

ಇಲ್ಲಿ ಮುಖ್ಯವಾಗಿ ನೋಡಬೇಕಾದ ಅಂಶಗಳು ಜಾತಕದಲ್ಲಿ ತುಂಬ ಸೂಕ್ಷ್ಮವಾಗಿವೆ. ಯಾವುದೋ ಒಂದು ಗ್ರಹಸ್ಥಿತಿಯು ಜ್ವರಬಾಧೆಯ ಲಕ್ಷಣ ಎಂದು ಗ್ರಂಥಗಳಲ್ಲಿ ಒಂದೆಡೆ ಸೂಚಿಸಿದರೂ ಇದನ್ನು ಬೇರೆ ಬೇರೆ ಆಯಾಮದಲ್ಲಿ ನೋಡದೆ ನಿರ್ಧರಿಸುವ ಹಾಗಿಲ್ಲ. ನಿತ್ಯ ವಾತಾವರಣದ ಅನೇಕ ದೋಷದಿಂದ ಶೀನು ಬಂದು ಶೀತ, ಜ್ವರ ಬಂದರೆ ಅದನ್ನು ಕರೊನಾ, ಟೈಫಾಯ್ಡ್ ಇತ್ಯಾದಿಗಳೆಂದು ತಿಳಿದುಕೊಳ್ಳಬಾರದು ಮತ್ತು ಭಯಭೀತರಾಗಬಾರದು. ‘ನನಗೇನೂ ಆಗಲ್ಲ’ ಎಂಬ ಧೈರ್ಯವಿದ್ದರೆ ಮರಣಕ್ಕೆ ಅಂಜಬೇಕಾಗಿಲ್ಲ.
ಸಾಮಾನ್ಯವಾಗಿ ಜಾತಕದ ಕುಂಡಲಿಯಲ್ಲಿ ಆರನೆಯ ಮನೆಯನ್ನು ರೋಗ, ಋಣ ಇತ್ಯಾದಿ ವಿಚಾರಗಳಿಗೆ ನೋಡುತ್ತಾರೆ. ಜ್ವರ ತಾಪಗಳನ್ನು ಕೊಡುವವನು ಕುಜ. ಕುಜನಿಂದ ಸುಬ್ರಹ್ಮಣ್ಯ, ನೃಸಿಂಹ, ದುರ್ಗೆಯರ ಚಿಂತನೆ ಮಾಡಬೇಕೆಂದು ಶಾಸ್ತ್ರ ಹೇಳಿದೆ. ಅಂದರೆ ಈ ದೇವರುಗಳಿಗೆ ಉಷ್ಣ ತಾಪವನ್ನು ನೀಡುವ ಶಕ್ತಿಯೂ ಇದೆ, ಅದನ್ನೇ ಬೆಂಕಿಯನ್ನು ಬೆಂಕಿಯಿಂದ ಶಮನಗೊಳಿಸಬೇಕು ಎಂಬಂತೆ, ಶಮನ ಮಾಡುವ ಗುಣವೂ ಇರುತ್ತದೆ.
ಯುದ್ಧ, ರಣಗಳಲ್ಲಿ ದುರ್ಗಾರಾಧನೆ, ಸುಬ್ರಹ್ಮಣ್ಯನ ಪೂಜೆ ಮಾಡುವುದು ಇದಕ್ಕಾಗಿಯೇ. ಈ ದೇವರುಗಳಲ್ಲಿ ಸಂಕರ್ಷಣಾ(ಘರ್ಷಣೆ) ಶಕ್ತಿ ಹೆಚ್ಚು ಇರುವುದರಿಂದ ಇವರಿಗೆ ಸೇನಾಧಿಪತ್ಯ ಇರುತ್ತದೆ. ಸುಬ್ರಹ್ಮಣ್ಯನನ್ನು ಸೇನಾನಿ ಎಂದಿದ್ದಾರೆ. ದೇಹದೊಳಗೂ ಹೊರಗೂ ಶತ್ರುಗಳಿರುವುದು ಸ್ವಾಭಾವಿಕವಲ್ಲವೇ? ಈ ಶತ್ರು ನಿಗ್ರಹಕ್ಕಾಗಿ, ದಮನಕ್ಕಾಗಿ ಈ ದೇವತಾಶಕ್ತಿಯನ್ನು ಆರಾಧನೆ ಮಾಡಿ ಎಂದರು ಪ್ರಾಜ್ಞ ಋಷಿಮುನಿಗಳು. ಈ ದೇವರ ಸ್ವರೂಪವನ್ನು ನೀಡುವವನೇ ಕುಜ ಗ್ರಹ. ಇವನು ಪ್ರಸರಿಸುವ ವಿಕಿರಣಗಳು ವಿಪರೀತ ಉಷ್ಣ. ತಾಪಮಾನ ಜಾಸ್ತಿ. ಇದಕ್ಕಾಗಿ ಜಾತಕದಲ್ಲಿ ಕುಜದೋಷ ಇದ್ದಾಗ ಸಿಟ್ಟು, ಅನಾಹುತಗಳಾಗುತ್ತವೆ. ‘ಶಾಂತಿ ಮಾಡಿಸಿಕೊಳ್ಳಿ’ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಕೇವಲ ಷಷ್ಟದಲ್ಲಿ ಕುಜ ಇದ್ದ ಮಾತ್ರಕ್ಕೇ ಅಪಾಯ ಎಂದೇನಿಲ್ಲ. ದುರ್ಬಲನಾಗಿ ಶತ್ರು ಕ್ಷೇತ್ರಗತನಾಗಿ ರವಿ ಸಂಪರ್ಕ ಇದ್ದಾಗ, ರವಿ ನವಾಂಶೆ ಪಡೆದಿದ್ದಾಗ ಇವನು ಜ್ವರ ಕಾರಕ. ದೇಹವು ಉಷ್ಣತೆ ಜಾಸ್ತಿ ನೀಡುತ್ತದೆ. ಇಲ್ಲಿಗೇ ಅಪಾಯಕಾರಿ ಜ್ವರ ಎಂದು ತೀರ್ವನಿಸುವ ಹಾಗಿಲ್ಲ. ಇಂತಹ ಸ್ಥಿತಿಗೆ ಜಾತಕದಲ್ಲಿ ಶನಿಯೂ ದುರ್ಬಲನಾಗಿ, ಗುರುವೂ ಚಂದ್ರನಿಂದಲೋ, ಲಗ್ನದಿಂದಲೋ, ಲಗ್ನ, ಚಂದ್ರ ರಾಶ್ಯಾಧಿಪತಿಯಿಂದಲೋ ತೃತೀಯದಲ್ಲಿದ್ದರೆ ಬಡಿತ ಜಾಸ್ತಿಯಾಗುತ್ತದೆ. Anxiety, Aggressive nature ಸೃಷ್ಟಿಯಾಗುತ್ತೆ. ಆಗ ಇದನ್ನು ಅಪಾಯಕಾರಿ ಎನ್ನಬಹುದು. ಆದರೆ ಮರಣ ಎಂದು ಇನ್ನೂ ನಿರ್ಧರಿಸಲಾಗದು. ಹಾಗೆ ನಿರ್ಧರಿಸಬೇಕಾದರೆ, ಗೋಚರದಲ್ಲಿ ಲಗ್ನ, ಚಂದ್ರರಿಂದ, ಶನಿಯಿಂದ ಅಷ್ಟಮದಲ್ಲಿ ಶನಿ ಸಂಚಾರ ಇರಬೇಕು. ಇಷ್ಟಿದ್ದರೂ ಇನ್ನೂ ಅಪಾಯ ಎಂದೂ ನಿರ್ಧರಿಸುವ ಹಾಗಿಲ್ಲ. ಆಗ ದಶಾ ವಿಚಾರ ನೋಡಬೇಕು. ಖರ ದ್ರೇಕ್ಕಾಣಾಧಿಪತಿಯ ದಶೆ ಭುಕ್ತಿಗಳು, ಅರುವತ್ತನಾಲ್ಕನೆಯ ನವಾಂಶಾಧಿಪತಿಯ ದಶೆಗಳೂ ಇದ್ದಲ್ಲಿ ಅಪಾಯ ನಿಶ್ಚಿತ ಎಂದು ತಿಳಿಯಬೇಕು. ಸುಮ್ಮ ಸುಮ್ಮನೆ ಯೂ ಟ್ಯೂಬ್ ಮೂಲಕ ನೋಡಿ ರೋಗ ವಿಚಾರವನ್ನು ತಿಳಿದುಕೊಂಡರೆ ಇದು ಭಯ ಹೆಚ್ಚಿಸುತ್ತದೆ. ಇಂತಹ ವಿಚಾರ ನೇರ ನೇರ ಮುಖತಃ ವಿಚಾರ ಮಾಡಬೇಕೇ ವಿನಃ ಹಾಗೆಲ್ಲ ಹೇಳುವ ಹಾಗಿಲ್ಲ. ನೋಡುವವರು ಅವರವರ ಕುಂಡಲಿಯನ್ನು ತಾವೇ ವಿಮರ್ಷಿಸಿಕೊಂಡು ಚಿಂತೆಗೊಳಗಾಗುವಂತೆ ಮಾಡಿಕೊಂಡ ಹಾಗಾಗುತ್ತದೆ. ತಜ್ಞ ವೈದ್ಯರೂ ಅವರ ವೈದ್ಯಕೀಯ ವಿಮರ್ಷ (Diagnosis) ಬಗ್ಗೆ ಹೀಗೇ ಸಲಹೆ ಕೊಡುತ್ತಾರೆ. ಇಷ್ಟೇ ಅಲ್ಲ, ಜಾತಕನಿಗೆ ರೋಗೋತ್ಪತ್ತಿ ಆಗುವ ವಿಚಾರವನ್ನು ತೃತೀಯ ಮತ್ತು ದ್ವಿತೀಯದಿಂದ ತಿಳಿಯಬೇಕು. ಯಾವ ರೀತಿಯ ಆಹಾರ ಇಷ್ಟ ಪಡುತ್ತಾನೆ, (ದ್ವಿತೀಯವು ಆಹಾರ ಸೇವನೆ); ಎಲ್ಲೆಲ್ಲಿ ಹೇಗೆ ಹೇಗೆ ತಿನ್ನುತ್ತಾನೆ(ತೃತೀಯವು ಅನ್ನದ ಪಾತ್ರೆ) ಎಂಬ ಚಿಂತನೆಯೂ ಬೇಕು. ಅಲ್ಲದೆ ಗುರುವು (ಜ್ಞಾನ, ವಿವೇಚನೆ) ಹೇಗಿದ್ದಾನೆ, ಆಯುಕಾರಕ ಶನಿಯ ಸ್ಥಿತಿ ಹೇಗಿದೆ ಎಂಬುದು ಜ್ವರದ ನಿರ್ಣಯಕ್ಕೆ ಬಹಳ ಮುಖ್ಯ.
ಇದೆಲ್ಲ ವಿಚಾರ ಪೂರ್ಣ ತಿಳಿಯಲು ಅಸಾಧ್ಯ. ಅಥವಾ ಹೇಳುವ ತಿಳಿವಳಿಕೆಯುಳ್ಳವರೂ ವಿರಳ. ಅಥವಾ ಕೇಳಿಸಿಕೊಳ್ಳುವ ಯೋಗ ಭಾಗ್ಯವೂ ಬೇಕು. ಅದಕ್ಕಾಗಿ ನಮ್ಮ ಹಿರಿಯರು ಊಟಕ್ಕೊಂದು ನಿಯಮ, ದೇವತಾ ಉಪಾಸನೆಗಳನ್ನು ಹೇಳಿದ್ದಾರೆ. ಅದನ್ನು ಕನಿಷ್ಠವಾಗಿಯಾದರೂ ಪಾಲಿಸಿಕೊಂಡು ಬರಬೇಕು.
ಪ್ರತಿನಿತ್ಯ ಊಟದಲ್ಲಿ ಒಂದು ತುಳಸಿ ದಳವನ್ನು ಅನ್ನದೊಳಗಿಟ್ಟು ನುಂಗಬೇಕು. ಮಧ್ಯಾಹ್ನ ಅಥವಾ ಬೆಳಗ್ಗೆ. ರಾತ್ರಿ ಸೇವನೆ ಬೇಡ. ಹಲ್ಲಿಗೆ ತಾಗಿಸಬಾರದು. ತುಳಸಿ ಹಲ್ಲಿಗೆ ಮಾರಕವಾಗುತ್ತದೆ.