

| ಸುಭಾಸ ಧೂಪದಹೊಂಡ ಕಾರವಾರ
ಕೃಷಿ, ಹೈನುಗಾರಿಕೆಯೆಂದರೆ ಕಷ್ಟ, ನಷ್ಟ ಎಂದು ಅದರಿಂದ ದೂರವಾಗುವವರೇ ಹೆಚ್ಚು. ಆದರೆ, ರಾಜ್ಯ ಸಾರಿಗೆ ಸಂಸ್ಥೆಯ ನೌಕರರೊಬ್ಬರು ನಿವೃತ್ತಿ ನಂತರ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿ ಯಶಸ್ಸು ಸಾಧಿಸಿದ್ದಾರೆ.
ಕಾರವಾರ ತಾಲೂಕು ಕಡವಾಡ ಕುಂಬಾರವಾಡದ ವಾಮನ ಕಳಸ ಎಂಬುವರು ಎನ್ಡಬ್ಲ್ಯುಕೆಆರ್ಟಿಸಿಯಲ್ಲಿ 34 ವರ್ಷ ವೃತ್ತಿ ಮಾಡಿ, ಸಂಚಾರ ನಿಯಂತ್ರಕರಾಗಿ ಮೂರು ವರ್ಷಗಳ ಹಿಂದೆ ನಿವೃತ್ತರಾದರು. ನಿವೃತ್ತಿಯ ನಂತರ ತಮ್ಮ ಕುಲಕಸುಬು ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡು ಕಾರವಾರದಲ್ಲಿ ಪ್ರಗತಿಪರ ಕೃಷಿಕ ಎಂದು ಗುರುತಿಸಿಕೊಂಡಿದ್ದಾರೆ.
ಕೊಟ್ಟಿಗೆಯಲ್ಲಿ 11 ಎಮ್ಮೆ, ಒಂದು ಜರ್ಸಿ ಆಕಳು, ಕೋಣ ಎಲ್ಲ ಸೇರಿ 22 ಜಾನುವಾರು ಸಾಕಿದ್ದಾರೆ. ಹೊತ್ತಿಗೆ 20 ಲೀಟರ್ ಹಾಲು ಕರೆಯುತ್ತಾರೆ. ಪ್ರತಿ ಲೀಟರ್ ಹಾಲನ್ನು 40 ರೂ.ಗೆ ಸುತ್ತಲಿನ ಮನೆಗಳಿಗೆ ಸ್ವತಃ ಹೋಗಿ ಮಾರಾಟ ಮಾಡುತ್ತಾರೆ. ಸ್ಥಳೀಯವಾಗಿ ಸಿಗುವ ಶೇಂಗಾ ಹಿಂಡಿ, ಒಣ ಹುಲ್ಲು ಈ ಜಾನುವಾರುಗಳಿಗೆ ಆಹಾರ. ತಮ್ಮ ಪೂರ್ವಜರ ಕಾಲದಿಂದ ಬೆಳೆಸಿಕೊಂಡು ಬಂದ ಸ್ಥಳೀಯ ತಳಿಯ ಎಮ್ಮೆಗಳ ಸಾಕಣೆಯನ್ನೇ ಮುಂದುವರಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಅವರ ಹಾಲು ಕರೆಯುವ ಕೆಲಸ ಶುರುವಾಗುತ್ತದೆ. ಬಾಟಲಿಗಳಲ್ಲಿ ಹಾಕಿ ಮನೆಗೆ ತಲುಪಿಸಿ ಬರುವವರೆಗೆ ಮಧ್ಯಾಹ್ನ 11 ಗಂಟೆ ದಾಟುತ್ತದೆ.
ಕೃಷಿಗೆ ಆಧಾರ: ವಾಮನ ಕಳಸ ಅವರಿಗೆ ಪೂರ್ವಜರಿಂದ ಬಂದ 3 ಎಕರೆ ಭತ್ತದ ಗದ್ದೆ ಇದೆ. ಜತೆಗೆ 2 ಎಕರೆ ಗೇಣಿ ಪಡೆದು, ಐದು ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಕೃಷಿ ಇಲಾಖೆಯ ಸಹಕಾರ ಪಡೆದು, ಹೊಸ ತಳಿಗಳ ಪ್ರಯೋಗ ಮಾಡಿ ನೋಡುತ್ತಿದ್ದಾರೆ. ಕೃಷಿಗೆ ಹೈನುಗಾರಿಕೆ ಪೂರಕವಾಗಿದೆ. ಭತ್ತದ ಗದ್ದೆಗೆ ಜಾನುವಾರುಗಳ ಸಗಣಿಯಿಂದ ತಯಾರಿಸುವ ಗೊಬ್ಬರವೇ ಆಧಾರವಾಗಿದೆ ಎಂಬುದು ವಾಮನ ಕಳಸ ಅವರ ಅಭಿಪ್ರಾಯ.
ಯಂತ್ರಗಳ ಬಳಕೆ: ಕಳೆದ ವರ್ಷದವರೆಗೂ ಕೋಣವನ್ನು ಬಳಸಿ ಉಳುಮೆ ಮಾಡುತ್ತಿದ್ದ ಅವರು ಈಗ ಪವರ್ ಟಿಲ್ಲರ್, ವೀಡರ್ ಮುಂತಾದ ಯಂತ್ರಗಳನ್ನು ಖರೀದಿಸಿದ್ದು, ಅವುಗಳನ್ನೂ ಬಾಡಿಗೆಗೆ ನೀಡುತ್ತಾರೆ. ಕೃಷಿಗೆ ನಿರಂತರ ಶ್ರಮ ಬೇಕು. ಕೆಲವು ಬಾರಿ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳು ಸಿಗುತ್ತಿಲ್ಲ. ಇದರಿಂದ ಕೃಷಿಯಿಂದ ಜನ ವಿಮುಖರಾಗುತ್ತಿರುವುದು ಬೇಸರ ಎನ್ನುತ್ತಾರೆ ವಾಮನ ಕಳಸ. ಕಳಸ ಅವರಿಗೆ ಕೃಷಿ ಇಲಾಖೆ ನೀಡುವ ತಾಲೂಕು ಮಟ್ಟದ ಪ್ರಶಸ್ತಿಗಳು ಲಭಿಸಿದೆ.
ಕೃಷಿ ನಮಗೆ ಅನ್ನ ನೀಡುವ ಕಾಯಕ. ಹೈನುಗಾರಿಕೆ ಅದಕ್ಕೆ ಪೂರಕ. ಆದರೆ, ಕಾರವಾರದಲ್ಲಿ ಕೃಷಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಲ್ಲೊಬ್ಬ ಇಲ್ಲೊಬ್ಬರು ಕೃಷಿಯಲ್ಲಿ ತೊಡಗಲು ಮುಂದಾದರೆ ಇಲ್ಲಿ ಬೇಕಾದ ವಸ್ತುಗಳೂ ಸಿಗುವುದು ಕಷ್ಟ. ಆದರೆ, ಮನಸ್ಸಿದ್ದಲ್ಲಿ ಮಾರ್ಗವಿದೆ. | ವಾಮನ ಕಳಸ ಪ್ರಗತಿಪರ ಕೃಷಿಕ
ತರಕಾರಿ ಕೃಷಿ: ಕಡವಾಡ ಗ್ರಾಮ ತರಕಾರಿ ಕೃಷಿಗೆ ಪ್ರಸಿದ್ಧವಾಗಿದೆ. ಇಲ್ಲಿ ಬೆಳೆಯುವ ಸಾವಯವ ತರಕಾರಿ ಕಾರವಾರ ಹಾಗೂ ಸುತ್ತಲ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ವಾಮನ ಕಳಸ ಅವರು ಮನೆಯ ಸಮೀಪವೇ ಇರುವ 10 ಗುಂಟೆ ಜಾಗದಲ್ಲಿ ತರಹೇವಾರಿ ತರಕಾರಿ ಬೆಳೆಯುತ್ತಾರೆ. ಅದಕ್ಕೂ ಸಗಣಿ ಗೊಬ್ಬರವೇ ಮೂಲವಾಗಿದೆ. ಹೀರೇಕಾಯಿ, ಸೌತೆಕಾಯಿ, ಬೆಂಡೆ, ಹಾಗಲ, ಪಡುವಲಕಾಯಿ ಬೆಳೆಯುತ್ತಿದ್ದಾರೆ. ಮಳೆಗಾಲ ಮುಗಿದ ಮೇಲೆ ಇತರೆ ಹರಿವೆ ಸೊಪ್ಪು, ಮೂಲಂಗಿ, ಬದನೆಕಾಯಿ ಸೇರಿ ವಿವಿಧ ತರಕಾರಿ ಬೆಳೆಯುತ್ತಾರೆ. ಆಯಾ ಕಾಲಕ್ಕೆ ಅನುಗುಣವಾಗಿ ತರಕಾರಿಯ ಮೂರು ಬೆಳೆ ತೆಗೆಯುತ್ತಾರೆ. ತರಕಾರಿ ಬೆಳೆಯಿಂದ ಕೆಲ ಬಾರಿ ವಾರಕ್ಕೆ 10 ರಿಂದ 12 ಸಾವಿರ ರೂ. ಆದಾಯ ಬರುವುದೂ ಇದೆ. ಅಲ್ಲದೇ ಬಸಳೆ ಸೊಪ್ಪು ಬೆಳೆದಿದ್ದು, ವಾರಕ್ಕೆ ನಾಲ್ಕೈದು ಸಾವಿರ ರೂ. ಆದಾಯ ಸಿಗುತ್ತದೆ ಎನ್ನುತ್ತಾರವರು.