

ದೇಶದಲ್ಲಿರುವ ಪ್ರಸಕ್ತ ರಾಜಕೀಯ ವ್ಯವಸ್ಥೆಯನ್ನು ನೋಡಿದರೆ, ಒಂದು ಅಂಶ ಕಣ್ಣಿಗೆ ರಾಚುತ್ತದೆ. ಅದೇನೆಂದರೆ, ಕುಟುಂಬ ರಾಜಕಾರಣದ ವಿಷವರ್ತಲ! ತಮಿಳುನಾಡಿನ ಡಿಎಂಕೆಯಿಂದ ಹಿಡಿದು ಕಾಶ್ಮೀರದ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದವರೆಗೆ, ಹಾಗೆಯೇ ಮಹಾರಾಷ್ಟ್ರದ ಶಿವಸೇನೆಯಿಂದ ಹಿಡಿದು ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದವರೆಗೆ ಈ ಅಸಹ್ಯಕರ ಮತ್ತು ಅಪಾಯಕರ ವಿದ್ಯಮಾನವಿದೆ. ಇದಕ್ಕೆ ನಮ್ಮ ರಾಜ್ಯದ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ಹೊರತಾಗಿಲ್ಲ. ದುರಂತವೆಂದರೆ, ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಬಿಜೆಪಿ ಸೇರಿದಂತೆ ಉಳಿದ ಪ್ರಾದೇಶಿಕ ಪಕ್ಷಗಳು ಕಹಳೆ ಊದುತ್ತಿದ್ದವು. ಆದರೆ, ಈಗ ಈ ಪಕ್ಷಗಳೇ ಕುಟುಂಬ ರಾಜಕಾರಣವನ್ನು ಪೋಷಿಸುತ್ತಿವೆ.
ಡಿಸೆಂಬರ್ 10ರಂದು ರಾಜ್ಯದಲ್ಲಿ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯಾರ್ಯಾರಿಗೆ ಟಿಕೆಟ್ ಕೊಟ್ಟಿದ್ದಾರೆ, ಯಾರಾರು ತಮ್ಮ ಮಕ್ಕಳು, ಅಣ್ಣತಮ್ಮಂದಿರು, ಸೋದರಸಂಬಂಧಿಗಳಿಗೆ ಟಿಕೆಟ್ ಕೊಟ್ಟಿದ್ದಾರೆ ಮತ್ತು ಕೊಡಿಸಲು ತಮ್ಮ ಪಕ್ಷಗಳ ಹೈಕಮಾಂಡ್ವರೆಗೂ ದಂಡಯಾತ್ರೆ ನಡೆಸಿದರು ಎನ್ನುವುದನ್ನು ನೋಡಿದರೆ, ದೇಶದ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂದು ಆತಂಕವಾಗುತ್ತದೆ. ಜೊತೆಗೆ ರಾಜಕೀಯ ಪಕ್ಷಗಳ ಬಗ್ಗೆ ಹೇಸಿಗೆಯಾಗುತ್ತದೆ. ಹಾಗೆಯೇ ಕೆಲವರಿಗೆ ಟಿಕೆಟ್ ಕೊಡುವಾಗ ‘ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ’ ಎನ್ನುವ ಬಿಜೆಪಿ, ಇನ್ನು ಕೆಲವೆಡೆಗಳಲ್ಲಿ ಕುಟುಂಬಸ್ಥರಿಗೇ ಮಣೆ ಹಾಕುತ್ತಿರುವುದು ಅದರ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ಸಿಗೆ ಪರ್ಯಾಯವಾಗಿ ರಾಜಕಾರಣವನ್ನು ನಡೆಸಲು ಮುಂದಾದ ಭಾರತೀಯ ಜನಸಂಘದ ಮೂಲಪುರುಷರಾದ ಶಾಮಪ್ರಸಾದ್ ಮುಖರ್ಜಿ ಅವರ ಸಿದ್ಧಾಂತಕ್ಕೇ ಇದು ಅಪಚಾರ.
ತಮ್ಮ ಕುಟುಂಬದ ಸುತ್ತಲೇ ಗಿರಕಿ ಹೊಡೆಯುತ್ತಿರುವ ದೇವೇಗೌಡ-ಕುಮಾರಸ್ವಾಮಿ ಮತ್ತು ಇಬ್ಬಂದಿ ನಿಲುವನ್ನು ಪ್ರದರ್ಶಿಸುತ್ತಿರುವ ಬಿಜೆಪಿ, ಮತ್ತು ಲಾಗಾಯ್ತಿನಿಂದಲೂ ಇಂತಹ ಕೆಟ್ಟ ಪರಂಪರೆಯನ್ನು ಪೋಷಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ಈ ಬಗ್ಗೆ, ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪ್ರಜಾಸತ್ತೆ ಮರೆಯಾಗಿ, ಮತ್ತೆ ಊಳಿಗಮಾನ್ಯ ಪದ್ಧತಿ ಬರುವುದರಲ್ಲಿ ಅನುಮಾನವಿಲ್ಲ.
| ಬಿ.ಎಸ್.ಜಯಪ್ರಕಾಶ ನಾರಾಯಣ ಬೆಂಗಳೂರು