

ಇದೇ ಮಾದರಿಯಲ್ಲಿ ಕೆಲ ದಿನಗಳ ಮುಂಚೆ ವಿದ್ಯಾರ್ಥಿನಿ ಯೊಬ್ಬಳು ನನ್ನ ಬಳಿ ಬಂದು, ‘ನಾನು ಕುಳ್ಳಿ. ನನ್ನ ಸಹಪಾಠಿಗಳೆಲ್ಲ ಎತ್ತರವಾಗಿದ್ದಾರೆ. ನನಗೆ ಗಿಡ್ಡಿ ಎಂದು ಕರೆಯುತ್ತಾರೆ. ಇದರಿಂದ ನನಗೆ ಅಸಹ್ಯವಾಗುತ್ತದೆ. ನನ್ನ ಬಗ್ಗೆ ನನಗೆ ಕೀಳರಿಮೆ ಬರಲಾರಂಭಿಸಿದೆ. ಉಪಾಯ ಸೂಚಿಸಿ’ ಎಂದು ಹೇಳಿದಳು. ಈ ಕಾರಣಕ್ಕಾಗಿ ಆಕೆ ಎಲ್ಲರೊಡನೆ ಬೆರೆಯುವುದನ್ನೇ ಬಿಟ್ಟಿದ್ದಳು. ಜೀವನವೇ ಸಾಕು ಎನಿಸಿದೆ ಎಂದು ಅಲವತ್ತುಕೊಂಡಿದ್ದಳು.
ಇನ್ನೊಂದು ಪ್ರಕರಣದಲ್ಲಿ ವಿದ್ಯಾರ್ಥಿನಿ ತಾನು ನೋಡಲು ಸುಂದರವಾಗಿಲ್ಲ. ಕಪ್ಪಾಗಿರುವೆ. ಮುಂದೆ ನನ್ನ ಭವಿಷ್ಯ ಹೇಗೆ ಎಂದು ಶಾಲೆ ವಾರ್ಷಿಕೋತ್ಸವ ಸಮಾರಂಭಕ್ಕೆ ಹೋದಾಗ ನನ್ನ ಬಳಿ ಕೇಳಿದ್ದಳು.
ಈ ಮೇಲಿನವು ಮೂರು ಪ್ರತ್ಯೇಕ ಪ್ರಕರಣಗಳು. ಆದರೆ ಇದರಿಂದಾಗುವ ಅನಾಹುತ ಅಪಾರ. ಹೌದು, ಈ ರೀತಿ ಕೀಳರಿಮೆಗೆ ಒಳಗಾದವರು ಆತುರದಲ್ಲಿ ಕೈಗೊಳ್ಳುವ ನಿರ್ಧಾರ ಬಲು ಅಪಾಯಕಾರಿ. ಇದು ಅವರಿಗಷ್ಟೇ ಅಲ್ಲ, ಇಡೀ ಕುಟುಂಬವನ್ನೇ ದುಃಖದ ಕೂಪಕ್ಕೆ ತಳ್ಳುತ್ತದೆ.
ಮೊದಲನೇ ಪ್ರಕರಣದಲ್ಲಿ ಆಕೆಗೆ ಎಂಬಿಬಿಎಸ್ ಸೀಟು ಸಿಕ್ಕಿದೆ. ಚೆನ್ನಾಗಿ ಓದಿ ವೈದ್ಯಳಾಗಿ ಜನಸೇವೆ ಮಾಡುವ ಸದವಕಾಶವಿತ್ತು. ನೋಡಲು ದಪ್ಪ ಎಂಬ ಕ್ಷುಲ್ಲಕ ಕಾರಣದಿಂದಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿದ್ದು ಅಕ್ಷಮ್ಯ. ಈಸಬೇಕು ಇದ್ದು ಜಯಿಸಬೇಕು ಎಂಬುದನ್ನು ಮರೆತು ದೈಹಿಕ ಅಂದಕ್ಕಾಗಿ ಜೀವ ತೆರುವ ಸ್ಥಿತಿ ಈಕೆಗೆ ಏಕೆ ಬಂತು? ಹೆತ್ತವರು ಏನು ಮಾಡಬೇಕು? ಇವರ ಈ ಹುಚ್ಚು ನಿರ್ಧಾರಕ್ಕೆ ಇಡೀ ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುವಂತಾಯಿತು. ಅವಳೇನೋ ಹೋದಳು. ಈಗ ಹೆತ್ತವರ ದುಃಖ ಭರಿಸುವವರ್ಯಾರು? ಎಂಬ ಮಾತು ಎಲ್ಲರ ಬಾಯಲ್ಲೂ ಬರುವುದು ಸಹಜ.
ಇಂದಿನ ಯುವ ಪೀಳಿಗೆ ಕೆಲ ವಿಚಾರಗಳಲ್ಲಿ ತುಂಬ ಎಡವುತ್ತಿದೆ. ವಿದ್ಯಾರ್ಥಿ ಜೀವನ ಹಂತದಲ್ಲಿ ಯಾವುದಕ್ಕೆ ಆದ್ಯತೆ ಮತ್ತು ಎಷ್ಟು ಪ್ರಾಶಸ್ಱ ಕೊಡಬೇಕು ಎನ್ನುವುದನ್ನು ನಿರ್ಧರಿಸುವಲ್ಲಿ ಸೋಲುತ್ತಿದೆ. ದೈಹಿಕ ಸೌಂದರ್ಯ ಅಥವಾ ಎತ್ತರವಾಗಿರುವುದು ಜೀವನ ಸಾಗಿಸಲು ಮಾನದಂಡವಲ್ಲ. ಬದುಕಿನ ಯಶಸ್ಸಿನ ಮಾನದಂಡ ಏನಿದ್ದರೂ ನಾವು ನಡೆಸುವ ಸ್ವಸ್ಥ ಮನೋಧಾರ್ಡ್ಯದ ಮೇಲೆ ಅವಲಂಬಿತವಾಗಿರುತ್ತದೆ. ಜೀವನದಲ್ಲಿ ಗುರುವಿನ ಮಾರ್ಗದರ್ಶನ ಮತ್ತು ಅನುಗ್ರಹದೊಂದಿಗೆ ನಿರ್ದಿಷ್ಟ ಗುರಿಯೊಂದಿಗೆ
ಸಾಗಬೇಕು ಎಂದು ನಮ್ಮ ಹಿರಿಯರು ಆದಿಯಾಗಿ ಎಲ್ಲ ದಾರ್ಶನಿಕರು ತಮ್ಮ ಅನುಭವದ ಮೂಲಕ ಅಂದಿನಿಂದ ಇಂದಿನವರೆಗೂ ಹೇಳುತ್ತಲೇ ಬಂದಿದ್ದಾರೆ. ಇದು ಸಾರ್ವಕಾಲಿಕ ಸತ್ಯವೂ ಹೌದು. ಯಾವುದೋ ಸೆಳೆತಕ್ಕೆ ಸಿಕ್ಕು ಅಥವಾ ಇನ್ನಾ್ಯವುದೋ ಗೀಳಿಗೆ ಒಳಗಾಗಿ ಬಂಗಾರದಂತಹ ಬದುಕಿಗೆ ಕೊಳ್ಳಿ ಇಟ್ಟುಕೊಳ್ಳುವ ಇಂತಹ ನಿರ್ಧಾರಗಳು ಸಾಧುವಲ್ಲ.
ಅಣ್ಣ ಬಸವಣ್ಣ ಹೇಳಿದಂತೆ ಬಾಹ್ಯ ಶಾರೀರಿಕ ಸೌಂದರ್ಯ ಮುಖ್ಯವಲ್ಲ. ಮನಃಶುದ್ಧಿ ಮುಖ್ಯ. ಸಕಲರಿಗೂ ಒಳಿತು ಬಯಸುವ ಮನಸ್ಸಿದ್ದರೆ ಇಡೀ ಸಮಾಜವೇ ಸ್ವಸ್ಥವಾಗಿರುತ್ತದೆ. ಅದಕ್ಕೇ ಹಿರಿಯರು ‘ಸರ್ವೆ ಜನಾಃ ಸುಖಿನೋ ಭವಂತು’ ಎಂದು ಆಶೀರ್ವಾದ ಮಾಡುತ್ತಿದ್ದರು. ಇದರ ಹಿಂದೆ ಸಮಷ್ಟಿಯ ಕಲ್ಯಾಣದ ಆಶಯವಿತ್ತು. ಅವರ ಸದಾಶಯಕ್ಕೆ ಕಾರಣ ಅವರಲ್ಲಿನ ಸ್ವಸ್ಥ ಮತ್ಮ ದೃಢ ಸಂಕಲ್ಪಯುಕ್ತ ಮನಸ್ಸು. ಈ ಮನಸ್ಸಿನ ಕೊರತೆ ಇಂದಿನವರಲ್ಲಿ ತುಂಬ ಇದೆ. ಮನೋವೈದ್ಯಕೀಯ ಪರಿಭಾಷೆಯಲ್ಲಿ ಕೀಳರಿಮೆ ಸಂಕೀರ್ಣ ಮಾನಸಿಕ ಸಮಸ್ಯೆ. ಈ ಭಾವನೆಯು ನಕಾರಾತ್ಮಕ ಆಲೋಚನೆಗಳನ್ನು ಸೃಷ್ಟಿ ಮಾಡುತ್ತದೆ. ಇದು ವ್ಯಕ್ತಿಯನ್ನು ಸಾಮಾಜಿಕ ಆತಂಕಕ್ಕೆ ಬಲಿಯಾಗುವಂತೆ ಮಾಡುತ್ತದೆ. ತಮ್ಮನ್ನು ತಾವು ಇತರರಿಗಿಂತ ಉತ್ತಮವಾಗಿ ಕಂಡುಕೊಳ್ಳಲು ಪ್ರಾರಂಭಿಸಿದಾಗ, ಸ್ವಯಂ ಗೀಳಿನ ಪ್ರಜ್ಞೆಯು ಹೆಚ್ಚಾಗುತ್ತದೆ. ನಮ್ಮೊಳಗೆ ಈ ಪ್ರಜ್ಞೆ ಬಂದಾಗ ನಾವು ಹೋಲಿಕೆ ಮಾಡಲ್ಲ.
ಮಕ್ಕಳು ಹೋಲಿಕೆ ಮಾಡುವುದರಿಂದ ಸಾಕಷ್ಟು ಖಿನ್ನತೆ ಹೊಂದುತ್ತಾರೆ. ನ್ಯೂನತೆಗಳನ್ನು ಮೀರಿ ತಮ್ಮತನವನ್ನು ರೂಪಿಸಿಕೊಳ್ಳುವುದೇ ಸಾಧನೆ. ಅಂಥ ಸಾಧಕರಾಗಬೇಕೆ ಹೊರತು ಹೇಡಿಯ ಹಾಗೆ ಕೆಟ್ಟ ನಿರ್ಧಾರ ಕೈಗೊಳುವುದಲ್ಲ.