

ನಾವಿಬ್ಬರೂ ಪದವಿ ಮುಗಿಸಿ ಕಾನೂನು ಅಭ್ಯಾಸಕ್ಕಾಗಿ ಶಾರದಾ ವಿಲಾಸಕ್ಕೆ ಬಂದ ನಂತರವೇ ಇಬ್ಬರ ಪರಿಚಯ ಆಗಿದ್ದು. ಆತ ಬಹಳ ಸೀರಿಯಸ್ ಸ್ಟೂಡೆಂಟ್.
ಕಾಲೇಜು ಶಿಕ್ಷಣ ಪೂರೈಸಿದ ಬಳಿಕ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿಯೇ ವೃತ್ತಿಯನ್ನೂ ಒಟ್ಟಿಗೆ ಆರಂಭಿಸಿದೆವು. ಅಂದು ಆ ರಸ್ತೆಯಲ್ಲಿ ಎರಡು ಪ್ರಮುಖ ಕಚೇರಿಗಳಿದ್ದವು. ಹಿರಿಯ ಅಡ್ವೊಕೇಟ್ ಎಂ.ಆರ್. ನಾರಾಯಣ ಸ್ವಾಮಿ ಕಚೇರಿಯಲ್ಲಿ ನಾನು ಜ್ಯೂನಿಯರ್ ಆಗಿ ಸೇರಿಕೊಂಡೆ, ಆತ ಎರಡು ಕಟ್ಟಡದ ಬಳಿಕ ಇದ್ದ ಹೆಸರಾಂತ ವಕೀಲ ಬಿ.ಎಂ.ಚಿಕ್ಕಬೋರಯ್ಯ ಬಳಿ ಜ್ಯೂನಿಯರ್ ಆಗಿದ್ದ. ಬಹಳ ಇಂಟರೆಸ್ಟಿಂಗ್ ವಿಚಾರ ಎಂದರೆ, ಹಲವಾರು ಪ್ರಕರಣದಲ್ಲಿ ನಮ್ಮ ಕ್ಲೈಂಟ್ ಎದುರಾಳಿ ಅವರ ವಕೀಲರ ಮೂಲಕ ಎದುರು ಪಾರ್ಟಿಯಾಗಿರುತ್ತಿದ್ದರು. ಅವರ ಕ್ಲೈಂಟ್ನ ಎದುರಾಳಿ ನಮ್ಮ ಬಳಿ ಬರುತ್ತಿದ್ದರು. ಹೀಗಾಗಿ ಸಾಕಷ್ಟು ಕೇಸ್ಗಳಲ್ಲಿ ನಾವಿಬ್ಬರೂ ನಮ್ಮ ನಮ್ಮ ಸೀನಿಯರ್ಗಳ ಜತೆಗೆ ಕೋರ್ಟ್ ಹಾಲ್ನಲ್ಲಿ ಕುಳಿತಿರುತ್ತಿದ್ದೆವು. ಹಿರಿಯ ವಾದ ಪ್ರತಿವಾದ ಕೇಳುತ್ತಿದ್ದೆವು. ಅಂದು ಕಂಪ್ಯೂಟರ್ ಇರಲಿಲ್ಲ. ಹೀಗಾಗಿ ಕೇಸ್ಗಳ ತೀರ್ಪಗಳನ್ನು ಮಾನ್ಯುಯಲ್ ಆಗಿ ಹುಡುಕಬೇಕಾಗಿತ್ತು. ಆ ಕೆಲಸ ಇಬ್ಬರೂ ಮಾಡುತ್ತಿದ್ದೆವು. 1977ರ ಬಳಿಕ ಆತ ರಾಜಕೀಯದಲ್ಲಿ ಸಕ್ರಿಯನಾದ. ನಾನು ಇದೇ ವೃತ್ತಿಯಲ್ಲಿ ಮುಂದುವರಿದೆ. ಮುಂಬೈನಲ್ಲಿ 25 ವರ್ಷ ಕಾರ್ಯನಿರ್ವಹಿಸಿದೆ. ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುವುದಾದರೆ, ಕ್ಯಾಂಟೀನ್ಗೆ ಒಟ್ಟಿಗೆ ಹೋಗುತ್ತಿದ್ದೆವು, 3 ಬೈ ಫೈವ್ ಕಾಫಿ ಕುಡಿಯುತ್ತಿದ್ದ ನೆನಪು ಈಗಲೂ ಇದೆ. ಕ್ಯಾಂಟಿನ್ನಲ್ಲಿ ಕಾಲೆಳೆಯುತ್ತಾ, ತಮಾಷೆಯಾಗಿದ್ದ ನೆನಪುಗಳಿವೆ. ಆದರೆ ಬಳಿಕ ಕೋರ್ಟ್ನಲ್ಲಿ ವೃತ್ತಿಪರವಾಗಿದ್ದೆವು.
1969ರಿಂದ ಶುರುವಾಗಿ 1972-73ರವರೆಗೆ ಒಟ್ಟಿಗೆ ಇದ್ದೆವು. ಸ್ನೇಹಿತರಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದ. ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದ. ಎಲ್ಲಿಯೂ ಅಡ್ವಾಂಟೇಜ್ ತೆಗೆದುಕೊಳ್ಳುತ್ತಿರಲಿಲ್ಲ. ಒಂದು ಮಹತ್ವದ ಘಟನೆ ಎಂದರೆ ಇಬ್ಬರೂ ಎದುರುಬದರಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೆವು. ಅವನು ಗೆದ್ದ. ಗೆದ್ದ ಮೇಲೆ ನನ್ನನ್ನೂ ಕರೆದುಕೊಂಡು ಹೋಗಿ ಕಾಫಿ ಕೊಡಿಸಿದ. ರೈವಲ್ರಿ ಎನ್ನುವುದೇ ಇರಲಿಲ್ಲ. ತಮಾಷೆಯಾಗಿ ಮಾತನಾಡುತ್ತಾ ಅದೆಲ್ಲವನ್ನೂ ಅಲ್ಲಿಗೆ ಬಿಟ್ಟುಬಿಟ್ಟಿದ್ದರೆ. ಅಲ್ಲಿಯೇ ಆತನ ನಾಯಕತ್ವದ ಗುಣ, ಲೀಡರ್ಶಿಪ್ ರೋಲ್ ಎದ್ದು ಕಾಣಿಸುತ್ತಿತ್ತು.
ಅವನು ಕಾಲೇಜು ಗೆಳೆಯ, ನಂತರ ಅವನ್ಯಾರೋ ನಾನ್ಯಾರೋ ಎಂಬ ಗುಣ ಸ್ವಭಾವ ಇರಲೇ ಇಲ್ಲ. 2004ರಲ್ಲಿ ನನ್ನ ಮಗಳ ಮದುವೆಗೆ ಮುಂಬೈಗೆ ಬಂದು ಶುಭಕೋರಿದ್ದ. ಮಗನ ಮದುವೆಗೂ ಬಂದಿದ್ದ. ಈಗಲೇ ಸಿಕ್ಕಾಗ ಆರೋಗ್ಯ ಚೆನ್ನಾಗಿ ನೋಡಿಕೋ ಎಂದು ನಾನು ಹೇಳುತ್ತಿರುತ್ತೇನೆ. ವ್ಯಕ್ತಿಯಾಗಿ ಅವನದ್ದು ಇಂದಿಗೂ ಕ್ಲೀನ್ ಪಬ್ಲಿಕ್ ಇಮೇಜ್. ಅಗ್ರೆಸಿವ್ ಗುಣ ಅವನದ್ದು. ಯಾರಿಗಾದೂ ಅನ್ಯಾಯವಾಗಿದೆ ಎಂದು ಗೊತ್ತಾದರೆ ಮುಂದೆ ನಿಂತುಬಿಡುತ್ತಿದ್ದ, ಒಮ್ಮೆ ರೈತರಿಗೆ ಪರಿಹಾರ ಕಡಿಮೆಯಾಗಿದೆ ಎಂದು ತಿಳಿದು ಫೀಸ್ ಪಡೆಯದೇ ಕಾನೂನು ಸಮರ ನಡೆಸಿ ಪರಿಹಾರ ಕೊಡಿಸಿದ್ದ. ಅಷ್ಟು ಬದ್ಧತೆ ಮತ್ತು ಸಹಾನುಭೂತಿ ಮುಂಚೆಯಿಂದಲೂ ಇತ್ತು. ಡ್ರೆಸ್ ಕೋಡ್ ವಿಷಯಕ್ಕೆ ಬಂದರೆ ಕಾಲೇಜು ದಿನಗಳಲ್ಲಿ ಬಹಳ ಸ್ಟೈಲಿಷ್ ಆಗಿಬರುತ್ತಿದ್ದ. ಈಗ ಪಂಚೆ ಧೋತಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾನೆ. ಅಂದು ಲಾಯರ್ ಡ್ರೆಸ್ನಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ.
ಅಂದು ಸಾಕಷ್ಟು ಕಷ್ಟುಪಟ್ಟು ದಿನ ದಬ್ಬಿದ್ದಾನೆ. ಸಿದ್ದರಾಮನ ಹುಂಡಿಯಿಂದ ಮೈಸೂರಿಗೆ ಬಂದು ಪದವಿ ಮುಗಿಸಿ, ಕಾನೂನು ಸ್ನಾತಕೋತ್ತರ ಪದವಿ ಪಡೆದಿದ್ದು ಕಡಿಮೆ ಸಾಧನೆಯೇನಲ್ಲ. ಅಂದು ಆತನಿಗೆ ಖರ್ಚುವೆಚ್ಚು ತೂಗಿಸಿಕೊಳ್ಳುವುದು ಸುಲಭವಿರಲಿಲ್ಲ. ಕಾಲೇಜು ಮುಗಿಸಿದ ಬಳಿಕ ಹಿರಿಯ ವಕೀಲರ ಬಳಿ ಜ್ಯೂನಿಯರ್ ಆಗಿ ಸೇರಿಕೊಂಡಾಗ 300-400 ರೂ. ಕೂಡ ಸಿಗುತ್ತಿರಲಿಲ್ಲ.
ನೆವರ್ ಸೇ ನೆವರ್ ಎಂಬುದು ಅವನ ಆಟಿಟ್ಯೂಡ್. ಅವನೊಂದಿಗೆ ಒಳ್ಳೆಯ ನೆನಪುಗಳಿವೆ. ಅವನಿಗೆ ಒಳ್ಳೆಯ ಆರೋಗ್ಯ ಕೊಡಲಿ ಎಂಬುದೇ ನನ್ನ ಹಾರೈಕೆ.
| ಎಂ.ಆರ್.ಪ್ರಸನ್ನ, ಹಿರಿಯ ವಕೀಲ
ದೇವೇಗೌಡರದ್ದು ಯಾವಾಗಲೂ ವಿನಮ್ರ, ನಿಗರ್ವಿ, ಶಿಸ್ತುಬದ್ಧ ವ್ಯಕ್ತಿತ್ವ. ಚಿಕ್ಕದೋ ದೊಡ್ಡದೋ ದೇವಸ್ಥಾನಕ್ಕೆ ಹೋದಾಗಲೆಲ್ಲ ಬೆಳಗ್ಗೆ ಸ್ನಾನ ಮಾಡಿದರೂ ದೇವಸ್ಥಾನ ಪ್ರವೇಶಿಸುವ ಮುನ್ನ ಮತ್ತೆ ಸ್ನಾನ ಮಾಡುತ್ತಾರೆ. ಸ್ವಯಂ ಶುಚಿತ್ವ, ದೇವರ ಧ್ಯಾನ, ವಿವಿಧ ದೇವಾಲಯಗಳು ಮತ್ತು ದೇವತೆಗಳ ಕಥೆಗಳನ್ನು ಕೇಳುವುದು ಅತ್ಯಗತ್ಯ. ಅವರದ್ದು ದೇವರ ಮೇಲೆ ಅಚಲವಾದ ನಂಬಿಕೆ.
ಅವರ ಕುಲದೈವ ಮಹೇಶ್ವರರ ಹೊರತಾಗಿ ರಂಗನಾಥ, ನರಸಿಂಹ ದೇವಸ್ಥಾನಗಳಿಗೆ ಹೋಗುವುದು ಅವರಿಗೆ ಇಷ್ಟ. ಮಾವಿನಕೆರೆಯ ರಂಗನಾಥ ದೇವರು ಅವರ ಕನಸಿನಲ್ಲಿ ಕಾಣಿಸಿಕೊಂಡು 1962ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಹೇಳಿದರು. ಹಾಗಾಗಿ ಅವರು ರಾಜಕೀಯಕ್ಕೆ ಬಂದರು.
ಪ್ರತಿ ವರ್ಷ ಅವರ ಜನ್ಮದಿನವಾದ ಮೇ 18 ರಂದು ಅವರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಇವರು ನರಸಿಂಹ ದೇವರ ಮಹಾ ಭಕ್ತರು. ನಾವು ಒಟ್ಟಿಗೆ ಹಿಮಾಲಯದ ತುದಿಯಲ್ಲಿರುವ ಮುಕ್ತಿನಾಥದಿಂದ ಅಹೋಬಲಂ, ನವ ತಿರುಪತಿ ಮುಂತಾದ ಅನೇಕ ದೇವಾಲಯಗಳಿಗೆ ಹೋಗಿದ್ದೇವೆ. ನಾನು ಅವರ ಮಕ್ಕಳ ವಯಸ್ಸಿನವನಾದರೂ ಅವರು ನನ್ನನ್ನು ಯಾವಾಗಲೂ ಗೌರವದಿಂದ ಕಾಣುತ್ತಾರೆ. ಅವರು ಜತೆ ತೋರುವ ಸ್ನೇಹಪರತೆ ನನ್ನನ್ನು ಬೆರಗುಗೊಳಿಸುತ್ತದೆ.
ಕೃಷಿ, ಜಲಸಂಪನ್ಮೂಲ ಇತ್ಯಾದಿಗಳ ಬಗ್ಗೆ ದೇವೇಗೌಡರು ವಿಶೇಷ ಒಲವು ಹೊಂದಿದ್ದಾರೆ. ಇಸ್ರೇಲ್ನಂತಹ ಸ್ಥಳಗಳಲ್ಲಿ ಕೃಷಿ ತಂತ್ರಗಳನ್ನು ಹೇಗೆ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂಬುದನ್ನು ಅವರು ಆಗಾಗ್ಗೆ ಅಧ್ಯಯನ ಮಾಡುತ್ತಾರೆ.
ನಾನು ಅವರಿದ್ದಲ್ಲಿಗೆ ಹೋಗುವುದಕ್ಕಿಂತ ಅವರೇ ನಾನಿದ್ದ ಸ್ಥಳಕ್ಕೆ ಬರಲು ಇಷ್ಟಪಡುತ್ತಾರೆ. ಬರುವಾಗ ಭದ್ರತೆ ಮತ್ತು ಅಬ್ಬರವಿಲ್ಲದೆ ಸಾಮಾನ್ಯ ವಾಹನದಲ್ಲಿ ಬರುತ್ತಾರೆ. ಅವರು ನನ್ನ ಕುಟುಂಬದ ಸದಸ್ಯರೊಂದಿಗೆ ಅತ್ಯಂತ ಸಹಜವಾಗಿ ನಡೆದುಕೊಳ್ಳುತ್ತಾರೆ. ಅವರ ಜತೆ ಸ್ವಲ್ಪ ಸಮಯವನ್ನೂ ಕಳೆಯುತ್ತಾರೆ. ಅವರು ಮಾತನಾಡುವುದಕ್ಕಿಂತ ಹೆಚ್ಚಾಗಿ ಕೇಳಲು ಇಷ್ಟಪಡುತ್ತಾರೆ!
ದೊಡ್ಡ ಗೌಡರು ಎಂದಾಗ ನನಗೆ ಸರಳ, ವಿನಮ್ರ, ಆಳವಾದ ನಂಬಿಕೆ, ಕಠಿಣ ಪರಿಶ್ರಮ, ಬದ್ಧತೆ ಮತ್ತು ಸ್ವಚ್ಛತೆ ಇವು ನೆನಪಿಗೆ ಬರುತ್ತವೆ. ಈ ನೆನಪು ಸದಾ ಕಾಲ ಜೀವಂತವಾಗಿರುತ್ತದೆ. ಅಂತೆಯೇ ನಮ್ಮ ಸ್ನೇಹ ಸಂಬಂಧವೂ ನಿರಂತರವಾಗಿರುತ್ತದೆ.
| ರವಿ ನಾರಾಯಣನ್, ಏರೋಸ್ಪೇಸ್ ಉದ್ಯಮಿ.
ಯಡಿಯೂರಪ್ಪ ಹಾಗೂ ನನ್ನ ಸ್ನೇಹ ಪ್ರಾರಂಭವಾಗಿದ್ದು ಏಳು ದಶಕಗಳ ಹಿಂದೆ, ಮಂಡ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಇಂದಿಗೂ ಈ ಶಾಲೆ ಹಳೆಯ ತಾಲೂಕು ಕಚೇರಿ ಆವರಣದಲ್ಲಿ ಇದೆ. ಯಡಿಯೂರಪ್ಪ ಅವರು ಬೂಕನಕೆರೆ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿವರೆಗೆ ವ್ಯಾಸಂಗ ಮಾಡಿದರು. ಆ ಸಂದರ್ಭ ಅವರ ತಾಯಿ ತೀರಿಕೊಂಡ ಹಿನ್ನೆಲೆಯಲ್ಲಿ ಮಂಡ್ಯದಲ್ಲಿರುವ ತಾತನ ಮನೆಗೆ (ತಾಯಿಯ ತಂದೆ) ಆಗಮಿಸಿ ನಾನು ಓದುತ್ತಿದ್ದ ಶಾಲೆಯಲ್ಲಿ 6ನೇ ತರಗತಿಗೆ ದಾಖಲಾದರು. ಅಲ್ಲಿಂದ ದ್ವಿತೀಯ ಪಿಯುಸಿವರೆಗೆ ನಾವಿಬ್ಬರು ಒಟ್ಟಿಗೆ ಓದಿದೆವು.
ನಾವಿಬ್ಬರು ಒಂದೇ ಬೆಂಚಿನಲ್ಲಿ ಕುಳಿತು ಪಾಠ-ಪ್ರವಚನ ಕೇಳುತ್ತಿದ್ದೆವು. ಮಂಡ್ಯದಲ್ಲಿ ನನ್ನ ಹಾಗೂ ಯಡಿಯೂರಪ್ಪ ಅವರ ಮನೆ ಅಕ್ಕಪಕ್ಕದಲ್ಲಿಯೇ ಇತ್ತು. ಅಲ್ಲದೆ, ನಾವಿಬ್ಬರು ಶಾಲೆ ಮುಗಿಸಿಕೊಂಡು ಸಂಜೆ ಆರ್ಎಸ್ಎಸ್ ಶಾಖೆಗೆ ಹೋಗುತ್ತಿದ್ದೆವು. ಹಾಗಾಗಿ ನಮ್ಮ ನಡುವೆ ಗೆಳೆತನ ಮತ್ತಷ್ಟು ಗಟ್ಟಿಯಾಯಿತು.
ಯಡಿಯೂರಪ್ಪ ಅವರ ಹಣೆಯ ಮೇಲೆ ಇಂದಿಗೂ ಗಾಯದ ಗುರುತೊಂದು ಇದೆ. ಇದು ಮಂಡ್ಯದ ಆರ್ಎಸ್ಎಸ್ ಶಾಖೆಯಲ್ಲಿ ಗೆಳೆಯರೆಲ್ಲ ಸೇರಿ ಆಟವಾಡುತ್ತಿದ್ದ ಸಂದರ್ಭ ಆದ ಗಾಯದ ಗುರುತು. ನಾವೆಲ್ಲ ಸೇರಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಯಡಿಯೂರಪ್ಪ ಓಡುವ ರಭಸದಲ್ಲಿ ಅವರ ಹಣೆ ಕಬ್ಬಿಣದ ವಿದ್ಯುತ್ ಕಂಬಕ್ಕೆ ಬಡಿದು ಗಾಯಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆವು. ಬಾಲ್ಯದಲ್ಲಿ ಆದ ಆ ಗಾಯದ ಗುರುತು ಇನ್ನೂ ಮಾಸಿಲ್ಲ.
ಯಡಿಯೂರಪ್ಪ ಅವರಿಗೆ ನಾಯಕತ್ವ ಗುಣ ಸಣ್ಣ ವಯಸ್ಸಿನಲ್ಲಿಯೇ ಇತ್ತು. ಒಮ್ಮೆ ನಾನು ಮತ್ತು ಯಡಿಯೂರಪ್ಪ ಮೈಸೂರು ದಸರಾ ನೋಡಲು ಮಂಡ್ಯದಿಂದ ಮೈಸೂರಿಗೆ ತೆರಳಲು ಮಂಡ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದೆವು. ದಸರಾ ಪ್ರಯುಕ್ತ ವಿಶೇಷ ಬಸ್ ಸಂಚಾರ ವ್ಯವಸ್ಥೆ ಇತ್ತು. ವಿಶೇಷ ಬಸ್ ಸಂಚಾರಕ್ಕೆ ಕನಿಷ್ಠ 25 ಜನರಾದರೂ ಇರಬೇಕೆಂಬ ಷರತ್ತು ಇತ್ತು. ಆದರೆ, ಬಸ್ ಪ್ರಯಾಣಕ್ಕೆ 25ಕ್ಕೂ ಹೆಚ್ಚು ಜನರು ಕಾಯ್ದು ಕೂತರೂ ಬಸ್ ಸಂಚರಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಯಡಿಯೂರಪ್ಪ ಬಸ್ ನಿಲ್ದಾಣದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಬಸ್ ಹೊರಡಿಸುವಲ್ಲಿ ಯಶಸ್ವಿಯಾದರು. ಸಮಸ್ಯೆಗಳು, ಅನ್ಯಾಯ ಕಂಡರೆ ಅದರ ವಿರುದ್ಧ ಸಿಡಿದೇಳುವ ಗುಣ ಅವರಲ್ಲಿ ಸಣ್ಣ ವಯಸ್ಸಿನಲ್ಲಿಯೇ ಇತ್ತು. ಯಡಿಯೂರಪ್ಪ ನಾಯಕರಾಗಿ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಬಸ್ನಲ್ಲಿಯೇ ಸಂಚರಿಸುತ್ತಿದ್ದರು. ಕೆಲವೊಮ್ಮೆ ನನ್ನ ಮನೆಗೆ ತಡರಾತ್ರಿ ಆಗಮಿಸಿ ಮುಂಜಾನೆ ನಾವು ಎದ್ದೇಳುವ ಮುನ್ನವೇ ಹೊರಟು ಹೋಗುತ್ತಿದ್ದರು. ಅವರ ಅವಿಶ್ರಾಂತ ದುಡಿಮೆಯೇ ಅವರನ್ನು ಉನ್ನತ ಸ್ಥಾನಕ್ಕೆ ಏರಿಸಿತು.
| ಎಸ್.ಶಂಕರ್ರಾವ್, ಉದ್ಯಮಿ
ಹಣಕ್ಕಿಂತ ಗೌರವಕ್ಕೆ ಮಹತ್ವ ಕೊಡುವುದು ನಮ್ಮೆಲ್ಲರ ಜೀವನ ಪದ್ಧತಿ. ತಂದೆ-ತಾಯಿಯನ್ನು ನೋಡಿ ಮಕ್ಕಳು ಕಲಿಯುತ್ತಾರೆ. ತುಂಬು ಕುಟುಂಬದಲ್ಲಿ ಜನಿಸಿದ ನನಗೆ ಕುಟುಂಬವೇ ಮೊದಲ ಮಿತ್ರ. ಕುಟುಂಬದಲ್ಲಿನ ಒಳ್ಳೆಯ ವಾತಾವರಣ ನನಗೆ ಉತ್ತಮ ಗೆಳೆಯರನ್ನು ಪರಿಚಯಿಸುವುದರ ಜತೆಗೆ ಗೆಳೆತನ ನಿಭಾಯಿಸುವುದನ್ನು ಕಲಿಸಿಕೊಟ್ಟಿದೆ. ಬಾಲ್ಯದ ದಿನಗಳು ನನಗೆ ಜೀವನದ ಮೌಲ್ಯಗಳ ಜತೆಗೆ ಸ್ನೇಹದ ಮಹತ್ವವನ್ನು ತಿಳಿಸಿಕೊಟ್ಟಿವೆ.ಗದಗದಲ್ಲಿನ ಬಾಲ್ಯದ ಸ್ನೇಹಿತರು ಇಂದು ಉತ್ತಮ ಸ್ಥಾನದಲ್ಲಿದ್ದಾರೆ. ದೀಪಕ್ ಪೈ, ಎಚ್. ಕೆ. ಗಂಗಾಧರ್, ಲಿಂಗರಾಜ್ ಬಾಳಿಮಠ ಮೊದಲಾದ ಸ್ನೇಹಿತರೊಂದಿಗೆ ವಕೀಲ್ ಚಾವಡಿಯಲ್ಲಿ ಕಳೆದ ದಿನಗಳನ್ನು ಇಂದಿಗೂ ಮೆಲುಕು ಹಾಕುತ್ತೇನೆ. ಇಂದಿನ ಜೀವನ ಶೈಲಿಯಲ್ಲಿ ನೆಚ್ಚಿನ ಗೆಳೆಯರನ್ನು ಕಾಣುವುದಕ್ಕೆ ಸಾಧ್ಯವಾಗಿಲ್ಲ. ಆದರೆ ನೆನಪಾದಾಗ ವಿಡಿಯೋ ಕಾಲ್ ಮಾಡಿ ಮಾತನಾಡುತ್ತೇವೆ. ಮದುವೆ ಆಗಿ 25 ವರ್ಷದ ಪೂರೈಸಿದ್ದು, ಮಡದಿ, ಮಗ ಸಹ ಉತ್ತಮ ಸ್ನೇಹಿತರು. ಮಕ್ಕಳು ಜೀವನದಲ್ಲಿ ಒಂದು ಹಂತ ದಾಟಿದ ಬಳಿಕ ಅವರನ್ನು ಸ್ನೇಹಿತರಂತೆ ಕಾಣಬೇಕು.
| ಸುನೀಲ್ ಜೋಶಿ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ
| ಈಶ್ವರಚಂದ್ರ, ಕಥೆಗಾರ, ಎಚ್ಚೆಸ್ವಿ ಅವರ ಬಾಲ್ಯಸ್ನೇಹಿತ
| ಹರ್ಷವರ್ಧನ್, ನಟ
| ಮೇಜರ್ ಪಿ.ಮಣಿವಣ್ಣನ್, ಪ್ರಧಾನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ
| ನಯನಾ ಮೋಟಮ್ಮ, ಮೂಡಿಗೆರೆ ಶಾಸಕಿ