

ಐತಿಹಾಸಿಕ ತಾಣವಾದ ಹಂಪಿಯಿಂದ ಉತ್ತರಕ್ಕೆ ಇಪ್ಪತ್ತು ಮೈಲು ದೂರದಲ್ಲಿ ಪೌರಾಣಿಕ ಹಿನ್ನೆಲೆಯ ಕನಕಗಿರಿ ಪುಣ್ಯಕ್ಷೇತ್ರವಿದೆ. ಇದು ಐತಿಹಾಸಿಕ ಮಹತ್ವದ ವಿಶಿಷ್ಟ ಸ್ಮಾರಕಗಳ ಬೀಡೂ ಹೌದು. ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ಇಲ್ಲಿಯ ಆರಾಧ್ಯದೈವ ಹಾಗೂ ಅಧಿಪತಿ ಕೂಡ. ಸ್ಕಂದಪುರಾಣದ ತುಂಗಾಮಹಾತ್ಮೆಯಲ್ಲಿ ಸುವರ್ಣಗಿರಿ ಅಂದರೆ ಕನಕಗಿರಿಯ ಮಹಾತ್ಮೆಯನ್ನು, ದೇವರ ಚರಿತ್ರೆಯನ್ನು ಹೊಗಳಿದ್ದು, ತಿಳಿದುಬರುತ್ತದೆ. ತಿರುಪತಿ ತಿಮ್ಮಪ್ಪನಿಗೂ ಕನಕಗಿರಿಯಲ್ಲಿರುವ ಶ್ರೀ ಕನಕಾಚಲಪತಿ ಲಕ್ಷ್ಮೀನರಸಿಂಹ ದೇವರಿಗೂ ಬಿಡದ ನಂಟು. ಎರಡನೇ ತಿರುಪತಿ ಎಂಬ ಪ್ರಸಿದ್ಧಿಯನ್ನೂ ಪಡೆದಿರುವ ಕನಕಗಿರಿಯಲ್ಲಿನ ಸಂಪ್ರದಾಯ ಹಾಗೂ ಧಾರ್ವಿುಕ ವಿಧಾನಗಳಲ್ಲಿ ತಿರುಮಲದ ಸಾಮೀಪ್ಯ ಹೊಂದಿದೆ.
ಕೊಪ್ಪಳ ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಕನಕಗಿರಿಯಲ್ಲಿ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ಸಾಲಿಗ್ರಾಮ ರೂಪದಲ್ಲಿ ನೆಲೆಸಿದ್ದು, ಭವ್ಯ ದೇಗುಲವಿದೆ. ಅಲ್ಲದೆ, ನೆಲಮಟ್ಟದಲ್ಲಿ ಅದ್ಭುತ ಕುಸುರಿ ಕಲೆಯನ್ನೊಳಗೊಂಡ ವಿಶಾಲ ವೆಂಕಟಾಪತಿ ಬಾವಿ, ಪುಷ್ಕರಿಣಿಗಳು, ರಾಜಬೀದಿಯ ಎಡಬದಿಯಲ್ಲಿ ನೀಲಕಂಠೇಶ್ವರ, ನಂದಿ, ವಿರೂಪಾಕ್ಷೇಶ್ವರ, ವೀರಭದ್ರೇಶ್ವರ, ಗಜಲಕ್ಷ್ಮಿ, ಬಸವಣ್ಣ, ಎಲ್ಲಮ್ಮ, ಎದುರು ಹನುಮಪ್ಪ ದೇಗುಲಗಳು ಪುಣ್ಯಕ್ಷೇತ್ರಕ್ಕೆ ಸಾಕ್ಷಿಯಾಗಿವೆ.
ಇಲ್ಲಿ ವಿಜಯನಗರ ಕಾಲಕ್ಕಿಂತ ಪೂರ್ವದಲ್ಲಿ ಕನಕಮುನಿ ಎಂಬ ಬೌದ್ಧ ಸಂನ್ಯಾಸಿಯೊಬ್ಬರು ತಪಸ್ಸು ಮಾಡಿ ಚಿನ್ನದ ಮಳೆಯನ್ನು ತರಿಸಿದ್ದರಂತೆ. ಇದರಿಂದಾಗಿ ಈ ಸ್ಥಳಕ್ಕೆ ಸುವರ್ಣಗಿರಿ, ಕನಕಗಿರಿ ಎಂಬ ಹೆಸರು ಬಂದಿದ್ದಾಗಿ ಪುರಾಣಗಳಿಂದ ತಿಳಿದುಬರುತ್ತದೆ. ಸ್ಕಂದಪುರಾಣದ ತುಂಗಾಮಹಾತ್ಮೆಯಲ್ಲಿ ಸುವರ್ಣಗಿರಿಯ ಹಾಗೂ ಇಲ್ಲಿನ ದೇವರ ಮಹಾತ್ಮೆಯನ್ನು ಸ್ತುತಿಸಲಾಗಿದೆ.
ಹಂಪಿಯ ಜತೆಗಿನ ಸಂಬಂಧ: ಪುರಾಣ ಹಾಗೂ ಇತಿಹಾಸದಲ್ಲಿ ಹಂಪಿಗೂ ಕನಕಗಿರಿಗೂ ಅವಿನಾಭಾವ ಸಂಬಂಧ. ವಿಜಯನಗರ ಅರಸರ ಆಡಳಿತಾವಧಿಯಲ್ಲಿ ಸಾಮಂತರು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಒಂದು ಗೋಪುರ ಕಟ್ಟಿಸಿಕೊಟ್ಟ ಉಲ್ಲೇಖವಿದೆ. ಹಂಪಿಯಲ್ಲಿ ಇಂದಿಗೂ ‘ಕನಕಗಿರಿ ಗೋಪುರ’ವನ್ನು ನೋಡಬಹುದಾಗಿದೆ.
ಕನಕಗಿರಿಯ ಸಂಪ್ರದಾಯಗಳು: ಪ್ರತಿವರ್ಷ ಪಾಲ್ಗುಣ ಮಾಸದಲ್ಲಿ ಇಲ್ಲಿ ಜಾತ್ರೋತ್ಸವ ಜರುಗುತ್ತದೆ. ತಿರುಪತಿಯಂತೆ ಇಲ್ಲಿಯೂ ರಥೋತ್ಸವಕ್ಕೆ ಮುನ್ನ ಒಂಬತ್ತು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಎರಡು ಅವಧಿಯಲ್ಲಿ ರಾಜಬೀದಿಯಲ್ಲಿ ವಿವಿಧ ಮೆರವಣಿಗೆ ನಡೆಯುತ್ತದೆ. ಹಂಸಾರೋಹಣ, ಸಿಂಹಾರೋಹಣ, ಹನುಮೋತ್ಸವ, ಶೇಷೋತ್ಸವ, ಗರುಡೋತ್ಸವ (ಕಲ್ಯಾಣೋತ್ಸವ) ನೋಡುವಂತಿರುತ್ತದೆ.
ಬ್ರಾಹ್ಮಿಮುಹೂರ್ತದಲ್ಲಿ ನಡೆಯುವ ಗರುಡೋತ್ಸವ ಪ್ರಮುಖವಾದುದು. ದೇವಸ್ಥಾನದ ಎದುರು ಹನುಮಪ್ಪನ ಗುಡಿಯವರೆಗೆ ಬಂದು ತೆರಳುವ ನೀಲಿ ವಿಶಾಲ ಪಟದಡಿ ಮೂರೂವರೆ ಅಡಿ ಎತ್ತರದ ಪಂಚಲೋಹಗಳ ಶ್ರೀದೇವಿ, ಭೂದೇವಿ ಹಾಗೂ ವೆಂಕಟರಮಣ ಮೂರ್ತಿಗಳು ಗರುಡ ವಿಗ್ರಹನ್ನೇರಿದ ರೀತಿಯಲ್ಲಿ ಪ್ರತಿಷ್ಠಾಪಿಸಲಾಗಿರುತ್ತದೆ. ಇದರ ಮುಂದೆ ಸಾವಿರಾರು ಭಕ್ತರು ದೀವಟಿಗೆಯಲ್ಲಿ ಕರ್ಪರ ಸುಡುತ್ತ ಕನಕಾಚಲಪತಿ ಗೋವಿಂದಾ ಎಂಬ ಘೊಷಣೆಯೊಂದಿಗೆ ಬರುವ ದೃಶ್ಯ ಕಣ್ಮುಂಬಿಕೊಳ್ಳುವಂತಿರುತ್ತದೆ.
ಎತ್ತರದ ರಥ: ಜಾತ್ರೆಯ ಅಂಗವಾಗಿ ಇಲ್ಲಿನ ಗೊಲ್ಲ ಸಮುದಾಯ ಹಳದಿ ವಸ್ತ್ರದಲ್ಲಿದ್ದು, ಧಾರ್ವಿುಕ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಾರೆ. ಹನುಮೋತ್ಸವ, ಗರುಡೋತ್ಸವ ಹಾಗೂ ರಥೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸುವ ಈ ಸಮುದಾಯದವರು ರಥವನ್ನು ಮೂಲಸ್ಥಾನಕ್ಕೆ ತಲುಪಿಸುವವರೆಗೂ ಉಪವಾಸ ವ್ರತದಲ್ಲಿರುತ್ತಾರೆ. ಇಲ್ಲಿನ ರಥ ಹನ್ನೆರಡು ಅಡಿಗಳ ಆರು ಗಾಲಿಗಳನ್ನೊಳಗೊಂಡಿದೆ. ಈ ಬಾರಿ ಕಟ್ಟಿಗೆಯ ಹೊಸ ಗಾಲಿಗಳನ್ನು ಅಳವಡಿಸಿ ಬ್ರೇಕ್ ಸಿಸ್ಟಂ ಅಳವಡಿಸಲಾಗಿದೆ.
ಶ್ರೀ ಕನಕಾಚಲಪತಿ ಲಕ್ಷ್ಮೀನರಸಿಂಹ ಜಾತ್ರೆಯ ದಿನದಂದು ತಿರುಪತಿಯಲ್ಲಿ ಶ್ರೀ ವೆಂಕರಮಣ ಮೂರ್ತಿಗೆ ವಿಶೇಷ ಪೂಜೆಗಳಿರುವುದಿಲ್ಲ. ಅಂದು ಶ್ರೀ ವೆಂಕರಮಣದೇವರು ಕನಕಗಿರಿಯಲ್ಲಿ ಕನಕಾಚಲಪತಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆಂಬುದು ಇದಕ್ಕೆ ಕಾರಣ ಎನ್ನಲಾಗುತ್ತದೆ. ಅಲ್ಲದೆ ಕನಕಗಿರಿ ಸೇರಿದಂತೆ ಬೇರೆಡೆ ಇರುವ ಕನಕಾಚಲ ಭಕ್ತರು ಹೋಳಿ ಆಚರಿಸದೆ ಯುಗಾದಿಯ ಮಾರನೆಯ ದಿನ ಬಣ್ಣದೋಕುಳಿ ಆಡುತ್ತಾರೆ.