ಅನಂತ ಪದ್ಮನಾಭಸ್ವಾಮಿ ದೇಗುಲ ರಾಜಕುಟುಂಬದ್ದು; ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು

nation-1
Published on

ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿರುವ ಕೇರಳದ ಐತಿಹಾಸಿಕ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ತಿರುವಾಂಕೂರಿನ ರಾಜ ಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ದೇವಸ್ಥಾನದ ಆಡಳಿತ ಮತ್ತು ಸಂಪತ್ತಿನ ನಿಯಂತ್ರಣಕ್ಕೆ ಟ್ರಸ್ಟ್ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ, 2011ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸವೋನ್ನತ ನ್ಯಾಯಾಲಯ ಅಸಿಂಧುಗೊಳಿಸಿದೆ. ನ್ಯಾಯಮೂರ್ತಿ ಯು. ಯು. ಲಲಿತ್ ನೇತೃತ್ವದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ದೇವಸ್ಥಾನದ ಆಡಳಿತವನ್ನು ಸದ್ಯಕ್ಕೆ ನೋಡಿಕೊಳ್ಳಲು ಮಧ್ಯಂತರ ಕ್ರಮವಾಗಿ ತಿರುವನಂತಪುರಂ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚಿಸುವಂತೆ ಪೀಠ ನಿರ್ದೇಶಿಸಿದೆ. ಕೇರಳ ಹೈಕೋರ್ಟ್ 2011 ಜನವರಿ 31ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ರಾಜಮನೆತನದ ಪ್ರತಿನಿಧಿ ಅಲ್ಲದೆ ಇನ್ನೂ ಹಲವರು ಸಲ್ಲಿಸಿದ್ದ ಅರ್ಜಿಗಳ ಮೇಲೆ ಸುಪ್ರೀಂ ಸೋಮವಾರ ತೀರ್ಪು ನೀಡಿದೆ. ಅರ್ಜಿಗಳ ವಿಚಾರಣೆ ನಡೆಸಿದ್ದ ಸವೋನ್ನತ ನ್ಯಾಯಾಲಯ ಕಳೆದ ವರ್ಷ ಏಪ್ರಿಲ್ 10ರಂದು ತೀರ್ಪು ಕಾದಿರಿಸಿತ್ತು.

ಐತಿಹಾಸಿಕ ದೇಗುಲ: ಪದ್ಮನಾಭಸ್ವಾಮಿ ದೇವಾಲಯ ಗ್ರಾನೈಟ್ ಶಿಲೆಯಲ್ಲಿ ಮೂಡಿರುವ ವಾಸ್ತುಶಿಲ್ಪ ವೈಭವದ ಗಣಿಯಾಗಿದೆ. ತಿರುವಾಂಕೂರಿನ ರಾಜಮನೆತನ 18ನೇ ಶತಮಾನದಲ್ಲಿ ಅದನ್ನು ಪ್ರಸ್ತುತ ಸ್ವರೂಪದಲ್ಲಿ ಪುನರ್​ನಿರ್ವಣ ಮಾಡಿತ್ತು. ತಿರುವಾಂಕೂರು ರಾಜ ಕುಟುಂಬ ದಕ್ಷಿಣದ ಕೇರಳ ರಾಜ್ಯ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಆಡಳಿತ ನಡೆಸಿತ್ತು. ರಾಜ ಮನೆತನದ ಆಡಳಿತವಿದ್ದ ಸಂಸ್ಥಾನ 1947ರಲ್ಲಿ ಭಾರತ ಒಕ್ಕೂಟದೊಂದಿಗೆ ವಿಲೀನವಾಗಿತ್ತು. ಸ್ವಾತಂತ್ರ್ಯ ಬಂದ ನಂತರವೂ ದೇವಾಲಯದ ಆಡಳಿತವನ್ನು ಹಿಂದಿನ ಅರಸು ಮನೆತನದ ನಿಯಂತ್ರಣದ ಟ್ರಸ್ಟ್ ನೋಡಿಕೊಳ್ಳುತ್ತಿತ್ತು. ಪದ್ಮನಾಭ (ವಿಷ್ಣು) ಈ ಕುಟುಂಬದ ಮನೆ ದೇವರು.

ತೀರ್ಪಿನ ಮುಖ್ಯಾಂಶ

  1. ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ಮೃತಪಟ್ಟಿರುವುದರಿಂದ, ರಾಜ ಕುಟುಂಬದ ಕೊನೆಯ ಆಡಳಿತಗಾರನ ಸಹೋದರ ಮಾರ್ತಾಂಡ ವರ್ವ ಹಾಗೂ ಅವರ ಕಾನೂನಾತ್ಮಕ ಉತ್ತರಾಧಿಕಾರಿ ಅರ್ಚಕರಾಗಿ ದೇವತೆ ಹಾಗೂ ದೇವಸ್ಥಾನ ನಿರ್ವಹಣೆ ಮಾಡುವ ಹಕ್ಕಿಗೆ ಯಾವುದೇ ತೊಂದರೆಯಾಗುವುದಿಲ್ಲ.
  2. ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ಮೃತಪಟ್ಟಿರುವುದರಿಂದ ದೇವಸ್ಥಾನದ ಆಡಳಿತ ನಡೆಸುವ ಹಕ್ಕು ರಾಜ್ಯ ಸರ್ಕಾರಕ್ಕೆ ವರ್ಗಾವಣೆಗೊಳ್ಳುವುದಿಲ್ಲ.
  3. ಸಂಬಂಧಿತ ಕಾನೂನು (ಲಾ ಆಫ್ ಎಸ್ಚೀಟ್) ಈ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ ಹಾಗೂ ಮಂದಿರದ ಆಡಳಿತ ರಾಜ ಕುಟುಂಬದಲ್ಲೇ ಮುಂದುವರಿಯುತ್ತದೆ.
  4. ಒಂದು ಪೂರ್ಣ ಪ್ರಮಾಣದ ಸಮಿತಿ ರಚನೆ ಆಗುವವರೆಗೆ ಮಧ್ಯಂತರ ಸಮಿತಿ ದೇವಸ್ಥಾನದ ಆಡಳಿತ ನಿರ್ವಹಿಸಬೇಕು. ರಚನೆಯಾಗುವ ಹೊಸ ಸಮಿತಿಯಲ್ಲಿ ಎಲ್ಲ ಸದಸ್ಯರೂ ಹಿಂದುಗಳಾಗಿರತಕ್ಕದ್ದು ಎಂದು ಕೋರ್ಟ್ ಹೇಳಿದೆ.

ಅಪಾರ ನಿಗೂಢ ಸಂಪತ್ತು: ಪದ್ಮನಾಭಸ್ವಾಮಿ ದೇವಾಲಯದಲ್ಲಿ ಅಪಾರ ಸಂಪತ್ತು ಇದೆಯೆಂದು ಹೇಳಲಾಗಿದೆ. ಅದರಲ್ಲೂ ಕೊಠಡಿ ‘ಬಿ’ಯಲ್ಲಿ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಬಂಗಾರ, ವಜ್ರವೈಢೂರ್ಯದ ಒಡವೆಗಳಲ್ಲದೆ ‘ದೈವಿಕ ಶಕ್ತಿಯಿದೆ’ ಎಂಬ ಪ್ರತೀತಿಯಿದೆ. ಈ ಖಜಾನೆಯನ್ನು ಮುಂದಿನ ಆದೇಶದ ವರೆಗೆ ತೆರೆಯಬಾರದೆಂದು 2011ರ ಜುಲೈ 8ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸಂಪತ್ತಿನ ರಕ್ಷಣೆ, ಲೆಕ್ಕಪತ್ರ ತಪಾಸಣೆ ಮತ್ತು ದೇವತೆ ಮೂರ್ತಿಯ ರಿಪೇರಿ ಸಹಿತ ಹಲವು ವಿಷಯಗಳ ಕುರಿತೂ ನಿರ್ದೇಶನ ಗಳನ್ನು ನೀಡಿತ್ತು. ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲಹೆಗಾರರಾಗಿ (ಅಮಿಕಸ್ ಕ್ಯೂರಿ) ಕಾರ್ಯ ನಿರ್ವಹಿಸಿದ್ದಾರೆ. ದೈವಿಕ ಶಕ್ತಿಯಿದೆ ಎಂಬ ಕಾರಣಕ್ಕೆ ಮುಚ್ಚಲಾಗಿರುವ ಖಜಾನೆ ‘ಬಿ’ಯನ್ನು ತೆರೆಯಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು.

ಪ್ರಕರಣ ನಡೆದು ಬಂದ ಹಾದಿ: ಚಿತಿರ ತಿರುನಾಳ್ ಬಲರಾಮ ವರ್ವ ತಿರುವಾಂಕೂರು ಸಂಸ್ಥಾನದ ಕೊನೆಯ ಆಡಳಿತಗಾರರಾಗಿದ್ದರು. 1991ರಲ್ಲಿ ಅವರು ನಿಧನರಾಗಿದ್ದರು. ಅವರ ಕಿರಿಯ ಸೋದರ ಉತ್ರದಂ ತಿರುನಾಳ್ ಮಾರ್ತಾಂಡ ವರ್ವ ತಿರುವಾಂಕೂರಿನ ಆಡಳಿತಗಾರ ಎಂದು ಹೇಳಿಕೊಳ್ಳಬಹುದೇ ಎಂಬ ಕಾನೂನು ಪ್ರಶ್ನೆ ಉದ್ಭವವಾಗಿತ್ತು.

ಹಿಂದಿನ ರಾಜಸಂಸ್ಥಾನಗಳಾದ ತಿರುವಾಂಕೂರು ಮತ್ತು ಕೊಚ್ಚಿಯಲ್ಲಿನ ಎಲ್ಲ ದೇವಸ್ಥಾನಗಳ ನಿಯಂತ್ರಣ ಮತ್ತು ಆಡಳಿತ 1947ಕ್ಕೆ ಮುಂಚೆ ತಿರುವಾಂಕೂರು ಮತ್ತು ಕೊಚ್ಚಿ ದೇವಸ್ವಂ ಮಂಡಳಿಗಳ ಅಧೀನದಲ್ಲಿತ್ತು. ಆದರೆ, ರಾಜ ಸಂಸ್ಥಾನಗಳು ಮತ್ತು ಭಾರತ ಸರ್ಕಾರದ ನಡುವೆ ಆದ ವಿಲೀನ ಒಡಂಬಡಿಕೆಯನ್ವಯ 1949ರಿಂದ ಪದ್ಮನಾಭ ದೇವಾಲಯದ ಆಡಳಿತ ತಿರುವಾಂಕೂರು ಆಡಳಿತಗಾರನ ‘ವಿಶ್ವಾಸದಲ್ಲಿತ್ತು’. 1956ರಲ್ಲಿ ಕೇರಳ ರಾಜ್ಯ ರಚನೆಯಾದರೂ ದೇವಾಲಯದ ಆಡಳಿತ ಹಿಂದಿನ ರಾಜಮನೆತನದಲ್ಲೇ ಮುಂದುವರಿದಿತ್ತು. ಕೊನೆಯ ಆಡಳಿತಗಾರ ಬಲರಾಮ ವರ್ವ ತನ್ನ ಉಯಿಲಿನಲ್ಲಿ ಎಲ್ಲ ಖಾಸಗಿ ಆಸ್ತಿಗಳ ಬಗ್ಗೆ ವಿವರಿಸಿದ್ದರೂ ಪದ್ಮನಾಭ ದೇವಾಲಯದ ಕುರಿತು ಏನನ್ನೂ ನಮೂದಿಸಿರಲಿಲ್ಲ. ದೇವಸ್ಥಾನದ ಸಂಪತ್ತು ಕೌಟುಂಬಿಕ ಆಸ್ತಿ ಎಂದು 2007ರಲ್ಲಿ ಮಾರ್ತಾಂಡ ವರ್ವ ವಾದಿಸಿದ್ದರು. ಇದನ್ನು ಆಕ್ಷೇಪಿಸಿ ಕೋರ್ಟ್​ಗಳಲ್ಲಿ ಖಟ್ಲೆಗಳ ದಾಖಲು. ತಿಜೋರಿಗಳನ್ನು ತೆರೆಯದಂತೆ ಕೆಳ ನ್ಯಾಯಾಲಯವೊಂದರಿಂದ ತಡೆ ಆಜ್ಞೆ (ಇಂಜಕ್ಷನ್). ತಿಜೋರಿ ಸಂಖ್ಯೆ ‘ಬಿ’ ತೆರೆದರೆ ದೇವರ ಶಾಪ ಕಾಡುತ್ತದೆ ಎಂಬುದು ರಾಜ ಕುಟುಂಬದ ವಾದ. ಆರು ತಿಜೋರಿಗಳ ಪೈಕಿ ಐದನ್ನು ತೆರೆಯಲಾಗಿದೆ. ಆದರೆ ‘ಬಿ’ಯನ್ನು ಮಾತ್ರ ತೆರೆದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net