

ಭಾರತದ ಯುವಜನರಲ್ಲಿ ಮಾದಕವಸ್ತು ಸೇವನೆ ಚಟ ಹೆಚ್ಚುತ್ತಿದೆ. 10-17 ವಯೋಮಾನದ 1.58 ಕೋಟಿ ಮಕ್ಕಳು ಮಾದಕದ್ರವ್ಯ ಸೇವನೆ ಚಟ ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರವು 2022ರಲ್ಲಿ ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಹೇಳಿತ್ತು. ದೇಶದ ಜನಸಂಖ್ಯೆಯಲ್ಲಿ ಸುಮಾರು 16 ಕೋಟಿ ಜನರು (10ರಿಂದ 75 ವಯೋಮಾನದವರು) ಆಲ್ಕೋಹಾಲ್ ಸೇವಿಸುತ್ತಾರೆ ಎಂದಿದೆ ಕೇಂದ್ರ.
ಈಗ ಮತ್ತೆ ಚೀನಾದಿಂದ ತುಸು ತಲ್ಲಣಕ್ಕೆ ಕಾರಣವಾಗುವ ಸುದ್ದಿಗಳು ಬರುತ್ತಿವೆ. ಮಕ್ಕಳಲ್ಲಿ ನ್ಯುಮೋನಿಯಾ ವಿಪರೀತ ಪ್ರಮಾಣದಲ್ಲಿ ವರದಿಯಾಗುತ್ತಿದ್ದು, ಜನರು ಕಂಗಾಲಾಗುವಂತೆ ಮಾಡಿದೆ. ಇದು ಸಾಲದೆಂಬಂತೆ, ಈ ಚಳಿಗಾಲದಲ್ಲಿ ಚೀನಾದ ಬಹಳ ಜನರಿಗೆ ಉಸಿರಾಟ ಸಮಸ್ಯೆ ಉಂಟಾಗಬಹುದು ಎಂದು ಚೀನಾದ ಅಧಿಕಾರಿಗಳೇ ಎಚ್ಚರಿಕೆ ನೀಡಿದ್ದಾರೆ. ಕರೊನಾ ವಿಷಯದಲ್ಲಿ ಚೀನಾದ ವಿಲಕ್ಷಣ ವರ್ತನೆಯನ್ನು ಅರಿತಿರುವ ಭಾರತ ಮುಂತಾದ ದೇಶಗಳು ಈ ಹಿನ್ನೆಲೆಯಲ್ಲಿ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಸದ್ಯ, ಚೀನಾದ ದೆಸೆಯಿಂದ ಜಗತ್ತು ಮತ್ತೊಂದು ಆರೋಗ್ಯ ಕಂಟಕವನ್ನು ಎದುರಿಸದಿರಲಿ ಎಂದು ಆಶಿಸಬೇಕಷ್ಟೆ.
ಇತ್ತ ಭಾರತದಲ್ಲಿ, ಕರೊನಾ ಲಸಿಕೆ ವಿಷಯದಲ್ಲಿ ವದಂತಿ, ಆತಂಕ ಸೃಷ್ಟಿಯಾಗಿತ್ತಲ್ಲ. ಕರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತರದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ; ಅದರಲ್ಲೂ 20, 30, 40 ವಯೋಮಾನದ ಯುವಜನರಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಿದೆ; ನಿನ್ನೆ ಮೊನ್ನೆವರೆಗೂ ಆರೋಗ್ಯವಂತರಾಗಿದ್ದವರು ಸಹ ದಿಢೀರನೆ ಸಾಯುವ ಪ್ರಕರಣಗಳು ಏರಿಕೆ ಕಂಡಿವೆ ಎಂದು ಜನರು ಹೇಳುತ್ತಿದ್ದುದು ಹಳ್ಳಿಹಳ್ಳಿಗಳಲ್ಲಿ ಸಹ ಕಂಡುಬರುತ್ತಿತ್ತು. ಈ ಅನಿಸಿಕೆ ಹಾಗೇ ಬಹಳ ಕಾಲ ಮುಂದುವರಿಯುವುದು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಲ್ಲ ಎಂದು ಮನಗಂಡು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವತಿಯಿಂದ ಒಂದು ವ್ಯಾಪಕವಾದ ಅಧ್ಯಯನವನ್ನು ನಡೆಸಲಾಯಿತು. ಆ ಅಧ್ಯಯನ ವರದಿಯು ಬಹಿರಂಗಪಡಿಸಿದ ಅಂಶವು, ಕರೊನಾ ಲಸಿಕೆಯನ್ನು ಆರೋಪಿಸ್ಥಾನದಿಂದ ಮುಕ್ತಗೊಳಿಸಿದೆ ಎನ್ನಬಹುದು. ಐಸಿಎಂಆರ್ ಇದು ಕೇಂದ್ರ ಆರೋಗ್ಯ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಇದರ ಮಾತಿಗೆ ಜಾಗತಿಕ ವೈದ್ಯಕೀಯ ಮತ್ತು ವೈಜ್ಞಾನಿಕ ವಲಯದಲ್ಲಿ ಮನ್ನಣೆ ಇದೆ. ಕರೊನಾ ಲಸಿಕೆ ಪುಕಾರಿನ ಅಸಲಿಯತ್ತನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ದೇಶದ ವಿವಿಧೆಡೆಯ 36 ಆಸ್ಪತ್ರೆಗಳ ಅಂಕಿಅಂಶಗಳನ್ನು ತಜ್ಞರು ಕಲೆಹಾಕಿದರು. ಅಧ್ಯಯನದ ಕೊನೆಯಲ್ಲಿ ಅವರು ಯಾವ ನಿಷ್ಕರ್ಷೆಗೆ ಬಂದರೆಂದರೆ- ಕರೊನಾ ಲಸಿಕೆ ತೆಗೆದುಕೊಂಡಿದ್ದರಿಂದಾಗಿ ಹಠಾತ್ ಸಾವು ಸಂಭವಿಸಿಲ್ಲ; ವಾಸ್ತವದಲ್ಲಿ, ಕರೊನಾ ಲಸಿಕೆಯು ಹಠಾತ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು. ಅನಿಯಮಿತ ಹಾರ್ಟ್ ಬೀಟ್, ಕುಟುಂಬದಲ್ಲಿ ಹಠಾತ್ ಸಾವಿನ ಪ್ರಕರಣಗಳು, ಸಾವಿಗೆ ಮುನ್ನ 48 ಗಂಟೆಗಳಲ್ಲಿ ಅತಿಯಾದ ಕುಡಿತ, ರೂಢಿಯಿಲ್ಲದ, ವಾಡಿಕೆಯಲ್ಲದ ದೈಹಿಕ ಚಟುವಟಿಕೆಗಳಲ್ಲಿ ಅತಿಯಾಗಿ ತೊಡಗುವುದು, ಕರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು- ಈ ಮುಂತಾದವು ಹಠಾತ್ ಸಾವಿಗೆ ಕಾರಣಗಳೇ ಹೊರತು ಕರೊನಾ ವ್ಯಾಕ್ಸಿನ್ ತೆಗೆದುಕೊಂಡ ಮಾತ್ರಕ್ಕೆ ಸಾವು ಸಂಭವಿಸಿಲ್ಲ ಎಂದು ತಜ್ಞರು ನಿರ್ಣಯಕ್ಕೆ ಬಂದಿದ್ದಾರೆ.
ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನ ಈಚಿನ ಸಂಚಿಕೆಯಲ್ಲಿ ಈ ಅಧ್ಯಯನ ವರದಿಯ ವಿವರ ಪ್ರಕಟವಾಗಿದೆ. ಅನ್ಯ ಕಾಯಿಲೆಗಳು ಇಲ್ಲದ, ಆಸ್ಪತ್ರೆಗೆ ಸೇರಿಸಲ್ಪಟ್ಟ 24 ಗಂಟೆಗಳಲ್ಲಿ ನಿರ್ದಿಷ್ಟ ಕಾರಣ ಇಲ್ಲದೆ ಮೃತಪಟ್ಟವರ ಪ್ರಕರಣಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿತ್ತು. 2021ರ ಅಕ್ಟೋಬರ್ನಿಂದ 2023ರ ಮಾರ್ಚ್ವರೆಗಿನ ಇಂಥ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ‘ಈ ಪೈಕಿ ಹೆಚ್ಚಿನ ಸಾವುಗಳು ಹೃದಯಸಂಬಂಧಿ ತೊಂದರೆಯಿಂದ ಆಗಿವೆ. ಆದರೆ ಈ ಎಲ್ಲವೂ ಹೃದಯಸ್ತಂಭನವಾಗಿರಲಿಕ್ಕಿಲ್ಲ. ಹೀಗಾಗಿ ನಾವು ಅವನ್ನು ಹಠಾತ್ ಸಾವು ಎಂದು ಕರೆದಿದ್ದೇವೆ. ಇಂಥ ಹಠಾತ್ ಸಾವಿಗೆ ಕರೊನಾ ಲಸಿಕೆ ಕಾರಣ ಎಂದು ನಮಗೆ ಅಧ್ಯಯನದಲ್ಲಿ ಕಂಡುಬಂದಿಲ್ಲ. ಅಷ್ಟಕ್ಕೂ, ಕರೊನಾ ಲಸಿಕೆ ಸಾವುಗಳನ್ನು ತಡೆಗಟ್ಟಿದೆ’ ಎಂದು ಐಸಿಎಂಆರ್ನ ಮನೋಜ್ ಮುರೇಕರ್ ಅವರು ಹೇಳಿದ್ದಾರೆ. ತೀವ್ರವಾದ ಕೋವಿಡ್ ಸೋಂಕಿಗೆ ಒಳಗಾದವರು, ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸುವ ನಿಟ್ಟಿನಲ್ಲಿ, ಸದ್ಯದ ಒಂದೆರಡು ವರ್ಷದ ಮಟ್ಟಿಗೆ ಅತಿಯಾದ ವರ್ಕೌಟ್ನಲ್ಲಿ ತೊಡಗುವುದು ಅಷ್ಟು ಸೂಕ್ತವಲ್ಲ ಎಂಬ ಎಚ್ಚರಿಕೆಯ ಮಾತನ್ನೂ ತಜ್ಞರು ನೀಡಿದ್ದಾರೆ. ಕರೊನಾ ಸೋಂಕು, ಲಸಿಕೆ ಪಡೆದಿದ್ದು, ಕುಟುಂಬದಲ್ಲಿ ಹಠಾತ್ ಸಾವಿನ ಇತಿಹಾಸ, ಧೂಮಪಾನ ಮತ್ತು ಕುಡಿತದ ಅಭ್ಯಾಸ ಮತ್ತು ಸಾವನ್ನಪು್ಪವ ಎರಡು ದಿನದ ಮುನ್ನ ಅತಿಯಾದ ವ್ಯಾಯಾಮ/ ವರ್ಕೌಟ್ ಏನಾದರೂ ನಡೆಸಿದ್ದರೇ- ಈ ಮುಂತಾದ ಸಂಗತಿಗಳನ್ನು ಅಧ್ಯಯನದ ಸಂದರ್ಭದಲ್ಲಿ ಪರಿಗಣಿಸಲಾಗಿತ್ತು. ಕರೊನಾದ ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡವರಲ್ಲಿ ದಿಢೀರ್ ಸಾವಿನ ಸಾಧ್ಯತೆ ತಗ್ಗಿತ್ತು. ಆದರೆ ಒಂದೇ ಡೋಸ್ ಲಸಿಕೆ ವಿಷಯದಲ್ಲಿ ಹೀಗೆ ಹೇಳುವಂತಿಲ್ಲ ಎಂದು ಸಹ ಐಸಿಎಂಆರ್ ತಜ್ಞರು ಅಭಿಪ್ರಯಪಟ್ಟಿದ್ದಾರೆ.
ಗುಜರಾತ್ನ ಹಲವು ಕಡೆಗಳಲ್ಲಿ ಈ ಸಲದ ಅಕ್ಟೋಬರ್ನಲ್ಲಿ ನವರಾತ್ರಿ ಆಚರಣೆ ಸಮಯದಲ್ಲಿ ಅನೇಕ ಹಠಾತ್ ಸಾವಿನ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ, ‘ತೀವ್ರವಾದ ಕರೊನಾ ಸೋಂಕಿಗೆ ಒಳಗಾದವರು ಅತಿಯಾದ ದೈಹಿಕ ಮತ್ತು ಮಾನಸಿಕ ಶ್ರಮದಲ್ಲಿ ತೊಡಗುವುದು ಸೂಕ್ತವಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಹ ಸಲಹೆ ಮಾಡಿದ್ದರು. ಇದೇನೇ ಇದ್ದರೂ, ಜನರಲ್ಲಿ ಒಂದುಬಗೆಯ ಅನುಮಾನವಂತೂ ಮನೆಮಾಡಿದೆ.
ಕರೊನಾ ಲಸಿಕೆ ವಿಚಾರ ಹೇಗೂ ಇರಲಿ, ಆದರೆ ಭಾರತದ ಯುವಜನರಲ್ಲಿ ಹೃದಯರೋಗಗಳ ಪ್ರಮಾಣ ಹೆಚ್ಚುತ್ತಿದೆ ಎಂಬುದು ಈಗ ಅನೇಕ ವರ್ಷಗಳಿಂದ ಇರುವ ಆತಂಕ ಮತ್ತು ಕಳವಳ. ಇಂಡಿಯನ್ ಹಾರ್ಟ್ ಅಸೋಸಿಯೇಷನ್ ವರದಿ ಪ್ರಕಾರ, ಭಾರತದಲ್ಲಿ ಹೃದಯಾಘಾತ ಸಂಭವಿಸುವವರಲ್ಲಿ ಶೇಕಡ 50 ಮಂದಿ 50ರ ಒಳಗಿನ ವಯಸ್ಸಿನವರು. ವಯಸ್ಸಿನ ಕಾರಣದಿಂದಾಗಿ ವೃದ್ಧರಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಿಗೆಯಿರುವುದು ಸಹಜ. ಆದರೆ ಈಗ ಈ ವಿನ್ಯಾಸ ಬದಲಾಗಿದೆ. ಕಾಯಿಲೆಗಳು ಯುವಜನರ ಹೃದಯವನ್ನೂ ಪ್ರವೇಶಿಸಿ, ಗಂಡಾಂತರ ತರುತ್ತಿವೆ ಎಂದು ಅನೇಕ ತಜ್ಞವೈದ್ಯರು ಹೇಳುತ್ತಾರೆ. ಆರೋಗ್ಯಕರ ಜೀವನಶೈಲಿ, ಆಹಾರ ಕ್ರಮ, ಚಟುವಟಿಕೆಯ ಜೀವನ ಮತ್ತು ಬಹುಮುಖ್ಯವಾಗಿ ಒತ್ತಡವನ್ನು ಕಡಿಮೆ ಮಾಡಿಕೊಂಡು, ಜೀವಿಸುವ ಕಲೆಯನ್ನು ಅರಿಯುವ ಅಗತ್ಯವನ್ನು ತಜ್ಞರು ಪ್ರತಿಪಾದಿಸುತ್ತಾರೆ.
ಇದು ಮಾತ್ರವಲ್ಲ, ಭಾರತದ ಮಕ್ಕಳು, ಯುವಜನರಲ್ಲಿ ಮಾದಕವಸ್ತು ಸೇವನೆ ಚಟ ಹೆಚ್ಚುತ್ತಿರುವುದು ಮತ್ತೊಂದು ಕಳವಳದ ಸಂಗತಿ. ದೇಶದಲ್ಲಿ 10-17 ವಯೋಮಾನದ 1.58 ಕೋಟಿ ಮಕ್ಕಳು ಮಾದಕದ್ರವ್ಯ ಸೇವನೆ ಚಟ ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರವು 2022ರ ಡಿಸೆಂಬರ್ನಲ್ಲಿ ಸವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿತ್ತು. ದೇಶದಲ್ಲಿ ಮಾದಕವಸ್ತು ಬಳಕೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸವೋಚ್ಚ ನ್ಯಾಯಾಲಯವು ಸೂಚಿಸಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮೊದಲ ಬಾರಿಗೆ ಇಂಥದೊಂದು ಸಮೀಕ್ಷೆ ನಡೆಸಿ ಅಂಕಿಅಂಶ ಕಲೆಹಾಕಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ನ್ಯಾಷನಲ್ ಡ್ರಗ್ ಡಿಪೆಂಡೆನ್ಸ್ ಟ್ರೀಟ್ವೆುಂಟ್ ಸೆಂಟರ್ (ಎನ್ಡಿಡಿಟಿಸಿ) ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್್ಸ) ವತಿಯಿಂದ 2018ರಲ್ಲಿ ಸಮೀಕ್ಷೆ ನಡೆಸಿದ್ದಾಗಿ ಸರ್ಕಾರ ತಿಳಿಸಿತ್ತು. ಮತ್ತೇರಿಸುವ ಪದಾರ್ಥಗಳಲ್ಲಿ ಮದ್ಯವು ಹೆಚ್ಚು ಜನರಿಂದ ಬಳಕೆಯಾಗುತ್ತದೆ.
ದೇಶದ ಜನಸಂಖ್ಯೆಯಲ್ಲಿ ಶೇಕಡ 14 ಮಂದಿ ಅಂದರೆ, ಸುಮಾರು 16 ಕೋಟಿ ಜನರು (10ರಿಂದ 75 ವಯೋಮಾನದವರು) ಆಲ್ಕೋಹಾಲ್ ಸೇವಿಸುತ್ತಾರೆ ಎಂದು ಸಹ ಕೇಂದ್ರ ಸರ್ಕಾರ ಈ ಅಫಿಡವಿಟ್ನಲ್ಲಿ ವಿವರಿಸಿತ್ತು. ಮಾದಕವಸ್ತು ವ್ಯಸನ ನಿಯಂತ್ರಣದ ಬಗ್ಗೆ ಸರ್ಕಾರವು ರಾಷ್ಟ್ರೀಯ ಕ್ರಿಯಾಯೋಜನೆ ರೂಪಿಸಿದ್ದು, ಇದರಡಿಯಲ್ಲಿ ಸಂಯೋಜಿತ ಹಾಗೂ ಸುಸ್ಥಿರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮಾದಕದ್ರವ್ಯ ಬಳಕೆ ಹೆಚ್ಚಿನ ಪ್ರಮಾಣದಲ್ಲಿರುವ ದೇಶದ 372 ಜಿಲ್ಲೆಗಳಲ್ಲಿ ನಶಾಮುಕ್ತ ಭಾರತ ಅಭಿಯಾನ ಕೈಗೊಂಡಿದ್ದಾಗಿ ಸರ್ಕಾರ ಕೋರ್ಟಿಗೆ ವಿವರಿಸಿತ್ತು.
ಮಾದಕವಸ್ತು ಬಳಕೆ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಕ್ರಮಗಳನ್ನು ತೆಗೆದುಕೊಂಡಿದ್ದಾಗಿಯೂ ಮತ್ತು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಬಗ್ಗೆ ನಿರ್ದಿಷ್ಟ ಅಂಶ ಸೇರ್ಪಡೆ ಮಾಡಿರುವುದಾಗಿಯೂ ಶಿಕ್ಷಣ ಇಲಾಖೆ ವತಿಯಿಂದ ಸಲ್ಲಿಸಲಾದ ಮತ್ತೊಂದು ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ವಿವರಿಸಿತ್ತು. ಇವು ಐದು ವರ್ಷಗಳ ಹಿಂದಿನ ಅಂಕಿಅಂಶಗಳು. ಈಗ ಈ ಪ್ರಮಾಣದಲ್ಲಿ ಎಷ್ಟು ಹೆಚ್ಚಳವಾಗಿದೆಯೋ ಬಲ್ಲವರಾರು! ಇದೂ ಅಲ್ಲದೆ, ಇವು ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಗೋಚರವಾದ ಸಂಗತಿಗಳು. ಬೆಳಕಿಗೆ ಬಾರದ ಇನ್ನೂ ಎಷ್ಟು ಸಂಗತಿಗಳು ಮಾದಕನಶೆಯಲ್ಲಿ ಅಡಗಿವೆಯೋ!
ಮಹಾನಗರಗಳ ಕೆಲ ಪ್ರತಿಷ್ಠಿತ ಶಾಲಾಕಾಲೇಜುಗಳ ಸನಿಹದಲ್ಲೇ ಮಾದಕದ್ರವ್ಯ ಮಾರಾಟ ಜಾಲ ಸಕ್ರಿಯವಾಗಿರುವ ಅನೇಕ ಪ್ರಕರಣಗಳು ಪೊಲೀಸ್ ದಾಳಿಯಲ್ಲಿ ಬಯಲಾಗಿವೆ. ಅದರಲ್ಲೂ ಬೆಂಗಳೂರಿನಂತಹ ಕಡೆಗಳಲ್ಲಿ ಕೆಲ ಆಫ್ರಿಕನ್ ದೇಶಗಳ ಯುವಜನರು ಡ್ರಗ್ಸ್ ಮಾರಾಟವನ್ನೇ ದಂಧೆಯಾಗಿಸಿಕೊಂಡಿರುವುದು ಪೊಲೀಸರಿಗೂ ತಲೆನೋವು ಮಾತ್ರವಲ್ಲ, ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಲೂ ಆತಂಕದ ವಿಚಾರವೇ ಅಲ್ಲವೆ? ಒಂದು ಚಟ ಅಂಟಿಕೊಂಡ ಮೇಲೆ ತ್ಯಜಿಸುವುದು ಸುಲಭವಲ್ಲ. ಎಷ್ಟೋ ಮಂದಿ ಧೂಮಪಾನಿಗಳು, ಮದ್ಯವ್ಯಸನಿಗಳು ಹೇಳುವುದುಂಟು- ‘ನಾನು ಮನಸು ಮಾಡಿದರೆ ಒಂದು ದಿನದಲ್ಲಿ ಈ ಚಟ ಬಿಟ್ಟೊಗೆಯಬಲ್ಲೆ..’ ಇದು ಕಾರ್ಯರೂಪಕ್ಕೆ ಬರದ ಒಣಜಂಭದ ಮಾತಷ್ಟೇ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಹ, ದೇಶದ ಯುವಜನರಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ವ್ಯಸನದ ಬಗ್ಗೆ ಇದೇ ಜನವರಿಯಲ್ಲಿ ಕಳವಳ ಹೊರಹಾಕಿತ್ತು ಮತ್ತು ಅಪರಾಧ ಹೆಚ್ಚಳಕ್ಕೆ ಇದೂ ಒಂದು ಕಾರಣ ಎಂದು ಹೇಳಿತ್ತು.
ಕೊನೇ ಮಾತು: ಮಹಾಭಾರತದಲ್ಲಿ ಕೃಷ್ಣನು ವೇದದ ಒಂದು ಉಕ್ತಿಯನ್ನು ಉಲ್ಲೇಖಿಸುತ್ತಾನೆ. ಅದು ಹೀಗಿದೆ: ‘ಜೂಜಾಡಿ ಪತನವಾದವನು, ಹಾಳಾದವನು ಇಡೀ ಪ್ರಪಂಚಕ್ಕೇ ಹೀಗೆ ಹೇಳುತ್ತಾನೆ: ಅಕ್ಷೈರ್ವ ದೀವ್ಯಃ ಕೃಷಿಮಿತ್ ಕೃಷಸ್ವ ವಿತ್ತೇ ರಮಸ್ವ ಬಹುಮನ್ಯಮಾನ್ಯಃ/ ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿಚಷ್ಟೇ ಸವಿತಾಯಮರ್ಯಃ’ (ದಾಳಗಳಿಂದ ಜೂಜಾಡಬೇಡ. ಬೇಸಾಯ ಮಾಡು. ಬೇಸಾಯದಿಂದ ಗಳಿಸಿದ ಧನವನ್ನೇ ಶ್ರೇಷ್ಠವೆಂದು ಭಾವಿಸಿ ಸಂತೋಷಪಡು. ಅದರಿಂದಲೇ ಹಸುಗಳು; ಅದರಿಂದಲೇ ಪತ್ನಿ. ಇದನ್ನು ನನಗೆ ಸವಿತೃವಾದ ಈಶ್ವರನು ಹೇಳಿಕೊಟ್ಟಿದ್ದಾನೆ.) ಇಲ್ಲಿನ ಧ್ವನಿ ಬಹಳ ಸ್ಪಷ್ಟವಾಗಿದೆ. ಜೂಜಿನ ವ್ಯಾಮೋಹ, ಗೀಳಿನಿಂದಾಗಿ ಮಹಾಭಾರತದಲ್ಲಿ ಏನೆಲ್ಲ ಘಟನೆಗಳು ಸಂಭವಿಸಿದವು ಎಂಬುದು ಎಲ್ಲರಿಗೂ ಗೊತ್ತು.
ಈ ಮೇಲಿನ ಮಾತು ಜೂಜುಕೋರರಿಗೆ ಮಾತ್ರವಲ್ಲ, ಎಲ್ಲ ಬಗೆಯ ವ್ಯಸನಗಳಿಗೂ, ವ್ಯಸನಿಗಳಿಗೂ ಅನ್ವಯ. ಭವ್ಯವಾಗಿ ಬದುಕಿ ಬಾಳಬೇಕಾದ ನಮ್ಮ ಮಕ್ಕಳು ಮಾದಕನಶೆ ಏರಿಸಿಕೊಂಡು, ಉತ್ಸಾಹಹೀನರೂ, ತ್ರಾಣಹೀನರೂ ಆಗುವುದನ್ನು ನೋಡುವುದಾದರೂ ಹೇಗೆ?