ತಾರೆಯರಿಂದಲೂ ಕರೊನಾ ಜಾಗೃತಿ; ಎಚ್ಚರಿಕೆ ವಹಿಸುವಂತೆ ಸೋಷಿಯಲ್​ ಮೀಡಿಯಾಗಳ ಮೂಲಕ ಮನವಿ

Coronavirus 14 March 20
Published on

ಬೆಂಗಳೂರು: ಜಗತ್ತಿನಾದ್ಯಂತ ಕಾಡುತ್ತಿರುವ ಕರೊನಾ ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಒಂದು ವಾರದ ಮಟ್ಟಿಗೆ ತೀವ್ರ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಚಿತ್ರೋದ್ಯಮ ಕೂಡ ಬಂದ್ ಆಗಿದೆ. ಹಾಗಂತ ತಾರೆಯರು ಸುಮ್ಮನಾಗಿಲ್ಲ. ಸಿನಿಮಾ ಚಟುವಟಿಕೆಗಳಿಂದ ದೂರವಿದ್ದರೂ ಅಭಿಮಾನಿಗಳ ಬಗ್ಗೆ ಕಾಳಜಿ ತೋರುವ ಮೂಲಕ ಸಿನಿಪ್ರಿಯರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಶಿವರಾಜಕುಮಾರ್, ಶ್ರೀಮುರಳಿ, ರಾಗಿಣಿ, ಹರ್ಷಿಕಾ ಪೂಣಚ್ಚ ಮುಂತಾದವರು ಸೋಷಿಯಲ್ ಮೀಡಿಯಾ ಮೂಲಕ ಕರೊನಾ ಜಾಗೃತಿ ಕೈಗೊಂಡಿದ್ದಾರೆ.

ಕರೊನಾ ಕಾಟದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ರಾಜ್ಯ-ಕೇಂದ್ರ ಸರ್ಕಾರಗಳು ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದು, ಅಗತ್ಯ ನಿರ್ಬಂಧಗಳನ್ನೂ ಹೇರಿವೆ. ಅವು ಮಾಧ್ಯಮಗಳ ಮೂಲಕ ದೊಡ್ಡ ಪ್ರಮಾಣದಲ್ಲೇ ಸಾರ್ವಜನಿಕರನ್ನು ತಲುಪಿವೆ. ಇದೀಗ ಖ್ಯಾತ ನಟ-ನಟಿಯರೂ ಜಾಗೃತಿ ಮೂಡಿಸುತ್ತಿರುವುದರಿಂದ ಮತ್ತಷ್ಟು ಜನರನ್ನು ತಲುಪುತ್ತಿವೆ. ಅಲ್ಲದೆ, ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಮಾತುಗಳನ್ನು ಹೆಚ್ಚಿನ ಪ್ರೀತಿಯಿಂದ ಪಾಲಿಸುವುದರಿಂದ ಅವರ ಈ ರೀತಿಯ ಕರೊನಾ ಜಾಗೃತಿ ಹೆಚ್ಚಿನ ಪರಿಣಾಮ ಬೀರಲಿದೆ ಎಂದೂ ಹೇಳಲಾಗುತ್ತಿದೆ. ತಾವು ಮನೆಯಲ್ಲೇ ಆರಾಮಾಗಿ ಕುಳಿತಿರುವ ಫೋಟೋವೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಶಿವರಾಜ್​ಕುಮಾರ್, ‘ಮನೆಯಲ್ಲಿರಿ, ಮನೆಯವರ ಜೊತೆಗಿರಿ ...’ ಎಂದು ಕೇಳಿಕೊಂಡಿದ್ದಾರೆ.

‘ನಿಮ್ಮ ಬಗ್ಗೆ ಕೇರ್ ತೆಗೆದುಕೊಳ್ಳಿ. ಜನಜಂಗುಳಿಯ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳಿ. ಸಾಧ್ಯವಾದರೆ ಮನೆಯಲ್ಲೇ ಇದ್ದು, ಗಂಭೀರ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಿ. ಏಕೆಂದರೆ ಕರೊನಾ ತುಂಬ ವ್ಯಾಪಿಸುತ್ತಿದೆ’ ಎಂದು ನಟ ಶ್ರೀಮುರಳಿ ಕೋರಿಕೊಂಡಿದ್ದಾರೆ. ಇನ್ನು ಪುನೀತ್ ರಾಜ್​ಕುಮಾರ್ ಮಾ. 17ರ ತಮ್ಮ ಜನ್ಮದಿನದ ಆಚರಣೆಯನ್ನೇ ರದ್ದುಗೊಳಿಸಿದ್ದು, ಎಲ್ಲರೂ ಸುರಕ್ಷತೆ ಕಾಪಾಡುವಂತೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ನಟಿ ಹರ್ಷಿಕಾ ಪೂಣಚ್ಚ ವಿಡಿಯೋ ಮೂಲಕ ಪ್ರಾತ್ಯಕ್ಷಿಕೆಯನ್ನೇ ನೀಡಿದ್ದಾರೆ. ‘ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಿ. ಕೈಗಳನ್ನು ಅದರಲ್ಲೂ ಉಗುರುಗಳನ್ನೂ ಬಿಡದಂತೆ ಸ್ವಚ್ಛವಾಗಿರಿಸಿಕೊಳ್ಳಿ. ಆಗಾಗ ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುದ್ಧವಾಗಿರಿಸಿಕೊಳ್ಳಿ. ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿಕೊಳ್ಳಿ. ಯಾವುದಕ್ಕೂ ನಿಮ್ಮ ಜಾಗ್ರತೆಯಲ್ಲಿ ನೀವಿರಿ ...’ ಎಂಬುದಾಗಿ ವಿಡಿಯೋ ಮೂಲಕ ಪ್ರಾಯೋಗಿಕವಾಗಿ ಹೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಗಿಣಿ ಸಹ ಹೆಜ್ಜೆ ಇಟ್ಟಿದ್ದಾರೆ. ‘ಎಲ್ಲರೂ ಮಾಸ್ಕ್ ಧರಿಸುವುದಕ್ಕಿಂತ ಹೆಚ್ಚಾಗಿ ಕೈಗವಸು (ಗ್ಲೌಸ್) ತೊಟ್ಟುಕೊಳ್ಳಲು ಆದ್ಯತೆ ನೀಡಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮಾತ್ರ ಮಾಸ್ಕ್ ಅಗತ್ಯ ಹೆಚ್ಚಾಗಿರುತ್ತದೆ. ಆದರೆ, ನಾವು ಎಲ್ಲೆಂದರಲ್ಲಿ ಎಲ್ಲವನ್ನೂ ಮುಟ್ಟುವುದರಿಂದ ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕಾದ್ದು ಅತ್ಯಂತ ಅಗತ್ಯ’ ಎಂಬುದಾಗಿ ನಟಿ ರಾಗಿಣಿ ವಿನಂತಿ ಮಾಡಿಕೊಂಡಿದ್ದಾರೆ. ಈ ತರಹದ ಜಾಗೃತಿ ಸ್ಯಾಂಡಲ್​ವುಡ್​ನಲ್ಲಷ್ಟೇ ಅಲ್ಲ, ಬಾಲಿವುಡ್​ನಲ್ಲೂ ಕಂಡುಬಂದಿದೆ. ಮಾಸ್ಕ್ ಧರಿಸಿರುವ ಫೋಟೋವೊಂದನ್ನು ಇನ್​ಸ್ಟಾಗ್ರಾಮ್​​ನಲ್ಲಿ  ಹಂಚಿಕೊಂಡಿರುವ ನಟ ಅಭಿಷೇಕ್ ಬಚ್ಚನ್, ‘ಸ್ಟೇ ಸೇಫ್’ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net