

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿನ ನುಂಬ್ಡಿ ಚಂದಾವಟಾ ಎಂಬ ಹಳ್ಳಿ ಇದೇ ವರ್ಷದ ಏಪ್ರಿಲ್ನಲ್ಲಿ ವಿರಳ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು. ಅಲ್ಲಿನ ಮದನಲಾಲ್ ಕುಮರ್ ಎಂಬುವವರ ಕುಟುಂಬದಲ್ಲಿ ಕಳೆದ 35 ವರ್ಷಗಳಿಂದ ಒಂದು ಹೆಣ್ಣುಮಗವೂ ಜನಿಸಿರಲಿಲ್ಲ. ಮನೆಯಲ್ಲಿ ಮಹಾಲಕ್ಷ್ಮಿ ಜನಿಸದಿರುವುದು ಅವರಿಗೆಲ್ಲ ತೀವ್ರ ನೋವು ಮತ್ತು ಚಿಂತೆಯ ಸಂಗತಿಯಾಗಿತ್ತು. ಒಂದು ಹೆಣ್ಣುಮಗುವಿಗಾಗಿ ಎಷ್ಟು ದೇವರಿಗೆ ಹರಕೆ ಹೊತ್ತಿದ್ದರೋ... ಅಂತೂ ಆ ಸುದಿನ ಬಂತು. ಮೊಮ್ಮಗಳು ಜನಿಸಿದ್ದರಿಂದ ಅಜ್ಜ ಮದನಲಾಲ್ ಕುಮರ್ ಖುಷಿಗೆ ಪಾರವೇ ಇರಲಿಲ್ಲ. ಪಕ್ಕದ ಜಿಲ್ಲೆ ವ್ಯಾಪ್ತಿಗೆ ಬರುತ್ತಿದ್ದ, 30 ಕಿಮೀ ದೂರದ ತನ್ನ ಅಜ್ಜಿ ಮನೆಯಲ್ಲಿದ್ದ ಮೊಮ್ಮಗಳನ್ನು ಮನೆಗೆ ಕರೆತರಲು ಭರ್ಜರಿ ಪ್ಲಾನ್ ಮಾಡಿದರು. ಜಿಲ್ಲಾಡಳಿತಗಳ ಅನುಮತಿ ಪಡೆದು ಎರಡೂ ಕಡೆ ಹೆಲಿಪ್ಯಾಡ್ ನಿರ್ಮಾಣ ಮಾಡಿದರು. ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ಮೊಮ್ಮಗಳನ್ನು ಮನೆಗೆ ಕರೆಸಿಕೊಂಡರು. ಇಪ್ಪತ್ತು ನಿಮಿಷಗಳ ಈ ಪ್ರಯಾಣಕ್ಕೆ ತಗುಲಿದ ವೆಚ್ಚ 4.5 ಲಕ್ಷ ರೂಪಾಯಿ. ಎರಡು ತಿಂಗಳ ಮಗಳನ್ನು ಎದೆಗವಚಿಕೊಂಡು ಹೆಲಿಕಾಪ್ಟರ್ನಿಂದ ಕೆಳಗಿಳಿದ ತಂದೆ ಹನುಮಾನ್ ರಾಮ್ ಪ್ರಜಾಪತ್ ಹೇಳಿದ್ದು ಹೀಗೆ: ‘ಪುಟ್ಟ ಮಗಳನ್ನು ಹೀಗೆ ಹೆಲಿಕಾಪ್ಟರ್ನಲ್ಲಿ ಕರೆತರುವ ಮೂಲಕ ನಾನು ಹೇಳಬಯಸುವುದಿಷ್ಟೆ. ಮನೆಯಲ್ಲಿ ಹೆಣ್ಣುಮಗು ಜನಿಸಿದರೆ ಬೇಜಾರುಪಡುವ ಬದಲು ಎಲ್ಲರೂ ಖುಷಿಪಡಬೇಕು. ಆ ಸಂಭ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು.’
ದಶಕಗಳ ಹಿಂದೆ ರಾಜಸ್ಥಾನದಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಪ್ರತಿದಿನ ಸುಮಾರು 2500 ಹೆಣ್ಣು ಭ್ರೂಣಹತ್ಯೆ ನಡೆಯುತ್ತದೆಂದು ಆಗ ಅನಧಿಕೃತ ವರದಿಗಳು ಲೆಕ್ಕಹಾಕಿದ್ದವು. ಅದರಲ್ಲೂ ಜೈಸಲ್ಮೇರ್ನಂಥ ಪ್ರದೇಶದಲ್ಲಿ ಇದು ವ್ಯಾಪಕವಾಗಿತ್ತು. ಮದುವೆ ಸಮಯದಲ್ಲಿ ನೀಡಬೇಕಾದ ಭಾರಿ ವರದಕ್ಷಿಣೆ ಇದಕ್ಕೆ ಒಂದು ಮುಖ್ಯ ಕಾರಣ ಎಂದು ಸಮಾಜಶಾಸ್ತ್ರಜ್ಞರು ಗುರುತಿಸಿದ್ದರು. ಈ ಪ್ರವೃತ್ತಿ ತಡೆಗಟ್ಟಲೆಂದು ‘ಜನನಿ ಸುರಕ್ಷಾ ಯೋಜನಾ’ ಎಂಬ ಹೆಸರಿನ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು. ಆ ಪ್ರಕಾರ, ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಪ್ರತಿ ಹೆಣ್ಣುಮಗುವಿನ ಪಾಲಕರಿಗೆ 1500 ರೂ. ನೀಡಲಾಗುತ್ತಿತ್ತು. ಇಷ್ಟೇ ಅಲ್ಲ, ಹೆಣ್ಣು ಭ್ರೂಣಹತ್ಯೆ ತಡೆಗಟ್ಟಲು ‘ಮುಖಾಬಿರ್ ಯೋಜನಾ’ (ಮಾಹಿತಿದಾರರ ಯೋಜನೆ) ಕೂಡ ಇದೆ. ಆ ಪ್ರಕಾರ, ಇಂತಹ ಕಾರ್ಯ ಮಾಡುವವರ ಸುಳಿವು ನೀಡಿದರೆ ಕಂತುಗಳಲ್ಲಿ 3 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಮೊದಲು 2.5 ಲಕ್ಷ ಇದ್ದುದನ್ನು 2021-22ನೇ ಸಾಲಿನಿಂದ ಹೆಚ್ಚಿಸಲಾಗಿದೆ. ಭ್ರೂಣಪತ್ತೆಯಲ್ಲಿ ವೈದ್ಯರು ಅಥವಾ ಇತರರು ತೊಡಗಿದ ಮಾಹಿತಿ ನೀಡಿದರೆ, ಸರ್ಕಾರದ ವಿಭಾಗವೊಂದು ಆ ಬಗ್ಗೆ ಪರಿಶೀಲಿಸಿ, ಘಟನೆ ಹೌದಾದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತದೆ. ಗಂಡುಮಗು-ಹೆಣ್ಣುಮಗುವಿನ (0-6 ವರ್ಷ ವಯೋಮಾನ) ಅನುಪಾತ 1981ರಲ್ಲಿ 1000:954 ಇದ್ದುದು 2011ರ ಹೊತ್ತಿಗೆ 1000:888ಕ್ಕೆ ಇಳಿದಿತ್ತು ಎಂದರೆ ಅಲ್ಲಿನ ಅಸಮಾನ ಪರಿಸ್ಥಿತಿಯನ್ನು ಊಹಿಸಬಹುದು. ಈಗ ಅಲ್ಲಿನ ಮಕ್ಕಳ ಲಿಂಗಾನುಪಾತ 1000:926 ಇದೆ.
ಅದೇ ರಾಜಸ್ಥಾನದ ಬಾರ್ವೆರ್ ನಗರದಲ್ಲಿ ಕಿಶೋರ್ ಸಿಂಗ್ ಕನೋದ್ ಅವರ ಕುಟುಂಬ ನೆಲೆಸಿದೆ. ಅವರ ಪುತ್ರಿ ಅಂಜಲಿ ಕನ್ವರರ ವಿವಾಹ ಇದೇ ನವೆಂಬರ್ 21ರಂದು ಪ್ರವೀಣ್ ಸಿಂಗ್ ಎಂಬುವವರ ಜತೆ ನೆರವೇರಿತು. ಮದುವೆ ಎಂಬುದು ಎಲ್ಲರ ಜೀವನದಲ್ಲಿ ಸಹಜವಾಗಿ ಸಂಭ್ರಮದ ಸಮಯ. ಹಾಗಾದರೆ ಈ ಮದುವೆಯಲ್ಲೇನು ವಿಶೇಷ ಎಂದು ಕೇಳುತ್ತೀರಾ? ಮದುವೆಗೆ ಕೆಲ ದಿನ ಮುಂಚೆ ತಂದೆ ಬಳಿ ಮಾತನಾಡಿದ ಅಂಜಲಿ ಬೇಡಿಕೆಯೊಂದನ್ನು ಮುಂದಿಟ್ಟರು. ಅದೆಂದರೆ- ವರದಕ್ಷಿಣೆಗೆಂದು ತೆಗೆದಿಟ್ಟಿರುವ 75 ಲಕ್ಷ ರೂ.ಗಳನ್ನು ಊರಿನಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ವಿುಸಲು ನೀಡಬೇಕು ಎಂಬುದು. ತಂದೆಗೆ ಒಂದು ಕ್ಷಣ ಅಚ್ಚರಿಯಾಯಿತಾದರೂ ಮಗಳ ಬೇಡಿಕೆಯ ಹಿಂದಿನ ಕಳಕಳಿಯನ್ನು ಕಂಡು ಇದಕ್ಕೆ ಒಪ್ಪಿದರು. ಮದುವೆಯಂದು ವಿಧಿವಿಧಾನಗಳೆಲ್ಲ ಮುಗಿದ ಮೇಲೆ ಅಂಜಲಿ ಪುರೋಹಿತರಾದ ಮಹಂತ ಪ್ರತಾಪ ಪುರಿ ಅವರ ಬಳಿ ತನ್ನ ಮನದಿಂಗಿತವನ್ನು ಲಿಖಿತವಾಗಿ ನೀಡಿದರು. ಪುರೋಹಿತರು ಅದನ್ನು ಸಮಾರಂಭದಲ್ಲಿ ಓದಿ ಹೇಳಿದಾಗ ಎಲ್ಲರಿಂದಲೂ ಪ್ರಶಂಸೆಯ ಚಪ್ಪಾಳೆ ಸಿಕ್ಕಿತು. ಅಷ್ಟೆ ಅಲ್ಲ, ಕಿಶೋರ್ ಸಿಂಗ್ ಅವರು ಅಲ್ಲಿಯೇ ಮಗಳಿಗೆ ಬ್ಲ್ಯಾಂಕ್ ಚೆಕ್ ನೀಡಿ, ಇಷ್ಟಬಂದಷ್ಟು ಮೊತ್ತ ಬರೆದುಕೊಳ್ಳುವಂತೆ ಹೇಳಿದರಂತೆ. ಅಂದಹಾಗೆ, ಅಲ್ಲಿನ ರಾಷ್ಟ್ರೀಯ ಹೆದ್ದಾರಿ 68ರ ಸನಿಹ ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ವಣಕ್ಕೆ ಕಿಶೋರ್ ಸಿಂಗ್ ಈಗಾಗಲೇ ಒಂದು ಕೋಟಿ ರೂ. ನೀಡಿದ್ದರಂತೆ. ಆದರೂ ಕಟ್ಟಡ ನಿರ್ವಣಕ್ಕೆ ಇನ್ನೂ 50ರಿಂದ 75 ಲಕ್ಷ ರೂ. ಅಗತ್ಯ ಇತ್ತು. ಈಗ ಅಂಜಲಿ ಕನ್ವರ್ ಕಾಳಜಿಯಿಂದ ಆ ಹಣ ದೊರೆಯುವಂತಾಯಿತು. ಈ ಹೆಣ್ಣುಮಗಳಿಗೆ ಭೇಷ್ ಎನ್ನದೆ ಇರಲಾದೀತೆ! ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಸಾಕ್ಷರತಾ ಆಂದೋಲನದ ಸಂದರ್ಭದ ಒಂದು ಜನಪ್ರಿಯ ಘೋಷಣೆ. ಅಂಜಲಿಯಂತಹವರು ಇದಕ್ಕೆ ಮತ್ತೊಂದು ಆಯಾಮವನ್ನೇ ನೀಡಿಬಿಡುತ್ತಾರೆ. ರಾಜಸ್ಥಾನದಂತಹ ರಾಜ್ಯದಿಂದ ಬಂದ ಈ ಎರಡು ಸಂದೇಶಗಳು ಭರವಸೆಯ ಬೆಳಕನ್ನು ಬಿತ್ತುವ ಹಾಗಿವೆಯಲ್ಲವೆ...
ಈಚೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್-5) ವರದಿ ಪ್ರಕಟವಾಗಿದೆ. ಈ ವರದಿಯಲ್ಲಿ ಹಲವು ಆಸಕ್ತಿಕರ ಅಂಶಗಳು ದಾಖಲಾಗಿವೆ. ದೇಶದಲ್ಲಿ ಇದೇ ಮೊದಲ ಬಾರಿ ಪುರುಷರಿಗಿಂತ ಮಹಿಳೆಯರ ಅನುಪಾತ ಜಾಸ್ತಿಯಾಗಿದೆ. ಅಂದರೆ, 1000:1020 ಆಗಿದೆ. ಆದರೆ ಇದೇ ಮಾತನ್ನು ಮಕ್ಕಳ ಪ್ರಮಾಣಕ್ಕೆ (0-6 ವರ್ಷ ವಯೋಮಾನ) ಹೋಲಿಸಿ ಹೇಳುವ ಹಾಗಿಲ್ಲ. ಈ ಅನುಪಾತ 1000:924 ಇದೆ. ಅಂದರೆ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದೆ.
‘ಏ ನಿನಗೆ ಲೆಕ್ಕಗಿಕ್ಕ ಎಲ್ಲ ಗೊತ್ತಾಗಲ್ಲ ಬಿಡು. ಅದನ್ನು ನಾನು ನೋಡಿಕೊಳ್ತೀನಿ. ನೀನು ಮನೆಯನ್ನು ಸಂಭಾಳಿಸು ಸಾಕು’- ಇಂಥ ಮಾತು ಹಿಂದೆ ಸಾಮಾನ್ಯವಾಗಿತ್ತು. ಆದರೆ ಕ್ರಮೇಣ ಮಹಿಳೆಯರು ಹೊರಗೆ ದುಡಿಯಲು ಹೋಗುವುದು ಹೆಚ್ಚಾದ ಮೇಲೆ ಅವರಿಗೆ ಆರ್ಥಿಕ ಸ್ವಾವಲಂಬನೆ ಬರತೊಡಗಿತು. ಇದಲ್ಲದೆ, ಮನೆಯ ಆರ್ಥಿಕ ವ್ಯವಹಾರಗಳಲ್ಲೂ ಮಹಿಳೆಯ ಮಾತಿಗೆ ಮನ್ನಣೆ ಸಿಗತೊಡಗಿದೆ. ಭಾರತದ ನಗರ ಪ್ರದೇಶಗಳ ಶೇಕಡ 81 ಜನರು ಮತ್ತು ಗ್ರಾಮೀಣ ಪ್ರದೇಶದ ಶೇ. 77ರಷ್ಟು ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ, ಮಹಿಳೆಯರು ಬ್ಯಾಂಕ್ ಖಾತೆ ಹೊಂದುವ ಪ್ರಮಾಣ 2015-16ರ ಎನ್ಎಫ್ಎಚ್ಎಸ್ ಸಮೀಕ್ಷೆಗೆ ಹೋಲಿಸಿದರೆ, ಶೇ.53ರಿಂದ ಶೇ.78ಕ್ಕೆ ಏರಿದೆ ಎಂದು ವರದಿ ಹೇಳಿರುವುದು ಮಹತ್ವದ ಸಂಗತಿ. ಜನಧನ ಯೋಜನೆ ಸಹ ಇದರಲ್ಲಿ ಪಾತ್ರವಹಿಸಿದೆ. ಕೌಟುಂಬಿಕ ವ್ಯವಹಾರಗಳಲ್ಲಿ ಮಹಿಳೆಯ ಸಕ್ರಿಯ ಸಹಭಾಗಿತ್ವ ಕೂಡ ಹೆಚ್ಚಿದೆ. ತನ್ನ ವ್ಯಕ್ತಿಗತ ಆರೋಗ್ಯದ ಬಗ್ಗೆ ಕಾಳಜಿ (‘ಮಹಿಳೆ ತನ್ನ ಆರೋಗ್ಯದ ಕುರಿತು ಕಾಳಜಿ ವಹಿಸಿದಾಗ ಆಕೆ ತನ್ನ ಉತ್ತಮ ಸ್ನೇಹಿತೆಯಾಗುತ್ತಾಳೆ’ ಎಂದು ಅಮೆರಿಕನ್ ಕವಯಿತ್ರಿ, ಸಾಮಾಜಿಕ ಹೋರಾಟಗಾರ್ತಿ ಮಾಯಾ ಏಂಜೆಲೊ ಹೇಳುವುದು ಇದೇ ಅರ್ಥದಲ್ಲಿ), ಮನೆಗೆ ಬೇಕಾದ ಪ್ರಮುಖ ವಸ್ತುಗಳ ಖರೀದಿ, ಸಂಬಂಧಿಕರು ಅಥವಾ ಸ್ನೇಹಿತ ವಲಯದವರ ಮನೆಗೆ ಭೇಟಿ ಮುಂತಾದ ವಿಚಾರಗಳಲ್ಲಿ ಮಹಿಳೆಯ ಅಭಿಪ್ರಾಯಕ್ಕೆ ಬೆಲೆ ನೀಡಬೇಕಾದ ಸನ್ನಿವೇಶ ನಿರ್ವಣವಾಗಿರುವುದು ಗಮನಿಸಬೇಕಾದ ಸಂಗತಿ. ಆದರೆ, ಆಸ್ತಿ ಮಾಲೀಕತ್ವದ ವಿಚಾರದಲ್ಲಿ ಮಹಿಳೆ ಇನ್ನೂ ಸಾಕಷ್ಟು ದಾರಿ ಕ್ರಮಿಸಬೇಕಿದೆ ಎಂದು ವರದಿ ಬೊಟ್ಟುಮಾಡಿದೆ. ಹೀಗಿದ್ದರೂ, ಎನ್ಎಫ್ಎಚ್ಎಸ್-4 ಸಮೀಕ್ಷೆಯಲ್ಲಿ ಆಸ್ತಿಪಾಸ್ತಿ ಮಾಲೀಕತ್ವ ಪ್ರಮಾಣ ಶೇ.38.4 ಇದ್ದುದು ಈಗ ಶೇ.43.3ಕ್ಕೆ ಏರಿರುವುದು ವಿಶೇಷ. ನಮ್ಮಲ್ಲಿ ಮನೆ ಅಥವಾ ಜಮೀನನ್ನು ಮಹಿಳೆ ಸ್ವಂತ ಹೆಸರಿನಲ್ಲಿ ಅಥವಾ ಜಂಟಿ ಹೆಸರಿನಲ್ಲಿ ಹೊಂದುವ ರೂಢಿ ಕಡಿಮೆಯೇ ಇದೆ.
2015-16ರ ಎನ್ಎಫ್ಎಚ್ಎಸ್ ಸಮೀಕ್ಷೆಗೆ ಹೋಲಿಸಿದಲ್ಲಿ, ದೇಶದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ವಿವಾಹ ಪ್ರಮಾಣ ಶೇ.26.8ರಿಂದ ಶೇ.23ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರವೃತ್ತಿ ಹೆಚ್ಚಿನ ಪ್ರಮಾಣದಲ್ಲಿದ್ದು, ಶೇ.27ರಷ್ಟಿದೆ, ನಗರ ಪ್ರದೇಶದಲ್ಲಿ ಶೇ.14 ಇದೆ. ಅದರಲ್ಲೂ ವಿಶೇಷವಾಗಿ, ಕರೊನಾ ಲಾಕ್ಡೌನ್ ಅವಧಿಯಲ್ಲಿ ಬಾಲ್ಯವಿವಾಹದ ಪ್ರಮಾಣ ಹೆಚ್ಚಿಗೆಯಾಗಿದೆ. ಭಾರತದ ಮಹಿಳೆಯರು ಹಾಗೂ ಮಕ್ಕಳಲ್ಲಿ ಹಿಂದಿನಿಂದಲೂ ರಕ್ತಹೀನತೆ ಹೆಚ್ಚಿನ ಪ್ರಮಾಣದಲ್ಲಿದ್ದು, ಈಗಲೂ ಮುಂದುವರಿದಿರುವುದು ಕಳವಳಕಾರಿ ವಿಚಾರ. ಇದಕ್ಕೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿವೆ. ಈ ಪ್ರಮಾಣ ಐದು ವರ್ಷಗಳ ಹಿಂದೆ ಶೇ.55 ಇದ್ದುದು ಈಗ 2019-21ರ ಅವಧಿಯಲ್ಲಿ ಶೇ.64ಕ್ಕೆ ಹೆಚ್ಚಿದೆ ಎಂದು ವರದಿ ಹೇಳಿದೆ. ‘ಆರೋಗ್ಯ ಭಾರತ’ ನಿರ್ವಣದಲ್ಲಿ ಇದೊಂದು ದೊಡ್ಡ ಸವಾಲೇ ಸರಿ.
ಇಷ್ಟೇ ಅಲ್ಲ, ಕೌಟುಂಬಿಕ ವಿಚಾರದಲ್ಲಿ ಇನ್ನೂ ಕೆಲ ಆಸಕ್ತಿದಾಯಕ-ಅಚ್ಚರಿದಾಯಕ ಸಂಗತಿಗಳನ್ನೂ ಈ ಸಮೀಕ್ಷೆ ಹೊರಗೆಡಹಿದೆ. ಈ ಪೈಕಿ ಬಹಳ ಕುತೂಹಲವೆಂದರೆ, ಗಂಡನು ಹೆಂಡತಿಗೆ ಹೊಡೆದರೆ ತಪ್ಪೇನಿಲ್ಲ ಎಂಬುದಾಗಿ ಅನೇಕ ಮಹಿಳೆಯರೇ ಭಾವಿಸುತ್ತಾರಂತೆ. ಪತ್ನಿ ಮನೆಯವರಿಗೆ ಹೇಳದೆ ಹೊರಗೆ ಹೋದರೆ; ಮಕ್ಕಳು ಅಥವಾ ಮನೆಯನ್ನು ನಿರ್ಲಕ್ಷಿಸಿದರೆ; ಪತಿಯೊಡನೆ ಜಗಳಕಾದರೆ; ಸರಿಯಾಗಿ ಅಡುಗೆ ಮಾಡದಿದ್ದರೆ; ಅತ್ತೆಮಾವನಿಗೆ ಅಗೌರವ ತೋರಿದರೆ... ಈ ಮುಂತಾದ ಸಂದರ್ಭಗಳಲ್ಲಿ ಜನರ ಪ್ರತಿಕ್ರಿಯೆ ಕೇಳಿದಾಗ, ಪತಿಯಾದವನು ಪತ್ನಿಗೆ ಹೊಡೆದರೆ ತಪ್ಪೇನೂ ಇಲ್ಲ ಎಂಬುದಾಗಿ ಕೆಲವರು ಹೇಳಿದರು. ಈ ಅನಿಸಿಕೆ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗುತ್ತದೆ. 18 ರಾಜ್ಯಗಳಲ್ಲಿ ಶೇ.33 ಪುರುಷರು ಈ ಅಭಿಪ್ರಾಯವನ್ನು ಒಪ್ಪಿದ್ದಾರೆ. ಆಂಧ್ರಪ್ರದೇಶದಲ್ಲಿ ಶೇ.84 ಮಹಿಳೆಯರು ಈ ಕೃತ್ಯವನ್ನು ಸಮರ್ಥಿಸಿದ್ದಾರಂತೆ. ಅಲ್ಲಿ ಶೇ.64 ಪುರುಷರು ಇದಕ್ಕೆ ಸಹಮತಿಸಿದ್ದಾರೆ. ನಮ್ಮ ಕರ್ನಾಟಕವನ್ನು ತೆಗೆದುಕೊಂಡರೆ, ಶೇ.77 ಮಹಿಳೆಯರು ಹಾಗೂ ಶೇ.82 ಪುರುಷರು ಇದನ್ನು ಸಮರ್ಥಿಸಿದ್ದಾರೆ ಎಂದು ಎನ್ಎಫ್ಎಚ್ಎಸ್-5 ವರದಿ ಹೇಳಿದೆ. ಹಾಗಾದರೆ ಇಷ್ಟೆಲ್ಲ ಮುಂದುವರಿದ ಸಮಾಜ ಎಂದು ಹೇಳುತ್ತಿದ್ದರೂ ಯಾಕೆ ಇಂಥದೊಂದು ಮಾನಸಿಕತೆ ಇನ್ನೂ ಇದೆ? ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರು ಬೇರೆ ಬೇರೆ ಕಾರಣಗಳನ್ನು ಪಟ್ಟಿಮಾಡುತ್ತಾರೆ. ಮಹಿಳೆಗೆ ಆರ್ಥಿಕ ಸ್ವಾವಲಂಬನೆ ಇರದಿರುವುದು; ಹೆಂಡತಿಯಾದವಳು ತಗ್ಗಿಬಗ್ಗಿ ನಡೆಯಬೇಕು; ಗಂಡನಮನೆಯಲ್ಲಿ ಅನುಸರಿಸಿಕೊಂಡು ಹೋಗಬೇಕು ಎಂಬ ಪಾರಂಪರಿಕ ರೀತಿರಿವಾಜು; ಶಿಕ್ಷಣದ ಕೊರತೆ; ಕುಟುಂಬದ ವಿಷಯದಲ್ಲಿ ಪುರುಷನದೇ ಮಾತು ನಡೆಯಬೇಕು ಎಂಬ ಮನಸ್ಥಿತಿ... ಹೀಗೆ. ಈ ನಡುವೆಯೂ, ಗಂಡ ಗೊರಕೆ ಹೊಡೆಯುತ್ತಾನೆ ಎಂಬ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿಹಾಕಿದ ನಿದರ್ಶನಗಳೂ ನಮ್ಮಲ್ಲಿವೆ ಎನ್ನಿ. ಇದೆಲ್ಲ ಏನೇ ಇದ್ದರೂ, ಪರಸ್ಪರ ಹೊಂದಾಣಿಕೆ ಎಂಬುದು ಇಲ್ಲದಿದ್ದಲ್ಲಿ ಆ ಮನೆ-ಮನ ಮುರಿಯಲು ಬಹಳ ಕಾಲ ಬೇಕಿಲ್ಲ.
ಕೊನೇ ಮಾತು: ‘ಕೆಲಸದಲ್ಲಿ ಎಷ್ಟೇ ವ್ಯಸ್ತಳಾಗಿದ್ದರೂ, ಮನೆಗೆ ಹೋದಮೇಲೆ ನೀನು ಒಬ್ಬ ವ್ಯಕ್ತಿ, ನೀನು ಒಬ್ಬ ತಾಯಿ, ನೀನು ಒಬ್ಬ ಮಗಳು ಮತ್ತು ನೀನು ಒಬ್ಬ ಪತ್ನಿ ಎಂಬುದನ್ನು ಮರೆಯಬೇಡ’ ಎನ್ನುವ ಮೂಲಕ, ವರ್ಕ್ ಲೈಫ್ ಮತ್ತು ಕೌಟುಂಬಿಕ ಜೀವನದ ಸಮತೋಲನ ಕಾಪಾಡಿಕೊಂಡು ಹೋಗುವ ಗುಟ್ಟನ್ನು ಚುಟುಕಾಗಿ, ಮಾರ್ವಿುಕವಾಗಿ ಕಟ್ಟಿಕೊಡುತ್ತಾರೆ, ಪೆಪ್ಸಿ ಕಂಪನಿಯ ಮಾಜಿ ಮುಖ್ಯಸ್ಥೆ ಇಂದ್ರಾ ನೂಯಿ. ಹೌದಲ್ಲವೆ, ಅದರಲ್ಲೂ ವಿಶೇಷವಾಗಿ ಹೆಣ್ಣು ತನ್ನ ಬಹುಮುಖಿ ಪಾತ್ರ-ಜವಾಬ್ದಾರಿಯನ್ನು ತುಸುವೇ ಕಡೆಗಣಿಸಿದರೂ ಆ ಕುಟುಂಬಕ್ಕೆ, ಸಮಾಜಕ್ಕೆ ಹಾನಿ ನಿಶ್ಚಿತ. ಹಾಗಂತ, ಪುರುಷ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು ಎನ್ನಿ!
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)