

ಅನೇಕ ವರ್ಷಗಳ ಹಿಂದೆ ಹಳ್ಳಿಯೊಂದರಲ್ಲಿ ದೈವಭಕ್ತನಾದ ರೈತನೊಬ್ಬ ಇದ್ದ. ಮಾತು ಮಾತಿಗೂ ಅವನು ‘ಎಲ್ಲವೂ ದೈವೇಚ್ಛೆ’ ಎನ್ನುತ್ತಿದ್ದ. ಒಂದು ದಿನ ಅವನು ಕಾಡಿನಲ್ಲಿ ಸೌದೆ ಕಡಿಯುತ್ತಿದ್ದಾಗ ಬಂಗಾರದ ನಾಣ್ಯಗಳಿದ್ದ ದೊಡ್ಡ ಕೊಡವನ್ನು ಕಂಡನು. ಆದರೆ ಅವನು ಅದನ್ನು ಮುಟ್ಟಲಿಲ್ಲ. ಕ್ಷಣಕಾಲ ಯೋಚಿಸಿ ‘ಈ ನಿಧಿ ನನ್ನ ಕೈ ಸೇರಬೇಕೆಂದು ದೈವೇಚ್ಛೆ ಇದ್ದರೆ ಗುಡಿಸಿಲಿನಲ್ಲಿ ಮುರುಕಲು ಮಂಚದ ಮೇಲೆ ಮಲಗಿರುವಾಗ ಅಲ್ಲಿಗೇ ಬಂದು ಸೇರುತ್ತದೆ’ ಎಂದು ಮನೆಗೆ ಹಿಂದಿರುಗಿದನು. ನಂತರ ಗ್ರಾಮಸ್ಥರಿಗೆ ನಿಧಿ ಬಗ್ಗೆ ತಿಳಿಸಿದನು. ಆಗ ಗ್ರಾಮಸ್ಥರು ಇನ್ನೊಬ್ಬರಿಗೆ ತಿಳಿಯದಂತೆ ಒಬ್ಬೊಬ್ಬರಾಗಿ ನಿಧಿ ಪಡೆಯಲು ಕಾಡಿಗೆ ತೆರಳಿದರು. ದೈವಭಕ್ತ ಹೇಳಿದ ಸ್ಥಳಕ್ಕೆ ಬಂದಾಗ ಅವರ ಕಣ್ಣಿಗೆ ಕಂಡಿದ್ದು, ಚೇಳುಗಳಿಂದ ತುಂಬಿದ್ದ ಕೊಡ ಮಾತ್ರ. ರೈತ ತಮ್ಮನ್ನು ಲೇವಡಿ ಮಾಡಲು ಹೀಗೆ ಸುಳ್ಳು ಹೇಳಿದ್ದಾನೆ ಎಂದು ತಿಳಿದ ಗ್ರಾಮಸ್ಥರು ಊರಿಗೆ ಹಿಂದಿರುಗಿದರು. ಇನ್ನು ಕೆಲವರು ರೈತನಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ನಿಶ್ಚಯಿಸಿದರು. ರೈತ ರಾತ್ರಿ ನಿದ್ದೆ ಮಾಡುತ್ತಿದ್ದಾಗ, ಅವನ ಮನೆಯ ಮೇಲ್ಚಾವಣಿಯ ಸ್ವಲ್ಪ ಭಾಗ ತೆಗೆದು ಕಾಡಿನಿಂದ ತಂದಿದ್ದ ಚೇಳು ತುಂಬಿದ ಕೊಡವನ್ನು ಮಂಚದ ಮೇಲೆ ಬೀಳುವಂತೆ ತಲೆಕೆಳಗಾಗಿ ನೇತು ಹಾಕಿ, ಕೇಕೆ ಹಾಕಿ ನಕ್ಕರು. ಆಗ ರೈತ ಕಕ್ಕಾಬಿಕ್ಕಿಯಾಗಿ ನಿದ್ದೆಗಣ್ಣಲ್ಲಿ ಮೇಲೆದ್ದು, ಚಿಮಣಿ ದೀಪವನ್ನು ದೊಡ್ಡ ಮಾಡಿದನು. ತಾನು ಮಲಗಿದ್ದ ಸ್ಥಳದ ಸುತ್ತಲೂ ಬಂಗಾರದ ನಾಣ್ಯಗಳು ಹೊಳೆಯುತ್ತಿದ್ದವು. ತಲೆಯೆತ್ತಿ ನೋಡಿದಾಗ ಕಾಡಿನಲ್ಲಿ ಕಂಡಿದ್ದ ಕೊಡ ತೂಗಾಡುತ್ತಿತ್ತು. ಈ ಅಚ್ಚರಿಯಿಂದ ರೈತ ಹಿರಿ ಹಿರಿ ಹಿಗ್ಗದೆ, ‘ಎಲ್ಲ ದೈವೇಚ್ಛೆ’ ಎಂದು ಎಂದಿನಂತೆ ದೇವರಿಗೆ ನಮಿಸಿದನು.
ನೀತಿ: ದುರಾಸೆಪಡದೆ, ಸತ್ಯ, ನಿಷ್ಠೆಯಿಂದ ಜೀವನ ನಡೆಸಿದರೆ ದೇವರು ಸದಾ ನಮ್ಮೊಂದಿಗಿರುತ್ತಾನೆ.
ಸೂಚನೆ:ಕಥೆ ಕಳುಹಿಸುವ ಪುಟಾಣಿಗಳು ತಮ್ಮ ಹೆಸರು, ಭಾವಚಿತ್ರ, ತರಗತಿ, ಶಾಲೆ ಹಾಗೂ ನಗರದ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು.
ಕಥೆ ಕಳುಹಿಸಬೇಕಾದ ಇಮೇಲ್ ಐಡಿ: putani.vijayavani@gmail.com