

ಭಾಷಣದ ಕೊನೆಯಲ್ಲಾದರೂ ಅವರು ಆ ಮಹತ್ವದ ನಿರ್ಧಾರವನ್ನು ಪ್ರಕಟಿಸಬಹುದೆಂಬ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿಯಿತು. ನಾವೆಲ್ಲರೂ ಅತ್ಯಂತ ಕಾತರದಿಂದ ಕಾಯ್ದು ಕುಳಿತಿದ್ದ ವಿಚಾರವನ್ನು ಅವರು ಕೊನೆಗೂ ಪ್ರಸ್ತಾಪಿಸಲೇ ಇಲ್ಲ!
ಸತ್ಯ ಹಾಗೂ ಅಹಿಂಸೆಯ ಜತೆಗೆ ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಇನ್ನೊಂದು ಮಹತ್ವದ ಸಂಗತಿ ಎಂದರೆ ಮದ್ಯಪಾನ ಸಂಯಮ. ಮಹಾತ್ಮ ಗಾಂಧಿ ಮದ್ಯ ಮಾರಾಟ, ಸೇವೆನೆ ಹಾಗೂ ಉತ್ಪಾದನೆಯ ಪರ ಎಂದೂ ನಿಂತವರಲ್ಲ. ಅದರಲ್ಲಿಯೂ ಮದ್ಯ ಆಧರಿತ ಆರ್ಥಿಕತೆಯ ಬಗ್ಗೆ ಬಾಪೂ ಕಡು ತಾತ್ಸಾರ ಹೊಂದಿದ್ದರು. ಮದ್ಯಪಾನವು ಮನುಕುಲವನ್ನು ಕಾಡುವ ಮಹಾನ್ ಪಿಡುಗು ಎಂಬುದು ಗಾಂಧೀಜಿಯವರ ನಿಲುವಾಗಿತ್ತು. ಹೀಗಾಗಿ, ಗಾಂಧಿ ಜಯಂತಿಯಂದು ಗಾಂಧಿ ತತ್ವಗಳ ಬಗ್ಗೆ ಬಿಡುಬೀಸಾಗಿ ಭಾಷಣ ಮಾಡಿದ ಸಿದ್ದರಾಮಯ್ಯ ತಮ್ಮ ಸರ್ಕಾರದ ಇತ್ತೀಚಿನ ವಿವಾದಾತ್ಮಕ ನಿಲುವನ್ನು ಬದಲಾಯಿಸಿಕೊಳ್ಳಬಹುದೆಂಬ ಸಣ್ಣ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದು ತಪ್ಪಲ್ಲವಲ್ಲ? ಆದರೆ, ಸಿದ್ದರಾಮಯ್ಯ ಅವರು ಗಾಂಧಿ ಸಿದ್ಧಾಂತದ ಬಗ್ಗೆ ಭಾಷಣ ಮಾಡುವಾಗಲೂ ಅತ್ಯಂತ ಚೂಸಿಯಾಗಿ ಉಳಿದುಬಿಟ್ಟರು. ಆ ಕ್ಷಣಕ್ಕೆ ಏನು ಬೇಕಿತ್ತೋ ಅದನ್ನು ಮಾತ್ರ ಪ್ರತಿಪಾದಿಸಿದರು. ಗಾಂಧಿ ಪ್ರಣೀತ ಪಾನೀಯ ಸಂಯಮದ ಬಗ್ಗೆ ಅವರು ಜಾಣ ಮೌನ ವಹಿಸಲೇಬೇಕಿತ್ತು ಬಿಡಿ. ಏಕೆಂದರೆ, ಈ ಗ್ಯಾರಂಟಿ ಸರ್ಕಾರದ ಆರ್ಥಿಕತೆಯ ಬೇರು ಈಗ ಮದ್ಯ ಮಾರಾಟ ಮಾತ್ರವಾಗಿದೆ.
ನಿಮಗೆಲ್ಲ ಗೊತ್ತಿರುವಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದ್ಯದಲ್ಲೇ 1000 ಹೊಸ ಮದ್ಯದ ಅಂಗಡಿಗಳನ್ನು ತೆರೆಯುವುದಕ್ಕೆ ಸಿದ್ಧತೆ ನಡೆಸಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಂಡದಂಗಡಿಗಳನ್ನು ಪ್ರಾರಂಭಿಸಿ ಗ್ರಾಮ ಮಟ್ಟದಿಂದಲೇ ತೆರಿಗೆ ಸೋರಿಕೆ ತಡೆಯಬೇಕೆಂಬ ಉದಾತ್ತ ಚಿಂತನೆಯೊಂದು ಈ ಸರ್ಕಾರದಲ್ಲಿ ಮೂಡಿದೆ. ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮದ್ಯದ ಅಂಗಡಿಗಳು ಇಲ್ಲ. ಹೀಗಾಗಿ, ಅಕ್ರಮ ಮಾರಾಟ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದೆ. ಇದನ್ನು ನಿಯಂತ್ರಣ ಮಾಡಬೇಕೆಂದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಸ ಮದ್ಯದ ಅಂಗಡಿ ತೆರೆಯುವುದು ಅನಿವಾರ್ಯ ಎಂದು ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಅವರು ಹೊಸ ಅರ್ಥವ್ಯಾಖ್ಯಾನವನ್ನೇ ಆರಂಭಿಸಿದ್ದಾರೆ. ಈ ರಾಜ್ಯವನ್ನು ಅತ್ಯಂತ ಸುದೀರ್ಘ ಅವಧಿಗೆ ಆಳಿದ ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದಾಗಲೇ ಆಸ್ಪತ್ರೆ, ಶಿಕ್ಷಣ, ಮೂಲಸೌಕರ್ಯ, ರಸ್ತೆ, ನೀರು, ವಿದ್ಯುತ್ನ ಅಸಮರ್ಪಕ ಹಂಚಿಕೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಅವುಗಳ ಲಭ್ಯತೆ ಇಲ್ಲದೆ ಇರುವುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವ ಬದಲು ಮದ್ಯ ಮಾರಾಟದ ಅಸಮತೋಲನದ ಲೆಕ್ಕಾಚಾರ ಹಾಕುತ್ತಿದೆ. ಇದು ಸರ್ಕಾರ ಇಡುತ್ತಿರುವ ಅನೈತಿಕ ಮಾರ್ಗದ ಜಾಡು ಎನ್ನದೇ ವಿಧಿ ಇಲ್ಲ.
ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪಂಚ ಗ್ಯಾರಂಟಿಗಳ ಪೈಕಿ ನಾಲ್ಕನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹಲವು ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ, ಈ ಯೋಜನೆಗಳ ಜಾರಿಗಾಗಿ ಅವರು ಸಂಪನ್ಮೂಲ ಕ್ರೋಢೀಕರಣಕ್ಕೆ ಆಯ್ದುಕೊಂಡ ವಿಧಾನ ಮಾತ್ರ ಅತ್ಯಂತ ಆಕ್ಷೇಪಾರ್ಹ. ರಾಜ್ಯದಲ್ಲಿ ಈ ವರ್ಷ ಅಂದಾಜು 35000-36000 ಕೋಟಿ ರೂ. ಅಬಕಾರಿ ಆದಾಯವನ್ನು ಸಂಗ್ರಹಿಸುವ ಗುರಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಮುಂದಿನ ಆರ್ಥಿಕ ವರ್ಷದಲ್ಲಿ ಎದುರಾಗುವ ಹೆಚ್ಚುವರಿ ಗ್ಯಾರಂಟಿ ಭಾರ ಹೊರುವುದನ್ನೂ ಲಕ್ಷದಲ್ಲಿಟ್ಟುಕೊಂಡು ಗ್ರಾಮೀಣ ಪ್ರದೇಶದಲ್ಲಿ 1000 ಹೊಸ ಮದ್ಯದಂಗಡಿ ಸ್ಥಾಪಿಸುವ ಮೂಲಕ ಮುಂದಿನ ಹಣಕಾಸು ವರ್ಷದಲ್ಲಿ ಅಬಕಾರಿ ಸಂಪನ್ಮೂಲವನ್ನು ಇನ್ನೂ ಹತ್ತು ಸಾವಿರ ಕೋಟಿ ರೂಪಾಯಿಯಷ್ಟು ಹೆಚ್ಚಳ ಮಾಡಿಕೊಳ್ಳುವ ಲೆಕ್ಕಾಚಾರ ಇದರ ಹಿಂದೆ ಇದೆ. ಈ ಮೂಲಕ ಗ್ರಾಮೀಣ ಜನರಿಗೆ ಗ್ಯಾರಂಟಿ ರೂಪದಲ್ಲಿ ಒಂದಿಷ್ಟು ಹಣವನ್ನು ಕೊಟ್ಟು ಅದರ ದುಪ್ಪಟ್ಟು ಹಣವನ್ನು ಹೆಂಡ ಮಾರಾಟ ಮಾಡಿ ಕಬಳಿಸುವ ಹುನ್ನಾರವನ್ನು ಈ ಸರ್ಕಾರ ನಡೆಸುತ್ತಿದೆ. ಇದು ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದಕ್ಕಿಂತಲೂ ಅಪಾಯಕಾರಿ.
ಅಬಕಾರಿ ತೆರಿಗೆಯನ್ನು ಸಾಮಾನ್ಯವಾಗಿ 18 ಸ್ಲ್ಯಾಬ್ಗಳಲ್ಲಿ ಹೆಚ್ಚಳ ಮಾಡಲಾಗುತ್ತದೆ. ಅದರ ಉತ್ಪಾದನೆ, ಗುಣಮಟ್ಟ ಆಧರಿಸಿ ಕರ ವೃದ್ಧಿಯಾಗುತ್ತದೆ. 400-450 ರೂ, 450-500 ರೂ, 500-550 ರೂ. ಈ ಮಾದರಿಯಲ್ಲಿ ತೆರಿಗೆ ಸ್ಲಾ್ಯಬ್ ಬದಲಾಗುತ್ತಾ ಹೋಗುತ್ತದೆ. ಅಬಕಾರಿ ಆದಾಯದ ಶೇ. 85ರಷ್ಟು ಆದಾಯ ಮೊದಲ ನಾಲ್ಕು ಸ್ಲಾ್ಯಬ್ಗಳಿಂದಲೇ ಸಂಗ್ರಹವಾಗುತ್ತದೆ. ಈ ಬಾಬ್ತಿನಿಂದ ಈ ವರ್ಷ ಅಂದಾಜು 29000 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣ ಮಾಡಬಹುದು ಎಂಬ ಲೆಕ್ಕಾಚಾರವನ್ನು ಹಣಕಾಸು ಇಲಾಖೆ ಹೊಂದಿದೆ. ಇದರ ಅರ್ಥ ರಾಜ್ಯ ಸರ್ಕಾರ ಈ ವರ್ಷ ಬಡ ಕುಟುಂಬಗಳಿಗೆ ಕಡ್ಡಾಯ ಕುಡಿತದ ಭಾಗ್ಯ ಕರುಣಿಸಿ ಈ ಹಣವನ್ನು ಸಂಗ್ರಹ ಮಾಡುತ್ತದೆ. ಏಕೆಂದರೆ ಮೊದಲ ನಾಲ್ಕು ಸ್ಲಾ್ಯಬ್ಗಳ ವ್ಯಾಪ್ತಿಯಲ್ಲಿ ಬರುವ ಮದ್ಯದ ಕಡಿಮೆ ಹಾಗೂ ಸಾಧಾರಣ ಗುಣಮಟ್ಟದಾಗಿದ್ದು ಇವುಗಳನ್ನು ಬಳಸುವವರು ಬಡ ಹಾಗೂ ದುಡಿಯುವ ವರ್ಗವೇ ಆಗಿದೆ. ದುಬಾರಿ ಮದ್ಯಕ್ಕೆ ತೆರಿಗೆ ಪ್ರಮಾಣ ಹೆಚ್ಚಾದರೂ ಬಳಕೆ ಕಡಿಮೆ. ಹೀಗಾಗಿ, ರಾಜ್ಯ ಸರ್ಕಾರದ ಅಬಕಾರಿ ಸಂಪನ್ಮೂಲ ಕ್ರೋಢೀಕರಣದ ಹಿಂದಿರುವ ಉದ್ದೇಶ ಬಡವರ ಶೋಷಣೆಯೇ ಆಗಿದೆ. ಇದು ಗಾಂಧಿ ಪ್ರಣೀತ ಅರ್ಥಶಾಸ್ತ್ರಕ್ಕೆ ಸಂಪೂರ್ಣ ವಿರುದ್ಧ ಎಂಬುದು ಸಿದ್ದರಾಮಯ್ಯನವರಿಗೆ ಅರ್ಥವಾಗಿಲ್ಲವೇ?
ಯಾವುದೇ ರಾಜ್ಯ ಸರ್ಕಾರವಾಗಲಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನುಗುತ್ತಾ ಅಬಕಾರಿ ಆದಾಯದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುತ್ತಾ ಹೋಗಬೇಕು. ಆದರೆ, ಕರ್ನಾಟಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರೂ ಅಬಕಾರಿ ಆದಾಯದ ಮೇಲಿನ ಅವಲಂಬನೆಯೂ ನಮ್ಮಲ್ಲಿ ಹೆಚ್ಚುತ್ತಿದೆ. ನಮ್ಮ ಒಟ್ಟು ಆರ್ಥಿಕತೆಯ ಶೇ. 13ರಷ್ಟು ಆದಾಯವನ್ನು ನಾವು ಮದ್ಯದ ಸೆಲೆಯಿಂದಲೇ ಭರಿಸುತ್ತಿದ್ದೇವೆ. ಗುಜರಾತ್ ರಾಜ್ಯದಲ್ಲಿ ಇದು ಶೇ. 0.1ರಷ್ಟಿದ್ದರೆ, ಬಿಹಾರದಲ್ಲಿ ಶೇ.0, ಅರುಣಾಚಲದಲ್ಲಿ ಶೇ. 2.2, ಕೇರಳದಲ್ಲಿ ಶೇ. 3ರಷ್ಟು ಮಾತ್ರವಿದೆ. ಅನ್ಯರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇದು ಅತಿ ಹೆಚ್ಚು ಪ್ರಮಾಣದಲ್ಲಿದೆ. ಸಿದ್ದರಾಮಯ್ಯನವರು ಸೃಷ್ಟಿಸಲು ಹೊರಟಿರುವ ಕಲ್ಯಾಣ ರಾಜ್ಯದಲ್ಲಿ ಅಬಕಾರಿ ಸುಲಿಗೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ.
ಹಳ್ಳಿಹಳ್ಳಿಗಳಿಗೆ ಹೆಂಡದ ಮಾರಾಟ ವಿಸ್ತರಣೆ ಮಾಡುವುದರಿಂದ ಸಿದ್ದರಾಮಯ್ಯನವರಿಗೆ ಈ ಕ್ಷಣಕ್ಕೆ ಒಂದಿಷ್ಟು ದುಡ್ಡಿನ ಗಂಟು ಸಿಗಬಹುದು. ಆದರೆ, ಇದರ ದೂರಗಾಮಿ ಪರಿಣಾಮದ ಬಗ್ಗೆ ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ಒಂದಿನಿತಾದರೂ ಯೋಚಿಸಿದ್ದಾರಾ ? ಇದು ಸಮಾಜದ ಒಟ್ಟಾರೆ ಸ್ವಾಸ್ಥ್ಯವನ್ನು ಹಾಳುಗೆಡವುದರ ಜತೆಗೆ ಅಪರಾಧ ಹೆಚ್ಚಳ, ಕಾನೂನು-ಸುವ್ಯವಸ್ಥೆ ಸಮಸ್ಯೆ ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಎಳೆಯ ಮಕ್ಕಳೇ ಕುಡಿತ ಹಾಗೂ ಇನ್ನಿತರ ಚಟಕ್ಕೆ ದಾಸರಾಗುತ್ತಿರುವ ಈ ಸಂದರ್ಭದಲ್ಲಿ ಮದ್ಯದ ಸುಲಭ ಲಭ್ಯತೆ ಇನ್ನಷ್ಟು ಅಪಾಯ ತಂದೊಡ್ಡಬಹುದಾಗಿದೆ. ಬಡ ಹಾಗೂ ಹಿಂದುಳಿದ ವರ್ಗದವರೇ ಸಿದ್ದರಾಮಯ್ಯನವರ ಮದ್ಯಾರಾಧನೆಗೆ ಬಲಿಪಶುವಾಗಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಹೊಸದಾಗಿ 1000 ಮದ್ಯದಂಗಡಿ ಪ್ರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಅಲ್ಲಲ್ಲಿ ಟೀಕೆಗಳು ಕೇಳಿ ಬಂದಿವೆ. ಶಿಕ್ಷಣ ತಜ್ಞರು, ಸಮಾಜ ಶಾಸ್ತ್ರಜ್ಞರು, ಮಹಿಳಾ ಸಂಘಟನೆಗಳು ಧ್ವನಿ ಎತ್ತಿವೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. 135 ಕ್ಷೇತ್ರಗಳಲ್ಲಿ ಗೆದ್ದು ಬಂದಿದ್ದೇವೆ ಎಂಬ ಬಹುಮತದ ಹಮ್ಮು ಅಡರಿದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರ ಸಂಪುಟದಲ್ಲೂ ಸಮಾಜದ ಸ್ವಾಸ್ಥ್ಯವನ್ನು ಬಯಸುವ ಹಲವಾರು ಮನಸುಗಳಿವೆ. ಆದರೆ, ಅವರ್ಯಾರು ಈ ನಿರ್ಧಾರದ ಬಗ್ಗೆ ತುಟಿ ಬಿಚ್ಚಿಲ್ಲ. ಹೀಗಾಗಿ, ಗಾಂಧಿ ತತ್ವಾದರ್ಶಗಳ ಬಗ್ಗೆ ಮಾತನಾಡುವಾಗಲಾದರೂ ಸಿದ್ದರಾಮಯ್ಯನವರಿಗೆ ಅಂತರಾತ್ಮ ಚುಚ್ಚಿ ಮದ್ಯ ಸಂಯಮದ ಅಂತಬೋಧೆಯಾಗಬಹುದೆಂಬ ನಿರೀಕ್ಷೆ ರಾಜ್ಯದ ಜನರದ್ದಾಗಿತ್ತು. ಆದರೆ, ಅದೀಗ ಹುಸಿಯಾಗಿದೆ. ಬದನೆಕಾಯಿ ನಿಷೇಧ ಭಾಷಣಕ್ಕಷ್ಟೇ, ಊಟಕ್ಕಲ್ಲ ಎಂದು ಸಿದ್ದರಾಮಯ್ಯನವರಂಥ ರಾಜಕಾರಣಿಗಳು ಮತ್ತೆ ಮತ್ತೆ ನಿರೂಪಿಸುತ್ತಲೇ ಇರುತ್ತಾರೆ.
(ಲೇಖಕರು ಬಿಜೆಪಿ ಹಿರಿಯ ಶಾಸಕರು)