ಜೀವನದಲ್ಲಿ ರೋಗವಿಲ್ಲದ ಕಾಲವೇ ಹೆಚ್ಚು!!

Doctor
Published on
ಪ್ರತಿಯೊಬ್ಬರ ಬದುಕು ಸಂತಸಮಯವಾಗಿ ಇರಬೇಕಾದರೆ ಆರೋಗ್ಯ ಹಾಗೂ ನೆಮ್ಮದಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಅದೆಷ್ಟೇ ಸಿರಿವಂತಿಕೆ, ಸ್ಥಾನಮಾನ, ಶಿಕ್ಷಣ ಇದ್ದರೂ ಮೂಲತಃ ಬೇಕಾಗಿರುವುದು ಆರೋಗ್ಯ ಹಾಗೂ ನೆಮ್ಮದಿ. ರೋಗವಿಲ್ಲದಿದ್ದರೆ ಆರೋಗ್ಯ, ಆರೋಗ್ಯದ ಜೊತೆ ನೆಮ್ಮದಿ ಇದ್ದರೆ ಸ್ವಾಸ್ಥ್ಯ!

ಬಹಳಷ್ಟು ಜನರಿಗೆ ದಿನವನ್ನು ಗೊಣಗುತ್ತಲೇ ಪ್ರಾರಂಭಿಸುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಆರೋಗ್ಯ ಸಮಸ್ಯೆ ಇದ್ದರಂತೂ ಕೇಳುವುದೇ ಬೇಡ. ಮೈಕೈನೋವು, ಕೀಲುನೋವು, ಉಸಿರಾಟದ ತೊಂದರೆ, ಸುಸ್ತು, ತಲೆನೋವು... ಹೀಗೆ ಸಮಸ್ಯೆಗಳ ಪಟ್ಟಿ ಉದ್ದಕ್ಕೆ ಸಾಗುತ್ತದೆ. ಆದರೆ ಇಲ್ಲಿ ಗಮನಿಸಲೇಬೇಕಾದ ವಿಷಯವೊಂದಿದೆ. ಐವತ್ತು ವರ್ಷದ ಒಳಗಿನವರು ಇಂತಹ ತೊಂದರೆಯೊಂದಿಗೆ ತೊಳಲಾಡುವುದು ಅಪರೂಪ! ಕಾರಣ ತುಂಬಾ ಸರಳ. ಹೊಸ ಆರಂಭದ ಐದು ವರ್ಷ ತೊಂದರೆಗಳಾಗುವುದು ಕಡಿಮೆ. ಆ ಬಳಿಕ ಆಗಾಗ ದುರಸ್ತಿ ಮಾಡಿಸಬೇಕಾಗುತ್ತದೆ. ನಮ್ಮ ದೇಹವೂ ಇದಕ್ಕೆ ಹೊರತಲ್ಲ. ಹಾಗೆಯೇ ಕುಳಿತು ಆಲೋಚಿಸಿದರೆ ಜೀವಮಾನವಿಡೀ ಕಾಯಿಲೆಗಳಿಂದ ತುಂಬಿದಂತೆ ಅದೆಷ್ಟೋ ಜನರಿಗೆ ಭಾಸವಾಗುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹಲವಾರು ಕಾಯಿಲೆಗಳು ಒಮ್ಮೆ ದೇಹ ಪ್ರವೇಶಿಸಿದರೆ ಜೀವನಪೂರ್ತಿ ಔಷಧಿ ಸೇವಿಸಿಕೊಂಡು ವ್ಯಥೆ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಎಂಬತ್ತು ವರ್ಷದ ವೃದ್ಧರನ್ನು ಮಾತನಾಡಿಸಿದರೆ ಜೀವನಪೂರ್ತಿ ಕಾಯಿಲೆಯಲ್ಲೇ ಕಳೆದುಹೋಯಿತು ಎನ್ನುತ್ತಾ ಭ್ರಮನಿರಸನಗೊಳ್ಳುತ್ತಾರೆ. ಆದರೆ ವಾಸ್ತವ ಪರಿಸ್ಥಿತಿಯೇ ಬೇರೆ!

ಸಾಮಾನ್ಯವಾಗಿ ನಲವತ್ತರ ಹರೆಯ ತಲುಪುವ ತನಕ ಕಾಯಿಲೆಗಳು ನಮ್ಮನ್ನು ಬಾಧಿಸುವುದು ಅತಿ ವಿರಳ. ವರ್ಷಕ್ಕೆ ಒಂದೆರಡು ಬಾರಿ ಶೀತ, ಕೆಮ್ಮು, ಜ್ವರ ಬಂದಿರಬಹುದು. ಇದರಿಂದಾಗಿ ಆರೇಳು ದಿನಗಳ ಕಾಲ ಸ್ವಲ್ಪ ಬವಣೆಗೆ ಈಡಾಗಿರುತ್ತೇವೆ. ನಲವತ್ತು ವರ್ಷದಲ್ಲಿ ಹೆಚ್ಚೆಂದರೆ ಮೂವತ್ತು ದಿನ ಹೀಗೆ ಹೋಯಿತು. ಇನ್ನು ಅರಶಿನ ಕಾಮಾಲೆ, ಕಣ್ಣಿನ ಉರಿಯೂತ, ವಾಂತಿಭೇದಿ, ಚರ್ಮದ ತೊಂದರೆ,

ಮಲೇರಿಯಾ, ಟೈಫಾಯ್್ಡ ಚಿಕನ್​ಪಾಕ್ಸ್​ನಂತಹ ಕಾಯಿಲೆಗಳು ವಕ್ಕರಿಸಿದ್ದರೂ ಒಟ್ಟಿನಲ್ಲಿ ಐವತ್ತು ದಿನಗಳಷ್ಟು ಒದ್ದಾಡಿರಬಹುದು. ಆಕಸ್ಮಿಕವಾಗಿ ಸಂಭವಿಸಬಹುದಾದ ಅಪಘಾತ, ಗಾಯ, ಸುಟ್ಟಗಾಯದಂಥ ಸಮಸ್ಯೆ ಎದುರಿಸಿದ್ದರೂ ಇಪ್ಪತ್ತು ದಿನಗಳ ಕಾಲ ಅನಾರೋಗ್ಯ ಇತ್ತೆಂದು ಭಾವಿಸಿಕೊಳ್ಳಿ. ಹೀಗೆ ನಲವತ್ತು ವರ್ಷಗಳ ಒಟ್ಟು ಹದಿನೈದು ಸಾವಿರ ದಿನಗಳಲ್ಲಿ

ಅನಾರೋಗ್ಯ ಇದ್ದುದು ಸರಿಸುಮಾರು ಕೇವಲ ನೂರೇ ದಿನಗಳು! ಹೆಚ್ಚಿನ ಜನರು ಈ ರೀತಿಯಲ್ಲಿ ಸೊಗಸಾಗಿ, ಆರೋಗ್ಯವಂತರಾಗಿಯೇ ಜೀವನ ಸಾಗಿಸಿರುತ್ತಾರೆ. ಕೆಲವೇ ಪ್ರತಿಶತ ಜನರು ಬಾಲ್ಯದಿಂದಲೇ ನಿರಂತರ ರೋಗಗ್ರಸ್ತರಾಗಿರುತ್ತಾರೆ ಎಂಬುದೂ ವಾಸ್ತವ. 2022ನೇ ಇಸವಿಯಲ್ಲಿ ಭಾರತೀಯರ ಸರಾಸರಿ ಆಯಸ್ಸು 70.19 ವರ್ಷಗಳು. ಅಂದಮೇಲೆ ಜೀವಮಾನದ ಅರ್ಧಕ್ಕಿಂತಲೂ ಹೆಚ್ಚುಭಾಗ ಬಹುತೇಕ ಜನರು ಕಾಯಿಲೆಗಳಿಲ್ಲದೇ ಕಳೆದಂತಾಯಿತು. ನಲವತ್ತು ವರ್ಷದ ಬಳಿಕ ಚರ್ಮದಿಂದ ಮೊದಲ್ಗೊಂಡು ದೇಹದ ಒಂದೊಂದೇ ಅಂಗಾಂಗಗಳ ಕಾರ್ಯಕ್ಷಮತೆಯು ಕ್ಷೀಣಿಸುತ್ತಾ ಹೋಗುತ್ತದೆ ಎಂದು ಆಯುರ್ವೆದ ಹೇಳಿರುವುದಿಲ್ಲಿ ಗಣನೀಯ. ಐವತ್ತು ವರ್ಷವಾದ ಬಳಿಕ ಕಾಯಿಲೆಗಳು ಅದರಲ್ಲೂ ದೀರ್ಘಕಾಲೀನ ವ್ಯಾಧಿಗಳು ಬಂದೆರಗುವುದಿದೆ. ಆದರೂ ಇವುಗಳೇನು ಎಲ್ಲರಿಗೂ ಬರುವುದಿಲ್ಲ. ಅರವತ್ತು ವರ್ಷದ ಬಳಿಕ ಕಾಯಿಲೆಗಳು ಹೆಚ್ಚಿನ ಸಂಖ್ಯೆಯಲ್ಲಿ, ಅಧಿಕ ಜನರಿಗೆ ಎಡತಾಕುವುದಿದೆ. ಇಲ್ಲೂ ಅನೇಕರು ನಿರಂತರ ಔಷಧಗಳನ್ನು ಅವಲಂಬಿಸಬೇಕಾದ ಕಾಯಿಲೆಗಳಿಗೆ ತುತ್ತಾಗುವುದಿಲ್ಲ ಎಂಬುದೂ ಗಮನಾರ್ಹ. ಎಪ್ಪತ್ತರ ಬಳಿಕ ರೋಗರುಜಿನಗಳು ಹೆಚ್ಚಿದ್ದರೂ ಭಾರತದಲ್ಲಿ ಸರಾಸರಿ ವಯೋಮಾನವೇ 70 ವರುಷ ಎಂಬುದನ್ನು ಪರಿಗಣಿಸಲೇಬೇಕು. 2020ರ ಅಂಕಿಅಂಶದಂತೆ ಪ್ರಸ್ತುತ ಎಪ್ಪತ್ತು ವರ್ಷ ದಾಟಿದ ಜನರ ಸಂಖ್ಯೆ 5 ಕೋಟಿಯಷ್ಟೇ ಇದ್ದು ಇವರಲ್ಲೂ ಅನೇಕರು ಆರೋಗ್ಯವಂತರು! ಜೀವನದಲ್ಲಿ ರೋಗವಿಲ್ಲದ ಕಾಲವೇ ಅಧಿಕ ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ರೋಗವಿಲ್ಲದಾಗ ಏನು ಮಾಡಬೇಕು, ರೋಗ ಬರದಂತೆ ತಡೆಯಲು ಏನು ಮಾಡ ಬೇಕು ಎಂಬ ಬೃಹತ್ ಪ್ರಶ್ನೆಗೆ ಅಷ್ಟೇ ದೊಡ್ಡ ಉತ್ತರವೆಂದರೆ ಆಯುರ್ವೆದ. ಜೀವನದ ಬಹುಕಾಲ ಹಾಗೂ ಆರೋಗ್ಯವಂತರಾಗಿರುವ ಬಹುತೇಕ ಜನರ ಬಹುಪಾಲು ಸಮಯ ಚಿಕಿತ್ಸೆಯೇ ಪ್ರಧಾನವಾಗಿರುವ ಪದ್ಧತಿಗಳ ಅಗತ್ಯ ಇರುವುದಿಲ್ಲ, ಅವರಿಗೆಲ್ಲ ಆಶಾದೀಪ, ದಾರಿದೀಪ ಆಯುರ್ವೆದ. ದಿನಚರ್ಯು, ರಾತ್ರಿಚರ್ಯು, ಋತುಚರ್ಯು, ಸದ್​ವೃತ್ತ ಹಾಗೂ ಸ್ವಸ್ಥವೃತ್ತಗಳ ಮೂಲಕ ಸ್ವಾಸ್ಥ್ಯದ ಪರಿಪಾಲನೆ ಹೇಗೆಂದು ವಿಶ್ವಕ್ಕೆ ಸಾರಿದ ಏಕಮೇವ ವೈದ್ಯಪದ್ಧತಿ ಆಯುರ್ವೆದ. ಇವನ್ನು ಪ್ರತಿದಿನವೂ ಅನುಸರಿಸಬಹುದು, ಪ್ರತಿ ಮನೆಯಲ್ಲೂ ಆಚರಿಸಬಹುದು. ಪ್ರತಿವ್ಯಕ್ತಿಯೂ ಅನುಷ್ಠಾನಿಸಬಹುದು, ಪ್ರತಿಮನಸ್ಸೂ ಒಪ್ಪಿಕೊಳ್ಳಬಹುದು. ಆಯುರ್ವೆದವು ಆರೋಗ್ಯ, ಸ್ವಾಸ್ಥ್ಯ ಎರಡಕ್ಕೂ ಬೇಕು. ಜನತೆಗೆ ಇದು ಅರ್ಥವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net