ಸಕಾಲಿಕ: ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರದ ನಿಯಂತ್ರಣ

anantha padmanabha temple
Published on
ರಾಘವೇಂದ್ರ ಎಸ್.ಶ್ರೀವತ್ಸ

ಶ್ರಾವಣ ಮಾಸ ಶುರುವಾಗಿದೆ. ಎಲ್ಲರೂ ಧಾರ್ಮಿಕ ಆಚಾರ-ವಿಚಾರಗಳಲ್ಲಿ ಮುಳುಗಿರುವಾಗಲೇ ಕಾಕತಾಳೀಯವೇನೋ ಎಂಬಂತೆ ಚರ್ಚ್-ದೇವಸ್ಥಾನದಂತಹ ಧಾರ್ಮಿಕ ಸ್ಥಳಗಳ ಕುರಿತಾಗಿ ನ್ಯಾಯಾಲಯಗಳು ತಮ್ಮ ತೀರ್ಪುಗಳನ್ನು ಇತ್ತೀಚಿನ ದಿನಗಳಲ್ಲೇ ಪ್ರಕಟಿಸಿವೆ. ನಮ್ಮ ದೇಶದಲ್ಲಷ್ಟೇ ಅಲ್ಲ, ಅಮೆರಿಕಾದ ಸುಪ್ರೀಂ ಕೋರ್ಟ್ ಸಹಾ ಈ ಬಗ್ಗೆ ತನ್ನದೊಂದು ತೀರ್ಪನ್ನು ಜುಲೈ 24ರಂದು ಪ್ರಕಟಿಸಿದೆ.

"ಯತೋಧರ್ಮಸ್ತತೋ ಜಯಃ" ಎನ್ನುವುದು ಭಾರತದ ಸರ್ವೋಚ್ಚ ನ್ಯಾಯಾಲಯದ ಲಾಂಛನದಲ್ಲಿ ವ್ಯಕ್ತಪಡಿಸಿರುವ ಧ್ಯೇಯವಾಕ್ಯ. ಅನ್ವರ್ಥವೆಂಬಂತೆ ನಮ್ಮ ನ್ಯಾಯಾಲಯ ಧಾರ್ಮಿಕ ಪದ್ಧತಿ, ಸಂಪ್ರದಾಯಗಳನ್ನು ಪುರಸ್ಕರಿಸಿ ಕಾನೂನಿನಲ್ಲಿಅವುಗಳಿಗಿರುವ ಮಾನ್ಯತೆಯನ್ನು ಎತ್ತಿಹಿಡಿದಿದೆ. ಮಠ-ಮಂದಿರಗಳಂತಹ ಧಾರ್ಮಿಕ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಇತಿಮಿತಿಗಳ ಬಗ್ಗೆ ನಮ್ಮ ನ್ಯಾಯಾಲಯಗಳು ಮುಂಚಿನಿಂದಲೂ ವಿಚಾರ ಮಾಡುತ್ತಲೇ ಬಂದಿವೆ. ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ಆಡಳಿತ ವ್ಯವಸ್ಥೆ, ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಂತಹ ಧಾರ್ಮಿಕೇತರ (ಸೆಕ್ಯುಲರ್) ವಿಷಯಗಳಲ್ಲಿ ಸರ್ಕಾರದ ನಿಯಂತ್ರಣಕ್ಕೆ ಕಾನೂನಿನಲ್ಲಿ ಅವಕಾಶವಿದ್ದಾಗ್ಗ್ಯೂ ಅವಶ್ಯವಾದ ಧಾರ್ಮಿಕ ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಈ ನಿಯಂತ್ರಣದ ಅಧಿಕಾರವನ್ನು ಬಳಸಬೇಕೆಂಬ ಸೂತ್ರವನ್ನು ನ್ಯಾಯಾಲಯ ಮುಂಚಿನಿಂದಲೂ ಹಾಕಿಕೊಟ್ಟಿದೆ. ಇದೇ ಜುಲೈ 13 ರಂದು ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹಾಗೂ ಜುಲೈ 21 ರಂದು ಚಾರ್ ಧಾಮ್ ದೇವಸ್ಥಾನಗಳ ಪ್ರಕರಣದಲ್ಲಿ ಉತ್ತರಾಖಂಡ್ ಹೈಕೋರ್ಟ್ ತೀರ್ಪನ್ನಿತ್ತಿವೆ. ಈ ಸಂದರ್ಭದಲ್ಲಿ ನ್ಯಾಯಾಲಯಗಳ ತೀರ್ಪು ಹಾಗೂ ಕಾನೂನಿನ ಚೌಕಟ್ಟಿನ ಒಂದು ಅವಲೋಕನ ಸೂಕ್ತವಷ್ಟೇ.

ತಿರುವನಂತಪುರಂನಲ್ಲಿನ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಕರಣ ದೇಶದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ವಿಚಾರಣೆ ನಡೆಯುವಾಗಲೂ, ತೀರ್ಪು ಪ್ರಕಟವಾದ ನಂತರವೂ ಬಹಳಷ್ಟು ವ್ಯಾಖ್ಯಾನಗಳು ಕೇಳಿಬರುತ್ತಿವೆ. ಮುಖ್ಯವಾಗಿ ಕೇರಳ ಹೈಕೋರ್ಟಿನ ಮೆಟ್ಟಿಲೇರಿದವರ ವಾದ- ದೇವಾಲಯದ ಆಡಳಿತ ಮತ್ತು ಉಸ್ತುವಾರಿ ರಾಜ್ಯ ಸರ್ಕಾರದ ಭಾಗವಾಗಿರುವ ದೇವಸ್ವಮ್ ಮೂಲಕ ನಡೆಸಬೇಕು, ದೇವಾಲಯದ ನೆಲಮಾಳಿಗೆಯಲ್ಲಿರುವ ಉಗ್ರಾಣದಲ್ಲಿ ಅಪಾರವಾಗಿ ಬೆಲೆಬಾಳುವ ಚಿನ್ನ, ಒಡವೆ ಮತ್ತಿತರ ವಸ್ತುಗಳಿವೆ, ಅವುಗಳು ಯಾವುದೇ ಖಾಸಗಿಯವರ ಕೈ ಸೇರದೆ ಸಂರಕ್ಷಣೆಗೊಳ್ಳಬೇಕು ಹಾಗೂ ಅಲ್ಲಿನ ರಾಜಮನೆತನದವರು ಈ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದಾಗಿತ್ತು. ಕೇರಳ ಹೈಕೋರ್ಟ್ ಸಾಕಷ್ಟು ಮಟ್ಟಿಗೆ ಈ ವಾದವನ್ನು ಒಪ್ಪಿ ತೀರ್ಪು ಕೊಟ್ಟ ನಂತರ ರಾಜಮನೆತನದವರು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 2011ರಲ್ಲಿ ಸುಪ್ರೀಂ ಕೋರ್ಟ್ ಮುಟ್ಟಿದ ಈ ವಿವಾದ ಈಗಷ್ಟೇ ಇತ್ಯರ್ಥವಾಗಿದೆ. ಸುಪ್ರೀಂ ಕೋರ್ಟಿನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವಾಗ ಪದ್ಮನಾಭಸ್ವಾಮಿಗೆ ಯಾವ ರೀತಿಯ ಸುಪ್ರಭಾತ ಹಾಡಬೇಕು ಎಂಬುದರ ಬಗ್ಗೆ ವಿವಾದ ಎದ್ದಿತ್ತು. ದೇವಾಲಯದ ಸಂಪ್ರದಾಯಕ್ಕೆ ವಿರುದ್ಧವಾಗಿ "ವೆಂಕಟೇಶ ಸುಪ್ರಭಾತ" ವನ್ನು ಹಾಡಲಾಗುತ್ತಿದೆ ಎಂದು ಅರ್ಚಕರು ಹಾಗೂ ಇತರರಿಂದ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಈ ವಿಚಾರಗಳಲ್ಲಿ ಮುಖ್ಯ ಅರ್ಚಕರಾದ ತಂತ್ರಿಗಳು ಸಂಪ್ರದಾಯದಂತೆ ನಿರ್ಧರಿಸುವುದೇ ಅಂತಿಮ ಎಂದು ಕೋರ್ಟ್ ವಿವಾದವನ್ನು ಬಗೆಹರಿಸಿತ್ತು.

ಅತ್ಯವಶ್ಯವಾಗಿ ಗಮನಿಸಲೇಬೇಕಾದ ಅಂಶವೇನೆಂದರೆ ಸುಪ್ರೀಂ ಕೋರ್ಟಿನಲ್ಲಿ ರಾಜಮನೆತನದವರು ನೀಡಿದ ಸ್ಪಷ್ಟ ಹೇಳಿಕೆ. ಪದ್ಮನಾಭಸ್ವಾಮಿ ದೇವಸ್ಥಾನವಾಗಲೀ ಅದಕ್ಕೆ ಸೇರಿದ ಯಾವುದೇ ಆಸ್ತಿಪಾಸ್ತಿಗಳಾಗಲೀ ತಮ್ಮ ಸ್ವಂತ ಆಸ್ತಿಯೆಂದು ತಾವು ಪ್ರತಿಪಾದಿಸುತ್ತಿಲ್ಲವೆಂದೂ, ದೇವಾಲಯದ ಉಸ್ತುವಾರಿಯಲ್ಲಿ ಟ್ರಸ್ಟಿಗಳಾಗಿ (ಪ್ರಬಂಧಕರಾಗಿ) ಸೇವೆ ಸಲ್ಲಿಸುವ ಹಕ್ಕನ್ನು ಮಾತ್ರ ಕೋರುತ್ತಿದ್ದೇವೆಂದು ನ್ಯಾಯಾಲಯಕ್ಕೆ ಸ್ಪಷ್ಟಗೊಳಿಸಿದರು. ಈ ಹೇಳಿಕೆಯನ್ನು ಮನ್ನಿಸಿ, ದೇವಾಲಯದ ಇತಿಹಾಸ, ಅಲ್ಲಿನ ಉಸ್ತುವಾರಿಗೆ ಸಂಬಧಿಸಿದ ಸಂಪ್ರದಾಯ, ಪದ್ಧತಿ ಇವುಗಳನ್ನೆಲ್ಲಾ ಪರಿಗಣಿಸಿ ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. ಈಗಿನ ತಿರುವನಂತಪುರಂ ಹಿಂದೆ ಇದ್ದದ್ದು ಟ್ರಾವಂಕೋರ್ ರಾಜ್ಯದಲ್ಲಿ. ಅನಂತಶಾಯಿಯಾಗಿ ವ್ಯಕ್ತಗೊಂಡಿರುವ ಮಹಾವಿಷ್ಣುವಿನ ರೂಪವೇ ಪದ್ಮನಾಭ. "ತಿರುವನಂತಪುರಂ" ಎಂದು ಆ ಊರಿಗೆ ಹೆಸರು ಬಂದಿರುವುದೇ ಈ ದೇವಾಲಯದಿಂದ. ಸುಮಾರು 1375 ರಲ್ಲಿ ಆಗಿನ ಮಹಾರಾಜರು ದೇವಾಲಯವನ್ನು ನಿರ್ಮಿಸಿ, ದೇವರನ್ನು ಪ್ರತಿಷ್ಠಾಪಿಸಿದರು. ಸುಮಾರು ಮೂರು ಶತಮಾನಗಳ ನಂತರ ಒಂದು ಬೆಂಕಿ ಅವಘಡ ಸಂಭವಿಸಿ, ಆಗಿನ ಮಹಾರಾಜರು ದೇವಸ್ಥಾನದ ಪುನರ್ನಿರ್ಮಾಣ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡಿಸಿದರು. 1750 ರಲ್ಲಿ ಅಧಿಕಾರದಲ್ಲಿದ್ದ ರಾಜ ಮಾರ್ತಾಂಡ ವರ್ಮ ತನ್ನ ಇಡೀ ರಾಜ್ಯ, ಸಂಪತ್ತುಗಳನ್ನಷ್ಟೇ ಅಲ್ಲ ತನ್ನ ಖಡ್ಗವನ್ನೂ ಸಹಾ ಪದ್ಮನಾಭಸ್ವಾಮಿಗೆ ಸಮರ್ಪಿಸಿ, ತಮ್ಮ ಪೀಳಿಗೆಯಲ್ಲಿ ಬರುವ ಮುಂದಿನ ರಾಜರುಗಳೆಲ್ಲಾ ಸಂಪಾದಿಸಬಹುದಾದಂತಹ ರಾಜ್ಯ, ಭೂಮಿ ಹಾಗೂ ಸಂಪತ್ತು ಸಹಾ ಪದ್ಮನಾಭಸ್ವಾಮಿಗೇ ಸೇರತಕ್ಕದ್ದೆಂದು ವಚನಬದ್ಧರಾದರು.

"ತ್ರಿಪ್ಪತಿ ದಾನ" ಎಂದು ಹೆಸರಾಗಿರುವ ಈ ಸಮರ್ಪಣೆಯಾದ ಅಂದಿನಿಂದ ಇಂದಿನವರೆಗೂ ಟ್ರಾವಂಕೋರ್ ರಾಜಮನೆತನದ ಪ್ರತಿಯೊಬ್ಬ ಗಂಡು ಮಗುವೂ "ಪದ್ಮನಾಭದಾಸ" ನಾಗಿ, ಪ್ರತಿಯೊಂದು ಹೆಣ್ಣು ಮಗುವೂ "ಸೇವಿನಿ" ಯಾಗಿ ಮುಂದುವರೆದಿರುವುದನ್ನು ನ್ಯಾಯಾಲಯ ಗುರುತಿಸಿದೆ. ಹೀಗೆ ಇಡೀ ರಾಜ್ಯವನ್ನೇ ಪದ್ಮನಾಭಸ್ವಾಮಿಗೆ ಸಮರ್ಪಿಸಿದ ಬಳಿಕ ಪ್ರತಿಯೊಬ್ಬ ರಾಜನೂ ಸಹಾ ರಾಜ್ಯದ ಆಡಳಿತ ಮಾಡಿದ್ದು ದೇವರ ಸೇವಕ "ಪದ್ಮನಾಭದಾಸ"ನಾಗಿ. ಅದೇ ರೀತಿ ಶತಶತಮಾನಗಳಿಂದ ರಾಜಮನೆತೆನದವರು ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಾ ಬಂದಿರುವುದು ಪ್ರಮಾಣಗೊಂಡಿದ್ದು, ಭಾರತ ಆಂಗ್ಲರಿಂದ ಸ್ವತಂತ್ರವಾದ ಮೇಲೆ ಹಾಗೂ ಸಂವಿಧಾನ ಜಾರಿಗೆ ಬಂದ ಮೇಲೆಯೂ ಈ ಒಂದು ದೇವಸ್ಥಾನದ ಉಸ್ತುವಾರಿ ಮಾತ್ರ ರಾಜಮನೆತನದವರ ಕೈನಲ್ಲಿತ್ತು. ಟ್ರಾವಂಕೋರ್-ಕೊಚ್ಚಿನ್ ರಾಜ್ಯಗಳು ಭಾರತ ಗಣರಾಜ್ಯಕ್ಕೆ ಸೇರ್ಪಡೆಗೊಂಡಾಗ ಏರ್ಪಟ್ಟ ಸಂಧಾನದಲ್ಲಿಯೂ ಇದೊಂದು ದೇವಸ್ಥಾನದ ಉಸ್ತುವಾರಿ ಮಾತ್ರ ಹಿಂದಿನ ರಾಜಮನೆತನದವರ ಕೈಯ್ಯಲ್ಲೇ ಉಳಿಸಿಕೊಳ್ಳಲಾಗಿತ್ತು. ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಮಾರ್ತಾಂಡ ವರ್ಮ ಮತ್ತು ಅವರ ಪೀಳಿಗೆಯವರು ದೇವಾಲಯದ ಪ್ರಬಂಧಕರಾಗಿ ಮುಂದುವರೆದಿದ್ದು ದೇವಾಲಯದ ಸಂಸ್ಥಾಪಕರಾಗಿಯೇ ಹೊರತು ಅವರು "ರಾಜ"ರಾಗಿದ್ದ ಹುದ್ದೆಯಿಂದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯಾವುದೇ ಒಂದು ಧಾರ್ಮಿಕ ಸಂಸ್ಥೆಯನ್ನು ಸ್ಥಾಪಿಸಿ, ಚರ-ಸ್ಥಿರಾಸ್ತಿಗಳನ್ನು ದೇವರಿಗೆ ಸಮರ್ಪಣೆ ಮಾಡಿದ ಮೇಲೆ ಎಲ್ಲಾ ಆಸ್ತಿಗಳೂ ದೇವರ ಒಡೆತನಕ್ಕೆ ಸೇರಿದ್ದು. ಸಂಸ್ಥಾಪಕರು ಕೇವಲ ಪ್ರಬಂಧಕರಾಗಿ ಉಸ್ತುವಾರಿ ನೋಡಿಕೊಳ್ಳುವ ಹಕ್ಕನ್ನು ಹೊಂದಿದ್ದು, ವಂಶಪಾರಂಪರ್ಯವಾಗಿ ಆ ಉಸ್ತುವಾರಿಯ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗುವ ವ್ಯವಸ್ಥೆ ಕಾನೂನಿನಲ್ಲಿದೆ. ಹೀಗೆ ದೇವರ ಸೇವೆ ಮಾಡುವ ಸಂಸ್ಥಾಪಕ ಅಥವಾ ಅವರ ವಂಶಸ್ಥರು "ಸೇವಾಯತ್" ಎಂದು ಕರೆಸಿಕೊಳ್ಳುತ್ತಾರೆ. ಆ ಪದ ಆಂಗ್ಲರ ಬಾಯಲ್ಲಿ "ಶೆಬಾಯಿತ್" ಎಂದು ತಿರುಚಲ್ಪಟ್ಟಿತು. ಇದನ್ನೆಲ್ಲಾ ಮನಗಂಡ ಸುಪ್ರೀಂ ಕೋರ್ಟ್ ರಾಜಮನೆತನದವರು "ಶೆಬಾಯಿತ್" ಆಗಿದ್ದು, ಯಾವುದೇ ಸಂಭಾವನೆ ಸ್ವೀಕರಿಸಿಲ್ಲ ಹಾಗೂ ಸ್ವೀಕರಿಸುವ ಹಾಗಿಲ್ಲವೆಂದು ಆದೇಶಿಸಿ, ಇದೀಗ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ-ಉಸ್ತುವಾರಿಗೆ ಸಂಬಂಧಿಸಿದಂತೆ ಒಂದು ಸೂತ್ರವನ್ನು ರೂಪಿಸಿದೆ. ತಿರುವನಂತಪುರಂನ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಡಳಿತ ಸಮಿತಿಯನ್ನು ರಚಿಸಿ, ದೇವಾಲಯದ ಮುಖ್ಯ ಅರ್ಚಕರಾದ ತಂತ್ರಿ, ಶೆಬಾಯಿತ್ ರವರ ಪ್ರತಿನಿಧಿ, ರಾಜ್ಯ ಸರ್ಕಾರದ ಪ್ರತಿನಿಧಿ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಸಮಿತಿಯ ಸದಸ್ಯರಾಗಿ ನೇಮಿಸಿದೆ. ದೇವಳದ ಧಾರ್ಮಿಕ ಕಾರ್ಯಕ್ರಮಗೆಳಲ್ಲವೂ ಅಲ್ಲಿನ ಸಂಪ್ರದಾಯದಂತೆ ನಡೆದು, ಮುಖ್ಯ ತಂತ್ರಿಗಳ ನಿರ್ದೇಶನದಂತೆ ನಡೆಯಬೇಕೆಂದೂ, ಮುಖ್ಯ ತಂತ್ರಿಗಳ ನೇಮಕ ಕಡ್ಡಾಯವಾಗಿ ಸಂಪ್ರದಾಯದಂತೆ ಆಗಬೇಕೆಂದೂ ನಿರ್ದೇಶನ ನೀಡಿದೆ.

ಕೇರಳದಲ್ಲಿನ ವಿದ್ಯಮಾನ ಹೀಗಾದರೆ, ಅಮೆರಿಕಾದ ನೆವಾಡ ರಾಜ್ಯದ ರಾಜ್ಯಪಾಲರು ಮಾಡಿದ ಕಾನೂನೊಂದು ಅಮೆರಿಕಾದ ಸುಪ್ರೀಂ ಕೋರ್ಟ್ ಮುಟ್ಟಿತ್ತು. ಚರ್ಚ್ ಒಂದರಲ್ಲಿ ಪ್ರಾರ್ಥನೆ ಸಲ್ಲಿಸುವಾಗ 50 ಮಂದಿಗಿಂತ ಹೆಚ್ಚು ಜನರನ್ನು ಸೇರಿಸಬಾರದು ಎಂದು ಕೊರೋನಾ ಪೀಡೆಯ ಈ ಸಮಯದಲ್ಲಿ ಕಾನೂನು ಮಾಡಲಾಗಿದೆ. ಅದನ್ನು ಪ್ರಶ್ನಿಸಿ ಚರ್ಚ್ ನವರು ಕೋರ್ಟಿಗೆ ಮೊರೆ ಹೋಗಿದ್ದಾರೆ. ನೆವಾಡ ರಾಜ್ಯದಲ್ಲಿನ ಜೂಜಾಡುವ ಕ್ಯಾಸಿನೋಗಳು ಜಗತ್ಪ್ರಸಿದ್ಧ. ಅಂತಹ ಕ್ಯಾಸಿನೋಗಳಲ್ಲಿ ಅಲ್ಲಿನ ಒಟ್ಟು ಸಾಮರ್ಥ್ಯದ ಶೇಕಡಾ 50 ರಷ್ಟು ಜನರು ಸೇರುವ ಅವಕಾಶವಿದ್ದು ಧಾರ್ಮಿಕ ಸ್ಥಳದಲ್ಲಿ ಮಾತ್ರ 50 ಜನರ ಗರಿಷ್ಠ ಮಿತಿ ಹೇರಿರುವುದು ಕಾನೂನುಬಾಹಿರ ತಾರತಮ್ಯವೆಂದು ವಾದಿಸಿ, ಆ ನಿರ್ಬಂಧದ ತಡೆ ಕೋರಲಾಗಿತ್ತು. ಕೊರೋನಾ ಸೋಂಕು ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಬಂಧ ಮಾಡಲಾಗಿದೆ ಎಂದು ಸರ್ಕಾರದ ಪರವಾಗಿ ವಾದಿಸಲಾಗಿತ್ತು. ಒಂಬತ್ತು ನ್ಯಾಯಾಧೀಶರಿರುವ ಸುಪ್ರೀಂ ಕೋರ್ಟಿನಲ್ಲಿ ಐವರು ನ್ಯಾಯಾಧೀಶರು ಸರ್ಕಾರದ ನಿಲುವನ್ನು ಒಪ್ಪಿದರು, ನಾಲ್ವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಬಹುಮತದಿಂದ ಬಂದ ತೀರ್ಪಿನಂತೆ ಆ ನಿರ್ಬಂಧಕ್ಕೆ ಯಾವುದೇ ತಡೆ ಇಲ್ಲ. ಗಮನಾರ್ಹ ಅಂಶವೇನೇಂದರೆ, ಭಾರತದ ಸಂವಿಧಾನದಲ್ಲಿಯೂ ಅಮೆರಿಕಾದ ಸಂವಿಧಾನದಲ್ಲಿರುವಂತೆ ಧಾರ್ಮಿಕ ಸ್ವಾತಂತ್ರ್ಯ ಸಾರ್ವಜನಿಕ ಆರೋಗ್ಯ ಕಾಪಾಡಲು ಮಾಡುವ ನಿರ್ಬಂಧಕ್ಕೆ ಒಳಪಟ್ಟಿದೆ. ಹಾಗಾಗಿ ಆ ನಿಬಂಧನೆಗೆ ನ್ಯಾಯಾಲಯ ತಡೆ ನೀಡಲಿಲ್ಲ. ಕ್ಯಾಲಿಫ಼ೋರ್ನಿಯಾ ರಾಜ್ಯದ ಇಂತಹದ್ದೇ ಒಂದು ಕಾನೂನಿಗೂ ಸಹಾ ತಡೆ ನೀಡಲು ನಿರಾಕರಿಸಲಾಗಿತ್ತು. ವೈಶ್ವಿಕ ಮಹಾಮಾರಿ ಕೊರೋನಾ ಸಂಕಷ್ಟದ ಈ ದಿನಗಳಲ್ಲಿ ಸೋಂಕು ತಡೆಯಲು ಸರ್ಕಾರದ ಕೈ ಬಲಪಡಿಸುವ ನಿಟ್ಟಿನಲ್ಲಿ ಈ ತೀರ್ಪು ಅನುಕರಣೀಯ.

ಅಮೆರಿಕಾದಿಂದ ಸ್ವದೇಶಕ್ಕೆ ವಾಪಸ್ಸಾದರೆ, "ಚಾರ್ ಧಾಮ್" ಎಂದೇ ಪ್ರಸಿದ್ಧವಾಗಿರುವ ಬದ್ರೀನಾಥ್,ಕೇದಾರ್ ನಾಥ್, ಗಂಗೋತ್ರಿ ಹಾಗೂ ಯಮುನೋತ್ರಿ ದೇವಸ್ಥಾನಗಳ ಆಡಳಿತವನ್ನು ಕಾನೂನು ಪ್ರಕಾರ ರಚಿಸಿರುವ ಒಂದು ಮಂಡಳಿಗೆ ವಹಿಸಲಾಗಿದೆ. ಈ ಕಾನೂನನ್ನು ಪ್ರಶ್ನಿಸಿ ಡಾ.ಸುಬ್ರಮಣ್ಯಂ ಸ್ವಾಮಿ ಮತ್ತಿತರರು ಉತ್ತರಾಖಂಡ್ ಹೈಕೋರ್ಟಿಗೆ ಮೊರೆಹೋಗಿದ್ದರು. ಉತ್ತರಾಖಂಡ್ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡು, ವೈಷ್ಣೋದೇವಿ ಮಂದಿರ, ಶಿರಡಿ ಸಾಯಿಬಾಬ ಮಂದಿರ, ಪುರಿ ಜಗನ್ನಾಥ ಮಂದಿರ ಹಾಗೂ ಸೋಮನಾಥ ಮಂದಿರಗಳ ರೀತಿಯಲ್ಲಿಯೇ ಉತ್ತರಾಖಂಡ್ ನಲ್ಲಿನ ಈ ದೇವಸ್ಥಾನಗಳ ಆಡಳಿತಕ್ಕೆ ಸಂಬಧಿಸಿದಂತೆ ಕಾನೂನು ನಿಯಂತ್ರಣ ಅವಶ್ಯವೆಂದು ವಾದಿಸಿತ್ತು. ವಿಭಾಗೀಯ ಪೀಠ ಈ ಕಾನೂನನ್ನು ಎತ್ತಿಹಿಡಿದು, ಈ ದೇವಸ್ಥಾನಗಳ ಯಾವುದೇ ಧಾರ್ಮಿಕ ಪದ್ಧತಿ, ಸಂಪ್ರದಾಯಗಳಿಗೆ ಚ್ಯುತಿಯಾಗದಂತೆ ಕೇವಲ ಧಾರ್ಮಿಕೇತರ ವಿಷಯಗಳಲ್ಲಿ ಮಾತ್ರ ಸರ್ಕಾರ ನಿಯಂತ್ರಣಕ್ಕೆ ಮುಂದಾಗಿದೆ ಎಂದು ತೀರ್ಪಿತ್ತಿದೆ. ಹಲವು ದಶಕಗಳಿಂದಲೇ ಈ ದೇವಾಲಯಗಳ ಆಡಳಿತವನ್ನು ಕೆಲವು ಸಂಸ್ಥೆ ಅಥವಾ ಸಮಿತಿಗಳು ನಡೆಸಿಕೊಂಡು ಬಂದಿವೆ. ಸಂವಿಧಾನದ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಹಾಗೂ ಧಾರ್ಮಿಕ ಪದ್ಧತಿಗಳನ್ನು ಕಾಪಾಡಿಕೊಳ್ಳುವ ಹಕ್ಕುಗಳ ಚ್ಯುತಿಯಾಗಿಲ್ಲ ಹಾಗೂ ಈ ದೇವಸ್ಥಾನಗಳು ಹಿಂದೂ ಧರ್ಮಕ್ಕೆ ಸೇರಿದ್ದೇ ಹೊರತು ಯಾವುದೇ ಧಾರ್ಮಿಕ ಪಂಗಡಕ್ಕಲ್ಲ ಎಂದು ನಿಖರವಾಗಿ ಅಭಿಪ್ರಾಯಪಟ್ಟಿದೆ. ಸ್ವಾರಸ್ಯದ ವಿಷಯವೆಂದರೆ ಡಾ.ಸುಬ್ರಮಣ್ಯಂ ಸ್ವಾಮಿಯವರು ತಮ್ಮ ವಾದದಲ್ಲಿ 1988 ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರಕರಣದಿಂದ ಬಲ ಪಡೆಯಲು ಯತ್ನಿಸಿದರು. ಮೈಸೂರು ಅರಮನೆಯ ಆಡಳಿತ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ವಹಿಸಿಕೊಳ್ಳಲು ಯತ್ನಿಸಿದಾಗ ಒಡೆಯರ್ ಅವರು ಹೈಕೋರ್ಟ್ ಮೊರೆಹೋಗಿ, ಸರ್ಕಾರದ ನಡೆಯನ್ನು ಕೋರ್ಟ್ ರದ್ದುಗೊಳಿಸಿತ್ತು. ಆದರೆ ಆ ಪ್ರಕರಣದಲ್ಲಿ ಮೈಸೂರು ರಾಜಮನೆತನದವರ ಖಾಸಗಿ ಆಸ್ತಿಯ ಬಗ್ಗೆ ತೀರ್ಪಾಗಿತ್ತು ಹಾಗಾಗಿ ಸಾರ್ವಜನಿಕ ದೇವಸ್ಥಾನಗಳ ಪ್ರಕರಣದಲ್ಲಿ ಆ ತೀರ್ಪು ಅಸಂಬದ್ಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಇಷ್ಟೆಲ್ಲದರ ತಿರುಳು ಇಷ್ಟೆ: ಧಾರ್ಮಿಕ ಸಂಸ್ಥೆಗಳ ಸರ್ಕಾರಿ ನಿಯಂತ್ರಣಕ್ಕೆ ಕಾನೂನಿನಲ್ಲಿ ಷರತ್ತುಬದ್ಧ ಅವಕಾಶವಿದೆ. ಮುಂಚಿನಿಂದಲೂ ನೆಲೆಯೂರಿರುವ ಸೂತ್ರಗಳನ್ನು ಅಳವಡಿಸಿಕೊಂಡೇ ನ್ಯಾಯಾಲಯಗಳು ಈ ವಿಷಯವಾಗಿ ತಮ್ಮ ನಿರ್ಧಾರ ತೆಗೆದುಕೊಂಡಿವೆ. ನಿಜಕ್ಕೂ ಜಯಿಸಿದ್ದು ಧರ್ಮ ಮತ್ತು ನಮ್ಮ ಸುಭದ್ರ ಕಾನೂನು ವ್ಯವಸ್ಥೆ. ಈ ತೀರ್ಪುಗಳನ್ನು ಆಯಾ ಪ್ರಕರಣಗಳಲ್ಲಿನ ವಸ್ತುಸ್ಥಿತಿಯ ದೃಷ್ಟಿಕೋನದಿಂದ ನೋಡಿ ಅರ್ಥೈಸಿಕೊಳ್ಳೋಣ. ಅನವಶ್ಯವಾಗಿ ರೆಕ್ಕೆ-ಪುಕ್ಕ ಕಟ್ಟಿ ಕಾಗೆ ಹಾರಿಸುವ ಪ್ರವೃತ್ತಿ ಬೇಡ.

(ಲೇಖಕರು ಸುಪ್ರೀಂಕೋರ್ಟ್​ನ ಅಡ್ವೊಕೇಟ್-ಆನ್-ರೆಕಾರ್ಡ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net