ಉಡುಗೆಯ ಸೊಬಗು, ನೀಡಲಿ ಮೆರುಗು..

Dress
Published on

ಕಾಲೇಜು ಶಿಕ್ಷಣದಲ್ಲಿ ವರ್ಷಪೂರ್ತಿ ಸಮವಸ್ತ್ರ ಧರಿಸಿದ ಯುವತಿಯರು ವರ್ಷದ ಕೊನೆಯಲ್ಲಿ ಸಾಂಪ್ರದಾಯಿಕ ಉಡುಗೆಗಳ ದಿನವೆಂದೇ ಒಂದು ದಿನವನ್ನು ಆಚರಿಸಲು ಕಾಯುತ್ತಿರುತ್ತಾರೆ. ಬಣ್ಣಬಣ್ಣದ ಸೀರೆಯನುಟ್ಟು ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಖುಷಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುವ ಖುಷಿಯೇ ಬೇರೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆ ಎಂದಾಗ ಮಹಿಳೆಯರ ಮೊದಲ ಆದ್ಯತೆ ಸೀರೆಯೇ ಆಗಿರುತ್ತದೆ. ಶಿಕ್ಷಣ ಮುಗಿಸಿ, ಔದ್ಯೋಗಿಕ ರಂಗಕ್ಕೆ ಕಾಲಿಟ್ಟಾಗ ಕೆಲವೆಡೆ ವಸ್ತ್ರ ಸಂಹಿತೆ ಎಂಬಂತೆ ಉಡುಗೆ-ತೊಡುಗೆಗಳಿಗೆ ಕೆಲವೊಂದು ನಿಯಮಗಳು ಇರುತ್ತವೆ. ಲಿಖಿತ ನಿಯಮಗಳಿಲ್ಲದಿದ್ದರೂ ಪ್ರತಿಯೊಂದು ವೃತ್ತಿಯಲ್ಲೂ ವೃತ್ತಿಗೌರವ, ಸುರಕ್ಷತೆ,ಶಿಸ್ತು, ಆರಾಮವಾಗಿ ಕೆಲಸ ಮಾಡಲು ಪೂರಕ ಉಡುಗೆ ಎಂಬಂತೆ ಕೆಲವು ದಿರಿಸುಗಳು ವಿಶೇಷ ಪ್ರಾಶಸ್ಱ ಬಯಸುತ್ತವೆ. ಒಂದು ವೃತ್ತಿಗೆ ಪೂರಕವಾಗಿ ಡ್ರೆಸಿಂಗ್ ಮಾಡುವುದರಿಂದ ಪ್ರತಿ ಕೆಲಸದ ವಾತಾವರಣದಲ್ಲಿ ವಿಶೇಷ ಪ್ರಭಾವ ಬೀರಲು ಸಹಕಾರಿಯಾಗುತ್ತದೆ.

| ಭಾರತಿ ಎ. ಕೊಪ್ಪ

ಉಡುಗೆಯ ಕಲ್ಪನೆಯೇ ವಿಶೇಷವಾದದ್ದು!

ಕನಸು ಕಾಣಿರಿ ಎಂಬ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪ್ರೇರಣಾ ನುಡಿಯನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಪ್ರತಿ ಮಹಿಳೆಯೂ ತಾನು ದುಡಿಯುವ ಹಂತಕ್ಕೆ ಬಂದಾಗ ಇಂತಹ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವಾಗಲೇ, ಉಡುಗೆ-ತೊಡುಗೆಯ ಕನಸುಗಳೂ ಕಣ್ಣ ಮುಂದೆ ಬರುತ್ತವೆ. ತಾನೊಬ್ಬ ಪೈಲಟ್ ಆಗಬೇಕೆಂದು ಕನಸು ಕಾಣುವ ಹೆಣ್ಣು ಪ್ಯಾಂಟ್, ಶರ್ಟ್, ಟೈ, ಕೋಟು ಹಾಕುವ ಕನಸು ಕಾಣುತ್ತಿರುತ್ತಾಳೆ.ಈ ರೀತಿಯ ಉಡುಗೆ ಹೊರತುಪಡಿಸಿ ಪೈಲಟ್ ಅನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಉದಾಹರಣೆಯಷ್ಟೇ. ಅಂತೆಯೇ ಕಾಪೋರೆಟ್ ವಲಯದ ಉದ್ಯೋಗವಿರಲಿ, ವೈದ್ಯೆ, ನರ್ಸ್, ಶಿಕ್ಷಕಿ, ವಾಹನ ಚಾಲಕಿ, ಪೊಲೀಸ್, ಆಡಳಿತಾಧಿಕಾರಿ, ಚಲನಚಿತ್ರ ನಟಿ ಯಾರೇ ಇರಲಿ, ಆ ವೃತ್ತಿಗೆ ವೃತ್ತಿ ಗೌರವವನ್ನು ಹೆಚ್ಚಿಸುವ ಉಡುಗೆ-ತೊಡುಗೆಯ ಪ್ರಾಮುಖ್ಯತೆ ಬಹಳವಾದುದಾಗಿದೆ.

ಸಂದರ್ಭಕ್ಕೆ ತಕ್ಕ ಉಡುಗೆ

ನಿರ್ದಿಷ್ಟ ವೃತ್ತಿ ಆಯ್ಕೆ ಮಾಡಿಕೊಂಡ ಮೇಲೆ ಅಲ್ಲಿನ ವಾತಾವರಣಕ್ಕೆ, ನಿಯಮಕ್ಕೆ ತಕ್ಕ ಉಡುಗೆ ಧರಿಸುತ್ತಿದ್ದರೂ ಇಂದಿನ ಬಣ್ಣಬಣ್ಣದ ಬಟ್ಟೆಗಳ ಲೋಕದಲ್ಲಿ ತರಹೇವಾರಿ ಉಡುಗೆ ಧರಿಸುವ ಬಯಕೆಯು ಬಹಳಷ್ಟು ಹೆಣ್ಣುಮಕ್ಕಳಿಗೆ ಇದ್ದೇ ಇರುತ್ತದೆ. ಕೆಲಸದ ವೇಳೆಗೆ ಹೊರತಾಗಿ ಧರಿಸುವ ಬಟ್ಟೆಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಇದ್ದಾಗ ಮನಕೆ ಮುದ ನೀಡುತ್ತದೆ ಅಲ್ಲದೇ ನೋಡುಗರಲ್ಲೂ ಧನಾತ್ಮಕ ಭಾವ ಮೂಡಿಸುತ್ತದೆ. ಹಬ್ಬ ಹರಿದಿನಗಳಲ್ಲಿ, ಧಾರ್ವಿುಕ ಸಮಾರಂಭಗಳಲ್ಲಿ ಭಾಗವಹಿಸುವಾಗ, ದೇವಾಲಯ, ಪ್ರಾರ್ಥನಾ ಮಂದಿರಗಳಿಗೆ ತೆರಳುವಾಗ ನಮ್ಮ ಸಂಸ್ಕೃತಿ ಬಿಂಬಿಸುವ, ಸಾಂಪ್ರದಾಯಿಕ ಉಡುಗೆಗಳೇ ಹೆಚ್ಚು ಸೂಕ್ತ ಎನಿಸುತ್ತವೆ. ಪ್ರವಾಸ, ಪ್ರಯಾಣ, ಚಾರಣದಂತಹ ಸಂದರ್ಭಗಳಿಗೆ ಹೆಚ್ಚು ಆರಾಮದಾಯಕವಾದ ಚೂಡಿದಾರ, ಪ್ಯಾಂಟ್-ಶರ್ಟ್ ಇವುಗಳೇ ಮೊದಲ ಪ್ರಾಶಸ್ಱ ಪಡೆಯುತ್ತವೆ. ಸ್ನೇಹ ಸಮ್ಮಿಲನ, ಹುಟ್ಟು ಹಬ್ಬದ ಆಚರಣೆ, ಮದುವೆಯಂತಹ ಸಮಾರಂಭಗಳಿಗೆ ಲೆಹಂಗಾ-ಚೋಲಿ, ಸೀರೆ, ಅನಾರ್ಕಲಿ, ಕುರ್ತಾಗಳು ಹೆಚ್ಚು ಮೆರುಗು ನೀಡುತ್ತವೆ.

ಸೀರೆಯಲ್ಲಿ ನೀರೆ

ಆಧುನಿಕತೆಯ ಭರಾಟೆಯಲ್ಲೂ ಭಾರತೀಯ ಮಹಿಳೆಯರು ಸೀರೆಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆಂಬುದು ಸರ್ವವಿದಿತವಾದ ವಿಚಾರವಾಗಿದೆ. 2019 ರಲ್ಲಿ ಖಾಸಗಿ ಸಂಸ್ಥೆಯೊಂದು ನೀಡಿದ ಅಂಕಿ ಅಂಶಗಳ ಪ್ರಕಾರ ಭಾರತೀಯ ಮಹಿಳೆಯರಲ್ಲಿ ಶೇ 70 ಕ್ಕಿಂತ ಹೆಚ್ಚು ಮಹಿಳೆಯರು ಸೀರೆಯನ್ನು ಧರಿಸುತ್ತಾರೆ. ಪ್ರತಿದಿನ ಅಲ್ಲದಿದ್ದರೂ,ಕನಿಷ್ಠ ಆಯ್ದ ದಿನಗಳು ಮತ್ತು ಸಂದರ್ಭಗಳಲ್ಲಿ ಸೀರೆಯೇ ನೀರೆಯರ ಮೆಚ್ಚಿನ ಉಡುಗೆಯಾಗಿದೆ. ಇನ್ನೊಂದು ಖಾಸಗಿ ಸಂಸ್ಥೆಯ 2022 ರ ವರದಿ ಮತ್ತು ವಿಶ್ಲೇಷಣೆಯ ಪ್ರಕಾರ ದಕ್ಷಿಣ ಭಾರತದ ಸೀರೆ ಮಾರುಕಟ್ಟೆಯು 2025ರ ಆರ್ಥಿಕ ವರ್ಷದಲ್ಲಿ -ಠಿ; 30800 ಕೋಟಿ ವ್ಯವಹಾರ ತಲುಪುವ ನಿರೀಕ್ಷೆ ಇದೆ. 2020 ರಲ್ಲಿ ಇದು 23200 ಕೋಟಿಯಷ್ಟಿತ್ತು. ಸೀರೆ ಮಾರುಕಟ್ಟೆಯ ಅಧಿಕಾರಿಗಳ ಅಂದಾಜಿನ ಪ್ರಕಾರ ಕನಿಷ್ಠ 33 ಕೋಟಿ ಭಾರತೀಯ ಮಹಿಳೆಯರು ಹಬ್ಬಗಳು ಮತ್ತು ಮದುವೆಗಳು ಸೇರಿದಂತೆ ಸಮಾರಂಭಗಳಿಗೆ ಸೀರೆಗಳನ್ನು ಖರೀದಿಸಲು ವರ್ಷಕ್ಕೆ ಸರಾಸರಿ 3500-4000 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಸಂದಭೋಚಿತ ಮೆರುಗು ನೀಡುವ ಉಡುಗೆಗಳನ್ನು ಧರಿಸಿದಾಗಲೇ ಶೋಭೆ ಹೆಚ್ಚುತ್ತದೆ. ಅಂದವಾಗಿರುವುದಕ್ಕಿಂತ ಆನಂದವಾಗಿರುವುದೇ ಮುಖ್ಯ ಎಂಬ ಸುಧಾಮೂರ್ತಿಯವರ ಮಾತಿನಂತೆ, ಸೌಂದರ್ಯದ ಕಾಳಜಿಗಿಂತ ನಮ್ಮ ವೃತ್ತಿಗೆ ಗೌರವ ಮತ್ತು ಆನಂದ ನೀಡುವ ಉಡುಗೆಗಳನ್ನು ಧರಿಸುವುದರಲ್ಲೇ ಖುಷಿ ಸಿಗುತ್ತದೆ. ಆತ್ಮವಿಶ್ವಾಸ ಮತ್ತು ಸುರಕ್ಷತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಲು ನಮ್ಮ ಉಡುಗೆ-ತೊಡುಗೆಯೂ ಗಮನಾರ್ಹ ಪಾತ್ರವಹಿಸುತ್ತದೆ ಎಂಬುದನ್ನು ಮನಗಾಣಬೇಕಿದೆ.

ಧನಾತ್ಮಕ ಭಾವ...

ಕೆಲಸದ ಸ್ಥಳಗಳಲ್ಲಿ ಭೇಟಿಯಾಗುವ ಜನರಲ್ಲಿ ಧನಾತ್ಮಕ ಪ್ರಭಾವವನ್ನು ರೂಪಿಸಲು ಆಯಾ ವೃತ್ತಿಗೆ ಪೂರಕ ಉಡುಗೆ ತೊಡುಗೆಗಳು ಸಹಾಯಕವಾಗುತ್ತವೆ. ನಮ್ಮ ಕೆಲಸದಲ್ಲಿ ನಮ್ಮನ್ನು ಉತ್ತಮವಾಗಿ ಪ್ರತಿನಿಧಿಸುವ ಕಾಳಜಿಯ ಸಂಕೇತವೂ ಇದಾಗಿದೆ. ಒಬ್ಬ ವೈದ್ಯೆ, ನರ್ಸ್ ತಿಳಿಬಣ್ಣದ ಉಡುಪು ಧರಿಸಿ, ಬಿಳಿ ಕೋಟು ಧರಿಸಿದರೆ ರೋಗಿಗಳಲ್ಲಿ ವೈದ್ಯರ ಮೇಲೆ ಹೆಚ್ಚಿನ ನಂಬಿಕೆ ಮತ್ತು ಗೌರವದ ಭಾವ ಮೂಡುತ್ತದೆ. ಬಿಳಿ ಬಣ್ಣವು ಶುದ್ಧತೆಯ ಪ್ರತೀಕವೂ ಆಗಿರುವುದರಿಂದ ಶುಚಿತ್ವ ಮತ್ತು ಬದ್ಧತೆಯ ಸಂಕೇತವಾಗಿ ವೈದ್ಯರಿಗೆ ಬಿಳಿ ಕೋಟು ಗೌರವವನ್ನು ತಂದುಕೊಡುತ್ತದೆ. ವೈದ್ಯ ವೃತ್ತಿ ಮಾತ್ರವಲ್ಲದೇ ಬೇರೆ ಬೇರೆ ವೃತ್ತಿಗಳಿಗೆ ಧರಿಸುವ ಬಟ್ಟೆಯ ಬಣ್ಣ ಬಹಳ ಪ್ರಭಾವವನ್ನು ಬೀರುತ್ತದೆ.

ಲಿಂಗ ಸಮಾನತೆಯ ಹೆಗ್ಗುರುತು

ಉದ್ಯೋಗ, ಶಿಕ್ಷಣ ಪ್ರತಿಯೊಂದರಲ್ಲೂ ಸಮಾನತೆಯನ್ನು ಬಯಸುವ ಹೆಣ್ಣು, ಉದ್ಯೋಗ ಪಡೆದ ಮೇಲೆ ಆಯಾ ವೃತ್ತಿಗೆ ಹೆಚ್ಚು ಸೂಕ್ತವೆನಿಸುವ, ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉಡುಪು ಧರಿಸಲು ಸಿದ್ಧರಿರಬೇಕು. ಕಾಪೋರೇಟ್ ವಲಯ, ಅರಣ್ಯ ಇಲಾಖೆ, ಆರಕ್ಷಕ ಇಲಾಖೆ, ಡ್ರೖೆವರ್, ಇಂತಹ ಕೆಲಸಗಳಿಗೆ ಪ್ಯಾಂಟ್, ಶರ್ಟ್ ಧರಿಸಿದರೆ ಅದು ವೃತ್ತಿಗೌರವದ ಜತೆಯಲ್ಲಿ ಲಿಂಗ ಸಮಾನತೆಯನ್ನೂ ಎತ್ತಿ ಹಿಡಿಯುತ್ತದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕಾಂತಾರ ಚಲನಚಿತ್ರದಲ್ಲಿ ಹಳ್ಳಿಯ ಹೆಣ್ಣು ಮಗಳಾದ ಲೀಲಾ ಅರಣ್ಯ ಇಲಾಖೆಯ ವೃತ್ತಿಗೆ ವರದಿ ಮಾಡಿಕೊಂಡಾಗ ಇಲಾಖೆಯ ಸಮವಸ್ತ್ರ ಪ್ಯಾಂಟ್ ಶರ್ಟ್ ಧರಿಸಿದಾಗ ಅವಳ ಮುಖದ ಕಳೆಯೇ ವಿಶೇಷವಾಗಿ ಕಾಣುತ್ತಿದ್ದ ದೃಶ್ಯ ಮರೆಯುವುದುಂಟೆ? ಆಯಾ ಕೆಲಸದ ಜವಾಬ್ದಾರಿಯನ್ನು ಆರಾಮದಾಯಕವಾಗಿ ನಿರ್ವಹಿಸಲು ಉಡುಗೆ ಕೂಡ ಸಹಕಾರಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net