ದೊಡ್ಡಣ್ಣನಿಗೆ ಡೀಪ್ ಕಷಾಯ ಕುಡಿಸಿದ ಚೀನಾ...!

AI
Published on
ಚೌಕ
ಡೀಪ್ ಸೀಕ್ ಮತ್ತೆ ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದೆಯಷ್ಟೇ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಲಕ್ಷಾಂತರ ಹೂಡಿಕೆದಾರರ ಕೋಟಿಗಟ್ಟಲೆ ಹಣವನ್ನು ನೋಡನೋಡುತ್ತಲೇ ಕರಗಿಸಿದ ಈ ಚೀನಾ ಮೂಲದ ಕಂಪನಿಯ ಕೃತಕ ಬುದ್ಧಿಮತ್ತೆಯ ಆಪ್​ನ ಬಳಕೆಯ ನಿಷೇಧವೀಗ ಅಮೆರಿಕದಲ್ಲಿ ಆರಂಭವಾಗಿದೆ. ಅಲ್ಲಿನ ಟೆಕ್ಸಾಸ್ ರಾಜ್ಯವೀಗ ಸರ್ಕಾರಿ ಫರ್ವನು ಹೊರಡಿಸುವ ಮೂಲಕ ನಿಷೇಧದ ಪ್ರಕ್ರಿಯೆಗೆ ನಾಂದಿ ಹಾಡಿದ್ದು ಅಲ್ಲಿನ ಮತ್ತಷ್ಟು ರಾಜ್ಯಗಳು ಈ ಸಾಲಿಗೆ ಸೇರುವ ಲಕ್ಷಣಗಳು ಕಂಡುಬರುತ್ತಿವೆ. ಅಮೆರಿಕದ ದೊಡ್ಡಸ್ತಿಕೆಗೆ ಮಗ್ಗುಲ ಮುಳ್ಳಾಗಿರುವ ಚೀನಾವನ್ನು ಹಣಿಯಲು ದೊಡ್ಡಣ್ಣ ಅರೆಯುತ್ತಿದ್ದ ಮಸಾಲೆಗೆ ಪ್ರತಿಯಾಗಿ ಚೈನೀಸರು ಸರಿಯಾದ ಕಷಾಯವನ್ನೇ ಕುಡಿಸಿದ್ದು ಇದಕ್ಕೆಲ್ಲ ಮೂಲ ಕಾರಣ. ಈ ಪ್ರತ್ಯೌಷಧ ಝುಪಾಟೆಗೆ ಅಮೆರಿಕದ ಸೊಕ್ಕಿನ ಜೊತೆಗೆ ಷೇರು ಮಾರುಕಟ್ಟೆಗಳೂ ಕರಗಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯದಲ್ಲಿರುವುದು ಎನ್​ವಿಡಿಯಾ ಎಂಬ ಅಮೆರಿಕದ ಮೈಕ್ರೋ ಚಿಪ್ ತಯಾರಿಕಾ ಕಂಪನಿ. ಎಲ್ಲಿಂದಲೋ ಸೀನ್​ಗೆ ಬಂದು ಮುಖ್ಯಭೂಮಿಕೆಯನ್ನು ನಿರ್ವಹಿಸಲಾರಂಭಿಸಿದ ಈ ಕಂಪನಿಯ ಬೆಳವಣಿಗೆಯ ಹಿನ್ನೆಲೆಯನ್ನು ತಿಳಿಯುವ ಮುನ್ನ ಜಾಗತಿಕವಾಗಿ ಮೈಕ್ರೋ ಚಿಪ್ ತಯಾರಿಕಾ ಉದ್ಯಮದ ಕುರಿತು ಒಂದಷ್ಟು ತಿಳಿದುಕೊಳ್ಳೋಣ.

ಎಲೆಕ್ಟ್ರಾನಿಕ್ಸ್ ಎಂಬ ಶಬ್ದವಿದ್ದಲ್ಲಿ ಚಿಪ್​ಗಳ ಹಾಜರಿ ಇರಲೇಬೇಕು ಎನ್ನುವ ಮಟ್ಟಿಗೆ ಎರಡೂ ಪದಗಳು ಒಂದಕ್ಕೊಂದು ಹೊಂದಿಕೊಂಡಿವೆ. ಎಂಬತ್ತರ ದಶಕದಲ್ಲಿ ಎಲೆಕ್ಟ್ರಾನಿಕ್ಸ್ ಕ್ರಾಂತಿಯಾಗಿ ಮನೆ, ಆಫೀಸುಗಳ ಜೊತೆಗೆ ಹೆಚ್ಚೂ ಕಮ್ಮಿ ಎಲ್ಲ ಉದ್ಯಮಗಳಲ್ಲಿ ಸ್ವಯಂಚಾಲಿತ ಯಂತ್ರಗಳು ಬಂದು ಕುಂತವು. ಇವುಗಳನ್ನೆಲ್ಲ ನಿರ್ವಹಿಸುತ್ತಿದ್ದುದು ಒಂದು ಪುಟ್ಟ ಸರ್ಕ್ಯೂಟ್ ಬೋರ್ಡ್ ಎಂಬ ಮಾಯಾಪಟ್ಟಿ. ಯಂತ್ರಗಳು ನಮಗೆ ಬೇಕಾದ ರೀತಿಯಲ್ಲಿ ಆಡುವುದಕ್ಕೆ ನಮ್ಮ ಸೂಚನೆಗಳನ್ನು ಅಸೆಂಬ್ಲಿ ಲ್ಯಾಂಗ್ವೇಜ್ ಪೊ›ಗ್ರಾಮ್ ಎಂಬ ಸೂಚನಾ ಭಾಷೆಯಲ್ಲಿ ಬರೆದು ಸರ್ಕ್ಯೂಟ್ ಬೋರ್ಡ್​ನ ಮೆದುಳಾಗಿರುವ ಮೈಕ್ರೋ ಪೊ›ಸೆಸರ್ ಎಂಬ ನಿಯಂತ್ರಣಾ ಘಟಕಕ್ಕೆ ನೀಡಿದರೆ ಅದು ನಮ್ಮ ಆಜ್ಞೆಗಳನ್ನು ಶಿರಸಾ ಪಾಲಿಸುತ್ತಿತ್ತು. ಆರಂಭದಲ್ಲಿ ಮೈಕ್ರೋ ಪೊ›ಸೆಸರ್ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳಾದ ಟ್ರಾನ್ಸಿಸ್ಟರ್, ರೆಸಿಸ್ಟರ್, ಕೆಪ್ಯಾಸಿಟರ್​ಗಳ ಸಂಖ್ಯೆ ಮತ್ತು ಗಾತ್ರ ದೊಡ್ಡದಾಗಿರುವ ಕಾರಣಕ್ಕೆ ಮತ್ತು ಇವೆಲ್ಲದರ ಸೂರಾದ ಸರ್ಕ್ಯೂಟ್ ಬೋರ್ಡಿನ ಗಾತ್ರವೂ ಹಿರಿದಾಗಿರುತ್ತಿತ್ತು. ಇದರಿಂದ ನಿಯಂತ್ರಣಾ ಘಟಕದ ಗಾತ್ರದ ಜೊತೆಗೆ ಅವುಗಳನ್ನು ನಡೆಸಲು ಅಗತ್ಯವಾಗಿರುವ ವಿದ್ಯುತ್ತಿನ ಬಳಕೆಯೂ ಹೆಚ್ಚಾಗಿತ್ತು. ಇದನ್ನು ಸುಧಾರಿಸುವತ್ತ ನಡೆದ ಸಂಶೋಧನೆಯಲ್ಲಿ ಮೂಡಿ ಬಂದಿದ್ದೇ ಇಂಟಗ್ರೇಟೆಡ್ ಸರ್ಕ್ಯೂಟ್ ಉರ್ಫ್ ಐಸಿ ಮತ್ತು ಮೈಕ್ರೊ ಚಿಪ್​ಗಳು. ಐಸಿ ಒಟ್ಟಾರೆ ಸರ್ಕ್ಯೂಟ್ ಬೋರ್ಡಿನ ಗಾತ್ರವನ್ನು ಕುಗ್ಗಿಸಿದರೆ ನಿಯಂತ್ರಣಾ ಕಾರ್ಯವನ್ನು ಮಾಡುವ ಮೈಕ್ರೋ ಪೊ›ಸೆಸರ್ ಒಳಗೊಂಡ ಸಿಪಿಯು (ಸೆಂಟ್ರಲ್ ಪೊ›ಸೆಸಿಂಗ್ ಯುನಿಟ್) ಮೈಕ್ರೊ ಚಿಪ್ ಗಾತ್ರ, ಕಾರ್ಯಕ್ಷಮತೆಯ ಜೊತೆಗೆ ವೇಗವನ್ನು ನಾವು ಊಹಿಸಿರದ ಮಟ್ಟಿಗೆ ಏರಿಸಿತು. ಇದರ ಪರಿಣಾಮವಾಗಿ ಹೆಚ್ಚು ಸ್ಥಳ ಮತ್ತು ವಿದ್ಯುತ್ ಬೇಡುವ ನಿಯಂತ್ರಣಾ ಘಟಕಗಳ ಜಾಗದಲ್ಲಿ ಪುಟ್ಟ ಮೈಕ್ರೊ ಚಿಪ್​ಗಳು ಬಂದು ಕೂತು ಕಂಪ್ಯೂಟರ್ ಸೇರಿದಂತೆ ನಿಯಂತ್ರಣಾ ಘಟಕಗಳೆಲ್ಲ ತೂಕ ಕಳೆದುಕೊಂಡು ಸ್ಲಿಮ್ ಮತ್ತು ಟ್ರಿಮ್ ಅದವು.

ಎಲೆಕ್ಟ್ರಾನಿಕ್ಸ್ ಯುಗದ ಆರಂಭದಲ್ಲಿದ್ದ ಮೈಕ್ರೋ ಪೊ›ಸೆಸರ್ ಅಭಿವೃದ್ಧಿ ಹೊಂದುತ್ತ ಮೈಕ್ರೋಚಿಪ್ ಅಗಿ ಪರಿವರ್ತನೆಗೊಳ್ಳುತ್ತಿದ್ದಂತೆಯೇ ಅದು ಹೊಸಹೊಸ ತತ್ರಾಂಶ ಯಾನೆ ಭಾಷೆಗಳಲ್ಲಿ ಸಂವಹನವನ್ನು ಮಾಡಲು ಕಲಿಯಿತು. ಮತ್ತೊಂದೆಡೆ ಮಣಗಟ್ಟಲೆ ಭಾರ ಎತ್ತುವ ದೊಡ್ಡ ದೊಡ್ಡ ಯಂತ್ರಗಳಿಂದ ಹಿಡಿದು ಪುಟ್ಟ ಮಕ್ಕಳ ಆಟಿಕೆಯವರೆಗೆ ಎಲ್ಲೆಲ್ಲೂ ಈ ಚಿಪ್ ಅನಿವಾರ್ಯವಾಯಿತು. ಇನ್ನು ಮೊಬೈಲ್ ಮತ್ತು ಕಂಪ್ಯೂಟರ್​ಗಳನ್ನಂತೂ ಕೇಳಲೇಬೇಡಿ. ಇಂದಿನ ದಿನಗಳಲ್ಲಿ ಕಂಪನಿಯೊಂದು ಯಾವುದೇ ಬಳಕೆಗೆ ಹೊಸದೊಂದು ನಿಯಂತ್ರಕವನ್ನು ತಯಾರಿಸುವಾಗ ತನ್ನದೇ ಮೈಕ್ರೋಚಿಪ್ ಜೊತೆಗೆ ಅದಕ್ಕೆ ಅನುಗುಣವಾದ ಭಾಷೆಯನ್ನು ಬಳಸಿ ಏಕಸಾಮ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ.

ಇಷ್ಟೊಂದು ಬಹೂಪಯೋಗಿಯಾಗಿರುವ ಜೊತೆಗೆ ನಿನ್ನೆ, ಇಂದು ಮತ್ತು ನಾಳೆಯೂ ಸಲ್ಲುವ ವಸ್ತುವೆಂಬ ಕಾರಣಕ್ಕೆ ಚಿಪ್ ತಯಾರಿಕಾ ಉದ್ಯಮ ಮತ್ತು ತಂತ್ರಜ್ಞಾನದ ಮೇಲೆ ಏಕಸಾಮ್ಯ ಸಾಧಿಸಲು ಜಗದ ದೊಡ್ಡಣ್ಣಗಳ ಹಾವು ಏಣಿಯಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಹಲವು ಕಾರಣಗಳಿಂದ ಇದು ಯಾರ ಕೈಗೂ ಸಿಗದ ಬಿಸಿಲುಕುದುರೆಯಾಗಿದೆ. ಚಿಪ್ ತಯಾರಿಕೆಗೆ ಅತಿ ಮುಖ್ಯವಾಗಿ ಬೇಕಾಗಿರುವ ಲೋಹಗಳಾದ ಸಿಲಿಕಾನ್ ಮತ್ತು ಜಮೇನಿಯಮ್ಳ ಜಾಗತಿಕ ಉತ್ಪಾದನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಚೀನಾದಿಂದ ಬರುತ್ತದೆ. ಇವುಗಳ ಜೊತೆಗೆ ಅಗತ್ಯವಾಗಿರುವ ಗ್ಯಾಲಿಯಮ್ ಆರ್ಸನೈಡ್ ಮತ್ತು ಬೋರೊನ್ ಮತ್ತು ಫಾಸ್ಪರಸ್ ಗಣಿಗಳು ರಷ್ಯಾ ಮತ್ತು ಜಪಾನ್ ದೇಶಗಳ ತಾಬೆಯಲ್ಲಿವೆ. ಇದು ಕಚ್ಚಾ ವಸ್ತುಗಳ ಸ್ಥಿತಿಯಾದರೆ ವಿನ್ಯಾಸ ಮತ್ತು ತಯಾರಿಕಾ ತಂತ್ರಜ್ಞಾನದ ಸೀನು ಬೇರೆಯೇ ಇದೆ. ಚಿಪ್ ವಿನ್ಯಾಸದಲ್ಲಿ ನೆದರ್ಲ್ಯಾಂಡಿನ ಎಎಸ್​ಎಂಎಲ್ ಕಂಪನಿಯು ಏಕಸಾಮ್ಯವನ್ನು ಹೊಂದಿದ್ದು ತಯಾರಿಕೆಯಲ್ಲಿ ತೈವಾನಿನ ಟಿಎಸ್​ಎಂಸಿ ಮತ್ತು ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಗಳೆರಡೇ ಜಾಗತಿಕ ಉತ್ಪಾದನೆಯ ಶೇಕಡ 80ರಷ್ಟು ಕಾಣಿಕೆ ನೀಡುತ್ತವೆ. ಮಜವೆಂದರೆ ಈ ಚಿಪ್ ತಯಾರಿಕಾ ಕಂಪೆನಿಗಳ ಹೆಚ್ಚಿನ ಶಾಖೆಗಳು ಚೀನಾದ ನೆಲದಲ್ಲಿದ್ದು ಜಾಗತಿಕ ಉತ್ಪಾದನೆಯ ಶೇಕಡ ಮೂವತ್ತರಷ್ಟು ಮಾಲು ಚೀನಾದಿಂದಲೇ ಬರುವ ಮೂಲಕ ನಂಬರ್ ಒನ್ ಚಿಪ್ ತಯಾರಿಕಾ ದೇಶವೆಂಬ ಬಿರುದನ್ನು ಗಳಿಸಿಕೊಂಡಿದೆ. ಆದರೆ ಚಿಪ್ ತಯಾರಿಕೆಯ ಅತಿ ಮುಖ್ಯ ಘಟ್ಟವಾದ ಮೂಡಿಸುವಿಕೆ (ಎಚ್ಚಿಂಗ್) ತಂತ್ರಜ್ಞಾನದ ದಿಗ್ಗಜ ಅಮೆರಿಕ ಮೂಲದ ಲ್ಯಾಮ್ ರಿಸರ್ಚ್ ಸೇರಿದಂತೆ ಹೆಚ್ಚಿನ ಪಕ್ಷ ಚೀನಾದಲ್ಲಿ ಚಿಪ್ ತಯಾರಿಕಾ ಘಟಕಗಳಲ್ಲಿ ತೊಡಗಿಸಿಕೊಂಡಿದ್ದು ಅಲ್ಲಿನ ತಂತ್ರಜ್ಞರೆಲ್ಲ ಅಮೆರಿಕದವರು. ಒಟ್ಟಾರೆಯಾಗಿ ಹೇಳುವುದಾದಲ್ಲಿ ಚಿಪ್ ತಯಾರಿಕೆಯ ತಂತ್ರಜ್ಞಾನದಲ್ಲಿ ಅಮೆರಿಕ ಮುಂದಿದ್ದರೂ ಅದಕ್ಕೆ ಅಗತ್ಯವಾದ ಕಚ್ಚಾವಸ್ತುಗಳಿಗಾಗಿ ಅದು ಚೀನಾವನ್ನೇ ಅವಲಂಬಿಸಬೇಕಾಗಿದೆ. ಇದರ ಜೊತೆಗೆ ತೈವಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಪುಟ್ಟ ಅಟಗಾರರನ್ನೂ ಈ ಎರಡು ಸ್ಟಾರ್ ಆಟಗಾರರು ಉಪೇಕ್ಷಿಸುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆ ಪುಟ್ಟ ಆಟಗಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮ್ಮ ಕೈ ಮೇಲು ಮಾಡುವ ಅಮೆರಿಕ ಮತ್ತು ಚೀನಾದ ಪ್ರಯತ್ನ ಮಾತ್ರ ಜಾರಿಯಲ್ಲೇ ಇದೆ.

ಕಳೆದ ಒಂದೆರಡು ದಶಕಗಳಲ್ಲಿ ಆನ್​ಲೈನ್ ಗೇಮಿಂಗ್ ಎನ್ನುವುದು ಎಲ್ಲೆಡೆ ಜನಪ್ರಿಯತೆಯನ್ನು ಪಡೆಯುತ್ತಿದೆ. 1999ರಲ್ಲಿ ಅಮೆರಿಕಾ ಮೂಲದ ಎನ್​ವಿಡಿಯಾ ಎಂಬ ಪುಟ್ಟ ಕಂಪನಿಯೊಂದು ಜಿಪಿಯು ಎಂಬ ನೂತನ ಉಪಕರಣವನ್ನು ಮಾರುಕಟ್ಟೆಗೆ ಪರಿಚಯಿಸಿತು. ಈ ಜಿಪಿಯು ಯಾನೆ ಗ್ರಾಫಿಕ್ಸ್ ಪೊ›ಸೆಸರ್ ಯುನಿಟ್ ಎಂಬುದು ಆನ್​ಲೈನ್ ಗೇಮಿಂಗ್​ಗೆ ಪೂರಕವಾಗಿ ರೂಪಿಸಲಾಗಿದ್ದ ಎಲೆಕ್ಟ್ರ್ಟ್ರಾನಿಕ್ಸ್ ಚಿಪ್ ಆಧಾರಿತ ಉಪಕರಣ. ಈ ಮೊದಲು ಕಂಪ್ಯೂಟರ್ ಮತ್ತು ಲ್ಯಾಪ್​ಟಾಪ್​ಗಳಲ್ಲಿ ಗೇಮಿಂಗ್​ಗೆಂದು ಬಳಸಲ್ಪಡುತ್ತಿದ್ದ ಗ್ರಾಫಿಕ್ ಕಾರ್ಡ್ ಬದಲಿಗೆ ಆಟದ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ತಯಾರಿಸಲಾದ ಬದಲಿ ಉಪಕರಣವದು. ಅಸಲಿಗೆ ಸಿಪಿಯು ಮತ್ತು ಜಿಪಿಯುಗಳು ಮಾಡುವ ಕೆಲಸಗಳಲ್ಲಿ ಹೆಚ್ಚಿನ ಫರಕು ಏನಿಲ್ಲ. ಸಿಪಿಯು ತಂಡದ ರಾಜನ ಥರ. ನಿರ್ಧಾರ ಮತ್ತು ನಿಯಂತ್ರಣ ಆತನದ್ದೇ. ಆದರೆ ಜಿಪಿಯು ರಾಜನು ತನಗೆ ವಹಿಸಿರುವ ಕೆಲಸಗಳನ್ನು ನಿರ್ವಹಿಸುವ ಕಾರ್ಯಕ್ಷಮತೆ ಮತ್ತು ವೇಗದಲ್ಲಿ ಪಂಟರ್- ಅಂದರೆ ಬಾಹುಬಲಿಯ ರೀತಿ.

ಎನ್​ವಿಡಿಯಾ ಕಂಪನಿಯ ಆರಂಭದ ದಿನಗಳು ಅತ್ಯಂತ ಶೋಚನೀಯವಾಗಿದ್ದವು. ಬಂಡವಾಳ ಹಾಕಿದವರಲ್ಲಿ ಹೆಚ್ಚಿನವರು ಹಿಂತೆಗೆದುಕೊಂಡರೆ ನೌಕರರು ಕಂಪನಿಯು ಕುಂಟುತ್ತಿರುವುದನ್ನು ನೋಡಿ ಕಾಲುಕಿತ್ತರು. ಆದರೆ ಇದರ ಸ್ಥಾಪಕ ಜೆನ್ಸೆನ್ ಹುವಾಂಗ್ ಮಾತ್ರ ತಾನಿಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಿಲ್ಲ. ಕೇವಲ ಒಂದು ಗ್ರಾಫಿಕ್ ಕಾರ್ಡಿಗಾಗಿ ಇಷ್ಟೊಂದು ಬಂಡವಾಳ ಸುರಿಯೋದಾ ಅಂತ ಜನ ಆಡಿಕೊಂಡು ನಕ್ಕರೂ ತಲೆಕೆಡಿಸಿಕೊಳ್ಳಲಿಲ್ಲ. ಹೀಗೊಂದು ದಿನ ಮಾರುಕಟ್ಟೆಗೆ ಕ್ರಿಪ್ಟೋ ಕರೆನ್ಸಿಯೆಂಬ ಅಲ್ಲಾದೀನನ ದೀಪ ಲಗ್ಗೆ ಇಟ್ಟಿತು. ಆದರೆ ಅದರಿಂದ ಖುಲಾಯಿಸಿದ್ದುದು ಮಾತ್ರ ಎನ್​ವಿಡಿಯಾದ ನಸೀಬು. ಬಿಟ್ ಕಾಯಿನ್ ಸೇರಿದಂತೆ ಹತ್ತು ಹಲವು ಕ್ರಿಪ್ಟೋ ಕರೆನ್ಸಿಗಳು ಹುಟ್ಟಿ ತಮ್ಮ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಂತೆಯೇ ಅವುಗಳನ್ನು ತಲುಪಲು ಎನ್​ವಿಡಿಯಾ ರೂಪಿಸಿದ್ದ ಜಿಪಿಯು ಮೂಲಭೂತ ಜರೂರತ್ತಾಗಿ ಹೊರಹೊಮ್ಮಿತು. ಇಲ್ಲಿಂದ ಏರಲಾರಂಭಿಸಿದ ಕಂಪನಿಯ ವಹಿವಾಟಿನ ಗ್ರಾಫು ಆಮೇಲೆ ಯಶಸ್ಸಿನ ರಾಕೇಟು ಹತ್ತಿದ್ದು ಕೃತಕ ಬುದ್ಧಿಮತ್ತೆಯೆಂಬ ಚಿಮ್ಮುಹಲಿಗೆ ಸಿಕ್ಕ ಮೇಲೆ.

ಚಾಟ್ ಜಿಪಿಟಿ ಜೆಮಿನಿ ತರಹದ ಎಲ್​ಎಲ್​ಎಂ ಯಾನೆ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಎಂದು ಹೇಳಲಾಗುವ ಕೃತಕ ಬುದ್ಧಿಮತ್ತೆಯ ಇಂಜಿನ್​ಗಳನ್ನು ಓಡಾಡಲು ರೂಪಿಸಿರುವುದೇ ಎನ್​ವಿಡಿಯಾದ ಜಿಪಿಯು ಎಂಬ ಹಳಿಗಳ ಮೇಲೆ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವು ಸಿಕ್ಕಾಪಟ್ಟೆ ವೇಗ ಮತ್ತು ಲೆಕ್ಕಾಚಾರಗಳನ್ನು ಹೊಂದಿರುವ ಕಾರಣ ಅದನ್ನು ರೂಪಿಸಿರುವವರಿಗೆ ಆ ಕಾರ್ಯಕ್ಕೆ ಜಿಪಿಯು ಎಂಬ ಬಾಹುಬಲಿಗಿಂತ ಬೇರೆಯ ಆಯ್ಕೆ ಕಾಣಲಿಲ್ಲ. ಹೀಗಾಗಿ ಎಲ್​ಎಲ್​ಎಂ ಮತ್ತು ಜಿಪಿಯು ಶಂಕರ್ ಗುರು ತರಹ ಒಂದಾಗಿ ಕೃತಕ ಬುದ್ಧಿಮತ್ತೆಯ ಸಾಮ್ರಾಜ್ಯವನ್ನು ಆಳತೊಡಗಿದರು.

ಚಿಪ್ ತಯಾರಿಕೆಯಲ್ಲಿ ತನಗೆ ಚೀನಾ ಟಕ್ಕರ್ ಕೊಡುತ್ತಿರುವುದನ್ನು ಗಮನಿಸುತ್ತಿದ್ದ ಅಮೆರಿಕಾ ಮೊದಲಿನಿಂದಲೂ ಆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತಪ್ರಯತ್ನ ನಡೆಸುತ್ತಿತ್ತು. ಈ ನಡುವೆ ಕೃತಕ ಬುದ್ಧಿಮತ್ತೆಯ ಮುಖ್ಯ ವೇದಿಕೆಗಳಾದ ಚಾಟ್​ಜಿಪಿಟಿ, ಡೀಪ್​ಸೀಕ್​ನಂತಹ ಅಮೆರಿಕನ್ ಮೂಲದ ಕಂಪನಿಗಳು ಏಕಸಾಮ್ಯವನ್ನು ಸಾಧಿಸಿದ್ದವು. ಅವುಗಳ ಅಧಿಪತ್ಯಕ್ಕೆ ಸವಾಲನ್ನು ಒಡ್ಡುವಂತೆ ಚೀನಾ ಸಹ ತನ್ನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರುವುದು ದೊಡ್ಡಣ್ಣನ ಗಮನಕ್ಕೆ ಬಂದಿದ್ದೇ ಅದನ್ನು ಹಣಿಯಲು ಯೋಜನೆಯನ್ನು ರೂಪಿಸಿತು. ಈ ಮೊದಲೇ ಹೇಳಿದಂತೆ ಚಿಪ್ ತಯಾರಿಕೆಯ ಕಚ್ಚಾವಸ್ತುಗಳು ಚೀನಾದ ಬಳಿ ಲಭ್ಯವಿದ್ದರೂ ತಂತ್ರಜ್ಞಾನಕ್ಕಾಗಿ ಅದು ಅಮೆರಿಕದ ಮೊರೆ ಹೋಗಬೇಕಾಗಿತ್ತು. ಈ ದೌರ್ಬಲ್ಯವನ್ನೇ ಬಳಸಿಕೊಂಡು ಅಮೆರಿಕ ಎನ್​ವಿಡಿಯಾವೂ ಸೇರಿದಂತೆ ತನ್ನ ನಿಯಂತ್ರಣದಲ್ಲಿರುವ ಚಿಪ್ ತಯಾರಿಕಾ ಕಂಪನಿಗಳಿಗೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಕ್ಕೆ ಅತ್ಯವಶ್ಯವಾಗಿರುವ ಚಿಪ್​ಗಳನ್ನು ಚೀನಾಗೆ ರಫ್ತು ಮಾಡಲು ನಿರ್ಬಂಧಗಳನ್ನು ಹೇರಿತು. ಇದರಿಂದ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಲ್ಲಿ ಪಾರಮ್ಯ ಸಾಧಿಸುವ ಚೀನಾದ ಕನಸು ಕನಸಾಗಿಯೇ ಉಳಿಯಲಿದೆ ಎಂಬುದು ಅಮೆರಿಕದ ಲೆಕ್ಕಾಚಾರ.

2023ರಲ್ಲಿ ಚೀನಾದಲ್ಲಿ ಲಿಯಾನ್ ವೆನ್ ಫೆಂಗ್ ಎಂಬುವವರು ಆರಂಭಿಸಿದ ಡಿಪ್ ಸೀಕ್ ಎಂಬ ಕಂಪನಿಯು ಕಳೆದ ವರ್ಷ ಡಿಸೆಂಬರ್​ನಲ್ಲಿ ವಿ3 ಎಂಬ ಕೃತಕ ಬುದ್ಧಿಮತ್ತೆಯ ಮಾಡೆಲ್ ಅನ್ನು ನಂಗೂ ಫ್ರೀ ನಿಂಗೂ ಫ್ರೀ ಎಂದು ಮಾರುಕಟ್ಟೆಗೆ ಪರಿಚಯಿಸಿದಾಗ ಅದೇನೂ ದೊಡ್ಡ ಸುದ್ದಿಯಾಗಲಿಲ್ಲ. ಯಾಕೆಂದರೆ ಅದೊಂದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಸಲಹೆಯನ್ನು ನೀಡುವ ಕಂಪನಿಯಾಗಿತ್ತು. ಆದರೆ ಈ ಜನವರಿ 20ರಂದು ಡೀಪ್​ಸೀಕ್ ಆರ್ 1 ಎಂಬ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದೇ ತಡ ಅಮೆರಿಕ ಅಕ್ಷರಶಃ ಕಂಪಿಸಿ ಷೇರು ಮಾರುಕಟ್ಟೆಗಳು ತಪರಗುಟ್ಟಿದವು. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಕ್ಕೆ ಎನ್​ವಿಡಿಯಾ ತಯಾರಿಸುತ್ತಿದ್ದ ದುಬಾರಿ ಬೆಲೆಯ ಮತ್ತು ಅತ್ಯಧಿಕ ಕಾರ್ಯಕ್ಷಮತೆಯ ಜಿಪಿಯುಗಳೇ ಬೇಕು ಎಂಬ ನಂಬಿಕೆಯನ್ನು ಡೀಪ್​ಸೀಕ್ ಸುಳ್ಳಾಗಿಸಿದೆ. ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್​ನಲ್ಲಿ ಬಳಕೆಯಾಗುತ್ತಿದ್ದ ತರಬೇತುದಾರರ ಕೈಯಲ್ಲಿ ಹೇಳಿಸಿಕೊಂಡ ಕ್ರಿಕೆಟ್ ರೀತಿಯ ಸಿಸ್ಟಮ್ಯಾಟಿಕ್ ಲರ್ನಿಂಗ್ ವಿಧಾನವನ್ನು ಬಿಟ್ಟು ಸೊನ್ನೆ ಸುತ್ತುತ್ತ ತನ್ನ ತಪ್ಪುಗಳನ್ನು ಅರಿತು ಆಟವನ್ನು ತಿದ್ದಿಕೊಳ್ಳುವ ಕ್ರಿಕೆಟಿಗನ ರೀತಿಯ ರಿ ಇನ್ಪೋರ್ಸ್​ವೆುಂಟ್ ಲರ್ನಿಂಗ್ ಮಾದರಿಯನ್ನು ಇಲ್ಲಿ ಅಳವಡಿಸಿಕೊಂಡು ಯಶಸ್ಸನ್ನು ಕಾಣಲಾಗಿದೆ.

ಡೀಪ್​ಸೀಕ್​ನ ಮಾಡೆಲ್​ನ ವಿಶೇಷವೆಂದರೆ ಅಮೆರಿಕದಿಂದ ಪೂರೈಕೆಯಾಗುತ್ತಿದ್ದ ಎನ್​ವಿಡಿಯಾದ ದುರ್ಬಲ ಆವೃತ್ತಿಯ ಚಿಪ್​ಅನ್ನು ಬಳಸಿ ಸದ್ಯದ ಮಾರುಕಟ್ಟೆಯಲ್ಲಿರುವ ಇಂತಹುದೇ ಮಾಡೆಲ್​ಗಳ ಬೆಲೆಯ ಶೇಕಡ ಒಂದರಷ್ಟು ಖರ್ಚಿನಲ್ಲಿ ಇದನ್ನು ನಿರ್ವಿುಸಲಾಗಿದೆ. ಅದರ ನಿರ್ವತೃ ಅದನ್ನು ತನ್ನ ಮೂಲಕಸುಬಿನ ನಡುವೆ ಪುರುಸೊತ್ತಿನಲ್ಲಿ ಇದನ್ನು ತಯಾರಿಸಿದ್ದಾನೆ ಎಂಬ ಕತೆಗಳೂ ಓಡಾಡುತ್ತಿವೆ. ಇಷ್ಟು ಸಾಲದಕ್ಕೆ ಇದೀಗ ಚೀನಾದ ಮತ್ತೊಂದು ದಿಗ್ಗಜ ಅಲಿಬಾಬಾ ಕಂಪನಿಯೂ ತನ್ನ ಕ್ವೆನ್ 2.5 ಎಂಬ ನೂತನ ಕೃತಕ ಬುದ್ಧಿಮತ್ತೆಯ ಮಾಡೆಲ್​ನ್ನು ಬಿಡುಗಡೆ ಮಾಡಿ ಈ ತಂತ್ರಜ್ಞಾನದಲ್ಲಿ ಇದು ಸದ್ಯದ ಅತ್ಯಂತ ಉತ್ಕೃಷ್ಟ ಆವೃತ್ತಿ ಎಂದು ಹೇಳಿಕೊಂಡಿದೆ. ಡೀಪ್​ಸೀಕ್​ನಂತೆ ಇದೂ ಸಹ ಉಚಿತವಾಗಿ ಲಭ್ಯವಿದ್ದು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಚಕ್ರಾಧಿಪತ್ಯ ಸ್ಥಾಪಿಸುವ ಕನಸು ಕಾಣುತ್ತಿದ್ದ ದೊಡ್ಡಣ್ಣನಿಗೆ ಒಂದೇ ವಾರದಲ್ಲಿ ಎರಡು ಬಾರಿ ಭಾರಿ ಹಿನ್ನಡೆಯಾಗಿದೆ.

ಸದ್ಯಕ್ಕೆ ಭವಿಷ್ಯದ ತಂತ್ರಜ್ಞಾನವೆಂದೇ ಬಿಂಬಿತವಾಗಿರುವ ಕೃತಕ ಬುದ್ಧಿಮತ್ತೆಯ ಪರಿಸ್ಥಿತಿ ಕೆಸರು ಕೊಳದಂತಾಗಿದೆ. ಬರುವ ದಿನಗಳಲ್ಲಿ ಈ ಜಿದ್ದಾಜಿದ್ದಿ ಮತ್ತಷ್ಟು ಮುಂದುವರೆಯುವುದಂತೂ ಖರೆ. ಅಮೆರಿಕವು ತನ್ನ ಚಿಪ್ ತಯಾರಿಕೆಯ ಹೊರಗುತ್ತಿಗೆಯ ಘಟಕಗಳನ್ನು ಚೀನಾದಿಂದ ಸ್ಥಳಾಂತರಿಸುವ ಬಗ್ಗೆ ಉತ್ಸುಕವಾಗಿದ್ದು ಅದರಿಂದ ಭಾರತಕ್ಕೆ ಅನುಕೂಲವಾಗಲಿದೆಯೆಂಬ ಲೆಕ್ಕಾಚಾರ ಒಂದೆಡೆಯಾದರೆ ನಿನ್ನೆಯಷ್ಟೇ ಓಲಾ ಕಂಪನಿಯು ಎನ್​ವಿಡಿಯಾ ಜೊತೆಗಿನ ಸಹಭಾಗಿತ್ವದಲ್ಲಿ ಭಾರತದ ಮೊದಲ ಕೃತಕ ಬುದ್ಧಿಮತ್ತೆಯ ಮಾಡೆಲ್ ಕೃತ್ರಿಮ್ ಅನ್ನು ಮಾರುಕಟ್ಟೆಗೆ ಬಿಟ್ಟು ತಾನೂ ಈ ಕ್ಷೇತ್ರದಲ್ಲಿ ಧುಮುಕುವುದಾಗಿ ಘೊಷಿಸಿದೆ. ಕಣ ರಂಗೇರುತ್ತಿದೆ. ಫಾಯ್ದೆ ಯಾರಿಗೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಕಾಯ್ದು ನೋಡೋಣ, ಅಲ್ಲವೇ?

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net