

ಕ್ಯಾಮರಾಗಳು ಪಿಚ್ ವ್ಯಾಪ್ತಿಯ ಮೇಲೆ ನಿಗಾ ಇಟ್ಟು ಚೆಂಡು ಬೌಲರ್ ಕೈಯಿಂದ ಬಿಡುಗಡೆಯಾಗುತ್ತಲೆ ಕಂಪ್ಯೂಟರ್ಗೆ ದೃಶ್ಯಾವಳಿಗಳನ್ನು ರವಾನಿಸುತ್ತವೆ. ಇವುಗಳನ್ನು ತಂತ್ರಾಂಶವು ಒಂದೊಂದು ಫ್ರೇಮ್ ಆಗಿ ಕತ್ತರಿಸಿ, ಪಿಚ್ ಮೇಲೆ ಬಿದ್ದು ಪುಟಿದೆದ್ದ ಅಥವಾ ಗಾಳಿಯಲ್ಲಿ ಸ್ವಿಂಗ್ ಆಗುವ ಚೆಂಡು ಯಾವ ಎತ್ತರ ಮತ್ತು ಪಥದಲ್ಲಿ ಸಾಗುತ್ತಿದೆಯೆಂದು ಲೆಕ್ಕಾಚಾರ ಮಾಡುತ್ತದೆ.
ಪ್ರತಿ ಆವೃತ್ತಿಯಲ್ಲೂ ಹೊಸ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಪ್ರಸಾರವಾಗುವ ಐಪಿಎಲ್ನ ಈ ಬಾರಿಯ ಪಂದ್ಯಾವಳಿಯ ಕೆಲವು ಪಂದ್ಯಗಳಂತೂ ಅತಿ ಹೆಚ್ಚು ನೇರಪ್ರಸಾರದ ವೀಕ್ಷಣೆಯ ವಿಶ್ವದಾಖಲೆ ನಿರ್ವಿುಸಿವೆಯಂತೆ.
ವರ್ಷದಿಂದ ವರ್ಷಕ್ಕೆ ಈ ಪಂದ್ಯಾವಳಿಯಲ್ಲಿ ಹೊಸ ಹೊಸ ತಾಂತ್ರಿಕತೆಯು ಪರಿಚಯವಾಗುತ್ತ ಆಟದ ರೋಚಕತೆಯನ್ನು ಮೇಲೆತ್ತಿದೆ. ಸ್ಟಂಪ್ ಕ್ಯಾಮರಾ, ಸ್ನಿಕೋ ಮೀಟರ್, ಬಾಲ್ ಟ್ರಾ್ಯಕಿಂಗ್ ಇವೆಲ್ಲ ಕೆಲವೇ ವರ್ಷಗಳ ಹಿಂದೆ ಪರಿಚಯವಾಗಿ ಇದೀಗ ಕ್ರಿಕೆಟ್ಟಿಗೆ ಚೆಂಡು ಮತ್ತು ದಾಂಡಿನಷ್ಟೇ ಅನಿವಾರ್ಯವೆನಿಸಿವೆ. ಇವುಗಳ ಪರಿಚಯದ ಮೊದಲು ಕ್ರಿಕೆಟ್ ಹೇಗಿತ್ತು, ಹೇಗದು ಅಖಾಡಕ್ಕಿಳಿಯಿತು ಎಂಬುದರ ಹಿಂದಿನ ಕಥೆಯು ಗಮ್ಮತ್ತಾಗಿದೆ.
ಅದು 1996 ರ ಜೂನ್ ತಿಂಗಳು. ಇಂಗ್ಲೆಂಡಿನಲ್ಲಿ ಜೂನಿಯರ್ ಕೌಂಟಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಕ್ರಿಕೆಟ್ಟಿನಲ್ಲಿ ನೆಲೆಕಾಣುವ ಕನಸುಕಟ್ಟಿಕೊಂಡು ಬರುವ ಇಂಗ್ಲೆಂಡಿನ ಎಳೆಯರಿಗೆ ಚಿಮ್ಮುಹಲಗೆಯದು. ಬಕಿಂಗ್ ಹಾಂಪಷೈರ್ ತಂಡದ ಪರ ಎರಡನೆಯ ಇನಿಂಗ್ಸಿನಲ್ಲಿ ಪಾಲ್ ಮಾರ್ಟಿನ್ ಹಾಕಿನ್ಸ್ ಎಂಬ ಬ್ಯಾಟರ್ ಕ್ರೀಸ್ನಲ್ಲಿದ್ದ. ಮೊದಲನೆಯ ಇನಿಂಗ್ಸ್ನಲ್ಲಿ ರನೌಟ್ ಆಗಿ ಸೊನ್ನೆ ಸುತ್ತಿದ್ದ ಪಾಲ್ಗೆ ಆ ಇನಿಂಗ್ಸ್ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಹಾಗಾಗಿ ಬರುತ್ತಲೇ ಪರಾಕ್ರಮ ತೋರುವ ಇರಾದೆಯಲ್ಲಿದ್ದ ಆತನ ದುರದೃಷ್ಟಕ್ಕೆ ಬೌಲರ್ ಎಸೆದ ಚೆಂಡು ಪ್ಯಾಡ್ಗೆ ಅಪ್ಪಳಿಸಿತು. ಎದುರಾಳಿ ತಂಡದ ಮನವಿಗೆ ಅದಾಗಲೇ ಅಂಪೈರ್ ಬೆರಳು ಆಗಸವನ್ನು ತೋರಿಸಿತ್ತು. ಬೌಲರ್ ಸಮೇತ ಎಲ್ಲರಿಗೂ ಅದು ತಪ್ಪು ನಿರ್ಣಯವೆಂದು ಗೊತ್ತಿದ್ದರೂ ಯಾರೂ ಮಾತನಾಡಲಿಲ್ಲ. ತನ್ನ ಕನಸಿನ ಸೌಧ ಮುರಿದುಬಿದ್ದುದಕ್ಕೆ ಮರುಗುತ್ತ ಪೆವಿಲಿಯನ್ಗೆ ಹೆಜ್ಜೆ ಹಾಕುತ್ತಿದ್ದ ಪಾಲ್ಗೆ, ಎರಡೂ ಇನಿಂಗ್ಸ್ನಲ್ಲಿ ಸೊನ್ನೆ ಸಾಧಿಸಿದ ಕಾರಣ ತನ್ನ ಕ್ರಿಕೆಟ್ ಕರಿಯರ್ ಅಲ್ಲಿಗೆ ಮುಗಿದಿರುವ ವಿಷಯವಾಗಲೇ ಮನದಟ್ಟಾಗಿತ್ತು. ಹೀಗೆ ಅಂಪೈರುಗಳ ನಿರ್ಣಯದ ಪರಿಣಾಮದಿಂದ ತಮ್ಮ ಕ್ರಿಕೆಟ್ ಕನಸುಗಳಿಗೆ ಕಾಯಮ್ಮಾಗಿ ಬಾಗಿಲು ಎಳೆದುಕೊಂಡವರದೆಷ್ಟೋ ಜನ. ಅಂಥವರ ಪಟ್ಟಿಯಲ್ಲಿ ಮತ್ತೊಬ್ಬನಾದ ಪಾಲ್. ಆಗೆಲ್ಲ ಕೌಂಟಿಯಷ್ಟೆ ಏಕೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲೂ ಇಂತಹ ಘಟನೆಗಳು ನಡೆಯುತ್ತಲೇ ಇದ್ದವು. ಇದಕ್ಕೆಲ್ಲ ಪರಿಹಾರ ಬೇಕೆಂಬ ಕೂಗು ಅಲ್ಲಲ್ಲಿ ಕೇಳಿಬರುತ್ತಿದ್ದರೂ ಅಂಪೈರ್ ಬೆರಳಿಗೆ ಗಂಟೆ ಕಟ್ಟುವವರ್ಯಾರು ಎಂಬುದಕ್ಕೆ ಯಾರ ಬಳಿಯೂ ಉತ್ತರವಿರಲಿಲ್ಲ.
21 ಮೇ 2001ರಲ್ಲಿ ಕ್ರಿಕೆಟ್ಟಿನ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ನೇರಪ್ರಸಾರದ ಹಕ್ಕನ್ನು ಪಡೆದಿದ್ದ ಚಾನಲ್ 4 ವೀಕ್ಷಕರಿಗೆ ಮೊಟ್ಟಮೊದಲಿಗೆ ನೂತನ ತಂತ್ರಜ್ಞಾನವೊಂದನ್ನು ಪರಿಚಯಿಸಿತು. ಹಾಕ್ ಐ ಇನ್ನೋವೇಷನ್ಸ್ ಎಂಬ ಹೆಸರಿನ ಕಂಪನಿ ರೂಪಿಸಿದ ಆ ತಂತ್ರಜ್ಞಾನದ ಮೂಲಕ ಅಂಕಣದ ಮೇಲೆ ಬಿದ್ದು ಪುಟಿದು ಬರುವ ಚೆಂಡಿನ ಗತಿ ಮತ್ತು ಮಾರ್ಗವನ್ನು ಊಹಿಸಿ ವೀಕ್ಷಕರಿಗೆ ಗ್ರಾಫಿಕ್ ಮೂಲಕ ತೋರಿಸಲಾಗುವ ವ್ಯವಸ್ಥೆಯದು. ಬೌಲರ್ನ ಎಸೆತದ ಸ್ವಿಂಗ್ ಅಥವಾ ಸ್ಪಿನ್ ಪ್ರಮಾಣವನ್ನು ಅರಿಯುವ ಜತೆಗೆ ಪುಟಿತ, ಎಸೆತದ ಅಳತೆ ಈ ಎಲ್ಲ ವಿಷಯಗಳನ್ನು ವೀಕ್ಷಕನಿಗೆ ತಲುಪಿಸುವುದಕ್ಕಾಗಿ ಅದು ಬಳಸುತ್ತಿದ್ದುದು ಆರು ಕ್ಯಾಮರಾಗಳು ಮತ್ತವುಗಳ ಜತೆಗೆ ಅವರದ್ದೇ ತಂತ್ರಾಂಶವನ್ನೊಳಗೊಂಡ ಕಂಪ್ಯೂಟರ್. ಕ್ರೀಡಾಂಗಣದ ಪೂರ್ವನಿರ್ಧಾರಿತ ಕೋನಗಳಿಂದ ಈ ಕ್ಯಾಮರಾಗಳು ಪಿಚ್ ವ್ಯಾಪ್ತಿಯ ಮೇಲೆ ನಿಗಾ ಇಟ್ಟು ಚೆಂಡು ಬೌಲರ್ ಕೈಯಿಂದ ಬಿಡುಗಡೆಯಾಗುತ್ತಲೆ ಕಂಪ್ಯೂಟರ್ಗೆ ದೃಶ್ಯಾವಳಿಗಳನ್ನು ರವಾನಿಸುತ್ತವೆ. ಇವುಗಳನ್ನು ತಂತ್ರಾಂಶವು ಒಂದೊಂದು ಫ್ರೇಮ್ ಆಗಿ ಕತ್ತರಿಸಿ, ಪಿಚ್ ಮೇಲೆ ಬಿದ್ದು ಪುಟಿದೆದ್ದ ಅಥವಾ ಗಾಳಿಯಲ್ಲಿ ಸ್ವಿಂಗ್ ಆಗುವ ಚೆಂಡು ಯಾವ ಎತ್ತರ ಮತ್ತು ಪಥದಲ್ಲಿ ಸಾಗುತ್ತಿದೆಯೆಂದು ಲೆಕ್ಕಾಚಾರ ಮಾಡಿ ಮೂರು ಆಯಾಮದ ಯಾನೆ 3ಡಿ ಮಾಡೆಲ್ಲನ್ನು ರಚಿಸುತ್ತದೆ. ಒಂದು ವೇಳೆ ಮಾರ್ಗಮಧ್ಯದಲ್ಲಿ ಚೆಂಡು ಪ್ಯಾಡ್ಗೆ ಬಡಿದರೆ ತಂತ್ರಾಂಶವೇ ಅದು ಮುಂದೆ ಸಾಗುವ ಪಥವನ್ನು ಊಹಿಸಿ ತಿಳಿಸುತ್ತದೆ. ಇದು ಸ್ವಿಂಗ್, ಸ್ಪಿನ್, ದೂಸ್ರಾ ಹೀಗೆ ಬೌಲರ್ಗಳ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳಿಗೂ ಅನ್ವಯವಾಗುತ್ತದೆ. ಇದರ ನಿರ್ವತೃಗಳೇ ಹೇಳುವಂತೆ ಇದು ಮೂರೂವರೆ ಮೀಲಿಮೀಟರ್ನಷ್ಟು ಕರಾರುವಾಕ್ಕುತನದಿಂದ ಚೆಂಡಿನ ಪಥವನ್ನು ಊಹಿಸಬಲ್ಲದು.
ಕ್ರಿಕೆಟ್ಟಿನ ಟೆಲಿವಿಷನ್ ನೇರಪ್ರಸಾರಕ್ಕೆಂದು ಪರಿಚಯಿಸಲ್ಪಟ್ಟ ಈ ಹಾಕ್ ಐಗೆ ಫೀಲ್ಡಿಗಿಳಿಯುತ್ತಲೇ ಅದೃಷ್ಟ ಖುಲಾಯಿಸಿತು. 2002ರಲ್ಲಿ ಬಿಬಿಸಿ ಡೇವಿಸ್ ಕಪ್ ಟೆನ್ನಿಸ್ ಪಂದ್ಯಾವಳಿಯ ಪ್ರಸಾರಕ್ಕೆ ಬಳಸಿಕೊಳ್ಳುವ ಮೂಲಕ ಟೆನಿಸ್ ಲೋಕಕ್ಕೂ ಈ ಹದ್ದಿನ ಕಣ್ಣಿನ ಪರಿಚಯವಾಯಿತು. ತದನಂತರ ಆಸ್ಟ್ರೇಲಿಯನ್ ಓಪನ್, ಮುಂದೆ ವಿಂಬಲ್ಡನ್ ಹೀಗೆ ಟೆನ್ನಿಸ್ ಲೋಕದಲ್ಲಿ ತನ್ನ ಛಾಪು ಮೂಡಿಸಿದ ಹಾಕ್ ಐ 2006ರಲ್ಲಿ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ನಿರ್ಧಾರ ಪರಾಮರ್ಶೆಗೆ ಅಧಿಕೃತವಾಗಿ ಬಳಕೆಯಾಗುವ ಮೂಲಕ ಮತ್ತೊಂದು ಆಯಾಮದತ್ತ ಹೊರಳಿತು. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಪೈರ್ ನಿರ್ಧಾರ ಪರಾಮರ್ಶೆಗೆ ಇದನ್ನು ಬಳಸಲಾಯಿತು. 2011ರಲ್ಲಿ ಇಲೆಕ್ಟ್ರಾನಿಕ್ ದಿಗ್ಗಜ ಸೋನಿ ಕಂಪನಿಯು ಹಾಕ್ ಐ ಇನ್ನೋವೇಷನ್ಸ್ ಕಂಪನಿಯನ್ನು ಖರೀದಿಸಿದ ನಂತರವಂತೂ ಬ್ಯಾಡ್ಮಿಂಟನ್, ರಗ್ಬಿ, ಫುಟ್ಬಾಲ್, ಸ್ನೂಕರ್ ಹೀಗೆ ಒಂದೊಂದೇ ಕ್ರೀಡೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ಕ್ರೀಡಾಪ್ರೇಮಿಗಳಿಗೆ ಮನೆಯಲ್ಲೇ ಕ್ರೀಡೆಯ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ತಿಳಿಸುತ್ತಿದೆ. ಬೌಲರ್ಗಳ ಕರಾರುವಾಕ್ಕುತನ, ವೈವಿಧ್ಯತೆಯ ಜತೆಗೆ ಬ್ಯಾಟರ್ಗಳ ತಾಂತ್ರಿಕತೆಯನ್ನೂ ಪರೀಕ್ಷಿಸಲು, ಅವರನ್ನು ತರಬೇತುಗೊಳಿಸಲು ತಂಡಗಳು ಇತ್ತೀಚಿನ ವರ್ಷಗಳಲ್ಲಿ ಹಾಕ್ ಐ ಸಹಾಯಕ್ಕೆ ಮೊರೆ ಹೋಗುತ್ತಿವೆ.
ಅಂದು ಅಂಪೈರನ ತಪ್ಪು ನಿರ್ಣಯದಿಂದ ತನ್ನ ಕ್ರಿಕೆಟ್ ಜೀವನಕ್ಕೆ ಸಲಾಂ ಹೇಳಿ ವಾಪಸ್ಸು ಮನೆ ಸೇರಲು ಮುನ್ನೂರು ಮೈಲಿಯಷ್ಟು ದೂರ ಡ್ರೖೆವ್ ಮಾಡುವಾಗ ಆಟದ ಈ ಬಗ್ ಬಗ್ಗೆ ಯೋಚಿಸಿದ ಪಾಲ್ ಮಾರ್ಟಿನ್ ಹಾಕಿನ್ಸ್ ಮುಂದೆ ಕೃತಕ ಬುದ್ಧಿಮತ್ತೆಯಲ್ಲಿ ಡಾಕ್ಟರೇಟ್ ಪಡೆದು ತನ್ನ ಹೆಸರಿನ ಕೊನೆಯಲ್ಲಿರುವ ಹಾಕಿನ್ಸ್ನ ‘ಹಾಕ್’ ಎರವಲು ಪಡೆದು ಆ ಹೆಸರಿನಿಂದ ತಂತ್ರಜ್ಞಾನವನ್ನು ರೂಪಿಸಿ ಅಂಪೈರ್ ನಿರ್ಣಯ ದೋಷದ ಆ ಬಗ್ ಅನ್ನೇ ಹೊಸಕಿಹಾಕುತ್ತಾನೆಂದು ಯಾರೂ ಯೋಚಿಸಿರಲಿಲ್ಲ...