

ಕ್ರೀಡೆ ಎಲ್ಲರಿಗೂ ಖುಷಿಕೊಡುವ ಕುಶಲತೆಯಿಂದ ಕೂಡಿದ ಚಟುವಟಿಕೆ. ಕ್ರೀಡೆಗೆ ಜೀವನವನ್ನು ಬದಲಾಯಿಸುವ ಶಕ್ತಿ ಇದೆ. ಮಹಿಳೆಯರು ಮತ್ತು ಹುಡುಗಿಯರಿಗೆ ಸ್ವಾವಲಂಬನೆ, ಸ್ಥಿತಿಸ್ಥಾಪಕತ್ವ ಮತ್ತು ಆತ್ಮವಿಶ್ವಾಸವನ್ನು ಕಲಿಸುವ ಮೂಲಕ ಲಿಂಗ ಸಮಾನತೆ ತರುವ ಸಾಮರ್ಥ್ಯ ಕ್ರೀಡೆಗಿದೆ. ದೈಹಿಕ ಶಿಕ್ಷಣ, ಕ್ರೀಡೆ ಮತ್ತು ಯೋಗವನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಸಂಯೋಜಿಸಲಾಗಿದ್ದು, ಕ್ರೀಡೆಯನ್ನು ಪಠ್ಯಕ್ರಮದ ಭಾಗವಾಗಿ ಕಡ್ಡಾಯಗೊಳಿಸಲಾಗಿದೆ. ಉನ್ನತ ಶಿಕ್ಷಣದಲ್ಲೂ ಕ್ರೀಡೆಯನ್ನು ಪೋ›ತ್ಸಾಹಿಸಲು ಆದೇಶವಿದೆ.
ಶತಮಾನಗಳಿಂದ ಕ್ರೀಡೆ ಪುರುಷರ ಆಸ್ತಿ ಎಂಬಂತೆ ನಡೆದುಕೊಂಡು ಬಂದಿತ್ತು. ಕಾಲಕ್ರಮೇಣ ಮಹಿಳೆಯರು ಕ್ರೀಡೆಯಲ್ಲೂ ಭಾಗವಹಿಸಿ ಸಾಮರ್ಥ್ಯ ಸಾಬೀತುಪಡಿಸಿದರು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಅಸ್ತಿತ್ವ ಕಂಡುಕೊಂಡಿರುವುದು ಮಹಿಳಾ ಬಳಗಕ್ಕೆ ಖುಷಿ ತರುವ ವಿಚಾರವೆಂದೇ ಹೇಳಬಹುದು. ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವ ವೀಡಿಯೊಗಳನ್ನು ನಾವು ಆಗಾಗ್ಗೆ ನೋಡುತ್ತೇವೆ. ಹೆಣ್ಣು ಮಕ್ಕಳ ಬಗ್ಗೆ ದೈನಂದಿನ ಜೀವನದಲ್ಲಿ ಇರುವ ಪಕ್ಷಪಾತವು ಹೊರಾಂಗಣ ಆಟದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆ ಕಡಿಮೆಯಾಗಲು ಒಂದು ಕಾರಣ.
ನವರತ್ನಗಳು: ಕರ್ನಾಟಕವು ಕ್ರೀಡಾಲೋಕಕ್ಕೆ ಹಲವಾರು ಮಹಿಳಾ ಪ್ರತಿಭೆಗಳನ್ನು ನೀಡಿದೆ. ರಾಷ್ಟ್ರ ಹಾಗೂ ಅಂತಾರಾಷ್ಟೀಯ ಮಟ್ಟದಲ್ಲಿ ಕರ್ನಾಟಕದ ಮಹಿಳಾ ಕ್ರೀಡಾಪಟುಗಳು ಹಲವು ಸಾಧನೆಗಳನ್ನು ಮಾಡಿದ್ದಾರೆ.
ಮಾಲತಿ ಹೊಳ್ಳ ಕ್ರೀಡಾಪಟುಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ಮಾದರಿ. ಮಗುವಾಗಿದ್ದಾಗಲೇ ಪೋಲಿಯೋ ಕಾಯಿಲೆಗೆ ತುತ್ತಾಗಿ ಸೊಂಟದ ಕೆಳಗೆ ದೇಹದ ಶಕ್ತಿಯನ್ನು ಕಳೆದುಕೊಂಡು ಗಾಲಿ ಕುರ್ಚಿಯಲ್ಲಿ ಕುಳಿತು ಪ್ರಪಂಚದ ದೃಷ್ಟಿಯನ್ನು ತನ್ನತ್ತ ತಿರುಗಿಸಿಕೊಂಡ ದಿಟ್ಟ ಕ್ರೀಡಾಪಟು!. ‘ನಾನು ಅಂಗವಿಕಲ ವ್ಯಕ್ತಿ ಎಂದು ಭಾವಿಸುವುದಿಲ್ಲ. ಸಹಜವಾಗಿ, ದೈಹಿಕವಾಗಿ ಅಂಗವಿಕಲಳಾಗಿದ್ದೇನೆ. ಆದರೆ, ಅದು ನನ್ನ ದೇಹದ ಒಂದು ಭಾಗ ಮಾತ್ರ. ಇದ್ಯಾವುದೂ ಆತ್ಮಸ್ಥೈರ್ಯವನ್ನು ಕುಂಠಿತಗೊಳಿಸಿಲ್ಲ’ ಎಂದು ಅವರು ಹೇಳುತ್ತಾರೆ. ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸುಮಾರು 389 ಚಿನ್ನ, 27 ಬೆಳ್ಳಿ ಮತ್ತು 5 ಕಂಚುಗಳನ್ನು ಮುಡಿಗೇರಿಸಿಕೊಂಡ ಅವರ ಸಾಧನೆಯನ್ನು ಓದಿದಾಗ ಮೈನವಿರೇಳುತ್ತದೆ.
ಕಬಡ್ಡಿ ಪುರುಷರ ಆಟವೆಂದೇ ಪ್ರಸಿದ್ಧವಾಗಿತ್ತು. ಈ ಪೂರ್ವಭಾವಿ ಕಲ್ಪನೆಯನ್ನು ಸುಳ್ಳುಮಾಡಿದ ಹೆಮ್ಮೆ ಕರ್ನಾಟಕದ ತೇಜಸ್ವಿಬಾಯಿ, ಉಷಾರಾಣಿ, ಮಮತಾ ಪೂಜಾರಿ ಮುಂತಾದವರಿಗೆ ಸಲ್ಲುತ್ತದೆ. ಬಡತನವಾಗಲೀ, ಹಳ್ಳಿಯ ಜೀವನವಾಗಲಿ ಇವರ ಸಾಧನೆಗೆ ತೊಡಕಾಗಲಿಲ್ಲ. ಅಂತೆಯೇ ಅಶ್ವಿನಿ ನಾಚಪ್ಪ, ಅಶ್ವಿನಿ ಅಕ್ಕುಂಜಿ, ರೀತ್ ಅಬ್ರಾಹಾಂ ಅಥ್ಲೆಟಿಕ್ಸ್ನಲ್ಲಿ ಸಾಧನೆಗೈದರೆ, ನಿಶಾ ಮಿಲ್ಲೆಟ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಯಶಸ್ವಿ ಭಾರತೀಯ ಈಜುಗಾರರಲ್ಲಿ ಒಬ್ಬರಾಗಿದ್ದಾರೆ. ಅಶ್ವಿನಿ ಪೊನ್ನಪ್ಪ ಬ್ಯಾಡ್ಮಿಂಟನ್ನಲ್ಲಿ ಸಾಧನೆಗೈದು ಚಿನ್ನದ ಬೇಟೆಯಾಡಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡಲು ಬೇಕಾಗಿರುವುದು ಆತ್ಮವಿಶ್ವಾಸ ಮತ್ತು ಶಿಸ್ತು.
ಸರ್ಕಾರದಲ್ಲಿದೆ ಸೌಲಭ್ಯಗಳ ಗಣಿ: ಸರ್ಕಾರ ಕೂಡಾ ಕ್ರೀಡಾಪಟುಗಳನ್ನು ಉತ್ತೇಜಿಸಲು ಶಾಲಾ-ಕಾಲೇಜು, ವಲಯ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕ್ರೀಡಾಕೂಟಗಳನ್ನುಆಯೋಜಿಸುತ್ತದೆ. ಹೆಚ್ಚು ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಕ್ರೀಡೆಯಲ್ಲಿ ಆಸಕ್ತಿ ತೋರಬೇಕಾಗಿದೆ. ಅದಕ್ಕಾಗಿ ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳಿರುವುದು ಎಷ್ಟೋ ಮಂದಿಗೆ ಅರಿವಿಲ್ಲ. ಕರ್ನಾಟಕದಲ್ಲಿ ಒಟ್ಟು 34 ಕ್ರೀಡಾ ವಸತಿ ಶಾಲೆ/ನಿಲಯಗಳಿವೆ. ಇಲ್ಲಿ ಕ್ರೀಡಾಪಟುಗಳಿಗೆ ತರಬೇತಿಯಲ್ಲದೆ, ಪೌಷ್ಟಿಕ ಆಹಾರವನ್ನೂ ನೀಡಲಾಗುತ್ತಿದೆ.
ಅಂತಾರಾಷ್ಟೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ/ಪಂಗಡದ ಕ್ರೀಡಾಪಟುಗಳಿಗೆ ಪೋ›ತ್ಸಾಹಧನ ನೀಡಲಾಗುತ್ತದೆ. ಮಾತ್ರವಲ್ಲ ಸಾಮಾನ್ಯ ವರ್ಗದವರಿಗೂ ಪೋ›ತ್ಸಾಹಧನ ನೀಡಲಾಗುತ್ತದೆ. ತರಬೇತಿ ಪಡೆಯುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಊಟೋಪಚಾರ, ಕ್ರೀಡೋಪಕರಣ ಹೀಗೆ ಹಲವು ಸೌಲಭ್ಯಗಳಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2022-23ರಲ್ಲಿ ಕ್ರೀಡಾಳುಗಳಿಗೆ 23 ಕೋಟಿ ರೂ. ನೇರ ಬ್ಯಾಂಕ್ ವರ್ಗಾವಣೆ ಮಾಡಿದೆ.
ಕ್ರೀಡಾಸಾಧಕರನ್ನು ಗುರುತಿಸಿ ಸರ್ಕಾರ ಪ್ರಶಸ್ತಿಗಳನ್ನು ನೀಡುತ್ತದೆ. 1992 ರಿಂದ 2019ರ ವರೆಗೆ 452 ಮಂದಿಗೆ ಏಕಲವ್ಯ ಪ್ರಶಸ್ತಿ ನೀಡಲಾಗಿದೆ. 2009ರಿಂದ 2019 ರ ವರೆಗೆ 30 ಕ್ರೀಡಾಪಟುಗಳಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಕರ್ನಾಟಕ ಸರ್ಕಾರವು ಕರ್ನಾಟಕ ಕ್ರೀಡಾ ರತ್ನ, ದ್ರೋಣಾಚಾರ್ಯ ಹೀಗೆ ಹಲವು ಪ್ರಶಸ್ತಿಗಳನ್ನು ನೀಡುತ್ತದೆ. ಅಧಿಕೃತವಾಗಿ ನೋಂದಾಯಿತ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂ.ವರೆಗೆ ಪೋ›ತ್ಸಾಹಧನ ನೀಡಲಾಗುವುದೆಂದು ಸರ್ಕಾರವು 2023-24 ರ ಬಜೆಟ್ನಲ್ಲಿ ಘೊಷಣೆ ಮಾಡಿದೆ. ಅಲ್ಲದೆ, ಖೋ-ಖೋ, ಕುಸ್ತಿ, ಕಬಡ್ಡಿ, ಕಂಬಳ, ಮಕ್ಕಳಿಗೆ ಎತ್ತಿನ ಗಾಡಿ ಓಟ ಇತ್ಯಾದಿ ಕ್ರೀಡೆಗಳನ್ನು ಪೋ›ತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾ ಕೋರ್ಟ್ಗಳನ್ನು ರಚಿಸುವ ಭರವಸೆ ನೀಡಿದೆ.
ಸಾಮಾನ್ಯವಾಗಿ ಗ್ರಾಮ ಮಟ್ಟದಲ್ಲಿ ಯುವಕ ಸಂಘಗಳು ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಪಂದ್ಯ ನಡೆಸುತ್ತವೆ. ಈ ರೀತಿಯಾಗಿ ಮಹಿಳೆಯರ ಕ್ರೀಡೆಗಳಿಗೆಂದೇ ಒಂದು ವೇದಿಕೆ ಸೃಷ್ಟಿಯಾಗಬೇಕಾಗಿದೆ. ಮಹಿಳಾ ಸಂಸ್ಥೆಗಳು, ಒಕ್ಕೂಟಗಳು ಸಾಂಸ್ಕೃತಿಕ, ಧಾರ್ವಿುಕ ಕಾರ್ಯಕ್ರಮಗಳಿಗೆ ಮೀಸಲಾಗಿರದೆ, ಕ್ರೀಡೆಗಳನ್ನು ಜನಪ್ರಿಯಗೊಳಿಸುವ ಕಾರ್ಯವನ್ನೂ ಮಾಡಬೇಕಾಗಿದೆ. ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಒಲಿಂಪಿಕ್ಸ್, ಕಾಮನ್ವೆಲ್ತ್ ಇತ್ಯಾದಿ ಕೂಟದಲ್ಲಿ ಭಾಗವಹಿಸುವ ಕನಸನ್ನು ಬಿತ್ತಿ ನೀವೂ ಕನಸು ಕಂಡಾಗ, ಅದು ಸಾಕಾರಗೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.
ಕ್ರೀಡೆ ಕೇವಲ ಆಟವಲ್ಲ: ಕ್ರೀಡೆಯಿಂದ ಹಲವು ಲಾಭಗಳಿವೆ. ಕ್ರೀಡೆಯಿಂದ ನಾಯಕತ್ವ ಬೆಳೆಯುತ್ತದೆ. ಶಿಸ್ತು ಕ್ರೀಡಾಪಟುವಿನ ಜೀವನದ ಭಾಗವಾಗುತ್ತದೆ. ಗೆಲ್ಲಬೇಕೆಂಬ ಹೋರಾಟ ಕ್ರೀಡೆಯಿಂದ ಬರುತ್ತದೆ. ಇದು, ಜೀವನದ ಹೋರಾಟದಲ್ಲಿ ಕೂಡಾ ಗೆಲ್ಲಲು ಸಹಾಯ ಮಾಡುತ್ತದೆ. ಮಾನಸಿಕ ದೃಢತೆ ಬೆಳೆಸುತ್ತದೆ. ಹೊರಾಂಗಣ ಕ್ರೀಡೆಗಳಿಂದ ಕೈ-ಕಣ್ಣಿನ ಸಮನ್ವಯ ಸುಧಾರಿಸುತ್ತದೆ. ಸಮಯಪ್ರಜ್ಞೆ ಕ್ರೀಡಾಪಟುವಿನ ಜೀವನದ ಅವಿಭಾಜ್ಯ ಅಂಗವಾಗುತ್ತದೆ. ಅಲ್ಲದೆ, ಗುಂಪಿನಲ್ಲಿ ಕಾರ್ಯನಿರ್ವಹಿಸಲು ಸಾಧ್ಯ ಮಾಡಿಕೊಡುತ್ತದೆ ಮಾತ್ರವಲ್ಲ. ಉದ್ಯೋಗ, ಪ್ರಸಿದ್ಧಿ ಮತ್ತು ಹಣವನ್ನೂ ತಂದುಕೊಡುತ್ತದೆ. ಇಷ್ಟೆಲ್ಲ ಪ್ರಯೋಜನವಿರುವ ಕ್ರೀಡೆಯನ್ನು ಅಲಕ್ಷ್ಯ ಮಾಡುವುದಾದರೂ ಹೇಗೆ? ಬನ್ನಿ! ನಮ್ಮ ಹೆಣ್ಣು ಮಕ್ಕಳನ್ನು ಕ್ರೀಡಾಪಟುಗಳನ್ನಾಗಿಸುವ ಪಣವನ್ನು ಇಂದೇ ತೊಡೋಣ. ಗ್ರಾಮ ಗ್ರಾಮದಲ್ಲೂ ಒಬ್ಬ ಒಲಿಂಪಿಕ್ ತಾರೆ ಹುಟ್ಟಿಕೊಳ್ಳುವುದಕ್ಕೆ ನಮ್ಮ ಮನೆಮಗಳನ್ನು ತಯಾರು ಮಾಡೋಣ.
ಇಂದು-ನಾಳೆ ಮಹಿಳಾ ಕ್ರೀಡಾ ಹಬ್ಬ: ಈ ಬಾರಿ ಮಹಿಳಾ ದಿನಾಚರಣೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಶೇಷ ರೀತಿಯಲ್ಲಿ ಆಚರಿಸುತ್ತಿದೆ. ಮಾರ್ಚ್ 11 ಮತ್ತು 12ರಂದು ಬೆಂಗಳೂರಿನಲ್ಲಿ ಮಹಿಳಾ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದೆ. ಕ್ರೀಡಾಸಾಧಕ ಮಹಿಳೆಯರು ಅತಿಥಿಗಳಾಗಿ ಭಾಗವಹಿಸಿ ಮಹಿಳಾ ಸ್ಪರ್ಧಾರ್ಥಿಗಳನ್ನು ಹುರಿದುಂಬಿಸಲಿದ್ದಾರೆ. ‘ಫಿಟ್ ವುಮನ್ ಫಿಟ್ ಕರ್ನಾಟಕ’ ಎಂಬ ಘೊಷವಾಕ್ಯದ ಈ ಹಬ್ಬ ಎಲ್ಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ. ಅಧಿಕೃತ ಕ್ರೀಡೆಗಳಷ್ಟೇ ಅಲ್ಲದೆ, ಸಾಂಪ್ರಾದಾಯಿಕ ಕ್ರೀಡೆಗಳಿಗೆ ಕೂಡಾ ಪ್ರಾಶಸ್ತ್ಯೕಡಲಾಗಿದೆ. ಹಾಗಾಗಿ, ಇಲ್ಲಿಂದಲೇ ಶುರುವಾಗಲಿ ಮಹಿಳಾ ಕ್ರೀಡಾ ಹಬ್ಬ. ಮನೆಮನಗಳಲಿ ಬೆಳಗಲಿ ಈ ಮಹಿಳಾ ಕ್ರೀಡಾ ಹಬ್ಬ. ಪ್ರತಿ ಮನೆ ಮಗಳಾಗಲಿ ಒಲಿಂಪಿಕ್ಸ್ ತಾರೆ!
(ಲೇಖಕರು ಕರ್ನಾಟಕ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ)