

ಭಾರತೀಯ ಕಾವ್ಯಗಳು ಓದುಗರಿಗೆ ಜ್ಞಾನವನ್ನು, ಮನರಂಜನೆಯನ್ನು ಮಾತ್ರ ನೀಡಿದ್ದಲ್ಲ. ಸುಂದರ ನಾಡಿನ ಪರಿಕಲ್ಪನೆಗೆ ಪೂರಕವಾಗಿ ಸಾಗಿರುವುದನ್ನು ನೋಡಿದರೆ ಹೆಮ್ಮೆಯೆನಿಸುತ್ತದೆ. ಡಿ.ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ವು ರಾಷ್ಟ್ರದ ಸ್ವಾಸ್ಥ್ಯದ ಜೊತೆಗೆ ವ್ಯಕ್ತಿಯ ಆರೋಗ್ಯ ವಿಚಾರಗಳನ್ನೂ ತಿಳಿಹೇಳಿದ ಪರಿ ಅಪ್ರತಿಮವಾದುದು. ‘ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು’ ಎಂಬ ಕಗ್ಗವು ಜೀವನದಲ್ಲಿ ಮಿತಿ ಮೀರಿದರೆ ಅತಿ ಎಂಬುದನ್ನು ಸೊಗಸಾಗಿ ವಿವರಿಸಿದೆ.
ಬಹು ವಿಧವಾದ ತಿಂಡಿತಿನಸುಗಳನ್ನು ಮನಸೋ ಇಚ್ಛೆ ತಿಂದರೆ ಸಿಗುವ ಫಲವೇನು? ದೇಹಪುಷ್ಟಿಯನ್ನು ಮಾಡಲು ಎಷ್ಟು ಬೇಕೋ ಅಷ್ಟೇ ಆಹಾರ ನಿಜಕ್ಕೂ ಸಾಕು. ಮಿಕ್ಕಿರುವುದೆಲ್ಲಾ ಕಸವಾಗಿ ದೇಹದಿಂದ ಹೊರಹೋಗುವುದು. ಅಂತೆಯೇ ಬದುಕಿನಲ್ಲಿ ಧನಕನಕ ಆಸ್ತಿಪಾಸ್ತಿಗಳನ್ನು ಎಷ್ಟೇ ಕೂಡಿಟ್ಟರೂ ಏನು ಪ್ರಯೋಜನವಿದೆ? ಅದರಲ್ಲಿ ನಮಗೆ ದಕ್ಕುವುದು ಹೊಟ್ಟೆಗೆ ಬೇಕಾದ ಒಂದು ಮುಷ್ಟಿಯಷ್ಟು ಆಹಾರವಷ್ಟೇ ತಾನೇ? ಎಂಬುದನ್ನು ಮಾರ್ವಿುಕವಾಗಿ ಬಣ್ಣಿಸಲಾಗಿದೆ.
‘ಆರೋಗ್ಯ ಭಾಗ್ಯವನು ಮನಕೆ ತನುಗೆಂತಂತೆ’ ಕಗ್ಗದ ಸಾಲುಗಳು ಆಯುರ್ವೆದ ಹೇಳಿದ ಸದ್ ವೃತ್ತವನ್ನು ಸರಳ ಸಾಲುಗಳಲ್ಲಿ ಅರ್ಥಗರ್ಭಿತವಾಗಿ ವಿವರಿಸಿದೆ. ಸಮಸ್ಯೆಗಳ ಸುಳಿಯಿಂದ ಪಾರಾಗಬೇಕಾದರೆ ಹಲವು ಸರಳ ನೀತಿಗಳನ್ನು ನುಡಿ-ನಡೆಗಳಲ್ಲಿ ಆಚರಣೆಗೆ ತರಬೇಕು. ಶರೀರಕ್ಕೆ ಆರೋಗ್ಯ ಭಾಗ್ಯ ಬೇಕಾದರೆ ಮನಸ್ಸಿನ ಚಿಂತನೆಗಳು ಹಾಗೂ ನಮ್ಮ ಆಚಾರ ವಿಚಾರಗಳು ದಿನಚರ್ಯು, ಋತುಚರ್ಯುಗಳಲ್ಲಿ ಹೇಳಿದ ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ಮಾನಸಿಕ ಸ್ವಾಸ್ಥ್ಯ, ಶಾರೀರಿಕ ಸ್ವಾಸ್ಥ್ಯ ಎರಡೂ ನಮ್ಮ ಸತ್ ಚಿಂತನೆ, ಸತ್ ಆಚಾರಗಳನ್ನು ನೇರವಾಗಿ ಅವಲಂಬಿಸಿದೆ ಎಂಬ ಬೋಧೆಯಿದೆ.
ಚಿಂತೆ ಹಾಗೂ ಸಂತಾಪಗಳು ಮೇಲ್ನೋಟಕ್ಕೆ ಮನಸ್ಸಿಗೆ ದುಃಖ ನೀಡುವಂತೆ ಕಂಡರೂ ಬದುಕಿನಲ್ಲಿ ಅವೆಲ್ಲ ಇರಬೇಕು! ಶರೀರ ಶುದ್ಧಿಗಾಗಿ ಆಯುರ್ವೆದ ಹೇಳಿದ ವಿರೇಚನದಂತೆ ಮನಸ್ಸಿನ ಕೊಳೆಗಳನ್ನು ತೊಳೆದು ಹೊರಹಾಕಲು ಕಷ್ಟಗಳಿರಬೇಕು. ದೇಹದ ಆರೋಗ್ಯಕ್ಕೆ ಪಥ್ಯದ ಉಪಚಾರಗಳು ಹೇಗೋ ಮನಸ್ಸಿನ ಆರೋಗ್ಯಕ್ಕೆ ಸಂತಸದಾಯಕ ಹಾಗೂ ಉತ್ಸಾಹಭರಿತ ನಡೆ ನಮ್ಮದಾಗಿರಬೇಕು. ‘ಶೀತವಾತಗಳಾಗೆ ದೇಹಕೌಷಧ ಪಥ್ಯ’ ಎಂಬ ಕಗ್ಗದಲ್ಲಿ ಶೀತ, ವಾತಗಳು ಕೆರಳಿ ರೋಗಗಳಾದರೆ ದೇಹಕ್ಕೆ ಔಷಧವೇ ಪಥ್ಯ. ಕಣ್ಣು, ಕಿವಿಗಳು ಕೆರಳಿ ಮನಸ್ಸು ಉದ್ವಿಗ್ನಗೊಂಡರೆ ಪ್ರೀತಿಯಿಂದ ಮನಸ್ಸನ್ನು ಒಲಿಸಿಕೊಂಡು ಒಳಿತು ಕೆಡುಕಗಳು, ಹಿತ ಅಹಿತವಾದವುಗಳನ್ನು ತಿಳಿಹೇಳಿ ಪ್ರೀತಿಮಾರ್ಗದಿಂದ, ನೀತಿಮಾರ್ಗದಿಂದ ಚಿತ್ತವನ್ನು ಸರಿದಾರಿಗೆ ತಂದರೆ ಆತ್ಮಕ್ಕೆ ನೆಮ್ಮದಿಯನ್ನು ನೀಡುತ್ತದೆ. ನೆಮ್ಮದಿಯ ಬದುಕಿಗೆ ಸದಾಚರಗಳೇ ಮುಖ್ಯ. ರೋಗ ಪರಿಹಾರಕ್ಕೆ ಪಥ್ಯ ಪಾಲನೆಯೂ ಅಷ್ಟೇ ಮುಖ್ಯ ಎಂದಿದ್ದಾರೆ.
‘ರಾಗಿಮುದ್ದೆಯ ನುಂಗಿ ನಲಿದು ಬಾಳ್ವಾತಂಗೆ’ ಎಂಬ ಕಗ್ಗ ಬದುಕಿನ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಮಾರ್ವಿುಕವಾಗಿ ತಿಳಿಹೇಳಿದೆ. ಉಣ್ಣುವ ಆಹಾರ ಎಲ್ಲಿಂದ ಆದರೇನು, ಹೇಗಿದ್ದರೇನು ಅದು ಹಸಿವನ್ನು ನೀಗಿಸುತ್ತದೆ ತಾನೇ ಎಂಬ ಧೋರಣೆ ಸರಿಯಲ್ಲ. ಶರೀರ, ಮನಸ್ಸಿನ ಆರೋಗ್ಯಕ್ಕೆ ಆಹಾರವನ್ನು ಸಂಪಾದಿಸಿದ ಮಾರ್ಗವೂ ಮುಖ್ಯವಾಗುತ್ತದೆ! ಸ್ವಂತ ದುಡಿಮೆಯಿಂದಲೇ ಆಹಾರವನ್ನು ಗಳಿಸಬೇಕು ಹೊರತು ಕುಳಿತಲ್ಲಿಗೇ ಬಂದೊದಗಿದ ಭಕ್ಷ್ಯಭಾಗ್ಯ ಎಂದಿಗೂ ನೆಮ್ಮದಿಯನ್ನು ನೀಡುವುದಿಲ್ಲ. ಆದುದರಿಂದ ಆತ್ಮವು ಬಾಗಿ ನಡೆಯುವಂತೆ, ತಲೆ ತಗ್ಗಿಸುವಂತೆ ಎಂದೂ ಮಾಡಬಾರದು ಎಂಬುದಾಗಿ ಡಿವಿಜಿಯವರು ಅಂದೇ ಎಚ್ಚರಿಸಿದ್ದಾರೆ. ಇದನ್ನೇ ಇನ್ನಷ್ಟು ಪುಷ್ಟೀಕರಿಸುವ ‘ತನುವ ತಣಿಸುವ ತುತ್ತು ಮನಕೆ ನಂಜಾದೀತು’ ಎಂಬ ಕಗ್ಗದ ಸಾಲುಗಳು ಜೀವಭಾವದ ದರ್ಶನ ಮಾಡಿಸುತ್ತದೆ.
ದೇಹವನ್ನು ತೃಪ್ತಿಪಡಿಸುವ ಆಹಾರದ ತುತ್ತು ಮನಸ್ಸಿಗೆ ನಂಜಾದೀತು. ಬೇಡಿ ಪಡೆದ ಆಹಾರವು ಹಸಿವನ್ನು ತಣಿಸಬಹುದು. ಆದರೆ ಕೀಳರಿಮೆ ಕಾಡಿ ಮನಸ್ಸು ಕುಗ್ಗಿ ಹೋಗುತ್ತದೆ. ಆಹಾರ ಸಂಪಾದನೆಯಾದ ರೀತಿ, ಆಹಾರ ತಯಾರಿಸಿ ಬಡಿಸುವವರ ಪ್ರೀತಿ ಎಲ್ಲವೂ ಶರೀರದ ಮೇಲೆ ನಿಶ್ಚಿತವಾಗಿ ಪರಿಣಾಮ ಬೀರುತ್ತದೆ. ಅದೇ ರೀತಿಯಲ್ಲಿ ಮನಸ್ಸಿಗಿರುವ ತನ್ನದೆಂಬ ಮೋಹವು ಬದುಕಿನಲ್ಲಿ ಗಾಳಕ್ಕೆ ಸಿಲುಕಿದ ಮೀನು ಒದ್ದಾಡುವಂತೆ ನಮ್ಮ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡುತ್ತದೆ. ಮನಸ್ಸಿಗೆ ಆಗುವ ಅನುಭವದ ಪರಿಣಾಮಗಳು ದಿನಕಳೆದಂತೆ ಬದಲಾಗುತ್ತಾ ಹೋಗುತ್ತದೆ. ಹಾಗೆಂದು ಈ ಅನುಭಗಳಿಂದ ಆತ್ಮಕ್ಕಾಗುವ ಲಾಭವಾದರೂ ಏನು? ಮನಸ್ಸಿಗೆ ಖುಷಿ ತರುವ ವಿಚಾರ ಆತ್ಮದ ನೆಮ್ಮದಿಗೂ ಸಲ್ಲುತ್ತದೋ ಎಂಬುದನ್ನು ವಿಮಶಿಸಬೇಕಾದುದು ಮಾನವನ ಕರ್ತವ್ಯ. ಆಹಾರದ ವಿಷಯದಲ್ಲಿ ಅನುಸರಿಸಬೇಕಾದ ಸೂಕ್ಮ್ಮಗಳ ಅರಿವು ಮೂಡಿಸುವ ಕಗ್ಗಗಳು ಬದುಕಿನ ಸ್ವಾಸ್ಥ್ಯ ವಿಚಾರಗಳ ಮೇಲೆ ತೀಕ್ಷ್ಣವಾದ ಕ್ಷಕಿರಣ ಬೀರಿವೆ.