ ಓದಿ: ಮನೋಲ್ಲಾಸ| ಪ್ರಯತ್ನ ಮತ್ತು ಫಲ
ಸಂದೇಶವಿಷ್ಟೆ: ನಮ್ಮ ದುಡಿತ ನಮಗಾಗಿ ಇರಲಿ; ಆದರೆ ನಮ್ಮ ಮಿಡಿತ ಇತರರಿಗಾಗಿಯೂ ಇರಲಿ. ನಮ್ಮ ಸುತ್ತಮುತ್ತಲು ಇರುವವರಿಗೆ ಉಣಲು ಮುಷ್ಟಿ ಅನ್ನವೂ ಇರದಾಗ, ನಾವು ಮಾತ್ರ ಮೃಷ್ಟಾನ್ನ ಉಣ್ಣೋದು ಮಾನವೀಯತೆಯಲ್ಲ. ಹಸಿದವರಿಗೆ ಉಪದೇಶ ಮಾಡೋದು ಅಪರಾಧ. ಅವರಿಗೆ ಬೇಕಾದುದು ಹಿಡಿ ಅನ್ನವೇ ಹೊರತು ವೇದಾಂತಗಳಲ್ಲ. ‘ಮಾನವೀಯತೆಯ ಕಟ್ಟಡಕ್ಕೆ ಪ್ರೀತಿಯೊಂದೆ ಇಟ್ಟಿಗೆ, ಇದರ ಬೆಸೆಯಲು ಬೇಕು, ಕರುಣೆ-ಸ್ನೇಹದೊಟ್ಟಿಗೆ!’
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)