ಡಾರ್ವಿನ್ ವಿಕಾಸವಾದವೂ.. ವಾನರ ಉಪಟಳವೂ..

Arecanut (1)
Published on
ವನ್ಯಜೀವಿ ಸಂರಕ್ಷಣಾ ಕಾನೂನು ಈಗ ಇನ್ನಷ್ಟು ಬಿಗಿಯಾಗಿದೆ. ಪ್ರಾಣಿಗಳನ್ನು ಸಾಯಿಸುವುದು ಅಪರಾಧ. ಆದ್ದರಿಂದ ಬೆಳೆಹಾನಿಯಾದರೂ ಪರವಾಗಿಲ್ಲ; ಕೇಸಿಗೀಸು ಜಂಜಡ ಬೇಡ ಎಂದು ರೈತರು ಸುಮ್ಮನಾಗುತ್ತಾರೆ. ಇನ್ನು, ಏರ್ ಗನ್ ಇಂಥವಕ್ಕೆಲ್ಲ ಮಂಗಗಳು ಹೆದರುವ ಕಾಲ ಎಂದೋ ಹೋಗಿದೆ ಬಿಡಿ.

ಪ್ರಾದೇಶಿಕ ವೈವಿಧ್ಯ ಎಂಬುದು ಭಾರತದ ವಿಶೇಷತೆ ಮತ್ತು ಅಸ್ಮಿತೆ. ಜಗತ್ತಿನ ಇತರ ದೇಶಗಳು ಇದನ್ನು ನೋಡಿ ಮೂಕವಿಸ್ಮಿತವಾಗುವುದು ನಿಶ್ಚಿತ. ಭಾಷೆ, ಉಡುಪು, ಮತಪಂಥ, ಆಚರಣೆ, ಆಹಾರ... ಹೀಗೆ ಈ ವೈವಿಧ್ಯದ ಯಾದಿ ಸಾಗುತ್ತದೆ. ಭಾರತದ ಈ ವೈವಿಧ್ಯವನ್ನು ಅರಿಯದವರು, ಅರ್ಥಮಾಡಿಕೊಳ್ಳಲಾಗದವರು, ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ, ‘ಭಾರತ ಬಹುಕಾಲ ಒಂದು ದೇಶವಾಗಿ ಉಳಿಯದು: ತನ್ನ ವೈವಿಧ್ಯತೆಯ ಕಾರಣಕ್ಕಾಗಿಯೇ ಅದು ಕುಸಿಯುತ್ತದೆ. ಅದೇ ಪಾಕಿಸ್ತಾನಕ್ಕೆ ಈ ಸಮಸ್ಯೆ ಇಲ್ಲ’ ಎಂದು ದೊಡ್ಡ ಪಂಡಿತೋತ್ತಮರ ರೀತಿಯಲ್ಲಿ ಭವಿಷ್ಯ ನುಡಿದಿದ್ದರು. ಈಗ ಭಾರತ ಎಲ್ಲಿದೆ ಮತ್ತು ಪಾಕಿಸ್ತಾನದ ಕತೆ ಏನಾಗಿದೆ ಎಂಬುದು ನಮ್ಮ ಕಣ್ಮುಂದೆಯೇ ಇದೆ. ಪಾಕಿಸ್ತಾನ ’ವಿಫಲ ರಾಷ್ಟ್ರ’ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಏದುಸಿರು ಬಿಡುತ್ತಿದೆ.

ಕಳೆದ ಅಂಕಣದಲ್ಲಿ ಕಳಚೆ ಹುಳಿ ಎಂಬ ವಿಶಿಷ್ಟ ಪದಾರ್ಥದ ಬಗ್ಗೆ ಉಲ್ಲೇಖ ಮಾಡಿ ಅದನ್ನು ತಯಾರಿಸುವ ಕುರಿತು ಸಣ್ಣ ವಿವರಣೆ ನೀಡಿದ್ದೆ. ಈ ಪದಾರ್ಥದ ರುಚಿ ಬಲ್ಲವರು ಅದನ್ನು ಹೊಗಳಿ ಪ್ರತಿಕ್ರಿಯಿಸಿದರೆ, ಇದರ ಪರಿಚಯ ಇಲ್ಲದವರು ಸಹ , ‘ಬಾಯಲ್ಲಿ ನೀರೂರುವಂತಾಯಿತು’ ಎಂದು ಉದ್ಗರಿಸಿದ್ದು, ಆ ಪ್ರದೇಶಕ್ಕೆ ಮತ್ತು ಆ ಮಾತೆಯರ ಪಾಕಪ್ರಾವೀಣ್ಯಕ್ಕೆ ಸಲ್ಲಬೇಕಾದ ಗೌರವ. ದಾವಣಗೆರೆ ಹರಿಹರ ಮೂಲದ ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ, 95 ವರ್ಷದ ಲಲಿತಮ್ಮ ಡಾ. ಚಂದ್ರಶೇಖರ ಅವರು ಈ ಲೇಖನ ಓದಿ ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿ ಹಂಚಿಕೊಳ್ಳುವುದು ಅಪ್ರಾಸಂಗಿಕವೇನೂ ಆಗದು ಎಂದು ಭಾವಿಸಿದ್ದೇನೆ. ಈ ಪತ್ರ ನಮ್ಮ ಗೃಹಿಣಿಯರ ಅಡುಗೆ ಪರಿಣತಿಯ ಜತೆಗೆ ಅವರ ಸಾಂಪ್ರದಾಯಿಕ ಜ್ಞಾನವನ್ನೂ ಬಿಂಬಿಸುತ್ತದೆ. ಲಲಿತಮ್ಮ ಅವರ ಪತ್ರದ ಸಾರಾಂಶ ಹೀಗಿದೆ:

’ಯಲ್ಲಾಪುರದ ಮಳೆಯ ಗಮ್ಮತ್ತು ಮತ್ತು ಕಳಚೆ ಹುಳಿಯ ಘಮ’ ಲೇಖನ ಓದಿ ತುಂಬಾ ಆನಂದಿಸಿದೆ. ನಿಮ್ಮ ಲೇಖನ ಓದಿದಾಗ ನನಗೆ 80-85 ವರ್ಷದ ಹಿಂದೆ ಅಜ್ಜಿಯರು ಮಾಡುತ್ತಿದ್ದ ಅಡುಗೆಯ ನೆನಪು ಬಂತು. ನಮ್ಮ ತೋಟದಲ್ಲಿ ಎರಡು ಹಲಸಿನ ಮರಗಳು ಇದ್ದವು. ಹಲಸಿನ ಕಾಯಿಗಳನ್ನು ಆಳುಗಳು ಕಿತ್ತು ತರುತ್ತಿದ್ದರು. ಅದನ್ನು ಈಳಿಗೆ ಮಣೆಯಿಂದ ಹೆಚ್ಚುತ್ತಿರಲಿಲ್ಲ. ಕುಡುಗೋಲಿನಿಂದ ಕೊಚ್ಚುತ್ತಿದ್ದರು. ಅದನ್ನು ನಾನು ಕಲಿತಿದ್ದೆ. ಹಾಗೆ ಕೊಚ್ಚಿದ ಹಲಸಿನ ಕಾಯಿಯ ಹುಳಿ, ಪಲ್ಯ ನನಗೆ ಅತ್ಯಂತ ಪ್ರಿಯವಾಗಿತ್ತು. ನಮ್ಮ ಚಿಕ್ಕಮ್ಮ ಪಾರ್ವತಮ್ಮ ಎಂಬುವವರು ಕೆಲವು ವಿಶೇಷವಾದ ಅಡುಗೆ ಮಾಡುತ್ತಿದ್ದರು. ನಮ್ಮ ತೋಟದ ಬೇಲಿಯ ಮೇಲೆ ಕುಂಬಳ ಬಳ್ಳಿ ಹರಡಿ ನೂರಾರು ಸಿಹಿ ಕುಂಬಳಕಾಯಿ ಬಿಡುತ್ತಿತ್ತು. ಅದರಲ್ಲಿ ಹುಳಿ, ಪಲ್ಯ, ಮೊಸರು ಸಾಸಿವೆ ಮಾಡುತ್ತಿದ್ದರು. ಬೆಲ್ಲದ ಪಾಕಕ್ಕೆ ಸಿಹಿ ಕುಂಬಳಕಾಯಿ ತುರಿ ಹಾಕಿ ಮಿಠಾಯಿ ಮಾಡಿ ಕತ್ತರಿಸಿ ನಮಗೆ ಕೊಡುತ್ತಿದ್ದರು. ಸಿಹಿ ಕುಂಬಳಕಾಯಿ ಬೀಜವನ್ನು ಬಿಸಿಲಿಗೆ ಇಟ್ಟು ಒಣಗಿಸಿ ನಂತರ ಆ ಬೀಜವನ್ನು ಸುಲಿದು ಬೆಲ್ಲದ ಪಾಕಕ್ಕೆ ಹಾಕಿ ಮಿಠಾಯಿ ಮಾಡಿ ಕೊಡುತ್ತಿದ್ದರು. ಸಿಹಿ ಕುಂಬಳಕಾಯಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಅದನ್ನು ತೊಳೆದು ಎಣ್ಣೆ, ಸಾಸಿವೆ, ಇಂಗು, ಒಣಮೆಣಸಿನಕಾಯಿ ಜತೆಗೆ ಚೆನ್ನಾಗಿ ಹುರಿದು ಅದಕ್ಕೆ ಉಪ್ಪು, ಹುಣಿಸೆ ಹಣ್ಣು ಹಾಕಿ ಒರಳುಕಲ್ಲಿನಲ್ಲಿ ರುಬ್ಬಿ ಅದಕ್ಕೆ ಒಗ್ಗರಣೆ ಹಾಕಿ ಚಟ್ನಿ ಮಾಡುತ್ತಿದ್ದರು. ಅದೆಷ್ಟು ರುಚಿ ಇರುತ್ತಿತ್ತೆಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಬದನೆಕಾಯಿ ತೊಟ್ಟಿನ ಬಳಿಯ ಸಿಪ್ಪೆಯನ್ನು ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿ ಅದಕ್ಕೆ ಬೆಂದ ಬೇಳೆ ಹಾಕಿ ಸಾಸಿವೆ , ಇಂಗು, ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ ರುಬ್ಬಿ ಹಾಕಿ ಪಲ್ಯ ಮಾಡುತ್ತಿದ್ದರು. ಒಂದೆಲಗದ ಸೊಪ್ಪು, ವಿಷ್ಣು ಕ್ರಾಂತಿ ಸೊಪ್ಪು, ಹೊನಗೊನೆ ಸೊಪ್ಪು ಇದನ್ನೆಲ್ಲ ಹಾಕಿ ತೊವೆ ಮಾಡಿ ಆರೋಗ್ಯಕ್ಕೆ ಒಳ್ಳೆಯದು ಎಂದು ತಿನಿಸುತ್ತಿದ್ದರು’.

ಕಳೆದ ಲೇಖನದಲ್ಲಿ, ವನ್ಯಪ್ರಾಣಿಗಳ ಹಾವಳಿಯಿಂದಾಗಿ ಮತ್ತು ಜೀವನಶೈಲಿ ಬದಲಾವಣೆಯಿಂದಾಗಿ ಕೃಷಿ ಮೇಲೆ ಆಗುತ್ತಿರುವ ಪರಿಣಾಮ ಮತ್ತು ಸಂಕಷ್ಟ- ಸವಾಲುಗಳ ಬಗ್ಗೆಯೂ ಪ್ರಸ್ತಾಪಿಸಿದ್ದೆ. ಬಹುಬೆಳೆಯ ತೋಟಗಳು ಹೇಗೆ ಏಕ ಬೆಳೆಯತ್ತ ಸಾಗಿದವು ಎಂಬ ಚಿತ್ರಣ ಅದರಲ್ಲಿತ್ತು. ಯಲ್ಲಾಪುರ ತಾಲೂಕಿನ ಉಮಚಗಿ ಸೇವಾ ಸಹಕಾರಿ ಸಂಘದಲ್ಲಿ ಈಚೆಗೆ ರೈತರ ಸಭೆಯೊಂದು ನಡೆಯಿತು. ಸಭೆಯ ಉದ್ದೇಶ- ಕಾಡುಪ್ರಾಣಿಗಳಿಂದ, ವಿಶೇಷವಾಗಿ ಮಂಗಗಳ ಹಾವಳಿಯಿಂದಾಗಿ ಆಗುತ್ತಿರುವ ಕಷ್ಟ ನಷ್ಟದ ಬಗ್ಗೆ ಅರಣ್ಯ ಇಲಾಖೆಯ ಗಮನ ಸೆಳೆದು, ಪರಿಹಾರೋಪಾಯಗಳನ್ನು ಒದಗಿಸುವ ಕುರಿತು ಆಗ್ರಹಿಸುವುದು. ‘ವಾನರ ಕಾಟದಿಂದಾಗಿ ಮೊದಲು ತೋಟದಲ್ಲಿ ಏಲಕ್ಕಿ ಬೆಳೆ ಕಣ್ಮರೆಯಾಯಿತು. ಮೊದಲು ಕ್ವಿಂಟಾಲ್​ಗಟ್ಟಲೆ ಬೆಳೆಯುತ್ತಿದ್ದವರು ಈಗ ಒಂದು ಕೆಜಿ ಏಲಕ್ಕಿ ಬೇಕೆಂದರೂ ಖರೀದಿ ಮಾಡಬೇಕಾದ ಸನ್ನಿವೇಶ ಇದೆ. ಬಾಳೆಕಾಯಿಗೆ ಈಗ ಉತ್ತಮ ದರ ಇದ್ದರೂ, ಮಂಗಗಳ ಕಾಟದಿಂದಾಗಿ ಅಡಕೆ ತೋಟಗಳಲ್ಲಿ ಬಾಳೆ ಮಾಯವಾಗಿದೆ. ಇನ್ನು ಕಾಳುಮೆಣಸಿಗೆ ಕಟ್ಟೆ ರೋಗದ ಕಾಟ. ಇವೆಲ್ಲ ರೈತನಿಗೆ ಉಪ ಉತ್ಪನ್ನ ಗಳಾಗಿದ್ದವು. ಕ್ರಮೇಣ ಅಡಕೆಗೂ ಗಂಟುಬಿದ್ದ ಮಂಗಗಳು ಶುರುವಿನಲ್ಲಿ ಹಣ್ಣಡಿಕೆಯನ್ನು ಮಾತ್ರ ಗುರಿಯಾಗಿಸಿದ್ದವು. ಈಗ ಎಳೆ ಅಡಕೆಯನ್ನೂ ಗುರಿ ಮಾಡಿವೆ. ಒಂದು ಮಂಗಗಳ ಹಿಂಡು ಹೊಕ್ಕರೆ ಕೆಲವೇ ಸಮಯದಲ್ಲಿ ಕ್ವಿಂಟಾಲುಗಟ್ಟಲೆ ಅಡಕೆಯನ್ನು ಹಾಳು ಮಾಡುತ್ತವೆ. ಮಂಗಗಳು ಹಗಲು ಹೊತ್ತಿನಲ್ಲಿ ಮಾತ್ರ ಬರುವುದಿಲ್ಲ. ಸಾಯಂಕಾಲ ಮತ್ತು ರಾತ್ರಿ ವೇಳೆಯಲ್ಲಿ ಸಹ ಬಂದು ದಾಳಿಯಿಡುತ್ತಿವೆ. ಹೀಗಾಗಿ ಕಾವಲು ಕಷ್ಟ. ಉಳಿದಂತೆ, ಹಂದಿ, ನವಿಲು ಇತ್ಯಾದಿ ಪ್ರಾಣಿಕಾಟವೂ ಇದ್ದದ್ದೇ. ಒಟ್ಟಾರೆ ರೈತನಿಗೆ ಕೃಷಿ ಬೆಳೆಗಳ ರಕ್ಷಣೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಮಂಗಗಳನ್ನು ಹಿಡಿದು ಬೇರೆ ಕಡೆ ಬಿಡಿ ಅಥವಾ ಇನ್ಯಾವುದಾದರೂ ಕ್ರಮ ಕೈಗೊಂಡು, ಹಾವಳಿ ತಪ್ಪಿಸಿ ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ’ ಎಂದು ವಿವರಿಸುತ್ತಾರೆ, ಉಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಸಾಮಾಜಿಕ ಮುಂದಾಳು ಎಂ.ಜಿ.ಭಟ್ಟ ಸಂಕದಗುಂಡಿ.

ಅರಣ್ಯ ಇಲಾಖೆಗೆ ಈ ಸಮಸ್ಯೆಯ ತೀವ್ರತೆ ತಟ್ಟಿಲ್ಲವೆಂದಲ್ಲ. ಆದರೆ ಮಂಗಗಳನ್ನು ಹಿಡಿದು ಬೇರೆ ಕಡೆ ಬಿಡೋಣ ಎಂದರೆ ಅಲ್ಲಿನವರು ವಿರೋಧ ವ್ಯಕ್ತಪಡಿಸುತ್ತಾರೆ. ನಾವು ಇಕ್ಕಟ್ಟಿನ ಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದು ಅಧಿಕಾರಿಗಳ ಅಂಬೋಣ. ಇನ್ನು ಸಂತಾನಶಕ್ತಿ ಹರಣ ಮಾಡಿದರೆ , ಮಂಗಗಳು ಸಾಯುವ ಪ್ರಮಾಣ ಹೆಚ್ಚುತ್ತದೆ ಎಂದು ಅಧಿಕಾರಿಗಳು ವಾದ ಮುಂದಿಡುತ್ತಾರೆ.

ಇನ್ನೊಂದು ವಿಚಾರ ಎಂದರೆ, ವನ್ಯಜೀವಿಗಳಿಂದಾಗಿ ಬೆಳೆ ಹಾನಿಯಾದಲ್ಲಿ ಪರಿಹಾರ ನೀಡಲು ಅವಕಾಶ ಇದೆ. ಆದರೆ ಅಡಕೆಗೆ ಮಾತ್ರ ಈ ಸವಲತ್ತು ಇಲ್ಲ. ಆಯಾ ಭಾಗದ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು, ಪರಿಹಾರ ಸಿಗುವಂತೆ ಮಾಡಬೇಕೆಂಬುದು ರೈತರ ಒತ್ತಾಯ. ನರೇಗಾ ಯೋಜನೆ ಅಡಿಯಲ್ಲಿ ಹಲವು ವಿಧದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಮೂಲಕವೇ ಮಂಗನ ಕಾವಲು ವ್ಯವಸ್ಥೆ ಮಾಡಬಹುದೆಂಬುದು ಹಲವರ ಸಲಹೆ.

ಕೆಲ ವನ್ಯಜೀವಿಗಳನ್ನು ಕೃಷಿಕರು ಭಕ್ತಿ ಭಾವದಿಂದ ಕಾಣುವುದರಿಂದ, ಅವನ್ನು ಸಾಯಿಸುವುದು ಅವರಿಗೆ ಪ್ರಾಯೋಗಿಕ ಪರಿಹಾರವಾಗಿ ಗೋಚರಿಸುವುದಿಲ್ಲ. ದೇವರುಗಳಿಗೆ ಪ್ರಾಣಿಗಳನ್ನೇ ವಾಹನವಾಗಿಸುವುದು ಈ ನೆಲದ ವಿಶೇಷ. ಹೀಗಾಗಿ ಪ್ರಾಣಿಗಳು ಬೆಳೆಹಾನಿ ಮಾಡಿದರೂ, ಕೊಲ್ಲುವುದನ್ನು ಬಿಟ್ಟು ಅನ್ಯ ಹಾದಿ ಇದೆಯೇ ಎಂದು ರೈತರು ಆಲೋಚಿಸುವುದು.

ವನ್ಯಜೀವಿ ಸಂರಕ್ಷಣಾ ಕಾನೂನು ಈಗ ಇನ್ನಷ್ಟು ಬಿಗಿಯಾಗಿದೆ. ಪ್ರಾಣಿಗಳನ್ನು ಸಾಯಿಸುವುದು ಅಪರಾಧ. ಆದ್ದರಿಂದ ಬೆಳೆಹಾನಿಯಾದರೂ ಪರವಾಗಿಲ್ಲ; ಕೇಸಿಗೀಸು ಜಂಜಡ ಬೇಡ ಎಂದು ರೈತರು ಸುಮ್ಮನಾಗುತ್ತಾರೆ. ಇನ್ನು, ಏರ್ ಗನ್ ಇಂಥವಕ್ಕೆಲ್ಲ ಮಂಗಗಳು ಹೆದರುವ ಕಾಲ ಎಂದೋ ಹೋಗಿದೆ ಬಿಡಿ.

ಕಾಡುಪ್ರಾಣಿಗಳ ಕಾಟ ಬಹುತೇಕ ಎಲ್ಲ ಕಡೆಯೂ ಇದ್ದುದೇ; ರೈತರು ಸಹ ವ್ಯಕ್ತಿಗತ ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಮಾಡುತ್ತಲೇ ಬರುತ್ತಾರೆ. ಕೆಲವೊಮ್ಮೆ ಸ್ವಲ್ಪ ಫಲ ದೊರಕಿದರೆ ಹಲವೊಮ್ಮೆ ವ್ಯರ್ಥ ಯತ್ನವಾಗುತ್ತದೆ.

ಕೆಲವರು ಹೇಳುವ ಪ್ರಕಾರ, ಕಾಡುಗಳಲ್ಲಿ ಪ್ರಾಣಿಗಳಿಗೆ ಬೇಕಾದ ಆಹಾರ ಮತ್ತು ಹಣ್ಣಿನ ತುಟಾಗ್ರತೆ ಆಗಿರುವುದರಿಂದಾಗಿ ಅವು ನಾಡಿನತ್ತ ಧಾವಿಸುತ್ತಿವೆ. ಪತ್ರಕರ್ತ, ಪುತ್ತೂರಿನ ನಿಶಾಂತ್ ಎಂಬುವವರು ಈ ನಿಟ್ಟಿನಲ್ಲಿ ಆಸಕ್ತಿದಾಯಕ ಪ್ರಯೋಗ ಕೈಗೊಂಡಿದ್ದರಂತೆ. ಕೆಲ ದಿನಗಳ ಕಾಲ ಮಂಗಗಳಿಗೆಂದು ಮನೆ ಬಳಿ ಅನ್ನ ಇಡುತ್ತಿದ್ದರಂತೆ. ಆ ಅವಧಿಯಲ್ಲಿ ಅವು ತೋಟಕ್ಕೆ ಇಳಿಯುವುದು ಕಡಿಮೆ ಆಗಿತ್ತು ಎಂದು ಅವರು ಹೇಳುತ್ತಾರೆ.

ಅರಣ್ಯ ಇಲಾಖೆಯ ಏಕಜಾತಿ ನೆಡುತೋಪು ಪರಿಕಲ್ಪನೆ ವನ್ಯಜೀವಿಗಳ ಹಾವಳಿ ಸಮಸ್ಯೆಯನ್ನು ಬಿಗಡಾಯಿಸಿದೆ ಎಂಬುದು ಕೆಲವರ ವಾದ. ಒಂದು ಉದಾಹರಣೆ ನೋಡುವುದಾದರೆ- ಅಕೇಶಿಯಾ್ ನೆಡುತೋಪಿನಲ್ಲಿ ಬೇರೆ ಏನೂ ಬೆಳೆಯುವುದಿಲ್ಲ; ಉಳಿಯುವುದಿಲ್ಲ. ಇಂತಹ ಏಕಜಾತಿ ನೆಡುತೋಪುಗಳು ನೂರಾರು ಸಾವಿರಾರು ಎಕರೆ ಜಾಗದಲ್ಲಿ ವ್ಯಾಪಿಸಿದರೆ ಜೀವ ವೈವಿಧ್ಯದ ಕತೆಯೇನು! ಹೀಗಾಗಿ ನೈಸರ್ಗಿಕ ಅರಣ್ಯದಲ್ಲಿ ಯಾವ ಬಗೆಯ ಸಸ್ಯ-ಮರ ವೈವಿಧ್ಯಗಳು ಇರುತ್ತವೆಯೋ ಆ ರೀತಿಯಲ್ಲಿಯೇ ಕಾಡನ್ನು ಬೆಳೆಸಿದರೆ ಅನುಕೂಲ ಎಂದು ಇವರು ಪ್ರತಿಪಾದಿಸುತ್ತಾರೆ.

ಕೊನೇ ಮಾತು: ’ಮಂಗನಿಂದ ಮಾನವ’ ಎಂಬುದು ಡಾರ್ವಿನ್ ವಿಕಾಸವಾದದ ತಿರುಳು. ‘ದಯವಿಟ್ಟು ನಮ್ಮ ತೋಟ- ಬೆಳೆಗಳಿಗೆ ಹಾನಿ ಮಾಡಬೇಡಿ: ನಮ್ಮ ಬದುಕನ್ನು ಕಿತ್ತುಕೊಳ್ಳಬೇಡಿ’ ಎಂದು ಮಾನವರು ತಮ್ಮ ’ಪೂರ್ವಜರ’ ಬಳಿ ಅಂಗಲಾಚುವ ವಾತಾವರಣ ಈಗ ನಿರ್ವಣವಾಗಿದೆ!

ಪಶ್ಚಿಮ ಘಟ್ಟದ ಇಕ್ಕಟ್ಟು

ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು ಮತ್ತಿತರ ಜನವರ್ಗಕ್ಕೆ ಮತ್ತೊಂದು ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತು ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈಚೆಗೆ ನೀಡಿದ ಹೇಳಿಕೆ ಮತ್ತೊಂದು ಸುತ್ತಿನ ಚರ್ಚೆಯನ್ನು ಹುಟ್ಟುಹಾಕಿದೆ. ಸಚಿವರೇನೋ ನಂತರ, ವರದಿ ಜಾರಿಗೆ ಬದ್ಧ ಎಂದು ಹೇಳಿಲ್ಲ ಎಂದು ಸಮಜಾಯಿಷಿ ನೀಡಿದರಾದರೂ ಚರ್ಚೆಯ ಕಾವು ಜೋರಾಗಿತ್ತು. ಪಶ್ಚಿಮ ಘಟ್ಟಗಳ ವ್ಯಾಪ್ತಿಯ 1,64,280 ಚದರ ಕಿಲೋಮೀಟರ್​ನಲ್ಲಿ 59,940 ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೊಷಿಸಬೇಕು; ಈ ವ್ಯಾಪ್ತಿಯಲ್ಲಿ ಜನವಸತಿ, ಗಣಿಗಾರಿಕೆ, ಕೈಗಾರಿಕೆ, ರಸ್ತೆ ನಿರ್ಮಾಣ ಇತ್ಯಾದಿ ನಿಷೇಧಿಸಬೇಕು ಎಂದು ಈ ವರದಿ ಶಿಫಾರಸು ಮಾಡಿದೆ. ಆದರೆ, ಹೀಗೆ ಮಾಡಿದಲ್ಲಿ ತೀವ್ರ ಸಮಸ್ಯೆಯಾಗುತ್ತದೆ ಎಂದು ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿನ ರಾಜ್ಯಗಳು ಈ ವರದಿಯನ್ನು ವಿರೋಧಿಸುತ್ತಿವೆ. ಮೊದಲು ಮಾಧವ ಗಾಡ್ಗೀಳ್ ಸಮಿತಿ ಇದಕ್ಕಿಂತ ಕಠಿಣವಾದ ಶಿಫಾರಸು ಮಾಡಿತ್ತು. ಅದಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿದ್ದರಿಂದ ಕಸ್ತೂರಿ ರಂಗನ್ ಸಮಿತಿ ರಚಿಸಲಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು ಸಹ ವರದಿ ಜಾರಿಯನ್ನು ವಿರೋಧಿಸುತ್ತಿದ್ದಾರೆ. ವರದಿಯನ್ನು ಯಥಾವತ್ ಅನುಷ್ಠಾನ ಮಾಡಿದಲ್ಲಿ ಜನರಿಗೆ ತೊಂದರೆ ಏನೂ ಆಗದು ಎಂದು ಕೆಲವರು ವಾದಿಸುತ್ತಿದ್ದರೆ, ಸಮಸ್ಯೆ ನಿಶ್ಚಿತ ಎಂದು ಮತ್ತೆ ಕೆಲವರು ಪ್ರತಿಪಾದಿಸುತ್ತಿದ್ದಾರೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net