ಮನೋಲ್ಲಾಸ: ಕಣ್ಣಿಗೆ ಕಾಣುವ ದೇವರು

Sunrise
Published on
| ಬೇಲೂರು ರಾಮಮೂರ್ತಿ

ಗುರುಕುಲದಲ್ಲಿ ಶಿಷ್ಯನೊಬ್ಬ, ‘ಗುರುಗಳೇ ನಾವು ಭಕ್ತಿಯಿಂದ ಪೂಜಿಸಿ, ಕರೆದರೆ ಭಗವಂತ ಆಪತ್ಕಾಲದಲ್ಲಿ ನಮಗೆ ನೆರವಾವವನೇ’ ಅಂತ ಕೇಳಿದ. ಅದಕ್ಕೆ ಗುರುಗಳು, ‘ಖಂಡಿತಾ ಬರ್ತ್ತಾನೆ. ಆದರೆ, ನೀವು ಅವನನ್ನು ಗುರುತಿಸಲು ಸಮರ್ಥರಿರಬೇಕು, ಉದಾಹರಣೆಗೆ ಭಕ್ತನೊಬ್ಬನ ಕಥೆ ಕೇಳಿ’ ಎಂದು ಪ್ರಾರಂಭಿಸಿದರು. ಪರಮಭಕ್ತನೊಬ್ಬ ಪ್ರತಿದಿನ ಬಹಳ ಭಕ್ತಿಯಿಂದ ಭಗವಂತನನ್ನು ಆರಾಧಿಸುತ್ತಾ, ‘ನಾನು ಕರೆದಾಗ ನೀನು ಬರಬೇಕು’ ಅಂತ ಬೇಡಿದ. ಅವನ ಕನಸಿನಲ್ಲಿ ಭಗವಂತ ಕಾಣಿಸಿಕೊಂಡು, ‘ನಿನಗೆ ನನ್ನ ಅಗತ್ಯ ಬಿದ್ದಾಗ ಕೂಗು ಬರ್ತೀನಿ’ ಎಂದ. ಕಾಲಾನಂತರದಲ್ಲಿ ಅವನ ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರು ಲಪಟಾಯಿಸಲು ದಾವೆ ಹೂಡಿದ್ದರು.

ಆಗ ಭಗವಂತನ ನೆನಪಾಗಿ ದೇವರ ಮನೆಗೆ ಹೋಗಿ ಧ್ಯಾನ ಮಾಡಿ ಭಗವಂತನನ್ನು ಕೂಗಿದ. ಆದರೆ, ಎಷ್ಟು ಕಾದರೂ ಭಗವಂತ ಬಾರದಿದ್ದಾಗ ಅವನಿಗೆ ಬೇಸರವಾಯಿತು. ಸಂಜೆಗೆ ವಕೀಲರೊಬ್ಬರು ಬಂದು, ‘ನಾನು ನಿಮ್ಮ ತಂದೆಯ ಸ್ನೇಹಿತ. ನಿಮ್ಮ ಮನೆಯ ವಿಚಾರ ನನಗೆ ತಿಳಿದಿದೆ. ದಾಖಲೆಗಳನ್ನು ಕೊಡಿ. ನಾನು ನಿಮಗೆ ಸಹಾಯ ಮಾಡ್ತೀನಿ’ ಅಂದರು. ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇವನ ಪರವಾಗಿ ತೀರ್ಪು ಕೊಟ್ಟರು. ಆತ ವಕೀಲರಿಗೆ ವಂದಿಸಿ. ಅವರ ಶುಲ್ಕ ಕೊಟ್ಟು ಸಂತೋಷದಿಂದ ಮನೆಗೆ ಬಂದ.

ಭಗವಂತನ ಮೇಲೆ ಮುನಿಸಿಕೊಂಡು ಮಲಗಿದಾಗ ಕನಸಿನಲ್ಲಿ ಭಗವಂತ ಕಾಣಿಸಿಕೊಂಡ, ತಕ್ಷಣ ಇವನು ‘ನೀನು ಸುಳ್ಳು ದೇವರು. ಅವಶ್ಯಕತೆ ಇದ್ದಾಗ ಕೂಗು ಬರ್ತೀನಿ ಎಂದಿದ್ದವನು ನಾನು ಎಷ್ಟು ಕರೆದರೂ ನೀನು ಬರಲಿಲ್ಲ’ ಎಂದ. ಅದಕ್ಕೆ ಭಗವಂತ ನಕ್ಕು, ‘ನಾನು ಬಂದಿದ್ದೆ. ಆದರೆ, ನೀನೇ ನನ್ನನ್ನು ಗುರುತು ಹಿಡಿಯಲಿಲ್ಲ’ ಅಂದ. ‘ನಿನ್ನನ್ನು ಗುರುತು ಹಿಡಿಯದಿರುವುದು ಹೇಗೆ ಸಾಧ್ಯ’ ಅಂತ ಇವನು ಕೇಳಿದಾಗ ಭಗವಂತ, ‘ನಾನು ಬಂದಿದ್ದೆ, ವಕೀಲರ ರೂಪದಲ್ಲಿದ್ದೆ. ಅವರ ಮನದೊಳಗೆ ಹೋಗಿ ನಿನ್ನ ಪರವಾಗಿ ಮಾತಾಡಿದೆ. ಭಗವಂತ ಎಂದಾಕ್ಷಣ ನಾಲ್ಕು ಕೈಗಳಲ್ಲಿ್ಲ ಶಂಖ, ಗದೆ, ಚಕ, ಪದ್ಮ ಕಿರೀಟ, ಕೊರಳಲ್ಲಿ ಹಾರಗಳನ್ನು ನಿರೀಕ್ಷೆ ಮಾಡಬೇಡ. ನಾನು ಹೇಗೆ ಬರುತ್ತೀನಿ ಎಂದು ನನಗೇ ಗೊತ್ತಿರುವುದಿಲ್ಲ. ನಿನಗೆ ಆಪತ್ತಿಗೆ ಆಗುವವರ, ನಿನ್ನ ಸಂಕಟದಲ್ಲಿ ತಂಪನೆರೆಯುವವರ, ನಿನ್ನನ್ನು ಕಷ್ಟದಿಂದ ಪಾರು ಮಾಡುವವರಲ್ಲಿ ನಾನಿರುತ್ತೇನೆ. ಅಂಥವರಲ್ಲಿ ನೀನು ನನ್ನನ್ನು ಕಾಣುವುದನ್ನು ಅಭ್ಯಾಸ ಮಾಡಿಕೋ’ ಎಂದ. ಎಚ್ಚರವಾದ ವ್ಯಕ್ತಿಯು ಭಗವಂತ ತನ್ನ ಕಣ್ಣು ತೆರೆಸಿದ ಎಂದುಕೊಂಡ.

ಹಸಿದ ನಿಮ್ಮ ಹೊಟ್ಟೆಗೆ ಪ್ರೀತಿಯಿಂದ ಊಟ ಬಡಿಸುವ ನಿಮ್ಮಮ್ಮನೇ ದೇವರು. ಕಷ್ಟದಲ್ಲಿ ನಿಮಗೆ ನೆರವಾಗುವ ನಿಮ್ಮ ಹಿರಿಯರು, ಸ್ನೇಹಿತರು, ನೆಂಟರುಗಳೇ ದೇವರು. ನಿಮಗೆ ವಿದ್ಯೆ ಕಲಿಸಿ ಬದುಕಿಗೆ ದಾರಿ ಮಾಡಿಕೊಟ್ಟ ಗುರುಗಳೇ ದೇವರು. ಹೀಗಿರುವಾಗ ಆ ಭಗವಂತನನ್ನು ಒಂದೇ ರೂಪದಿಂದ ಬಾ ಎಂದು ಕರೆಯುವುದು ತಪ್ಪು ಎಂದು ಗುರುಗಳು ಅಂದಿನ ಪಾಠವನ್ನು ಮುಗಿಸಿದರು.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net