

‘ಈಗಿನ ಮಕ್ಕಳಲ್ಲಿ ನಿನ್ನ ಅಚ್ಚುಮೆಚ್ಚಿನ ಹೀರೋ ಯಾರು’ ಎಂದು ಕೇಳಿದರೆ ಸಿನಿಮಾ ನಟರ ಅಥವಾ ಫ್ಯಾಂಟಸಿ ಕಥೆಗಳ ಬ್ಯಾಟ್ವ್ಯಾನ್, ಸ್ಲೈಡರ್ವ್ಯಾನ್, ಸೂಪರ್ವ್ಯಾನ್ ಮುಂತಾದ ಹೀರೋಗಳ ಹೆಸರನ್ನು ಹೇಳಬಹುದು. ಆದರೆ ನಮ್ಮ ಕಾಲದಲ್ಲಿದ್ದ ಮಕ್ಕಳಿಗೆಲ್ಲಾ ಪುರಾಣ ಇತಿಹಾಸಗಳಲ್ಲಿದ್ದ ಪಾತ್ರಗಳೇ ಹೀರೋಗಳು. ನಮ್ಮನ್ನೆಲ್ಲ ‘ಸೂಪರ್ ಹೀರೋ ಯಾರು’ ಎಂದು ಕೇಳಿದರೆ ಆಗ ತಕ್ಷಣ ಬಾಯಲ್ಲಿ ಬರುತ್ತಿದ್ದದ್ದು ಹನುಮಾನ್ ಎಂದೇ. ಆತನ ಸಾಹಸಭರಿತ, ಕುತೂಹಲದ ಕತೆಗಳನ್ನು ಓದುವಾಗ ಮೈ ರೋಮಾಂಚನಗೊಳ್ಳುತ್ತಿತ್ತು. ಅಜ್ಜ-ಅಜ್ಜಿಯರು ಹೇಳುತ್ತಿದ್ದ ಕತೆ ಕೇಳುವಾಗ ಮನಸ್ಸು ಕಲ್ಪನಾಲೋಕದಲ್ಲಿ ವಿಹರಿಸುತ್ತಿತ್ತು. ಆಗೊಮ್ಮೆ- ಈಗೊಮ್ಮೆ ಯಕ್ಷಗಾನದಲ್ಲಿ ಹನುಮಂತನ ಪಾತ್ರವನ್ನು ನೋಡಿದ್ದರೆ ಮುಂದೆ ಒಂದಷ್ಟು ದಿನ ಮನೆಗಳಲ್ಲಿ ಮಕ್ಕಳದ್ದು ವಾನರಾವತಾರದ ಆಟಗಳೇ ಇರುತ್ತಿದ್ದವು.
ಹನುಮಂತ ವಾಯುಪುತ್ರ. ಬಾಲ್ಯದಲ್ಲಿಯೇ ಅಪ್ರತಿಮನಾಗಿದ್ದ ಆತ ಹಸಿವಾದಾಗ ಸೂರ್ಯನನ್ನೇ ಹಣ್ಣು ಎಂದು ತಿಳಿದು ನುಂಗಲು ಹೋದಾತ. ಆಗ ಸೂರ್ಯನು ಇಂದ್ರನಲ್ಲಿ ರಕ್ಷಣೆ ಕೋರಿದಾಗ ಇಂದ್ರಾಯುಧವನ್ನು ಪ್ರಯೋಗಿಸುತ್ತಾನೆ. ಆಗ ಹನುಮಂತ ತಲೆ ತಿರುಗಿ ಕೆಳಗೆ ಬೀಳುತ್ತಾನೆ. ಆ ಮೇಲೆ ವಾಯುದೇವ ಇದನ್ನು ಪ್ರತಿಭಟಿಸಿದ ಕತೆ, ಆಮೇಲೆ ಬ್ರಹ್ಮನ ಸಲಹೆಯಂತೆ ವಾಯುದೇವನ ಕ್ಷಮೆಯಾಚನೆ ಮುಂತಾದವೆಲ್ಲ ನಡೆಯುತ್ತವೆ. ಈ ಸಂದರ್ಭದಲ್ಲಿ ಹನುಮಂತನು ವಜ್ರದೇಹಿ ಆಗುವ ವರವೂ ಲಭಿಸುತ್ತದೆ. ಈ ನಡುವೆ ಋಷಿಗಳ ಶಾಪದಿಂದಾಗಿ ಹನುಮಂತನಿಗೆ ತನ್ನಲ್ಲಿರುವ ಶಕ್ತಿ, ಬಲದ ಬಗ್ಗೆ ಮರೆವು ಉಂಟಾಗುತ್ತದೆ. ಯಾರಾದರೊಮ್ಮೆ ತನ್ನ ಶಕ್ತಿ, ಬಲದ ಬಗ್ಗೆ ನೆನಪಿಸಿದರೆ ಮಾತ್ರ ಮತ್ತೆ ಅದು ಹನುಮಂತನಲ್ಲಿ ಪುನಃಶ್ಚೇತನಗೊಳ್ಳಲಿದೆ ಎಂಬ ಕತೆ ಇದೆ.
ಬಾಲಕ ಹನುಮಂತ ಚೂಟಿ. ಸದಾ ಒಂದಲ್ಲ ಒಂದು ತುಂಟಾಟಗಳನ್ನು ಮಾಡುತ್ತಲೇ ಇದ್ದ. ಹನುಮಂತ ಸೂರ್ಯನನ್ನೇ ನುಂಗಲು ಧಾವಿಸಿದ್ದು ಇಂದಿನ ಮಕ್ಕಳಿಗೆ ಪ್ರೇರಣೆಯಾಗಬಲ್ಲದು. ‘ಅಸಾಧ್ಯ ಎನ್ನುವುದು ಯಾವುದೂ ಇಲ್ಲ’ ಎನ್ನುವುದು ಇದರ ತಾತ್ಪರ್ಯವಾಗಿದೆ. ಶಾಲೆಯಲ್ಲಿ ಓದುವಾಗ ವಿಜ್ಞಾನ ವಿಷಯ ಕಷ್ಟ, ಗಣಿತ ಕಬ್ಬಿಣದ ಕಡಲೆ ಎಂದು ಭಾವಿಸಿದರೆ ಅದನ್ನು ಓದಲಾಗದು. ಬದಲಾಗಿ ‘ಖಂಡಿತ ಇದನ್ನು ಓದಲು ಸಾಧ್ಯ, ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದು ಶ್ರದ್ಧೆಯಿಂದ ಓದಿದರೆ ಯಾವ ಪಠ್ಯವನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಎಲ್ಲಾ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆಗಳು ಇರುತ್ತವೆ. ಅವುಗಳಿಗೆ ಪ್ರೇರಣೆ, ಪ್ರೋತ್ಸಾಹ ದೊರೆತಾಗ ಮಾತ್ರ ಅವು ಇನ್ನಷ್ಟು ಬೆಳೆಯಲು ಸಾಧ್ಯ. ಹಾಗಾಗಿ ಇಂದಿನ ಮಕ್ಕಳು ಅಧ್ಯಯನದ ಕಡೆ ಹೆಚ್ಚು ಒಲವು ತೋರಬೇಕು. ಎಲ್ಲವನ್ನೂ ತಿಳಿದುಕೊಳ್ಳುವ ಹಂಬಲ ಹೊಂದಬೇಕು. ವಿಶಾಲ ಮನೋಭಾವ ಬೆಳೆಸಿಕೊಂಡು ಗಮ್ಯದೆಡೆಗೆ ಸಾಗಬೇಕು.
ಸೀತೆಯ ಅಪಹರಣದ ಸಂದರ್ಭದಲ್ಲಿ ಹನುಮಂತನ ಪೂರ್ಣ ಪರಿಚಯ ದೊರಕುತ್ತದೆ. ರಾವಣನು ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಇಟ್ಟಿದ್ದಾನೆ ಎಂದು ತಿಳಿದ ರಾಮ-ಲಕ್ಷ್ಮಣರು ಸಮುದ್ರ ದಂಡೆಗೆ ಬರುತ್ತಾರೆ. ಈ ಸಂದರ್ಭದಲ್ಲಿ ಹನುಮಂತನ ಭೇಟಿಯಾಗುತ್ತದೆ. ಸಾಗರವನ್ನು ದಾಟುವುದಾದರೂ ಹೇಗೆ ಎಂದು ವಾನರರೆಲ್ಲ ಚಿಂತೆ ಮಾಡುತ್ತಿರುವಾಗ ಜಾಂಬವಂತ ಎಲ್ಲರನ್ನೂ ಸಮಾಧಾನ ಮಾಡಿ, ‘ಲಂಕೆಗೆ ಹಾರಿ, ಪುನಃ ಹಿಂದಿರುಗಿ ಬರಬಲ್ಲ ಮಹಾವೀರನೆಂದರೆ ಹನುಮಂತನೊಬ್ಬನೇ’ ಎಂದು ಹೇಳಿ, ದೂರದಲ್ಲಿ ಒಬ್ಬನೇ ಕುಳಿತು ಮಾತನಾಡದೆ ಸಮುದ್ರವನ್ನೇ ನೋಡುತ್ತಿದ್ದ ಹನುಮಂತನನ್ನು ಉದ್ದೇಶಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ. ‘ನಿನ್ನ ಬಲ, ಬುದ್ಧಿ, ತೇಜಸ್ಸು ಪ್ರಪಂಚದಲ್ಲಿ ಬೇರಾರಿಗೂ ಇಲ್ಲ. ಅಂತಹುದರಲ್ಲಿ ನಿನ್ನನ್ನೇ ನೀನು ಅರಿಯದೇ ಏಕೆ ಕುಳಿತಿರುವೆ? ನೀನು ಈ ಸಮುದ್ರವನ್ನು ಹಾರಿಬಿಡಬಲ್ಲೆ’ ಎಂದು ಪರಿಪರಿಯಾಗಿ ಹನುಮಂತನಲ್ಲಿ ಅಂತರ್ಗತವಾಗಿದ್ದ ಶಕ್ತಿ ಸಾಮರ್ಥ್ಯವನ್ನು ಉದ್ದೀಪನಗೊಳಿಸಿದ. ಜಾಂಬವಂತನ ಪ್ರೇರಣಾ ಮಾತುಗಳನ್ನು ಕೇಳಿದ ಹನುಮಂತನಿಗೆ ತನ್ನ ಶಕ್ತಿ ಸಾಮರ್ಥ್ಯಗಳ ಅರಿವು ಉಂಟಾಗುತ್ತಿದ್ದಂತೆ ಅಪಾರ ಉತ್ಸಾಹ ಮೂಡಿತು. ಎದ್ದು ನಿಂತು ಒಮ್ಮೆ ಎಲ್ಲರನ್ನೂ ನೋಡಿ ಎತ್ತರಕ್ಕೆ ಬೆಳೆಯತೊಡಗಿದ. ಆಗ ಶ್ರೀರಾಮನು ತನ್ನ ಬೆರಳಲ್ಲಿದ್ದ ಉಂಗುರವನ್ನು ತೆಗೆದು ಹನುಮಂತನ ಕೈಗಿತ್ತು, ‘ಸೀತೆ ನಿನ್ನನ್ನು ಕಂಡು ಹೆದರಬಹುದು. ಆಗ ನೀನು ಈ ಉಂಗುರವನ್ನು ತೋರಿಸು. ನಿನ್ನನ್ನೇ ನಾವು ನಂಬಿದ್ದೇವೆ’ ಎಂದು ಹರಸಿ ಬೀಳ್ಕೊಟ್ಟ.
ವಿನಯದಿಂದ ಎಲ್ಲರಿಗೂ ನಮಸ್ಕರಿಸಿದ ಹನುಮಂತನು ಪರ್ವತದ ಮೇಲೆ ನಿಂತು ದೇಹವನ್ನು ಹಿಗ್ಗಿಸಿ ಹಾರಿದ. ಆತನ ಬಲಪರೀಕ್ಷೆ ಮಾಡಲು ದೇವತೆಗಳು ಸುರಸೆ ಎಂಬ ನಾಗಮಾತೆಯನ್ನು ಕಳುಹಿಸಿಕೊಡುತ್ತಾರೆ. ಆಕೆ ಭಯಂಕರ ರಾಕ್ಷಸಿಯಾಗಿ ಹನುಮಂತನಿಗೆ ಅಡ್ಡ ನಿಂತು, ‘ನಾನು ನಿನ್ನನ್ನು ತಿಂದುಬಿಡುತ್ತೇನೆ’ ಎಂದು ಆರ್ಭಟಿಸಿದಳು. ‘ನೀನು ನನ್ನ ಬಾಯೊಳಗೆ ಹೋಗದೆ ಹಾಗೆಯೇ ಹೋಗುವಂತೆಯೇ ಇಲ್ಲ’ ಎಂದಳು. ಆಗ ಹನುಮಂತ ತನ್ನ ದೇಹವನ್ನು ಬೃಹದಾಕಾರವಾಗಿ ಬೆಳೆಸುತ್ತಾನೆ. ಬಳಿಕ ‘ಈಗ ನನ್ನನ್ನು ನುಂಗು’ ಎನ್ನುತ್ತಾನೆ. ರಾಕ್ಷಸಿಯು ಹನುಮಂತನ ಆಕಾರದಷ್ಟೆ ಅಗಲವಾಗಿ ಬಾಯಿ ತೆರೆದು ನಿಂತಳು. ಬುದ್ಧಿವಂತನಾದ ಹನುಮಂತನು ಇದ್ದಕ್ಕಿದ್ದಂತೆ ಹೆಬ್ಬೆರಳಿನಷ್ಟು ಪುಟ್ಟದಾಗಿ ಅವಳ ವಿಶಾಲವಾದ ಬಾಯೊಳಗೆ ಹೋಗಿ ಕ್ಷಣಮಾತ್ರದಲ್ಲಿ ಹೊರಬಂದುಬಿಟ್ಟ. ‘ನಿನ್ನ ಬಾಯನ್ನು ಪ್ರವೇಶಿಸಿ ಹೊರಬಂದಿದ್ದೇನೆ. ಇನ್ನು ಮುಂದೆ ಹೋಗಲು ಅವಕಾಶಕೊಡು’ ಎನ್ನುತ್ತಾನೆ. ಆಗ ಸುರಸೆ ಆತನ ಜಾಣ್ಮೆಯನ್ನು ಮೆಚ್ಚಿ ಕಳುಹಿಸಿಕೊಡುತ್ತಾಳೆ.
ಹೀಗೆ ಹನುಮಂತನು ಸಾಗರವನ್ನು ದಾಟುವ ಸಮಯದಲ್ಲಿ ಆತ ಸಮುದ್ರದಲ್ಲಿ ಸಾಕಷ್ಟು ರಾಕ್ಷಸರನ್ನು ಭೇಟಿಯಾಗುತ್ತಾನೆ. ಒಂದೊಂದು ರಕ್ಕಸರನ್ನು ಕೊಲ್ಲುವ ಕತೆಗಳನ್ನು ಓದುವಾಗಲಂತೂ ಮೈ ರೋಮಾಂಚನಗೊಳ್ಳುತ್ತದೆ. ಮಕ್ಕಳ ರಾಮಾಯಣದಲ್ಲಿ ಹನುಮಂತನ ಸಾಕಷ್ಟು ಮೈನವಿರೇಳಿಸುವ ಸಾಹಸಗಾಥೆಗಳಿವೆ. ಹನುಮಂತ ಸ್ವಾಮಿನಿಷ್ಠೆಗೆ ಹೆಸರುವಾಸಿ. ಅಪರಿಮಿತ ಶಕ್ತಿವಂತ. ಕುತೂಹಲಕಾರಿ, ಅಧ್ಯಯನ ಯೋಗ್ಯ ವ್ಯಕ್ತಿತ್ವ. ಭಕ್ತಿಗೆ ಮಾದರಿ, ಬುದ್ಧಿವಂತ, ಹೃದಯವಂತ, ಕರ್ಮಯೋಗಿ, ಸೇವಾತತ್ಪರ. ಅಹಂಕಾರವನ್ನು ಮೆಟ್ಟಿನಿಂತವನು. ಹೀಗೆ ಅನೇಕ ವಿಚಾರಗಳಲ್ಲಿ ಹನುಮಂತನದ್ದು ಪ್ರೇರಣಾದಾಯಕ ವ್ಯಕ್ತಿತ್ವ.
ಮನೋಸ್ಥೈರ್ಯ, ಮನೋನಿಗ್ರಹಕ್ಕೂ ಹನುಮಂತನೇ ಪ್ರೇರಣೆಯಾಗುತ್ತಾನೆ. ಗುರಿಯೆಡೆಗೆ ಕೇವಲ ಗಮನ ಹರಿಸಿದರೆ ಸಾಲದು. ಗುರಿ ತಲುಪಲು ದೃಢ ಚಿತ್ತದ ಮನೋಸ್ಥೈರ್ಯ ಅಗತ್ಯ. ಸಾಧನೆಯ ಹಾದಿಯಲಿ ಎಷ್ಟೇ ಅಡೆತಡೆ ಬಂದರೂ ವಿಮುಖರಾಗಬಾರದು ಎಂಬುದಕ್ಕೆ ಹನುಮಂತನು ಉತ್ತಮ ಉದಾಹರಣೆಯಾಗಿದ್ದಾನೆ. ಶಕ್ತಿಗಳು ಎಲ್ಲರೊಳಗೆ ಸುಪ್ತವಾಗಿರುತ್ತವೆ. ಅದರ ಅರಿವು ನಮಗೆಲ್ಲ ಆಗಬೇಕು, ನಮ್ಮಲ್ಲಿರುವ ಶಕ್ತಿಗಳನ್ನು ಅರಿತುಕೊಂಡರೆ ಎಷ್ಟೇ ಅಡೆತಡೆ ಎದುರಾದರೂ ಅವುಗಳನ್ನು ಮೆಟ್ಟಿನಿಲ್ಲಲು ಸಾಧ್ಯವೆಂದು ತಿಳಿಸಿದ್ದಾನೆ. ದೃಢ ಮನೋಸ್ಥೈರ್ಯ ಬೆಳೆಸಿಕೊಂಡು ಮುನ್ನಡೆದರೆ ಗೆಲುವು ನಿಶ್ಚಿತವಾಗಿ ಲಭಿಸುತ್ತದೆ ಎನ್ನುವುದಕ್ಕೆ ಹನುಮಂತನೇ ಮತ್ತೆ ಸಾಕ್ಷಿಯಾಗಿ ನಿಲ್ಲುತ್ತಾನೆ. ಕಷ್ಟಗಳಿಗೆ ಹೆದರದೆ, ಸೋಲದೆ, ಕುಗ್ಗದೆ ಅದನ್ನು ಎದುರಿಸುವ ಕೆಚ್ಚೆದೆಯನ್ನು, ಸ್ಥೈರ್ಯವನ್ನು ಹೊಂದಬೇಕು ಎಂದು ಆತ ತಿಳಿಸಿಕೊಡುತ್ತಾನೆ.
ಹನುಮಂತ ಲಂಕೆಯತ್ತ ಹಾರಿ, ಸೀತೆಯನ್ನು ಕಂಡು ಸಂದೇಶವನ್ನು ತಲುಪಿಸುವ ತನಕ ನಿರಂತರತೆ ಕಾಪಾಡಿಕೊಳ್ಳುತ್ತಾನೆ. ವಿಶ್ರಮಿಸುವುದಿಲ್ಲ. ಹಾಗೆಯೇ ಬದುಕಿನಲ್ಲೂ ಕೆಲಸ ಮಾಡುವಾಗ, ಕರ್ತವ್ಯನಿರತರಾಗಿರುವಾಗ ನಿರಂತರತೆ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಒಬ್ಬ ಕ್ರೀಡಾಪಟು ಉತ್ತಮ ಕ್ರೀಡಾಪಟುವಾಗಬೇಕಾದರೆ ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಉತ್ತಮನಾಗಲು ಸಾಧ್ಯ. ಅಂತೆಯೇ ವಿದ್ಯಾರ್ಥಿ ಉತ್ತಮ ಅಂಕ ಗಳಿಸಲು ಪರೀಕ್ಷೆಯ ಹಿಂದಿನ ದಿನ ಶ್ರಮವಹಿಸಿ ಓದಿದರೆ ಸಾಲದು. ನಿರಂತರವಾಗಿ ಕಲಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ದಿನನಿತ್ಯ ಅಭ್ಯಾಸ ಮಾಡಿದರೆ ಉತ್ತಮ ಅಂಕ ಗಳಿಸಲು ಸಾಧ್ಯ. ನಿರಂತರತೆ ಎನ್ನುವುದನ್ನು ಬದುಕಿನಲ್ಲಿ ಸದಾ ಅಳವಡಿಸಿಕೊಳ್ಳಬೇಕು. ಬದುಕು ನಿಂತ ನೀರಾಗಬಾರದು ಎಂಬುದನ್ನು ಕೂಡ ಹನುಮಂತ ವಿವಿಧ ಸನ್ನಿವೇಶಗಳಲ್ಲಿ ತಿಳಿಸಿಕೊಡುತ್ತಾನೆ.
ಒಮ್ಮೆ ಅಖಾಡಕ್ಕೆ ಇಳಿದ ಮೇಲೆ ಎದುರಾಳಿಗಳ ಬಗ್ಗೆ ಚಿಂತೆ ಮಾಡಬಾರದು ಎಂಬ ಮಾತು ಕುಸ್ತಿಪಟುಗಳಲ್ಲಿದೆ. ಎದುರಾಳಿಯು ನಮಗಿಂತ ಬಲಿಷ್ಠರು, ಸಾವಿರಪಟ್ಟು ಬಲಶಾಲಿ ಎಂಬ ಭಾವನೆಯನ್ನು ನಾವು ತಾಳಬಾರದು, ಆತ ಎಷ್ಟೇ ಬಲಿಷ್ಠನಾಗಿದ್ದರೂ ಅವನನ್ನು ಹೇಗೆ ಮಣಿಸುವುದು ಎಂಬುದನ್ನು ನಾವು ಹನುಮಂತನ ಮೂಲಕ ಕಲಿತುಕೊಳ್ಳಬಹುದು. ಲಂಕೆಯಲ್ಲಿ ಹನುಮಂತನ ಬಾಲಕ್ಕೆ ಬೆಂಕಿ ಇಟ್ಟಾಗ, ಸ್ವತಃ ರಾವಣ ಕೂಡ ಯೋಚಿಸಲಿಕ್ಕಿರಲಿಲ್ಲ. ತಾನು ಕೊಟ್ಟ ಬೆಂಕಿ ತನ್ನ ಪುರವನ್ನೇ ಸುಡುತ್ತದೆ ಎಂಬುದು. ಹನುಮಂತ ತನ್ನ ಕಷ್ಟ ಕಾಲದಲ್ಲೂ, ಎದುರಾಳಿಯ ಬಲದ ಅರಿವಿದ್ದರೂ ಜಾಣ್ಮೆಯಿಂದ ಅವರನ್ನು ಮಣಿಸುವ ಚತುರತೆ ಪ್ರದರ್ಶಿಸಿದ್ದಾನೆ.
ಯಾವುದೇ ಸಂದರ್ಭವಿರಲಿ, ಸನ್ನಿವೇಶವಿರಲಿ ಆತ ಎಲ್ಲೂ ಎದೆಗುಂದಿಲ್ಲ. ಸೋತು ಹಿಮ್ಮೆಟ್ಟಿದರೆ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟಾಗ ಮಾತ್ರ ಸೋಲುತ್ತೇವೆ. ಹೆದರಿದರೆ ನಾವೇ ಸ್ವತಃ ಸೋಲನ್ನು ಸ್ವಾಗತಿಸಿದಂತಾಗುತ್ತದೆ. ಹಾಗಾಗಿ ಎಂತಹ ಪರಿಸ್ಥಿತಿಯಲ್ಲೂ ಧೈರ್ಯಗೆಡಬಾರದು, ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂಬುದನ್ನು ಹನುಮಂತನಿಂದ ಕಲಿಯಬಹುದಾಗಿದೆ. ಶ್ರೀರಾಮನಂತೆ ಹನುಮಂತನದ್ದೂ ಆದರ್ಶ ವ್ಯಕ್ತಿತ್ವ. ರಾಮಭಕ್ತನಾದ ಆತನಲ್ಲಿ ಎಳ್ಳಷ್ಟೂ ತೋರ್ಪಡಿಕೆಯಾಗಲಿ, ಬೇಸರವಾಗಲಿ ಇರಲೇ ಇಲ್ಲ. ಬದುಕನ್ನೇ ಶ್ರೀರಾಮನಿಗೆ ಅರ್ಪಿಸಿಕೊಂಡಿದ್ದ. ಬಲಶಾಲಿಯಾಗಿದ್ದರೂ ಎಲ್ಲವೂ ಶ್ರೀರಾಮಚಂದ್ರನ ಲೀಲೆ ನಾನು ಆತನ ದಾಸನೆಂದುಕೊಂಡು ಪ್ರಭುವಿನ ಸೇವೆಗೆ ತನ್ನನ್ನು ಮುಡಿಪಾಗಿರಿಸಿದ್ದ. ಹಾಗಾಗಿ ರಾಮದಾಸ ಹನುಮಂತ ಎಂದೇ ಪ್ರಖ್ಯಾತಿ.
ಬಾಹುಬಲ, ಅಧಿಕಾರ, ವರ ಸಿದ್ಧಿ ಪಡೆದುಕೊಂಡು ಅನ್ಯಾಯ ಅಕ್ರಮಗಳನ್ನು ಮಾಡಿ ಅಹಂಕಾರದಿಂದ ಮೆರೆದರೆ ರಾವಣನಂತೆ ಅವನತಿಯಾಗುತ್ತದೆ. ಅದೇ ರೀತಿ ಶಕ್ತಿ, ಬುದ್ಧಿ ಎಲ್ಲವೂ ಇದ್ದು ಭಗವಂತನ ಭಕ್ತರಾದರೆ ಎಲ್ಲವನ್ನೂ ಪಡೆದು ಸುಖದಿಂದ ಇರಲು ಸಾಧ್ಯ ಎಂಬುದನ್ನೂ ತಿಳಿಯಬೇಕು. ಇಂದಿನ ದಿನಗಳಲ್ಲಿ ಸಂಪತ್ತು, ಅಧಿಕಾರ ಹೆಚ್ಚಾದಂತೆ ಮಾನವೀಯತೆ ಕಡಿಮೆಯಾಗುತ್ತಿದೆ. ಹಣ, ಅಂತಸ್ತಿಗೆ ಮಾತ್ರವೇ ಬೆಲೆ, ಗುಣಕ್ಕಲ್ಲ ಎಂಬ ಮಾತು ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿದೆ. ಆದರೆ ಬದುಕಿನಲ್ಲಿ ಗೆಲ್ಲುವುದು ಮಾನವೀಯ ಮೌಲ್ಯಗಳೇ ಹೊರತು ಹಣ, ಆಸ್ತಿ, ಅಂತಸ್ತಲ್ಲ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಶಿಸ್ತು, ಸಂಯಮದ ಬದುಕು ರೂಪಿಸುವಲ್ಲಿ ಇಂದಿನ ಯುವ ಜನತೆಗೆ ಹನುಮಂತ, ಆತನ ಬದುಕು ಪ್ರೇರಣೆಯಾಗಬಲ್ಲುದು. ಅಂತಹ ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ತಿಳಿಯೋಣ. ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ಕರ್ಷವನ್ನು ಹೊಂದೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)