

ಪ್ರತಿಶತ ಎಂಬತ್ತರಷ್ಟು ಕಾಯಿಲೆಗಳ ನಿಖರವಾದ ಕಾರಣಗಳಿಗಾಗಿ ಇನ್ನೂ ಹುಡುಕಾಟ ನಡೆಯುತ್ತಲೇ ಇದೆ ಎಂಬುದು ಅಚ್ಚರಿ ಉಂಟುಮಾಡುತ್ತದೆ. ನೂರರಲ್ಲಿ ಕೇವಲ ಇಪ್ಪತ್ತರಷ್ಟು ಕಾಯಿಲೆಗಳಿಗೆ ಮಾತ್ರ ರೋಗಕಾರಣವನ್ನು ಆಧಾರ ಸಹಿತವಾಗಿ, ನಿರ್ದಿಷ್ಟವಾಗಿ ‘ಇದಮಿತ್ಥಂ’ ಎಂಬಂತೆ ಹೇಳಲಾಗಿದೆ ಎಂಬುದು ವಾಸ್ತವ. ಇನ್ನು ಚಿಕಿತ್ಸಾ ವಿಚಾರಕ್ಕೆ ಬಂದರೆ ಅಲ್ಲಿಯೂ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದ್ದು ನಿಖರತೆಯ ಕೊರತೆಯಿದೆ. ರೋಗಗಳನ್ನು ಸಮುದ್ರಾಕಾರವಾಗಿ ತಿಳಿದುಕೊಂಡು ಚಿಕಿತ್ಸೆಯ ವಿಚಾರಕ್ಕೆ ಬಂದಾಗ ಅನೇಕ ರೋಗಗಳ ವಿಚಾರದಲ್ಲಿ ಅಲ್ಪಜ್ಞಾನ ಮಾತ್ರ ಲಭ್ಯವಿದೆ. ರೋಗ ಕಾರಣ ಹಾಗೂ ಪರಿಣಾಮಕಾರಿಯಾದ ಚಿಕಿತ್ಸೆ ಎಂಬ ಎರಡೂ ಬಹುಮುಖ್ಯ ಘಟ್ಟದಲ್ಲಿ ಸಾಧಿಸಬೇಕಾದುದು ಇನ್ನೂ ಬೃಹದಾಕಾರದಲ್ಲಿದೆ.
ಆಯುರ್ವೆದದಲ್ಲಿ ವ್ಯಾಧಿಗೆ ಕಾರಣವಾದ ರೋಗನಿದಾನವನ್ನು ಸಾವಿರಕ್ಕೂ ಮಿಗಿಲಾದ ಕಾಯಿಲೆಗಳಿಗೂ ಸರ್ವಕಾಲಕ್ಕೂ ಅನ್ವಯವಾಗುವಂತೆ ‘ಇದು ಹೀಗೆಯೇ’ ಎಂದು ಹೇಳಿರುವುದರ ಹಿಂದಿರುವ ಭದ್ರ ಬುನಾದಿಯನ್ನು ನಾವೆಲ್ಲರೂ ಗಮನಿಸಲೇಬೇಕು. ಮಧುಮೇಹ ಬರಲು ನೀಡಲಾದ ಕಾರಣಗಳ ವಿಚಾರವನ್ನೇ ಒಮ್ಮೆ ಅವಲೋಕಿಸಿ ನೋಡಿ. ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಟ್ಟ ಚರಕ, ಸುಶ್ರುತ ಮೊದಲಾದ ಆಯುರ್ವೆದ ಸಂಹಿತೆ ಗಳಲ್ಲಿ ಮಧುಮೇಹ ಬರಲು ಕಾರಣಗಳನ್ನು ಹೇಳುವಾಗ ನಿತ್ಯವೂ ಹಗಲು ನಿದ್ರೆ ಮಾಡುವುದು, ಅತಿಯಾಗಿ ನಿದ್ರೆಮಾಡುವುದು, ಅತಿಯಾಗಿ ಮೊಸರಿನ ಸೇವನೆ, ಬೆಲ್ಲ ಹಾಗೂ ಸಿಹಿತಿಂಡಿಗಳ ಹೆಚ್ಚಾದ ಭಕ್ಷಣೆ, ವ್ಯಾಯಾಮವನ್ನು ಮಾಡದೆ ಇರುವುದು, ಕಫ ಹೆಚ್ಚಿಸುವ ಆಹಾರ - ವಿಹಾರವೇ ಮೊದಲಾದವುಗಳನ್ನು ಆರಂಭದಲ್ಲೇ ಸ್ಪಷ್ಟವಾಗಿ ಹೇಳಿದ್ದಾರೆಂದರೆ ಆಯುರ್ವೆದದ ವೈಜ್ಞಾನಿಕ ಚಿಂತನೆಗಳು ಅದೆಷ್ಟು ಸಾರ್ವಕಾಲಿಕ ಎಂಬುದನ್ನು ಬೊಟ್ಟುಮಾಡಿ ತೋರಿಸುತ್ತದೆ. ಆ ಕಾಲದಲ್ಲೇ ಈ ಕಾರಣಗಳನ್ನು ಹೇಳಿದ್ದಾರೆಂಬುದು ರೋಮಾಂಚನಕಾರಿ ಸಂಗತಿ. ಇಂದು ಜನರೆಲ್ಲ ತಾಂತ್ರಿಕ, ಯಾಂತ್ರಿಕ ಉಪಕರಣಗಳ ಬಳಕೆಯಲ್ಲಿ ಬಹಳ ಮುಂದಿದ್ದಾರೆ. ಹಾಗಾಗಿ ಉದಾಸೀನ ಮನೋಭಾವ ಹೆಚ್ಚಾಗಿದೆ. ದೇಹಕ್ಕೆ ಶ್ರಮದಾಯಕ ಚಟುವಟಿಕೆಯೇ ಇಲ್ಲ. ನಿತ್ಯ ವ್ಯಾಯಾಮ ಮಾಡುವುದೆಂದರೆ ಅನೇಕರಿಗೆ ದೂರದ ಮಾತು! ಸಿಹಿತಿನಿಸುಗಳ ಅಂಗಡಿಗಳು, ಬೇಕರಿಗಳು, ಆಹಾರ ಮಳಿಗೆಗಳು, ಸಿದ್ಧ ಆಹಾರ ಪೊಟ್ಟಣಗಳು, ಐಸ್ಕ್ರೀಮ್ ಪಾರ್ಲರ್ಗಳು, ಉಪಾಹಾರ ಮಂದಿರಗಳು, ಬಗೆಬಗೆಯ ಹೋಟೆಲುಗಳಿಂದ ತುಂಬಿ ತುಳುಕುತ್ತಿರುವ ಜಗತ್ತಿನಲ್ಲಿ ಬದುಕುತ್ತಿರುವ ಜನರು ಊಟೋಪಚಾರದ ವಿಷಯದಲ್ಲಿ ತಪ್ಪಿ ನಡೆಯುವುದು ಸುಲಭ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ಸದಾ ಸಿಹಿತಿಂಡಿಯನ್ನು ತಿನ್ನುತ್ತಲೇ ಜೀವನ ಸಾಗಿಸುತ್ತಿದ್ದಾರೆ. ಮಜ್ಜಿಗೆ ಮಾಡಲು ಉದಾಸೀನವಾಗಿ ಅಥವಾ ಅಂತಹ ಪಾಕ ನೈಪುಣ್ಯತೆಯೇ ಇಲ್ಲದೆ ಮೊಸರನ್ನೇ ಸೇವಿಸುತ್ತಿದ್ದಾರೆ. ಮಜ್ಜಿಗೆಯನ್ನು ಮಾಡುವ ಕ್ರಮವನ್ನೇ ಮರೆಯಲೂ ಹಲವಾರು ಕಾರಣಗಳಿವೆ. ಲಕ್ಷಾಂತರ ಶ್ರೀಮಂತರಿರುವ ಈ ಯುಗದಲ್ಲಿ ಪ್ರತಿನಿತ್ಯ ಮೈಯ ಬೆವರಿಳಿಸಿ ಕೆಲಸ ಮಾಡಲು ಮನಸ್ಸು ಬಾರದೆ ಹಗಲು ಹೊತ್ತಿನಲ್ಲೇ ನಿದ್ರಾಸುಖಕ್ಕೆ ಜಾರಿಹೋಗುವುದೂ ಸ್ವಾಭಾವಿಕ. ಹಿಂದಿನ ತಲೆಮಾರಿನವರಲ್ಲೂ ಕೆಲವರು ಈ ರೀತಿಯಲ್ಲೇ ಬದುಕಿದ್ದರು ಎಂಬುದನ್ನು ನಮ್ಮ ಅಂತರಂಗ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹಾಗಿರುವಾಗ ಈ ಕಾರಣಗಳ ವಿವರಣೆಯಲ್ಲಿ ಇರುವ ದೂರದೃಷ್ಟಿ ಗಮನಾರ್ಹವಾಗಿದೆ.
ಇದೇ ರೀತಿ ಪ್ರತಿಯೊಂದು ವ್ಯಾಧಿಗೂ ಚಿಕಿತ್ಸಾ ಸೂತ್ರ, ಶಮನ ಹಾಗೂ ಶೋಧನ ಔಷಧಿ ಹಾಗೂ ಚಿಕಿತ್ಸೆಗಳ ಪ್ರಶಸ್ತ ಬಳಕೆ, ಆಹಾರ ವಿಹಾರಗಳ ಸರಿಯಾದ ಅನುಷ್ಠಾನ, ಆಚಾರ - ವಿಚಾರಗಳ ಸಮಗ್ರ ತಿಳುವಳಿಕೆ ಎಲ್ಲವನ್ನೂ ವಿಶಾಲ ಜ್ಞಾನ ಶ್ರೇಣಿಯಲ್ಲಿ ವಿವರಿಸಿದ ಹೆಗ್ಗಳಿಕೆಯೂ ಆಯುರ್ವೆದಕ್ಕಿದೆ. ಉದಾಹರಣೆಗೆ ಜ್ವರದ ಚಿಕಿತ್ಸೆಗಾಗಿ ನೂರಕ್ಕೂ ಹೆಚ್ಚು ಶಾಸ್ತ್ರೀಯ ಔಷಧಿಗಳನ್ನು, ಅನೇಕ ವಿಧಿ ವಿಧಾನಗಳನ್ನು, ಹಲವಾರು ಚಿಕಿತ್ಸಾ ಉಪಕ್ರಮಗಳನ್ನು ಹೇಳಿದ್ದಾರೆಂಬುದು ಅಚ್ಚರಿಯ ಸಂಗತಿ. ಇಲ್ಲೆಲ್ಲಿಯೂ ಗೊಂದಲಗಳಿಲ್ಲ, ಊಹಾಪೋಹದ ಆಧಾರದಲ್ಲಿ ಚಿಕಿತ್ಸೆ ನಡೆಯುವುದಲ್ಲ. ದೋಷ ಪ್ರತೀಕಾರದ ಅಥವಾ ವ್ಯಾಧಿ ಪ್ರತೀಕಾರದ ಎರಡೂ ವಿಧವಾದ ಚಿಕಿತ್ಸಾ ಕ್ರಮಗಳನ್ನು ಬಳಸಿಕೊಂಡು ರೋಗಿಯ ವ್ಯಾಧಿ ಗುಣಪಡಿಸುವುದೇ ಆಯುರ್ವೆದದ ಔಷಧ ಚಿಕಿತ್ಸೆಗಳಿಗೆ ಹಾಕಿಕೊಟ್ಟ ಪರಮ ಗುರಿ, ಅದುವೇ ಆಯುರ್ವೆದದ ಶ್ರೇಷ್ಠ ಗರಿ!