

ಸಾಮಾನ್ಯವಾಗಿ ಗುರುಗಳನ್ನು ಹರಿಯುವ ನದಿಗೆ ಹೋಲಿಸುತ್ತೇವೆ. ಅಂದರೆ ನದಿ ಯಾವತ್ತೂ ಕಲ್ಮಶಗೊಳ್ಳುವುದಿಲ್ಲ. ನದಿಯ ಅಕ್ಕಪಕ್ಕದ ತೊರೆಗಳಿಂದ, ಹಳ್ಳಗಳಿಂದ ಎಷ್ಟೇ ಕಲ್ಮಶಗಳು ಬಂದರು ಕೂಡ, ಎಷ್ಟೇ ಮಂದಿ ಸ್ನಾನ ಮಾಡಿದರು ಕೂಡ ಆ ನದಿ ಅಪವಿತ್ರವಾಗುವುದಿಲ್ಲ. ಯಾಕೆಂದರೆ ಎಲ್ಲ ಅಶುದ್ಧಿಗಳನ್ನು ಆಪೋಷಣ ಮಾಡಿಕೊಂಡು ತನ್ನನ್ನು ಶುದ್ಧೀಕರಿಸಿಕೊಳ್ಳುವ ಸಾಮರ್ಥ್ಯ ನದಿಗಿದೆ ಎನ್ನುವುದು ನಂಬಿಕೆ ಹಾಗೂ ವೈಜ್ಞಾನಿಕವಾಗಿ ಕಂಡುಕೊಂಡ ಸತ್ಯವಾಗಿದೆ. ವಿಶೇಷವಾಗಿ ಗಂಗಾ ನದಿಯನ್ನು ಪವಿತ್ರ ನದಿ ಎಂದು ನಂಬಿದ್ದೇವೆ. ವೈಜ್ಞಾನಿಕವಾಗಿಯೂ ಇದಕ್ಕೆ ಪುರಾವೆಗಳಿವೆ. ನದಿಯಲ್ಲಿ ಎಷ್ಟೇ ಕಲ್ಮಶಗಳಿದ್ದರು ಕೂಡ ನದಿ ತನ್ನನ್ನು ಶುದ್ಧೀಕರಿಸಿಕೊಳ್ಳುವ ಪ್ರಕ್ರಿಯೆಲ್ಲಿ ತೊಡಗುತ್ತದೆ. ಆದ್ದರಿಂದಲೇ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪವು ಕಳೆದು ಹೋಗಿ ಪುಣ್ಯ ಸಂಚಯವಾಗುತ್ತದೆ ಎಂಬ ನಂಬಿಕೆಯೂ ಇದೆ.
ಹರಿಯುವ ನದಿಯ ನೀರನ್ನು ತಡೆದು ನಿಲ್ಲಿಸಲು ಅಲ್ಲಲ್ಲಿ ಅಣೆಕಟ್ಟು ನಿರ್ವಿುಸಲಾಗುತ್ತದೆ. ಅಣೆಕಟ್ಟುಗಳ ಮೂಲಕ ನೀರನ್ನು ಸಂಚಯಿಸಿಕೊಂಡು ಸಂಗ್ರಹಿಸುವ ಮೂಲಕ ಬೇಸಗೆಯಲ್ಲಿಯೂ ಬಳಸಲಾಗುತ್ತದೆ. ಜತೆಗೆ ಅಣೆಕಟ್ಟೆಯ ನೀರಿನ ಸಂಚಯದಿಂದ ಆ ಪ್ರದೇಶದ ಕೆರೆ, ಬಾವಿಗಳಲ್ಲೂ ನೀರಿನ ಒರತೆ ವರ್ಷಪೂರ್ತಿ ಇರುತ್ತದೆ. ಅಂತೆಯೇ ಚಾತುರ್ವಸ್ಯ ಎಂದರೆ ಹರಿಯುವ ನದಿಗೆ ಅಣೆಕಟ್ಟು ನಿರ್ವಿುಸಿದಂತೆ. ಗುರುಗಳನ್ನು ಒಂದೇ ಕಡೆ ಕುಳ್ಳಿರಿಸಿ ಅವರಿಂದ ಸುಜ್ಞಾನದ ಬೆಳಕನ್ನು ಪಡೆಯುವಂತಹ ಕಾರ್ಯವಾಗಿದೆ ಹಾಗೂ ಪ್ರವಚನಗಳು ಮತ್ತು ಸತ್ಸಂಗದಿಂದ ಭಕ್ತರಲ್ಲಿ ಜಾಗೃತಿ ಮೂಡಿಸಿ ಶಕ್ತಿ ಸಂಚಯನ ಮಾಡಿಕೊಳ್ಳುವುದಾಗಿದೆ.
ಯತಿಗಳು ಹಾಗೂ ಮಠಾಧೀಶರುಗಳು ವರ್ಷಪೂರ್ತಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ, ಧರ್ಮ ಕಾರ್ಯಗಳನ್ನು ನಡೆಸುತ್ತಾ, ಪ್ರವಚನ, ಆಶೀರ್ವಚನ ನೀಡುತ್ತಾ ಆಶಿರ್ವಾದ ಮಾಡುತ್ತಾರೆ. ಶಿಷ್ಯರು, ಭಕ್ತರು ಮಾತ್ರವಲ್ಲದೆ ಸಮಾಜದ ದೋಷಗಳನ್ನು ಅವರು ಸ್ವೀಕರಿಸುತ್ತಾರೆ. ಅಂದರೆ ಭಕ್ತರು ಗುರುಗಳ ಬಳಿ ಹೋಗಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಾರೆ, ಸಮಸ್ಯೆಗಳನ್ನು ತಿಳಿಸುವ ಮೂಲಕ ತಮ್ಮ ದೋಷ, ದುಃಖ, ನೋವು, ಕಷ್ಟಗಳನ್ನು ಅಲ್ಲಿ ಸಮರ್ಪಣೆ ಮಾಡುತ್ತಾರೆ. ಗುರುಗಳು ಆಶೀರ್ವದಿಸುವ ಮೂಲಕ ಭಕ್ತರ ಎಲ್ಲ ಋಣಾತ್ಮಕ ಅಂಶಗಳನ್ನೆಲ್ಲ ದೂರ ಮಾಡುತ್ತಾರೆ. ಭಕ್ತರ ದೋಷಗಳನ್ನು ಸ್ವೀಕರಿಸುವುದಕ್ಕೆ ಅಂತಃಶಕ್ತಿ ಬೇಕೇ ಬೇಕು. ಅವನ್ನು ಬೆಳೆಸಿಕೊಳ್ಳಲು ಇಂತಹ ವ್ರತ ಸೇರಿದಂತೆ ಅನೇಕ ರೀತಿಯ ಧರ್ವಚರಣೆಗಳು ಅವರಿಗೆ ನೆರವಾಗುತ್ತವೆ. ಅಣೆಕಟ್ಟು ಕಟ್ಟಿ ನೀರನ್ನು ಒಂದೆಡೆ ಸಂಗ್ರಹಿಸಿ ಅದರಿಂದ ಪ್ರಯೋಜನ ಪಡೆಯುವಂತೆ ಗುರುವನ್ನು ಕೂಡ ವ್ರತಾಚರಣೆಯ ಮೂಲಕ ಒಂದೆಡೆ ನೆಲೆ ನಿಲ್ಲಿಸಿ, ಅವರ ಅಂತರಂಗದ ಶಕ್ತಿಯನ್ನು ವೃದ್ಧಿಸಿಕೊಳ್ಳುವಂತೆ ಮಾಡಿ, ಅವರಿಂದ ಸದ್ವಿಚಾರಗಳನ್ನು ತಿಳಿಯುತ್ತಾ, ವರದ ಹಸ್ತದ ಮೂಲಕ ಆಶೀರ್ವಾದ ಪಡೆಯುವ ಬಯಕೆ ಭಕ್ತ ಜನರದ್ದು.
ಕೌರವರಿಗೆ ಮತ್ತು ಪಾಂಡವರಿಗೆ ಗುರುಗಳು ಪಾಠ ಹೇಳಿಕೊಡುತ್ತಿರುವಾಗ ‘ಸತ್ಯಂ ವದಾ ಧರ್ಮಂ ಚರ’ ಎಂಬ ಶ್ಲೋಕವನ್ನು ಬಾಯಿಪಾಠ ಮಾಡಿಕೊಂಡು ಮರುದಿನ ಬನ್ನಿ ಎಂದು ಹೇಳುತ್ತಾರೆ. ಆದರೆ, ಮರುದಿನ ಧರ್ಮರಾಯ ಬರಲಿಲ್ಲ. ಗುರುಗಳು ಅವನ ಬಳ ತೆರಳಿ ಏನು ಇನ್ನೂ ಮಂತ್ರ ಕಲಿತಿಲ್ಲವೇ? ಎಂದು ಕೇಳುತ್ತಾರೆ. ಆಗ ಧರ್ಮರಾಯನು, ‘ಅದನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ ಅನ್ನುತ್ತಾನೆ. ಆಗ ಗುರುಗಳು ಇಷ್ಟು ಸಣ್ಣ ಶ್ಲೋಕ ಯಾಕೆ ನಿನಗೆ ಬರುವುದಿಲ್ಲ, ಸತ್ಯ ಹೇಳು’ ಎಂದು ಕೇಳುತ್ತಾರೆ. ಅದಕ್ಕೆ ಧರ್ಮರಾಯ ಹೇಳುತ್ತಾನೆ, ‘ಗುರುಗಳೇ ಈ ಶ್ಲೋಕವನ್ನು ಹೇಳಲು ಬಹಳ ಸುಲಭವಾಗಿದೆ. ಆದರೆ ಅದರಂತೆ ನಡೆದುಕೊಳ್ಳಲು ಕಷ್ಟವಾಗುತ್ತಿದೆ’ ಎನ್ನುತ್ತಾನೆ. ‘ಅಲ್ಲದೆ ಅದನ್ನು ಬಾಯಿಯಲ್ಲಿ ಹೇಳುವವರೂ ಚಾರಿತ್ರ್ಯವಂತರಾಗಿರಬೇಕಾಗುತ್ತದೆ. ಸತ್ಯವನ್ನು ನುಡಿದು ಧರ್ಮವನ್ನು ಆಚರಿಸುವಂಥವರು ಆಗಿರಬೇಕಾಗುತ್ತದೆ’ ಎನ್ನುತ್ತಾನೆ. ‘ಹಾಗಾಗಿ ಶ್ಲೋಕ ಸಣ್ಣದಾದರು ಕೂಡ ಅದರ ಅರ್ಥ ತಿಳಿದುಕೊಂಡು ಬದುಕಿನಲ್ಲಿ ಅಳವಡಿಸಿಕೊಂಡು ನಡೆಯುವ ಮಾರ್ಗ ಕಠಿಣವೇ ಸರಿ. ಸತ್ಯವನ್ನು ಸದಾ ನುಡಿಯಬೇಕು, ಸತ್ಯವನ್ನು ಆಚಾರದಲ್ಲಿ ತರಬೇಕು, ಧರ್ಮವನ್ನು ನಡೆಯಲ್ಲಿ ತರಬೇಕು ಎಂಬರ್ಥದ ಈ ಶ್ಲೋಕವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನನಗೆ ಅವಕಾಶ ಮತ್ತು ಯೋಗ್ಯತೆ ಕೊಡುವ ಮೂಲಕ ನನ್ನನ್ನು ಯೋಗ್ಯನನ್ನಾಗಿಸಿ’ ಎಂದು ಗುರುಗಳಲ್ಲಿ ಧರ್ಮರಾಯ ಕೇಳಿಕೊಳ್ಳುತ್ತಾನೆ. ಧರ್ಮರಾಯನಿಗೆಯೇ ಇದು ಕಷ್ಟವಾದರೆ ಇತರರಿಗೆ ಇದು ಸುಲಭ ಸಾಧನೆಯಲ್ಲ. ಧರ್ಮರಾಯ ಒಬ್ಬ ವ್ಯಕ್ತಿಯಾಗಿ ಅಲ್ಲ ಜಿಜ್ಞಾಸುವಾಗಿ ಈ ಮಾತನ್ನು ಹೇಳಿರುತ್ತಾನೆ. ಜಿಜ್ಞಾಸುಗಳಿಗೆ ವಿಷಯದ ಮರ್ಮ ಗೊತ್ತಿರುತ್ತದೆ. ಅಲ್ಲದೆ, ಅದನ್ನು ಆಚರಿಸುವಲ್ಲಿಯೂ ಶ್ರಮಿಸುತ್ತಾರೆ. ಕೇವಲ ಶ್ಲೋಕವನ್ನು ಬಾಯಿಪಾಠ ಮಾಡುವುದು ಅವರ ಉದ್ದೇಶವಾಗಿರುವುದಿಲ್ಲ. ಜೀವನದಲ್ಲಿ ಆಚರಿಸುವುದು ಅವರ ಪರಮ ಧ್ಯೇಯವಾಗಿರುತ್ತದೆ.
ಗುರುಗಳು ಯಾವಾಗಲೂ ಗೃಹಸ್ಥರ ಮನೆಗೆ ಭೇಟಿ ನೀಡುತ್ತಾ, ಅಲ್ಲಿ ಗೌರವ ಸ್ವೀಕರಿಸಿ ಆಶೀರ್ವಾದ ನೀಡುತ್ತಿರುತ್ತಾರೆ. ಒಂದೊಮ್ಮೆ ಗುರುಗಳು ಒಂದು ಮನೆಗೆ ಬಂದಾಗ ಅಲ್ಲಿ ಮನೆಯ ಸೊಸೆ ಅವರನ್ನು ಸ್ವಾಗತ ಮಾಡುತ್ತಾ ಸ್ವಾಗತಿಸುವಾಗ ಅವಳು, ‘ಸ್ವಾಮಿ ಮನೆಯಲ್ಲಿ ಹಿರಿಯರು ಯಾರೂ ಇಲ್ಲ, ಇದ್ದವರಲ್ಲಿ ನಾನೇ ಹಿರಿಯಳು’ ಎನ್ನುತ್ತಾಳಂತೆ. ಆಗ ಗುರುಗಳು, ‘ನೀನೇ ಹಿರಿಯವಳು ಆಗುವುದಕ್ಕೆ ಹೇಗೆ ಸಾಧ್ಯ? ನಿನ್ನ ವಯಸ್ಸಿಗಿಂತ ಹಿರಿಯರು ಮನೆಯಲ್ಲಿ ಇರಬೇಕಲ್ಲವೇ’ ಎಂದು ಕೇಳುತ್ತಾರೆ. ಅದಕ್ಕೆ ಅವಳು ಮಾರ್ವಿುಕವಾಗಿ ಒಂದು ವಿಚಾರ ಹೇಳುತ್ತಾಳೆ. ಅದೇನೆಂದರೆ, ‘ನನ್ನ ಗಂಡನಿಗೆ ಐದು ವರ್ಷ, ಅತ್ತೆಗೆ ಹತ್ತು ವರ್ಷ, ಮಾವ ಇನ್ನೂ ಹುಟ್ಟೇ ಇಲ್ಲ’ ಎನ್ನುತ್ತಾಳೆ. ಆಗ ಗುರುಗುಳು, ‘ಈ ರೀತಿ ಒಗಟಿನ ಮೂಲಕ ಏನು ಹೇಳುತ್ತಿದ್ದೀ ಎಂದು ತಿಳಿಯುತ್ತಿಲ್ಲ ಬಿಡಿಸಿ ಹೇಳು’ ಎಂದು ಕೇಳುತ್ತಾರೆ. ಅದಕ್ಕೆ ಮನೆಯ ಸೊಸೆಯು, ‘ಈ ಮನೆಯಲ್ಲಿ ಯಾರಿಗೂ ಧಾರ್ವಿುಕ ವಿಚಾರದ ಬಗ್ಗೆ ಆಸಕ್ತಿ ಇಲ್ಲ. ತಿಳಿದುಕೊಳ್ಳಬೇಕು ಎಂಬ ಆಸೆಯಾಗಲಿ, ಕುತೂಹಲವಾಗಲಿ ಇಲ್ಲ. ಜ್ಞಾನ ಸಂಗ್ರಹಿಸುವ ಇಚ್ಛಾಶಕ್ತಿ ಇಲ್ಲ. ಕಳೆದ ಹತ್ತು ವರ್ಷಗಳಿಂದ ಈಚೆಗೆ ನನ್ನ ಅತ್ತೆ, ಸ್ವಲ್ಪವಾದರೂ ಗುರುಗಳ ಬಳಿ ಹೋಗಿ ಪ್ರವಚನ ಆಲಿಸುವಂತಹದ್ದು, ದಾನ-ಧರ್ಮ ಮಾಡುವಂತಹ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಹತ್ತು ವರ್ಷ ವಯಸ್ಸು. ಅವರಿಂದ ಪ್ರೇರಿತರಾದ ನನ್ನ ಗಂಡ ಧಾರ್ವಿುಕ ವಿಚಾರದಲ್ಲಿ ಆಸಕ್ತಿ ಹೊಂದಿ ದೇವಸ್ಥಾನ, ಪ್ರವಚನ ಮತ್ತಿತರ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಅವರಿಗೆ ಐದು ವರ್ಷ ಆಗಿದೆ. ಧರ್ಮ ವಿಚಾರದ ಬಗ್ಗೆ ಚೂರು ಗೊತ್ತಿಲ್ಲದೆ, ಹುಟ್ಟಿಯೂ ಹುಟ್ಟದಂತೆ ಇರುವ ಮಾವನಿಗೆ ವಯಸ್ಸೇ ಆಗಿಲ್ಲ’ ಎಂದಳಾಕೆ. ಗುರುಗಳಿಗೆ ಅವಳ ಮಾತಿನ ಮರ್ಮ ಅರ್ಥವಾಯಿತು. ಅವಳು ಗುರುಗಳ ಬಳಿ ದೈಹಿಕ ವಯಸ್ಸು ಹೇಳಲಿಲ್ಲ. ಬದಲಾಗಿ ಧಾರ್ವಿುಕವಾಗಿ ಆಧ್ಯಾತ್ಮಿಕ, ವಿಚಾರವಂತಿಕೆಯ ವಯಸ್ಸನ್ನು ಅವಳು ಹೇಳಿದ್ದಳು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ವಯಸ್ಸಿನಲ್ಲಿ ಬೆಳೆಯುವುದು ಎಂದರೆ ಅದು ಪ್ರಾಕೃತಿಕವಾಗಿ ಹಾಗೂ ಸ್ವಾಭಾವಿಕವಾಗಿ ಆಗುವಂತಹದ್ದು. 24 ಗಂಟೆ ಸರಿದು ಹೋದರೆ ಒಂದು ದಿನ ಹೋಯಿತು. 30 ಅಥವಾ 31 ದಿವಸ ಸರಿದರೆ ಒಂದು ತಿಂಗಳು ಹೋಯಿತು. 365 ದಿವಸ ಕಳೆದು ಹೋದರೆ ಒಂದು ವರ್ಷ ಹೋಯಿತು. ಇದಕ್ಕಾಗಿ ಯಾವುದೇ ಪ್ರಯತ್ನ ಪಡಬೇಕಾದದ್ದಿಲ್ಲ. ಮುಂಜಾನೆ, ಮಧ್ಯಾಹ್ನ ಮತ್ತು ರಾತ್ರಿ ತನ್ನಷ್ಟಕ್ಕೆ ತಾನೇ ಕಳೆದು ದಿನಗಳನ್ನು ಕಬಳಿಸಿ ಬಿಡುತ್ತದೆ. ನಮಗೆ ವಯಸ್ಸಾಗುತ್ತ ಹೋಗುತ್ತದೆ. ಬಾಲ್ಯ, ಯೌವನ, ಗೃಹಸ್ಥ ಮತ್ತು ವೃದ್ಧಾಪ್ಯ ಈ ನಾಲ್ಕು ಅವಸ್ಥೆಗಳನ್ನು ನಾವು ಕಳೆಯಲೇಬೇಕಾಗುತ್ತದೆ. ಯಾವುದೇ ವಿಶೇಷ ಪ್ರಯತ್ನ ಇಲ್ಲದೆ ಸಹಜವಾಗಿ ಕಳೆದು ಹೋಗುತ್ತದೆ. ಬಾಲ್ಯವನ್ನು ಕಳೆಯಲು ಪ್ರಯತ್ನ ಬೇಕಿಲ್ಲ. ಯೌವ್ವನ ಬಂದೇ ಬರುತ್ತದೆ. ಯೌವ್ವನ ಬಂದಾಗ ಆ ಸಮಯದಲ್ಲಿ ಹೇಗೆ ತಮ್ಮ ವಿಚಾರ, ಕಾಮನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಎಂದು ತಿಳಿದುಕೊಳ್ಳಬೇಕು. ಮುಂದೆ ಗೃಹಸ್ಥನಾದಾಗ ಸಂಸಾರದ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸಿ, ವೃದ್ಧಾಪ್ಯ ಬಂದಾಗ ಅದನ್ನು ಸ್ವೀಕರಿಸಬೇಕಾಗುತ್ತದೆ. ಅವುಗಳ ಜತೆ ಆ ಅವಸ್ಥೆಗಳಲ್ಲಿ ಅಧ್ಯಾತ್ಮ, ಧಾರ್ವಿುಕತೆ, ದಾನ ಧರ್ವದಿಗಳಲ್ಲಿ ಎಷ್ಟು ತೊಡಗಿದ್ದೇವೆ, ಜೀವನದಲ್ಲಿ ಯಶಸ್ವಿಯಾಗಲು ಎಷ್ಟು ಪ್ರಯತ್ನಪಟ್ಟಿದ್ದೇವೆ. ಗುರುಗಳ ಮಹತ್ವದ ಅರಿವು ನಮಗೆಷ್ಟಿದೆ ಎನ್ನುವುದು ಬದುಕಿನಲ್ಲಿ ಬಹಳ ಮುಖ್ಯವಾಗಿರುತ್ತದೆ. ಇವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನದ ಮೌಲ್ಯ ಎತ್ತರಕ್ಕೆ ಏರಲು ಸಾಧ್ಯ.
ಜಾತ್ರೆಯಲ್ಲಿ ಮಗುವೊಂದು ತಾಯಿಯಿಂದ ತಪ್ಪಿಸಿಕೊಂಡು ಜೋರಾಗಿ ಅಳುತ್ತಿತ್ತು. ಭದ್ರವಾಗಿ ಹಿಡಿದುಕೊಳ್ಳಲು ಅಮ್ಮನ ಕೈಬೆರಳು ಸಿಗುವತನಕ ಅದಕ್ಕೆ ದುಃಖ ತಡೆಯಲಿಕ್ಕೆ ಆಗುವುದಿಲ್ಲ. ಹೀಗೆ ಸಂಸಾರದ ಜಂಜಾಟದಲ್ಲಿರುವವರಿಗೆ ದೇವರು, ಗುರು, ಶಾಸ್ತ್ರಗಳು ಎಂಬ ಮೂರು ಬೆರಳುಗಳು ಸಿಕ್ಕಿದರೆ ನಿಶ್ಚಿಂತೆಯಿಂದ ಇರಬಹುದು ಎಂಬ ಮಾತನ್ನು ಅನುಭವಿಗಳು ಹೇಳುತ್ತಾರೆ. ಈ ಮೂರು ನಮಗೆ ದೊರೆಯಬೇಕಾದರೆ ಗುರುಗಳ ಸಂಪರ್ಕ ಇರಬೇಕು, ಶಾಸ್ತ್ರಗಳು ಅಂದರೆ ಅಧ್ಯಯನ ಇರಬೇಕು ಮತ್ತು ಅದನ್ನು ಆಚರಿಸುವಂತಹ ಉದ್ದೇಶ ಇರಬೇಕು. ಹೀಗಾಗಿ ಚಾತುರ್ವಸ್ಯದ ನಾಲ್ಕು ತಿಂಗಳಲ್ಲಿ ಆಯಾ ಊರುಗಳಲ್ಲಿ ನೆಲೆ ನಿಲ್ಲುವ ಗುರುಗಳು ತಮ್ಮ ಮಠಗಳಲ್ಲಿ ಪ್ರವಚನ ಮಾಡುತ್ತಾರೆ. ಧರ್ವಭ್ಯಾಸವನ್ನು ಮಾಡುತ್ತಾರೆ. ಈ ಚಾತುರ್ವಸ್ಯ ಸಮಯದಲ್ಲಿ ಆಯಾ ಊರುಗಳಲ್ಲಿ ಇರುವಂತಹ ಮಠಗಳಿಗೋ, ದೇವಸ್ಥಾನಗಳಿಗೋ ಭಕ್ತರು ಜಿಜ್ಞಾಸುಗಳು ಹೋಗಿ ತಮ್ಮ ಜ್ಞಾನವೃದ್ಧಿಯನ್ನು ಮಾಡಿಕೊಳ್ಳಬಹುದು. ಜ್ಞಾನ ಸಂಗ್ರಹ ಮಾಡಿಕೊಳ್ಳಬಹುದು. ಅಲ್ಲದೆ, ಉತ್ತಮ ವಿಚಾರವನ್ನು ಬೆಳೆಸಿಕೊಳ್ಳಬಹುದು ಎನ್ನುವುದು ಈ ಲೇಖನದ ಸಂದೇಶ.
ಉತ್ತರ ಭಾರತದಲ್ಲಿ ಮುನಿಗಳಿಗೆ, ಗುರುಗಳಿಗೆ ವಿಶೇಷವಾದ ಗೌರವವನ್ನು ಕೊಡುತ್ತಾರೆ. ಅವರ ಪ್ರವಚನಕ್ಕೆ ಸಹಸ್ರಾರು, ಲಕ್ಷೋಪ-ಲಕ್ಷ ಮಂದಿ ಸೇರುತ್ತಾರೆ. ಗುರುಗಳ ಪ್ರವಚನಕ್ಕಿರುವ ಶಕ್ತಿ ಮತ್ತು ಅದರ ಬಗ್ಗೆ ಜನರಿಗಿರುವ ಕುತೂಹಲ, ಆಸಕ್ತಿ ನೋಡಿದಾಗ ಆಶ್ಚರ್ಯವಾಗುತ್ತದೆ. ಉತ್ತರ ಭಾರತದಲ್ಲಿ ಇರುವಂತೆ ಜ್ಞಾನಿಗಳ ಪ್ರವಚನ ಕೇಳಲು, ಅವರು ಹೇಳುವ ವಿಚಾರವನ್ನು ತಿಳಿದುಕೊಳ್ಳಲು ಇರುವ ಕುತೂಹಲ ದಕ್ಷಿಣ ಭಾರತದಲ್ಲಿ ಇಲ್ಲವೆನ್ನಬಹುದು. ಗ್ರಾಮ, ತಾಲೂಕು, ಜಿಲ್ಲೆಗೊಂದು ಗಡಿ ಇರುತ್ತದೆ. ಆ ಗಡಿ ದಾಟಿದ ಮೇಲೆ ಬೇರೆ ಪ್ರದೇಶ, ಜಿಲ್ಲೆ, ರಾಜ್ಯ ಬರುತ್ತದೆ. ಆಗ ಭಾಷೆ, ಸಂಸ್ಕಾರ, ಸಂಸ್ಕೃತಿ, ಜನಜೀವನಗಳು ಕೂಡ ಭಿನ್ನವಾಗಿರುತ್ತವೆ. ಆದರೆ, ಗುರುಗಳು ಹಾಗೂ ಅವರಲ್ಲಿರುವ ಜ್ಞಾನಕ್ಕೆ ಯಾವುದೇ ಗಡಿ, ಸೀಮೆ ಅಥವಾ ಎಲ್ಲೆ ಇಲ್ಲ. ಅವೆಲ್ಲವನ್ನು ಮೀರಿ ನಿಂತವರು. ಹಾಗಾಗಿ ಗುರುಗಳು ವಿಶ್ವದಾದ್ಯಂತ ಸಂಚರಿಸುತ್ತಾರೆ. ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ. ಸಮಾಜಕ್ಕೆ ಸದ್ಧರ್ಮದ ಪಥವನ್ನು ತೋರಿ ಮಾರ್ಗದರ್ಶನ ನೀಡುತ್ತಾರೆ. ಅದಕ್ಕಾಗಿಯೇ ಗುರುಗಳ ಧರ್ಮ ಶ್ರೇಷ್ಠವಾದುದು. ಈ ಚಾತುರ್ವಸ್ಯದ ಸಂದರ್ಭದಲ್ಲಿ ನಾಡಿನ ಗುರುಗಳ ಪ್ರವಚನ, ಧರ್ಮ ಕಾರ್ಯಗಳೆಲ್ಲ ನಮ್ಮಲ್ಲಿ ಧರ್ಮ ಜಾಗೃತಿ ಮೂಡಿಸಲಿ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)