ಬಿಜೆಪಿ ಕನ್ನಡ ವಿರೋಧಿಯೇ? ಕೃಷಿ ವಿರೋಧಿಯೇ?

BJP Agriculture
Published on
ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ. ಜತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರಿಸಿ 10 ಸಾವಿರ ರೂ. ನೀಡಲಾಗುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ರೈತರಿಗೆ ಬೆಂಗಾವಲಾಗಿ ಬಿಜೆಪಿ ಸರ್ಕಾರ ನಿಂತಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಆಹಾರ ಧಾನ್ಯಗಳ ಖರೀದಿಗಾಗಿ 6,650 ಕೋಟಿ ರೂ. ಒದಗಿಸಲಾಗಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸನಿಹವಾಗಿದೆ. ಭಾರತದ ರಾಜಕೀಯ ಪಕ್ಷಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳುವ ಪದ್ಧತಿಯನ್ನು ಎಲ್ಲರೂ ಪಾಲಿಸಿಕೊಂಡು ಬರುತ್ತಿದ್ದೇವೆ. ಆದರೆ, ಚುನಾವಣೆಗೆ ಮುನ್ನ ಜನರನ್ನು ದಾರಿತಪ್ಪಿಸುವ ಪ್ರಯತ್ನಗಳನ್ನು ಕೆಲವು ಪಕ್ಷಗಳು ನಡೆಸುತ್ತಿವೆ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡುವ ಸಾಮಾನ್ಯ ಆರೋಪವೆಂದರೆ- ಬಿಜೆಪಿ ಕೃಷಿವಿರೋಧಿ ಮತ್ತು ಕನ್ನಡವಿರೋಧಿ ಪಕ್ಷ ಎನ್ನವುದು. ಹಾಗಾದರೆ ಈ ಆರೋಪಗಳು ಎಷ್ಟು ಸರಿ?

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಕೃಷಿ ಬಜೆಟ್ಟನ್ನು ಮಂಡಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಬಿ.ಎಸ್. ಯಡಿಯೂರಪ್ಪ ಕೃಷಿ ಬಜೆಟ್ ಮಂಡನೆಯ ಸತ್ಸಂಪ್ರದಾಯ ಆರಂಭಿಸಿದರು. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈ ಕೃಷಿ ಬಜೆಟ್ಟನ್ನು ರದ್ದುಪಡಿಸಿತು.

ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸದೃಢಗೊಳಿಸಿ ಉತ್ತಮ ಬ್ರ್ಯಾಂಡ್ ಸೃಷ್ಟಿಸಿರುವುದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್). ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂ ಸಹಾಯಧನವನ್ನು ಪ್ರಪ್ರಥಮವಾಗಿ ಘೊಷಣೆ ಮಾಡಿದ್ದೇ ಅಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ.

ಸಹಕಾರ ಸಚಿವಾಲಯ

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಅಮಿತ್ ಷಾ ಅವರನ್ನು ಸಹಕಾರ ಸಚಿವರನ್ನಾಗಿ ನಿಯುಕ್ತಿ ಮಾಡಿದ ನಂತರ ಸಮಗ್ರ ಕಾಯಕಲ್ಪಕ್ಕೆ ವೇಗ ಸಿಕ್ಕಿದೆ. ಪ್ರಾಥಮಿಕ ಸಹಕಾರ ಸಂಘಗಳ ಬಲವರ್ಧನೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಕೆಎಂಎಫ್ ಮತ್ತು ಅಮುಲ್ ಪರಸ್ಪರ ಸಹಕಾರದೊಂದಿಗೆ ತಾಂತ್ರಿಕ ನೈಪುಣ್ಯ ಸಾಧಿಸಿ ಉತ್ತಮ ಮಾರುಕಟ್ಟೆ ಜಾಲ ಸ್ಥಾಪಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಭುತ್ವ ಸ್ಥಾಪಿಸುವುದರ ಮುಖೇನ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸದೃಢಗೊಳಿಸಬಹುದೆಂಬ ಅರ್ಥದಲ್ಲಿ ಮಾತನಾಡಿದ್ದನ್ನು ತಿರುಚಿ ಅಮುಲ್ ಜತೆ ಕೆಎಂಎಫ್ ವಿಲೀನ ಮಾಡಲು ಬಿಜೆಪಿ ಸರ್ಕಾರ ಹುನ್ನಾರ ನಡೆಸುತ್ತಿದೆಯೆಂಬ ಅಪಪ್ರಚಾರವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವ್ಯವಸ್ಥಿತವಾಗಿ ಹಬ್ಬಿಸಿದರು. ಅಸಲಿಗೆ ಇಂತಹ ವಿಲೀನದ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ.

ಅಮುಲ್ ಹಾಲು ಉತ್ಪನ್ನಗಳನ್ನು ರಾಜ್ಯದಲ್ಲಿ 20 ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ. ಕಳೆದ 7-8 ವರ್ಷಗಳಿಂದ ಅಮುಲ್ ಹಾಲು ಮತ್ತು ಮೊಸರನ್ನು ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಾರಾಟ ಮಾಡಲು ಪ್ರಾರಂಭಿಸಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಕಾರಣವೇನೆಂದರೆ ನಮ್ಮ ನಂದಿನಿ ಹಾಲು ಮತ್ತು ಮೊಸರಿನಂತೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲದಿರುವುದು ಮತ್ತು ಬೆಲೆಗಳಲ್ಲಿ ಭಾರಿ ವ್ಯತ್ಯಾಸವಿರುವುದು. ಅಂದು ಅಮುಲ್ ಉತ್ಪನ್ನಗಳ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗ ಬೊಬ್ಬೆಯಿಡುತ್ತಿರುವುದರ ಅಸಲಿ ರಾಜಕೀಯ ಜನಸಾಮಾನ್ಯನಿಗೆ ಗೊತ್ತಿದೆ. 15 ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಮತ್ತು ಕೆಎಂಎಫ್​ನ ಆಡಳಿತ ಮಂಡಳಿಗಳಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರಭಾವಿ ಮುಖಂಡರುಗಳು ಆಯ್ಕೆಯಾಗಿ ಬಂದಿರುತ್ತಾರೆ. ಈ ಆಡಳಿತ ಮಂಡಳಿಗಳ ವಾರ್ಷಿಕ ಮಹಾಸಭೆಗಳಲ್ಲಿ ಈ ಸಂಬಂಧ ಒಪ್ಪಿಗೆ ಪಡೆದು ಕಾರ್ಯರೂಪಕ್ಕೆ ತರುವುದು ಸಾಧ್ಯವಿಲ್ಲದ ಮಾತು.

ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಜೀವನಾಡಿಯಾಗಿದ್ದು ಮೈಶುಗರ್ ಕಾರ್ಖಾನೆ. 2018ರಲ್ಲಿ ಕಾಂಗ್ರೆಸ್ ಸರ್ಕಾರ ಮುಚ್ಚಿದ್ದ ಈ ಕಾರ್ಖಾನೆಯನ್ನು ಮತ್ತೆ ತೆರೆದಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅವಧಿಯಲ್ಲಿ ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಕೇವಲ 2,100 ರೂ. ಇತ್ತು. ಇದನ್ನು ಕೇಂದ್ರದ ಮೋದಿ ಸರ್ಕಾರ 3,050 ರೂ.ಗೆ ಹೆಚ್ಚಳ ಮಾಡಿತು. ಈ ಮೊತ್ತಕ್ಕೆ 100 ರೂ. ಸೇರಿಸಿ 3,150 ರೂ. ಮಾಡಿದ್ದು ಬಿಜೆಪಿ ಸರ್ಕಾರ.

ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ. ಜತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರಿಸಿ 10 ಸಾವಿರ ರೂ. ನೀಡಲಾಗುತ್ತಿದೆ. ರೈತ ವಿದ್ಯಾನಿಧಿ ಯೋಜನೆಯಲ್ಲಿ ರಾಜ್ಯದ 11 ಲಕ್ಷ ವಿದ್ಯಾರ್ಥಿಗಳಿಗೆ 725 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ.

ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ರೈತರಿಗೆ ಬೆಂಗಾವಲಾಗಿ ಬಿಜೆಪಿ ಸರ್ಕಾರ ನಿಂತಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಭತ್ತ, ರಾಗಿ ಹೆಸರುಕಾಳು ಹಾಗೂ ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 6,650 ಕೋಟಿ ರೂ. ಒದಗಿಸಲಾಗಿದೆ. ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು ಗರಿಷ್ಠ 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.

ರೇಷ್ಮೆ ರೈತರಿಗೆ ವೈಜ್ಞಾನಿಕ ದರ ಒದಗಿಸಲು ಹಾಗೂ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಇ-ಹರಾಜು ಮತ್ತು ಇ-ನಗದು ವ್ಯವಸ್ಥೆ ಅಳವಡಿಸಲಾಗಿದೆ.

ಕೆಂಪೇಗೌಡರ ಸ್ಮರಣೆ

ಬೆಂಗಳೂರು ಇಂದು ಕರ್ನಾಟಕದ ಶೇ. 60ಕ್ಕೂ ಹೆಚ್ಚು ಆದಾಯ ತಂದುಕೊಡುತ್ತಿದೆ. ಇದಕ್ಕೆ ಪ್ರಮುಖ ಕೊಡುಗೆ ನೀಡುತ್ತಿರುವುದು ಸಾಫ್ಟ್​ವೇರ್ ಕ್ಷೇತ್ರವಾದರೂ ನಾಡಪ್ರಭು ಕೆಂಪೇಗೌಡರು ಕಟ್ಟಿದ ದೂರದೃಷ್ಟಿಯ ಬೆಂಗಳೂರೇ ಇದಕ್ಕೆ ಕಾರಣ. ವಿವಿಧ ವ್ಯಾಪಾರ ಸಮುದಾಯಗಳು, ವೃತ್ತಿ ಸಮುದಾಯಗಳು, ವಿವಿಧ ಭಾಷಿಕರು ಅನ್ಯೋನ್ಯವಾಗಿ ಒಟ್ಟಿಗೆ ಬದುಕುವಂತೆ ವ್ಯವಸ್ಥಿತವಾದ ನಗರವನ್ನು ನಿರ್ಮಾಣ ಮಾಡಿದವರು ಕೆಂಪೇಗೌಡರು.

ಕೆಂಪೇಗೌಡರ ಕಾರ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಿದ್ದು ಬಿಜೆಪಿ ಸರ್ಕಾರ. ನಾಡಪ್ರಭು ಕೆಂಪೇಗೌಡರ ಭವ್ಯ 108 ಅಡಿ ಎತ್ತರದ ಪ್ರತಿಮೆಯನ್ನು ಅಂತಾರಾಷ್ಟಿ›ೕಯ ವಿಮಾನ ನಿಲ್ದಾಣದ ಬಳಿ ಅನಾವರಣಗೊಳಿಸಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಈಗಾಗಲೇ ಸುಮಾರು 100 ಕೋಟಿ ರೂ. ವಿನಿಯೋಗಿಸಲಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೇವಲ ಎರಡು ತಿಂಗಳ ಅವಧಿಯಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದ ಎದುರು ಸ್ಥಾಪಿಸಿ ಉದ್ಘಾಟನೆಯನ್ನೂ ನೆರವೇರಿಸಿದೆ. ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕ್ಯೂಟ್ ನಿರ್ವಿುಸಲು ಬಜೆಟ್​ನಲ್ಲಿ ಘೊಷಣೆ ಮಾಡಲಾಗಿದೆ.

ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂಬ ಸಮುದಾಯದ ಸಹಜ ಬೇಡಿಕೆಯಿದ್ದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಶೇ. 4ರ ಮೀಸಲಾತಿಯನ್ನು ಶೇ. 6ಕ್ಕೆ ಹೆಚ್ಚಿಸಲು ಕೈಗೊಂಡ ನಿರ್ಧಾರ ಶ್ಲಾಘನೀಯ. ಈ ಹಿಂದಿನ ಯಾವುದೇ ಪಕ್ಷದ ಆಡಳಿತದ ಅವಧಿಯಲ್ಲಿ ಸಾಧ್ಯವಾಗದ ಅನೇಕ ಸ್ಮರಣೀಯ ಕಾರ್ಯಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದನ್ನು ಒಕ್ಕಲಿಗ ಸಮುದಾಯ ಕೃತಜ್ಞತಾಪೂರ್ವಕವಾಗಿ ನೆನೆಯಲೇಬೇಕು.

ಕನ್ನಡ ಕಾಯಕ

ಇನ್ನು, ಬಿಜೆಪಿ ವಿರುದ್ಧದ ಮತ್ತೊಂದು ಆರೋಪ ಎಂದರೆ ಕನ್ನಡವಿರೋಧಿ ಎಂಬುದು. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ನರೇಂದ್ರ ಮೋದಿ ಸೇರಿ ಅನೇಕ ರಾಷ್ಟ್ರೀಯ ನಾಯಕರಿದ್ದಾರೆ. ಅವರನ್ನು ಕನ್ನಡದ ಜನರು ಅಪಾರ ಪ್ರೀತಿ ಆದರದಿಂದ ಕಾಣುತ್ತಾರೆ. ಮೋದಿಯವರೂ ಕರ್ನಾಟಕವನ್ನು ಅಪಾರವಾಗಿ ಪ್ರೀತಿಸುತ್ತಾರೆ. 2019ರ ಚುನಾವಣೆಯಲ್ಲಿ 25 ಬಿಜೆಪಿ ಸಂಸದರನ್ನು ಕನ್ನಡಿಗರು ಗೆಲ್ಲಿಸಿ ಕಳಿಸಿದ್ದಾರೆ. ಇಷ್ಟೆಲ್ಲ ಇದ್ದಾಗ್ಯೂ, ಬಿಜೆಪಿ ವಿರುದ್ಧ ಹಿಂದಿ ಹೇರಿಕೆಯ ಆರೋಪ ಮಾಡಲಾಗುತ್ತದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡವೂ ಸೇರಿ ಅನೇಕ ಭಾಷೆಗಳಿಗೆ ಅವಕಾಶ ನೀಡಿದೆ. 2024ರ ಜ.1ರಿಂದ ಕೇಂದ್ರೀಯ ಸಶಸ್ತ› ಪಡೆಗಳ ಕಾನ್​ಸ್ಟೇಬಲ್ (ಸಾಮಾನ್ಯ ಸೇವೆ) ಹುದ್ದೆಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಇದಿಷ್ಟೆ ಅಲ್ಲದೆ, ಉನ್ನತ ಶಿಕ್ಷಣದ ಯಾವುದೇ ಕೋರ್ಸ್​ನಲ್ಲಿ ಬೋಧನಾ ಮಾಧ್ಯಮ ಇಂಗ್ಲಿಷ್​ನಲ್ಲೇ ಇದ್ದರೂ ಪರೀಕ್ಷೆಯನ್ನು ಕನ್ನಡ ಸೇರಿ ಯಾವುದೇ ಭಾಷೆಯಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತಿಳಿಸಿದೆ. ಮೋದಿ ಸರ್ಕಾರ ರೂಪಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ)ಯಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಎನ್​ಇಪಿಯ ಸಮಗ್ರತೆಯು ‘ವಿಘ್ನಸಂತೋಷಿ’ಗಳಿಗೆ ಆಘಾತವನ್ನೇ ಉಂಟುಮಾಡಿದ್ದು, ಈ ಬಗ್ಗೆ ಮಾತನಾಡಿದರೆ ಎಲ್ಲಿ ತಮ್ಮ ಬಂಡವಾಳ ಹೊರಬರುತ್ತದೆಯೋ ಎಂದು ಮೌನವಾಗಿದ್ದಾರೆ. ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ ಎನ್ನುವುದೂ ಹೆಗ್ಗಳಿಕೆ.

ಕನ್ನಡ ಸಾಹಿತ್ಯ ಪರಿಷತ್ತು ಸಮರ್ಪಕ ಅನುದಾನಗಳಿಲ್ಲದೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾಹಿತ್ಯ ಸಮ್ಮೇಳನಗಳಿಗೆ ಯಥೇಚ್ಛ ಅನುದಾನ ಒದಗಿಸಿದರು. ವಾರ್ಷಿಕ 5 ಕೋಟಿ ರೂ. ಶಾಶ್ವತ ಅನುದಾನ ನೀಡುವುದರ ಜತೆಗೆ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ತಲಾ 5 ಲಕ್ಷ ರೂ. ಮತ್ತು ತಾಲೂಕು ಸಮ್ಮೇಳನಗಳಿಗೆ 1 ಲಕ್ಷ ರೂ. ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ವಿಶ್ವ ಕನ್ನಡ ಸಮ್ಮೇಳನ ಮೊದಲು ನಡೆದದ್ದು 1985ರಲ್ಲಿ, ಮೈಸೂರಿನಲ್ಲಿ. ನಂತರ ಬಂದ ಯಾವುದೇ ಸರ್ಕಾರಗಳಿಗೆ ನೆನಪಾಗಲಿಲ್ಲ. 25 ವರ್ಷದ ನಂತರ 2011ರಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜನೆ ಮಾಡಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಬೆಳಗಾವಿಯಲ್ಲಿ.

ಹೀಗೆ, ಕನ್ನಡ, ಕನ್ನಡಿಗರು, ಕೃಷಿ, ರೈತರು, ಒಕ್ಕಲಿಗರು ಸೇರಿ ಎಲ್ಲಾ ರೀತಿಯಲ್ಲೂ ಬಿಜೆಪಿ ಸರ್ಕಾರ ಕಾರ್ಯ ಮಾಡಿಕೊಂಡು ಬರುತ್ತಿದೆ. ಆದರೆ, ಪ್ರತಿಪಕ್ಷಗಳು ನಿರ್ದಿಷ್ಟ ವಿಷಯಗಳು ಇಲ್ಲದೆ ಸುಮ್ಮನೆ ಬಿಜೆಪಿ ಕನ್ನಡವಿರೋಧಿ, ಕೃಷಿವಿರೋಧಿ ಎಂದು ಗಾಳಿಯಲ್ಲಿ ಗುಂಡು ಹಾರಿಸುತ್ತಿವೆ.

ದೇಶವು 75ನೇ ಸ್ವಾತಂತ್ರ್ಯ ವರ್ಷಾಚರಣೆ ಸಂಭ್ರಮದಲ್ಲಿದೆ. ಮುಂದಿನ 25 ವರ್ಷವನ್ನು ಅಮೃತ ಕಾಲ ಎಂದು ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿದ್ದಾರೆ. ಈ ಅಮೃತ ಕಾಲದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದು. ಈ ಹೊತ್ತಲ್ಲಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಡಬಲ್ ಎಂಜಿನ್ ಸರ್ಕಾರ ಬೇಕೇ ಹೊರತು, ಬಜರಂಗದಳದಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸುತ್ತೇವೆ ಎನ್ನುವ, ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತುವ ಬೇರೆ ಸರ್ಕಾರವನ್ನಲ್ಲ ಎನ್ನುವ ಅರಿವು ಜನರಿಗಿದೆ.

(ಲೇಖಕರು ಬಿಎಂಟಿಸಿ ಮಾಜಿ ಉಪಾಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net