ತ್ಯಾಗದ ಮಹಾನ್ ಶಕ್ತಿ: ಮನೋಲ್ಲಾಸ

Elephant (1)
Published on
| ಗುರುನಾಥ ಸುತಾರ, ಹುಲ್ಯಾಳ 
ಆ ದೇಶದಲ್ಲಿ ವಂಶ ಪಾರಂಪರ್ಯವಾಗಿ ರಾಜನ ಮಕ್ಕಳು ಆಡಳಿತದ ಚುಕ್ಕಾಣಿ ಹಿಡಿವ ನಿಯಮ ಪಾಲನೆ ಇತ್ತು. ಆದರೆ, ಅಲ್ಲಿಯ ರಾಜನಿಗೆ ಗಂಡು ಸಂತಾನ ಇಲ್ಲದ್ದರಿಂದ ಯಾರನ್ನು ಪಟ್ಟಗಟ್ಟಬೇಕು ಎಂಬ ಚರ್ಚೆ ಶುರುವಾಯಿತು. ರಾಜ್ಯದ ಪ್ರಜೆಗಳೆಲ್ಲರೂ ರಾಜಗುರುವಿನ ಸಾನ್ನಿಧ್ಯದಲ್ಲಿ ಆ ದೇಶದ ಮುಂದಿನ ಪ್ರಭು ಯಾರಾಗ ಬೇಕೆಂದು ತೀರ್ವನಿಸಲು ಅಣಿಯಾದರು. ರಾಜ ಗುರುಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕೆಲ ಹಿರಿಯ ಮುಖಂಡರು ತಮ್ಮ ಒಟ್ಟಾಭಿಪ್ರಾಯವನ್ನು ಸಭೆಯ ಗಮನಕ್ಕೆ ತಂದಾಗ ಎಲ್ಲರೂ ಒಪ್ಪಿಗೆ ಸೂಚಿಸಿದರು.

ಆಗ ಕಾರ್ಯತತ್ಪರರಾದ ರಾಜ ಗುರುಗಳು, ‘ಆ ದೇಶದ ಆನೆ ಸೊಂಡಿಲಿನಲ್ಲಿ ಹೂಹಾರ ಒಂದನ್ನು ಇಟ್ಟು, ಇದು ಯಾರ ಕೊರಳಿಗೆ ಹಾಕುತ್ತದೆಯೋ ಆತನೇ ನಮ್ಮ ದೇಶದ ಮುಂದಿನ ರಾಜ’ ಎಂದು ಸಭೆಗೆ ತಿಳಿಸಿದರು. ರಾಜ ಭಟರು ಆನೆಯೊಂದಿಗೆ ಸಂಚಾರ ಹೊರಟರು. ಊರ ಹೊರಗಿರುವ, ಕುಟೀರದಲ್ಲಿದ್ದ ಮಹಾತ್ಯಾಗಿ, ಸಂತನ ಕೊರಳಿಗೆ ಆನೆಯು ಮಾಲೆ ಹಾಕಿತು. ಆಗ ಎಲ್ಲರೂ ಸಂತ ಮಹಾರಾಜರಿಗೆ ಜಯವಾಗಲಿ ಎಂದು ಘೊಷಣೆ ಕೂಗಿದರು. ಗಾಬರಿಯಾದ ಸಂತರು ‘ನನಗೇಕೆ ಈ ರಾಜ್ಯ ಪದವಿ? ಸದಾ ಸತ್ಸಂಗದಲ್ಲಿದ್ದು, ಲೌಕಿಕ ಪ್ರಪಂಚದಿಂದ ದೂರಾಗಿರುವ ನನಗೆ, ಎಲ್ಲ ವೈಭವಗಳು ತೃಣ ಸಮಾನವಾಗಿ ಕಾಣುತ್ತಿವೆ. ಅವಶ್ಯವಿದ್ದವರಿಗೆ ಕೊಡಿ’ ಎನ್ನುತ್ತಾರೆ.

‘ದೇಶ ಈಗ ಸಂದಿಗ್ಧ ಸ್ಥಿತಿಯಲ್ಲಿದೆ ಪೂಜ್ಯರೆ, ತಾವು ದಯವಿಟ್ಟು ಈ ರಾಜ್ಯಭಾರ ವಹಿಸಿಕೊಳ್ಳಬೇಕು’ ಎಂಬ ರಾಜ ಗುರುಗಳ ವಿನಂತಿಗೆ ಸಮ್ಮತಿಸಿದ ಸಂತರು ರಾಜ್ಯಭಾರ ವಹಿಸಿಕೊಳ್ಳುತ್ತಾರೆ. ಆಸೆ ಆಮಿಷಕ್ಕೆ ಬಲಿಯಾಗದ ಸದ್ಭಾವಿ ಸಂತ ರಾಜರು, ಕೆಲವೇ ದಿನಗಳಲ್ಲಿ ಪ್ರಜೆಗಳ ಪ್ರೀತಿ ಗಳಿಸುತ್ತಾರೆ. ಸದಾ ಸತ್ಯ ಅಹಿಂಸೆ ಮತ್ತು ಶಾಂತಿಯನ್ನೇ ಅಪೇಕ್ಷಿಸುತಿದ್ದ ಸಂತರು ರಾಜ್ಯವನ್ನು ಶಾಂತಿಯ ತೋಟವನ್ನಾಗಿಸುತ್ತಾರೆ. ರಕ್ಷಣಾ ಪಡೆಯನ್ನು ತೆಗೆದು ಹಾಕುತ್ತಾರೆ. ರಾಜ್ಯದ ಬಹಳಷ್ಟು ಹುದ್ದೆಗಳನ್ನು ಕಡಿತಗೊಳಿಸಿ, ಎಲ್ಲರನ್ನೂ ಕೃಷಿಯಲ್ಲಿ ತೊಡಗಿಸಿ ರಾಜ್ಯದ ಆದಾಯವನ್ನು ಇಮ್ಮಡಿಸುತ್ತಾರೆ. ರಕ್ಷಣಾ ಬಲ ಇಲ್ಲದ ಈ ದೇಶದ ಮೇಲೆ ನೆರೆ ರಾಜ ದಂಡೆತ್ತಿ ಬರುತ್ತಾನೆ.

ಗುಪ್ತಚರರಿಂದ ಈ ಮಾಹಿತಿ ತಿಳಿದ ಸಂತ ರಾಜರು, ‘ಯುದ್ಧ ಯಾರಿಗೂ ಒಳ್ಳೆಯದಲ್ಲ. ಆತನೇ ರಾಜಭಾರ ಮಾಡಲಿ’ ಎನ್ನುತ್ತ ದೇಶ ತೊರೆಯಲು ಸಿದ್ಧರಾಗುತ್ತಾರೆ. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಅವರನ್ನು ಹಿಂಬಾಲಿಸುತ್ತಾರೆ. ‘ಪ್ರಜೆಗಳೇ ಇಲ್ಲದ ಈ ದೇಶ ನನಗಾದರೂ ಏಕೆ ಬೇಕು? ಅದೂ ಒಬ್ಬ ಮಹಾನ್ ತ್ಯಾಗಿಯ ಮನಸ್ಸು ನೋಯಿಸುವುದು ಕೂಡ ಮಹಾ ಪಾಪ’ ಎಂದರಿತ ನೆರೆಯ ರಾಜನು, ಯುದ್ಧವನ್ನು ಮೊಟಕುಗೊಳಿಸಿ ಸಂತ ರಾಜರಿಗೆ ಶರಣಾಗುತ್ತಾನೆ. ಇದೇ ತ್ಯಾಗದ ಶಕ್ತಿ. ಸುಖ, ಶಾಂತಿ, ನೆಮ್ಮದಿ ಎಂಬುದು ನಮ್ಮ ತ್ಯಾಗ ಭಾವನೆಯಲ್ಲಿ ಇರುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net