

| ಹೇಮಲತಾ
ಅಂದು ಅಧ್ಯಾಪಕರು ಹತ್ತನೆಯ ತರಗತಿಯ ಕೊನೆಯ ಅವಧಿಯ ಗಣಿತದ ತರಗತಿಯನ್ನು ಮುಗಿಸಿ ಕೊಠಡಿಗೆ ಬಂದು ಕುಳಿತರು. ಅಷ್ಟು ಹೊತ್ತಿಗೆ ವಿಜಯ್ ಎಂಬ ವಿದ್ಯಾರ್ಥಿ ಅವರ ಬಳಿ ಬಂದ. ‘ಸರ್ ನನ್ನ ವಾಚ್ ಕಳವಾಗಿದೆ’ ಎಂದು ಅಳತೊಡಗಿದ. ಅಧ್ಯಾಪಕರು ವಿಜಯನಿಗೆ- ‘ಈಗ ಮನೆಗೆ ಹೋಗು. ನಿನ್ನ ವಾಚ್ ಎರಡು ದಿನದಲ್ಲಿ ನಿನ್ನ ಕೈಸೇರುತ್ತದೆ’ ಎಂದು ಭರವಸೆಯ ಮಾತನಾಡುತ್ತ ಅವನನ್ನು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದರು. ಮರುದಿನ ಅಧ್ಯಾಪಕರು ಹೇಳಿದರು, ‘ನಾನು ಇವತ್ತು ಗಣಿತ ಪಾಠ ಮಾಡಲ್ಲ. ಯಾಕೆಂದರೆ ಬರೀ ಕೂಡಿಸಿ, ಭಾಗಿಸಿ, ಗುಣಿಸಿ, ಕಳೆಯುವುದರಿಂದ ನಿಮ್ಮ ಬುದ್ಧಿಮತ್ತೆ ಮಾತ್ರ ಚುರುಕಾಗುತ್ತದೆ. ಆದರೆ ಚಾರಿತ್ರ್ಯಶುದ್ಧಿಯಾಗಲ್ಲ. ಹಾಗಾಗಿ ಇವತ್ತು ನಿಮಗೊಂದು ನೀತಿಕಥೆ ಹೇಳುವೆ’.
ಅಂಗೂಲಿಮಾಲನು ಒಂದು ಕಾಡಿನಲ್ಲಿ ವಾಸಿಸುತ್ತಿದ್ದ. ಆ ಕಾಡಿನ ಮೂಲಕ ಹಾದು ಹೋಗುವ ಜನರ ಬಳಿಯಲ್ಲಿದ್ದ ವಸ್ತುಗಳನ್ನು ದೋಚಿ, ಅವರನ್ನು ಕೊಂದು ಅವರ ಬೆರಳನ್ನು ಹಾರವಾಗಿ ಪೋಣಿಸಿ ತನ್ನ ಕೊರಳಿಗೆ ಹಾಕಿಕೊಂಡಿದ್ದ. ಹಾಗಾಗಿ ಅವನಿಗೆ ಅಂಗೂಲಿಮಾಲ ಅಂತ ಹೆಸರು. ಒಂದು ದಿನ ಭಗವಾನ್ ಬುದ್ಧನು ಕ್ರೂರಿಯಾದ ಅಂಗೂಲಿಮಾಲನ ಹತ್ತಿರ ಬಂದ. ‘ನೀನು ಯಾಕೆ ನನ್ನ ಬಳಿ ಬಂದಿರುವೆ? ನೀನು ಸಂನ್ಯಾಸಿ ಹೊರಟುಹೋಗು. ನಾನು ಈಗಾಗಲೇ ತುಂಬ ಜನರನ್ನು ಕೊಂದಿರುವೆ. ಇಂದು ನೀನಾಗಿಯೇ ನನ್ನ ಬಳಿ ಬಂದಿರುವೆ. ನಿನ್ನನ್ನೂ ಕೊಂದುಬಿಡುತ್ತೇನೆ’.
ಭಗವಾನ್ ಬುದ್ಧ ಹೇಳಿದ, ‘ನನ್ನ ಕೊಲ್ಲುವ ಮೊದಲು ನೀನು ಆ ಮರದ ಕೊಂಬೆಯನ್ನು ಕತ್ತರಿಸು ಬಿಡು’. ಅಂಗೂಲಿಮಾಲನು ಕ್ಷಣಮಾತ್ರದಲ್ಲಿ ದೊಡ್ಡ ಕೊಂಬೆಯನ್ನು ಕತ್ತರಿಸಿದ. ಬುದ್ಧನು ಆ ಕತ್ತರಿಸಿದ ಕೊಂಬೆಯನ್ನು ಪುನಃ ಜೋಡಿಸಲು ಹೇಳಿದ. ಅಂಗೂಲಿಮಾಲನು ‘ಆ ಕೆಲಸ ನನ್ನಿಂದ ಆಗದು’ ಎಂದ. ಆವಾಗ ಭಗವಾನ್ ಬುದ್ಧ ಹೇಳಿದ, ‘ಜೀವ ತೆಗೆಯುವುದು ಸುಲಭ. ಆದರೆ ತೆಗೆದ ಜೀವವನ್ನು ಜೋಡಿಸಲಿಕ್ಕಾಗುವುದೇ ಇಲ್ಲ ತಾನೆ. ಶಕ್ತಿ ಧ್ವಂಸ ಮಾಡುವುದರಲ್ಲಿಲ್ಲ. ನಿಜವಾಗಿಯೂ ಶಕ್ತಿ ಇರುವುದು ಜೋಡಿಸುವುದರಲ್ಲಿ ಮತ್ತು ಸೃಷ್ಟಿಸುವುದರಲ್ಲಿ’. ಬುದ್ಧನ ಮುಖದಲ್ಲಿರುವ ಪ್ರಶಾಂತತೆ, ಕಣ್ಣಿನಲ್ಲಿರುವ ಸತ್ಯ ಮತ್ತು ಪ್ರೇಮ ಅಂಗೂಲಿಮಾಲನ ಮನಸ್ಸನ್ನೇ ಬದಲಾಯಿಸಿತು. ಆತನು ತನ್ನ ಕ್ರೂರತೆಯನ್ನು ಬಿಟ್ಟು, ಸಜ್ಜನನಾಗಿ ಬಾಳಿದ. ‘ಮಕ್ಕಳೇ, ಈ ತರಗತಿಯಲ್ಲಿ ವಿಜಯನ ವಾಚ್ ಕಾಣೆಯಾಗಿದೆ. ನಾಳೆ ತರಗತಿ ಪ್ರಾರಂಭವಾಗುವುದರೊಳಗೆ ಆತನ ವಾಚನ್ನು ಅವನ ಸ್ಥಳದಲ್ಲಿಡಿ. ಕದ್ದವರು ಯಾರೆಂದು ಯಾರಿಗೂ ಗೊತ್ತಾಗುವುದು ಬೇಡ’ ಎಂದರು. ಅಧ್ಯಾಪಕರ ಮಾತನ್ನು ಕೇಳಿ ವಾಚ್ ಕದ್ದವನು, ಆ ವಾಚನ್ನು ಯಾರಿಗೂ ಗೊತ್ತಾಗದ ಹಾಗೆ ವಿಜಯನ ಸ್ಥಳದಲ್ಲಿಟ್ಟ. ಮತ್ತೆ ಮುಂದೆ ಎಂದಿಗೂ ಅಂಥ ತಪ್ಪನ್ನು ಮಾಡದೇ ಸನ್ಮಾರ್ಗದಲ್ಲಿ ನಡೆದ. ಪರೋಪಕಾರವೇ ಪುಣ್ಯ. ಪರಪೀಡನೆಯೇ ಪಾಪ. ಸನ್ನಡತೆಯಿಂದ ಮಾತ್ರವೇ ಉನ್ನತಿ.
(ಲೇಖಕರು ಉಪನ್ಯಾಸಕರು)