

ರಾಜಸ್ಥಾನ: ಐಐಟಿ ಸೇರಿದಂತೆ ಇತರ ವಿದ್ಯಾರ್ಥಿಗಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಕಾಲೇಜು-ಹಾಸ್ಟೆಲ್ನವರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಅವರೆಲ್ಲ ಸುರಕ್ಷತಾ ಕ್ರಮಗಳ ಬಗ್ಗೆ ಯೋಚಿಸುತ್ತಿದ್ದು, ವಿನೂತನ ಕ್ರಮವೊಂದನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ.
ರಾಜಸ್ಥಾನದ ಕೋಟಾದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ (ಐಐಟಿ) ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಒಂದರ ಹಿಂದೊಂದರಂತೆ ನಡೆದಿದೆ. ಪಾಲಕರ ಒತ್ತಡ, ಓದಿನ ಒತ್ತಡ ಎದುರಿಸಲಾಗದೆ ಈ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಬಹಳಷ್ಟು ಮಂದಿ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡು ಸಾವಿಗೀಡಾದ್ದರಿಂದ, ಇಲ್ಲಿನ ಕಾಲೇಜು ಮತ್ತು ಪಿಜಿಗಳಲ್ಲಿನ ಸೀಲಿಂಗ್ ಫ್ಯಾನ್ ಒಳಗಡೆ ಸ್ಪ್ರಿಂಗ್ ಫಿಕ್ಸ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಇವುಗಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರೆ ಫ್ಯಾನ್ ಹಾಗೇ ಕೆಳಕ್ಕೆ ಬಂದು ಬಿಡುವಂತೆ ಈ ಸ್ಪ್ರಿಂಗ್ ಅಳವಡಿಕೆ ಮಾಡಲಾಗಿದೆ.
ವಿದ್ಯಾರ್ಥಿಗಳಲ್ಲಿನ ಆತ್ಮಹತ್ಯೆ ಪ್ರಕರಣ ಕಡಿಮೆ ಮಾಡಲು ಇಂಥ ಕ್ರಮ ಕೈಗೊಳ್ಳಲಾಗಿದೆ ಎಂದು ಕೋಟಾದ ಹಾಸ್ಟೆಲ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ಮಿತ್ತಲ್ ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಒಂದೇ ವರ್ಷದಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. -ಏಜೆನ್ಸೀಸ್