

ಮೊದಲನೆಯದಾಗಿ, ಬಜೆ ಬೇರು. ಅತ್ಯಂತ ಸುಲಭವಾಗಿ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಈ ಬೇರನ್ನು ತಂದು ಜೇನುತುಪ್ಪದಲ್ಲಿ ಸಾಣೆ ಕಲ್ಲಿನ ಮೇಲೆ ತೇಯ್ದು ಹತ್ತರಿಂದ ಹದಿನೈದು ಹನಿಯಷ್ಟು ನಿತ್ಯವೂ ಸೇವಿಸುವುದರಿಂದ ನಮ್ಮ ಮಂದಗುಣ ಕಡಿಮೆಯಾಗಿ, ನೆನಪಿನ ಶಕ್ತಿ ಹೆಚ್ಚಿ, ಬುದ್ಧಿ ಚುರುಕಾಗಲು ಮತ್ತು ಮಾತು ಸ್ಪಷ್ಟವಾಗಲು ಸಾಧ್ಯವಿದೆ. ಇದಕ್ಕೆ ಉಷ್ಣ ಗುಣ ಇರುವ ಕಾರಣ ಕಫ ಪ್ರಕೃತಿಯವರು ಮತ್ತು ಪದೇ ಪದೇ ಶೀತದಿಂದ ತೊಂದರೆ ಅನುಭವಿಸುತ್ತಿರುವವರು ಸೇವಿಸಿದರೆ ಇನ್ನೂ ಅನುಕೂಲ ಹೆಚ್ಚಾಗುತ್ತದೆ. ಒಂದೆಲಗ ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಅತ್ಯಂತ ಸಹಕಾರಿ. ಹಾಗಾಗಿ ಪ್ರತಿಯೊಬ್ಬರಿಗೂ ಎಂಟರಿಂದ ಹತ್ತು ಎಲೆಗಳು ಬರುವಂತೆ ಒಂದೆಲಗವನ್ನು ತಂದು, ತೊಳೆದು, ಸ್ವಲ್ಪ ನೀರು ಹಾಕಿ ರುಬ್ಬಿ, ರಸ ತೆಗೆದು, ಅದಕ್ಕೆ ಹಾಲು ಸೇರಿಸಿ, ಅವಶ್ಯ ಇದ್ದರೆ ಜೊನಿ ಬೆಲ್ಲವನ್ನು ಹಾಕಿ ಎಲ್ಲರೂ ಹಂಚಿಕೊಂಡು ನಿತ್ಯವೂ ಸೇವಿಸಿದರೆ ಖಂಡಿತ ಆರೋಗ್ಯ ವೃದ್ಧಿಯಾಗಿ, ನೆನಪಿನ ಶಕ್ತಿ ಹೆಚ್ಚುವುದರ ಜೊತೆಗೆ ಮುಪ್ಪು ಕೂಡ ದೂರವಾಗುತ್ತದೆ. ಹಸಿ ಎಲೆ ಸಿಗದಿದ್ದ ಪಕ್ಷದಲ್ಲಿ ಗ್ರಂಥಿಗೆ ಅಂಗಡಿಗಳಿಂದ ಒಂದೆಲಗದ ಪುಡಿಯನ್ನು ತಂದು ನಿತ್ಯವೂ ಕಾಲು ಚಮಚದಷ್ಟು ಪುಡಿಯನ್ನು ಹಾಲಿಗೆ ಹಾಕಿ ಸೇವಿಸಬಹುದು. ಆದರೆ ಒಣಗಿದ ಒಂದೆಲಗದ ಪುಡಿಗಿಂತ ಹಸಿ ಎಲೆ ಹೆಚ್ಚು ಪ್ರಯೋಜಕ.
ದಾಳಿಂಬೆ ಹಣ್ಣು ಬುದ್ಧಿಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ. ಐಬಿಎಸ್ ಕಾಯಿಲೆ ಇರುವವರಿಗೆ ದಾಳಿಂಬೆ ಹಣ್ಣು ಅತ್ಯಂತ ಪ್ರಯೋಜಕ. ಸಾಮಾನ್ಯ ಗಾತ್ರದ ದಾಳಿಂಬೆ ಹಣ್ಣನ್ನು ತಂದು ಮೂರು ಜನರಿಗೆ ಒಂದು ಹಣ್ಣಿನಂತೆ ತೆಗೆದುಕೊಂಡು ಅದರ ರಸ ತೆಗೆದು ಸೇವಿಸಿದರೆ ವಾತ, ಪಿತ್ತ ಮತ್ತು ಕಫ ದೋಷಗಳ ನಿಯಂತ್ರಣ ಸಾಧ್ಯ. ಜತೆಗೆ ನೆನಪಿನ ಶಕ್ತಿ ಹೆಚ್ಚಲು ಸಾಧ್ಯವಾಗುತ್ತದೆ. ಬಾದಾಮಿ, ವಾಲ್ನಟ್ ಮುಂತಾದ ನಟ್ಗಳು ಮಿದುಳಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುತ್ತವೆ. ಹಾಗಾಗಿ ನಿತ್ಯವೂ ಐದಾರು ಬಾದಾಮಿ ಮತ್ತು ಒಂದೆರಡು ವಾಲ್ನಟ್ಗಳನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಸೇವಿಸುವುದು ನೆನಪಿನ ಶಕ್ತಿಯನ್ನು ಹೆಚ್ಚಿಸುವ ವಿಷಯದಲ್ಲಿ ತುಂಬಾ ಅನುಕೂಲಕರ.
ಬೂದುಗುಂಬಳ ದೇಹದ ಹಲವಾರು ಅಂಗ ಗಳ ಶಕ್ತಿಯನ್ನು ಹೆಚ್ಚಿಸಿ ಅವುಗಳಿಗೆ ಸಂಬಂಧಿಸಿದ ರೋಗ ಬರದಂತೆ ನೋಡಿಕೊಳ್ಳುತ್ತದೆ. ನೆನಪಿನ ಶಕ್ತಿ ಮತ್ತು ಗ್ರಹಣ ಶಕ್ತಿ ಹೆಚ್ಚಲು ಇದು ಸಹಾಯ ಮಾಡುತ್ತದೆ. ವಿಶೇಷವಾಗಿ ಅತಿಯಾಗಿ ಉಷ್ಣವಾಗುವವರು ಮತ್ತು ಪಿತ್ತಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲುತ್ತಿರುವವರಿಗೆ ಬೂದುಗುಂಬಳಕಾಯಿ ಅತ್ಯಂತ ಲಾಭದಾ ಯಕ. ಚಿಕ್ಕ ಮಕ್ಕಳು ಇದನ್ನು ಇಷ್ಟಪಡದಿದ್ದರೆ ಹಲ್ವಾ ಅಥವಾ ಲೇಹ್ಯ ತಯಾರಿಸಿ ಮಕ್ಕಳಿಗೆ ಕೊಡಬಹುದು. ತುಪ್ಪ ಮಿದುಳಿನ ಶಕ್ತಿ, ನೆನಪಿನ ಶಕ್ತಿಗಳನ್ನು ಹೆಚ್ಚಿಸಲು ಸಹಕಾರಿ. ಕನಿಷ್ಠ ಒಂದು ಚಮಚ ತುಪ್ಪವನ್ನು ಬಿಸಿ ಅನ್ನದ ಜೊತೆ ಅಥವಾ ಬಿಸಿ ಹಾಲಿಗೆ ಹಾಕಿ ಪ್ರತಿನಿತ್ಯ ಸೇವಿಸಿದರೆ ಇಡೀ ದೇಹದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಮಿದುಳಿನ ಶಕ್ತಿ ಹೆಚ್ಚುತ್ತದೆ. ಏಕೆಂದರೆ ಎಷ್ಟೋ ಪೋಷಕಾಂಶಗಳು ಕೊಬ್ಬಿನ ಮಾಧ್ಯಮದ ಮೂಲಕ ಮಾತ್ರ ಮೆದುಳನ್ನು ತಲುಪುತ್ತವೆ.
ನಾವು ಸರಿಯಾದ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸದೇ ಹೋದರೆ ಮಿದುಳು ದುರ್ಬಲವಾಗುತ್ತ ಹೋಗುತ್ತದೆ. ಚಿಕ್ಕ ಮಕ್ಕಳಿಗೆ ಎಳ್ಳು ಅತ್ಯಂತ ಪೌಷ್ಟಿಕವಾದ ಆಹಾರ ಪದಾರ್ಥ. ಅದು ಮಕ್ಕಳ ಮೂಳೆ, ಹಲ್ಲುಗಳು ಮತ್ತು ಮಿದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಎಳ್ಳಿನ ಉಂಡೆ ಮಾಡಿ ಅಥವಾ ಅಡುಗೆ ತಯಾರಿಸುವಾಗ ಸಾಧ್ಯವಾ ದಲ್ಲಿ ಎಳ್ಳನ್ನು ಬಳಸಿ ಮಕ್ಕಳು ಅದನ್ನು ಸೇವಿಸುವಂತೆ ಮಾಡಬೇಕು. ಎಲ್ಲಾ ವಯಸ್ಸಿನವರಿಗೂ ಎಳ್ಳನ್ನು ಸೇವಿಸುವುದು ಆರೋಗ್ಯ ದೃಷ್ಟಿ ಯಿಂದ ಒಳ್ಳೆಯದು. ಶುದ್ಧವಾದ ಜೇನುತುಪ್ಪ. ಕಫ ದೋಷವನ್ನು ನಿಯಂತ್ರಿಸಿ, ಆಲಸ್ಯ ಮತ್ತು ಮಂದ ಗುಣವನ್ನು ಕಡಿಮೆ ಮಾಡಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಉಷ್ಣ ಪ್ರಕೃತಿಯವರು, ಪಿತ್ತ ಸಮಸ್ಯೆಯನ್ನು ಅನುಭವಿಸುತ್ತಿರುವವರು ಮತ್ತು ಉಷ್ಣಕಾಲದಲ್ಲಿ ಹೆಚ್ಚೆಂದರೆ ಒಂದೆರಡು ಚಮಚ ಮಾತ್ರ ಜೇನುತುಪ್ಪ ಸೇವಿಸುವುದು ಒಳ್ಳೆಯದು.