

ಸಾಕ್ಷಿಗಳ ಕೊರತೆ, ಸಾಮಾನ್ಯ ಜ್ಞಾನದ ನಿರ್ಲಕ್ಷ್ಯ, ಅಳವಡಿಸಲು ಬೇಕಾಗುವ ಸುದೀರ್ಘ ಕಾಲಾವಧಿ, ನಿಖರ-ಪ್ರಬಲ-ನಂಬಲರ್ಹ ಸಂಶೋಧನೆಗಳೆಂದು ನಿರ್ಧರಿಸಲು ಇರುವ ತೊಂದರೆಗಳು, ಆ ರೋಗಿಯ ಚಿಕಿತ್ಸೆಗೆ ಸೂಕ್ತವಾದ ಸಾಕ್ಷಿಗಳು ತಕ್ಷಣದಲ್ಲಿ ಲಭ್ಯವಿಲ್ಲದೇ ಇರುವುದು ಮೊದಲಾದ ಅನೇಕ ನ್ಯೂನತೆಗಳು ಸಾಕ್ಷಿ ಆಧಾರಿತ ಚಿಕಿತ್ಸೆಗೆ ಇಂದಿಗೂ ಸವಾಲಾಗಿಯೇ ಉಳಿದಿವೆ. ರೋಗಿ ವೈದ್ಯರಲ್ಲಿಗೆ ಬಂದು ಎದುರು ಕುಳಿತಾಗ ವೈದ್ಯರಿಂದ ಚಿಕಿತ್ಸಾ ಸಲಹೆ ಸಹಜವಾಗಿ ಹೊರಹೊಮ್ಮಬೇಕು. ಅದಕ್ಕೆ ಕಾಲಾವಕಾಶ ಲಭ್ಯವಿರುವುದಿಲ್ಲ. ರೋಗಿ ಬಂದ ನಂತರ ಎಲ್ಲವನ್ನೂ ಅನ್ವೇಷಿಸಿ, ಅವಲೋಕಿಸಿ, ಅಭ್ಯಸಿಸಿ, ಆಲೋಚಿಸಿ, ಅನುಷ್ಠಾನಿಸಿ ಚಿಕಿತ್ಸೆಯನ್ನು ಪೂರ್ಣಗೊಳಿಸುವುದಲ್ಲ. ಆದುದರಿಂದಲೇ ಚಿಕಿತ್ಸೆ ಎಂಬುದು ಯಶಸ್ವಿಯಾಗಬೇಕಾದರೆ ವೈದ್ಯರಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವಂತಹ ಸಾಕ್ಷಿಪ್ರಜ್ಞೆ ಇರಬೇಕಾಗುತ್ತದೆ. ಹಾಗೆಂದು ವೈದ್ಯರ ದೃಷ್ಟಿಗೆ ಏನೆಲ್ಲಾ ಗೋಚರಿಸುತ್ತದೋ ಅವೆಲ್ಲಾ ಯಶಸ್ವೀ ಚಿಕಿತ್ಸೆ ಆಗುವುದಿಲ್ಲ. ಅದಕ್ಕೆ ಆಳದೃಷ್ಟಿ ಬೇಕು, ದೂರದೃಷ್ಟಿಯೂ ಬೇಕು! ಇದು ಆಯುರ್ವೆದದಲ್ಲಿದೆ.
ಹಾಗಿದ್ದಾಗ ಮಾತ್ರ ಎಷ್ಟೇ ಕಾಲವನ್ನು ಕ್ರಮಿಸಿದರೂ, ಯುಗಗಳನ್ನು ದಾಟಿದರೂ ಔಷಧವು ಔಷಧವಾಗಿಯೇ ಉಳಿಯಲು ಸಾಧ್ಯವಾಗುತ್ತದೆ. ತಂತ್ರ ನೈಪುಣ್ಯತೆ, ಪಾಂಡಿತ್ಯ, ವಿಷಯ ಪರಿಣತಿ, ಅನುಭವ, ಪರೀಕ್ಷೆ, ಪ್ರಯೋಗ ಇವೆಲ್ಲವುಗಳ ಸಮ್ಮಿಳಿತದಿಂದ ವೈದ್ಯರ ಚಿಕಿತ್ಸಾ ಸಲಹೆ ತತ್ಕ್ಷಣದಲ್ಲಿ ಸ್ಪುರಣವಾಗಬೇಕೇ ಹೊರತು ಬರಿಯ ಆಂಶಿಕ, ಅಪರಿಪಕ್ವ, ಅಪೂರ್ಣ ಸಂಶೋಧನೆಗಳ ಆಧಾರದಲ್ಲಲ್ಲ. ಇದಕ್ಕಾಗಿಯೇ ಚಿಕಿತ್ಸೆಯು ಸಾಕ್ಷಿ - ಎವಿಡೆನ್ಸ್ - ಆಧಾರದಲ್ಲಿದ್ದರೆ ಸಾಲದು, ಶ್ರೇಷ್ಠತೆ - ಎಮಿನೆನ್ಸ್ - ಆಧಾರದಲ್ಲಿ ಇರಬೇಕು ಎನ್ನುವುದು. ವೈದ್ಯರು ಚಿಕಿತ್ಸೆ ನೀಡುವಾಗ ಹತ್ತರಲ್ಲಿ ಒಂದು ಮಾತ್ರ ಉನ್ನತಮಟ್ಟದ ಸಾಕ್ಷಿ ಆಧಾರಿತವಾಗಿರುತ್ತವೆ ಎಂದು ಸಮೀಕ್ಷೆಗಳು ಹೇಳುತ್ತವೆ. ಆದರೆ ವಾಸ್ತವದಲ್ಲಿ ಅದು ಅಷ್ಟೂ ಇಲ್ಲ ಎಂಬುದು ಕಟುಸತ್ಯ.
ಆಯುರ್ವೆದದ ಮೂಲ ಗ್ರಂಥಗಳಲ್ಲಿ ಇರುವ ಪ್ರತಿವಾಕ್ಯಗಳೂ ಸಾಕ್ಷಿ ಆಧಾರಿತವಾಗಿಯೇ ಇರುವಂತಹದ್ದು. ಪ್ರತಿಯೊಂದು ವಿಚಾರವೂ ವಿಜ್ಞಾನಿಋಷಿಆಚಾರ್ಯ ಸಾಹಿತಿಗಳಾಗಿದ್ದ ವೈದ್ಯರ ಸಮೂಹದ ಚಿಂತನ ಮಂಥನದಿಂದಲೇ ಕೂಲಂಕಷ ವಿಮರ್ಶೆ, ಪರಾಮರ್ಶೆಗಳೊಂದಿಗೆ ನಿರ್ಧರಿತವಾದದ್ದು. ಹಾಗಾಗಿಯೇ ಆ ನಿರ್ಣಯಗಳೆಲ್ಲವೂ ಸದಾಸರ್ವದಾ ಅಚಲ ಹಾಗೂ ಭದ್ರವಾಗಿ ಉಳಿದಿರುವಂತದ್ದು. ಆಯುರ್ವೆದದ ಸಿದ್ಧಾಂತಗಳೆಲ್ಲವೂ ಶಾಶ್ವತ ಸತ್ಯಶೋಧನೆಗಳ ಫಲಶ್ರುತಿಯೇ. ಸಿದ್ಧಾಂತವೆಂದರೆ ಪ್ರಮಾಣೀಕರಿಸಿದ ಸತ್ಯ ವಿಚಾರ. ಆಯುರ್ವೆದದ ಆದಿಗ್ರಂಥ ಚರಕ ಸಂಹಿತೆಯ ವಿಮಾನಸ್ಥಾನದ ಎಂಟನೇ ಅಧ್ಯಾಯದಲ್ಲಿ ಸರ್ವತಂತ್ರ ಸಿದ್ಧಾಂತ, ಪ್ರತಿತಂತ್ರ ಸಿದ್ಧಾಂತ, ಅಧಿಕರಣ ಸಿದ್ಧಾಂತ ಹಾಗೂ ಅಭ್ಯುಪಾಗಮ ಸಿದ್ಧಾಂತಗಳೆಂಬ ನಾಲ್ಕು ವಿಧವಾದ ಸಿದ್ಧಾಂತಗಳ ವಿವರಣೆಯಿದೆ. ಪರೀಕ್ಷಕರಿಂದ ವಿಷಯಗಳನ್ನು ಬಹುವಿಧವಾಗಿ ಪರೀಕ್ಷಿಸಿ, ಆ ಬಳಿಕ ಸಮರ್ಪಕ ಕಾರಣಗಳೊಂದಿಗೆ ಸಾಬೀತು ಮಾಡಿ ಸ್ಥಾಪಿಸಲ್ಪಟ್ಟ ನಿರ್ಣಯಗಳೇ ಸಿದ್ಧಾಂತ ಎಂದು ಅಲ್ಲಿ ವ್ಯಾಖ್ಯಾನಿಸಲಾಗಿದೆ. ಸಿದ್ಧಾಂತಗಳೆಲ್ಲಾ ಸಂಶೋಧನೆಗಳ, ಸತ್ಯಶೋಧನೆಗಳ ಫಲಿತವ್ಯ ಎಂಬುದು ಸ್ಪಟಿಕಸ್ಪಷ್ಟ. ಇವೆಲ್ಲ ಕಾರಣದಿಂದ ಆಯುರ್ವೆದದ ಗ್ರಂಥಗಳೇ ಸಮಗ್ರವಾಗಿ ಸಾಕ್ಷಿ ಆಧಾರಿತ.
ಜನರು ಕೊಟ್ಯಂತರ ವಿಧವಾದ ಮನೆಮದ್ದುಗಳನ್ನು ದೇಶದಾದ್ಯಂತ ನಿತ್ಯನಿರಂತರವಾಗಿ ಅವಲಂಬಿಸಿರಲು ಮೂಲಕಾರಣ ಅವುಗಳಿಂದ ಸಿಗುವ ಫಲಿತಾಂಶ ಏನೆಂಬ ಅಂತಿಮಸತ್ಯ ಎಲ್ಲರಿಗೂ ತಿಳಿದಿರುವುದು. ಅವುಗಳ ಕಾರ್ಯಕ್ಷಮತೆಯನ್ನು ಕಣ್ಣಾರೆ ಕಂಡಿರುವುದರಿಂದಲೇ ಅವರಿಗದು ಯಥಾರ್ಥವಾಗಿ ಸಾಕ್ಷಿ ಆಧಾರಿತ ಔಷಧ.
ಆಯುರ್ವೆದದ ಪರಿಷ್ಕರಿಸದ ನಮೂನೆ ಆಗಿರುವ ಮನೆಮದ್ದುಗಳಿಗೂ ಪುರಾವೆ ಇದೆಯೆಂಬುದು ಇಲ್ಲಿ ಗಣನೀಯ ಅಂಶ. ಆಯುರ್ವೆದದ ಹೊಸ ಔಷಧಗಳಿಗೆ ಹೊಸ ಸಂಶೋಧನೆಗಳ ಸಾಕ್ಷಿಗಳ ಅಗತ್ಯವಿದೆಯೇ ವಿನಹ ಮೂಲಗ್ರಂಥಗಳಲ್ಲಿ ಹೇಳಲಾದ ಶಾಸ್ತ್ರೀಯ ಔಷಧಿ, ಚಿಕಿತ್ಸೆಗಳಿಗೆ ಮತ್ತೆ ಹೊಸದಾಗಿ ಸಾಕ್ಷಿಗಳ ಹುಡುಕಾಟ ಬೇಕಿಲ್ಲ. ವ್ಯಾಧಿಗಳ ಚಿಕಿತ್ಸೆ ಮಾತ್ರವಲ್ಲ, ಮಾನವನಿಗೆ ಸ್ವಾಸ್ಥ್ಯ ಪಾಲನೆಗೆ ಬೇಕಾದ ದಿನಚರ್ಯು, ರಾತ್ರಿಚರ್ಯು, ಋತುಚರ್ಯು, ಸದ್ವೃತ್ತ ಹಾಗೂ ಸ್ವಸ್ಥವೃತ್ತಗಳೆಲ್ಲವೂ ಚಿರಕಾಲದ ಸತ್ಯಶೋಧನೆಗಳೇ ಆಗಿರುವುದರಿಂದ ಶಾಶ್ವತ ಜ್ಞಾನವಾಗಿದ್ದು ಸದೃಢ ಸಾಕ್ಷಿ ಆಧಾರಿತ ವಿಷಯಗಳೇ ಆಗಿವೆ. ಹಾಗೆ ನೋಡಿದರೆ ಆಯುರ್ವೆದ ಔಷಧಿ, ಚಿಕಿತ್ಸೆ ಮಾತ್ರವಲ್ಲ ಸಮಗ್ರ ಆಯುರ್ವೆದವೇ ಶಾಶ್ವತ ಸಾಕ್ಷಿ ಆಧಾರಿತ ಎನ್ನುವುದು ಪರಮಸತ್ಯ.