ಬಹುಭಾವಗಳ ಭಕ್ತಿಯೋಗ ಎಂಬ ಪಾವನಗಂಗೆ

Bhakti
Published on
ಹೊಂಬೆಳಕು
ಭಗವದ್ಭಕ್ತಿಗಿಂತ ಮನುಷ್ಯನನ್ನು ಮೈಮರೆಸುವುದು, ಆನಂದ ಸಾಗರದಲ್ಲಿ ತೇಲಿಸುವುದು ಈ ಸೃಷ್ಟಿಯಲ್ಲೇ ಯಾವುದೂ ಇಲ್ಲ. ಭಕ್ತಿಯೋಗವೆಂಬ ರಾಜಮಾರ್ಗದಲ್ಲಿ ಕೇವಲ ರೂಪದಲ್ಲಿ ವೈವಿಧ್ಯತೆ ತಂದು ತೃಪ್ತಗೊಂಡ ದೇಶವಲ್ಲ ನಮ್ಮದು. ಭಕ್ತಿಯೋಗದ ಉಸಿರೇ ಭಗವಂತನೊಂದಿಗಿನ ಸಂಬಂಧವನ್ನು ಕ್ರಮೇಣ ತೀವ್ರಗೊಳಿಸುವುದು.

ಮಾನವನನ್ನು ಮಾಧವನನ್ನಾಗಿಸುವುದೇ ಸನಾತನ ಧರ್ಮದ ಗುರಿ. ಸದಾ ಬ್ರಹ್ಮವೇ ಆಗಿರುವ ಜೀವಿ ಮಾಯೆಯೆಂಬ ಅದ್ಭುತ, ಅನಿರ್ವಚನೀಯ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಶ್ರೇಯಸ್ಕರವಾದ ರೀತಿನೀತಿ, ನಡವಳಿಕೆ, ಆದ್ಯತೆಗಳಿಗೆ ಬೆನ್ನು ತಿರುಗಿಸಿ ಮನಸ್ಸಿಗೆ ರಂಜನೀಯವಾದ, ಪ್ರಿಯವಾದ ಜೀವನಪದ್ಧತಿಗೆ ಜೋತುಬಿದ್ದು ಎಷ್ಟೆಲ್ಲ ಕಳೆದುಕೊಳ್ಳುತ್ತಾನೆ ಎಂಬುದನ್ನು ಕಂಡ ವೇದಕಾಲದ ಋಷಿಮುನಿಗಳು ಮತ್ತು ಅವರ ಜೀವನ ಪದ್ಧತಿಯನ್ನೇ ಎತ್ತಿ ಹಿಡಿದ ಆಚಾರ್ಯರು ಮನುಷ್ಯನ ಈ ಅಧಃಪತನವನ್ನು ಕಂಡು ಮರುಗಿ ಅವನ ಪುನರುತ್ಥಾನಕ್ಕೆ ಸೂಚಿಸಿದ ಉಪಾಯಗಳು ಒಂದೇರಡಲ್ಲ. ಆ ಉಪಾಯಗಳನ್ನೇ ನಾವು ‘ಯೋಗ’ ಎಂದು ಕರೆಯುವುದು. ಈ ಯೋಗಗಳು ನಾಲ್ಕು. ಇದು ಎಲ್ಲರಿಗೂ ತಿಳಿದಿರುವುದೇ. ಅವುಗಳಲ್ಲಿ ಸುಲಭ, ಸಹಜವಾದದ್ದು ಭಕ್ತಿಯೋಗ.

ಭಕ್ತಿ ಎಂದರೆ ಪ್ರೇಮ. ಪ್ರೀತಿ ಎಂದರೂ ತಪ್ಪೇನಲ್ಲ. ಈ ಪ್ರೀತಿ ಅಥವಾ ಪ್ರೇಮ ಭಗವಂತನೆಡೆಗೆ, ಗುರುವಿನೆಡೆಗೆ ಅಥವಾ ಯಾವುದೇ ಉದಾತ್ತ ವ್ಯಕ್ತಿಯೆಡೆಗೆ ತಿರುಗಿದಾಗ ಅದು ಭಕ್ತಿ ಎಂಬ ಪ್ರತಿಷ್ಠೆಯನ್ನು ಪಡೆಯುತ್ತದೆ. ಮನುಷ್ಯನನ್ನೋ, ವಸ್ತುವನ್ನೋ, ದೇಶವನ್ನೋ ಪ್ರೀತಿಸುವುದು ಸುಲಭವಾದರೂ ಭಗವಂತನನ್ನು ಪ್ರೀತಿಸುವುದು, ಆರಾಧಿಸುವುದು ಅಷ್ಟು ಸುಲಭವಲ್ಲ. ಡಿ.ವಿ.ಜಿಯವರ ಸಂಬಂಧಿಕರೊಬ್ಬರು ಹೇಳುತ್ತಿದ್ದರಂತೆ. ‘ನಾಲ್ಕು ಎಮ್ಮೆಗಳನ್ನು ಬೇಕಾದರೆ ತೊಳೆಯುತ್ತೆನೆ. ದೇವರ ಮೇಲೆ ನೀರು ಹಾಕಲು ಮನಸ್ಸು ಬರುವುದಿಲ್ಲ’. ಆತನ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಹೌದು! ಹೆಂಡತಿ, ಮಕ್ಕಳಿಗಾಗಿ, ಹಣಕ್ಕಾಗಿ, ಹೆಸರಿಗಾಗಿ ಬೇಕಾದಷ್ಟು ಕಣ್ಣೀರು ಸುರಿಸುತ್ತಾರೆ. ಭಗವಂತನಿಗಾಗಿ ಯಾರು ಕಣ್ಣೀರು ಸುರಿಸಿದ್ದಾರೋ? ಹಾಗೇನಾದರೂ ಕಣ್ಣೀರು ಸುರಿಸಿದರೆ ಅವನು ನಿನ್ನಿಂದ ದೂರ ಉಳಿಯಬಲ್ಲನೇನು? ಎಂದು ಭಗವಾನ್ ರಾಮಕೃಷ್ಣರು ನರೇಂದ್ರನಿಗೆ ಹೇಳಲಿಲ್ಲವೇ?

ಹಾಗಾದರೆ ಉಪಾಯ? ಪ್ರತಿ ಸಮಸ್ಯೆಗೂ ಸನಾತನ ಧರ್ಮದ ಬಳಿ ಉಪಾಯ ಇದೆ. ಶ್ರೀಕೃಷ್ಣ ಗೀತೆಯಲ್ಲಿ ಹೇಳುತ್ತಾನೆ, ಏಷಾಂ ತ್ವಂತ್ವಗತಂ ಪಾಪಂ ಜನಾನಾಂ ಪುಣ್ಯ ಕರ್ಮಣಾಂ| ತೇ ದ್ವಂದ್ವ ಮೋಹ ನಿಮುಕ್ತಾಃ ಭಜಂತೇ ಮಾಂ ದೃಢವೃತಃ ಅಂದರೆ ‘ಪಾಪ ಸಂಚಯನದಿಂದ ಕೂಡಿದ ಮನಸ್ಸಿನಲ್ಲಿ ಮನೆ ಮಾಡಿದ ದ್ವಂದ್ವ ಮೋಹಗಳಿಂದ ಪಾರಾಗಿ ದೃಢವ್ರತರಾಗಿ ನನ್ನನ್ನು ಭಜಿಸಲು ಪುಣ್ಯಕರ್ಮಗಳಲ್ಲಿ ನಿರತನಾದರೆ ಸಾಧ್ಯವಾಗುತ್ತದೆ’.

ಹಾಗಾದರೆ ಈ ಪುಣ್ಯಕಾರ್ಯಗಳೆಂದರೇನು?
ದೇವ ದ್ವಿಜ ಗುರು ಪ್ರಾಜ್ಞಃ... ಶಾರೀರಂ ತಪ ಉಚ್ಯತೇ ||
ದೇವ, ದ್ವಿಜ, ಗುರು, ಪ್ರಾಜ್ಞ, ಪೂಜನಂ ಅರ್ಥಾತ್ ದೇವರ ಪೂಜೆ ಶರೀರದಿಂದ ಮಾಡಬಹುದಾದ ತಪಸ್ಸುಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ತಪಸ್ಸಿಗಿಂತಲೂ ಪುಣ್ಯಕಾರ್ಯ ಯಾವುದು? ದ್ವಿಜ, ಗುರು, ಪ್ರಾಜ್ಞನ ಪೂಜೆ, ಬ್ರಹ್ಮಚರ್ಯ, ಅಹಿಂಸೆ ಇತ್ಯಾದಿಗಳು ಶಾರೀರಕ ತಪಸ್ಸಿನ ಬೇರೆ ರೂಪಗಳು.

ಈ ಪೂಜೆ ಎನ್ನುವುದಕ್ಕೆ ದೊಡ್ಡ ಇತಿಹಾಸವೇ ಇದೆ. ಪೂಜೆಗೆ ಒಳಗಾಗುತ್ತಿದ್ದ ‘ಪೂಜ್ಯ’ನು ಪಿತೃಗಳಿಂದ ಹಿಡಿದು ಇನ್ನಿಲ್ಲದ ವಿವಿಧ ರೂಪಗಳನ್ನು ಪಡೆದಿದ್ದಾನೆ ಇತಿಹಾಸದಲ್ಲಿ. ಅದರಿಂದ ಉಂಟಾದ ಗೊಂದಲಗಳಿಗೂ ದೀರ್ಘ ಇತಿಹಾಸವಿದೆ. ಇಂತಹ ಪರ್ವಕಾಲದಲ್ಲಿ ರಾಮಕೃಷ್ಣರ ಭಾಷೆಯಲ್ಲಿ ಹೇಳಬೇಕಾದರೆ ಜಗತ್ತಿಗೆ ಉಪದೇಶಿಸಲು ಜಗನ್ಮಾತೆಯಿಂದ ಲೈಸೆನ್ಸ್ ಪಡೆದ ಶಂಕರಾಚಾರ್ಯರು ಈ ಎಲ್ಲ ‘ಪೂಜ್ಯ’ರನ್ನೂ ಐದು ವಿವಿಧರೂಪಗಳ ಸಂಗ್ರಹವನ್ನಾಗಿ ಪುನರ್ನಿರೂಪಿಸಿದರು. ಅದೇ ಪಂಚಾಯತನ ಈ ಸಂಗ್ರಹದಲ್ಲಿ ಶಿವ, ದೇವಿ, ವಿಷ್ಣು, ಸೂರ್ಯ, ಗಣಪತಿ ಬರುತ್ತಾರೆ. ಇಡೀ ಭಾರತವರ್ಷ ಪ್ರಧಾನವಾಗಿ ಈ ಐದು ದೇವರ ಆರಾಧನೆಯಲ್ಲೇ ವೇದಕಾಲದಿಂದಲೂ ತೊಡಗಿರುತ್ತಿತ್ತು. ದೇವಿ ಹಾಗೂ ಸೂರ್ಯ ಪ್ರಮುಖವಾಗಿ ಪೂರ್ವಭಾರತದಲ್ಲಿ, ಗಣಪತಿ ಪಶ್ಚಿಮದ ಕೊಂಕಣ ಭಾಗದಲ್ಲಿ, ಶಿವ ಮತ್ತು ವಿಷ್ಣು ಇಡೀ ಭಾರತವರ್ಷದಲ್ಲಿ ಪೂಜೆಗೊಳಗಾಗುತ್ತಾರೆ. ಇದೇ ಪಂಚಾಯತನ ಪೂಜೆ. ಆಯತನ ಎಂದರೆ ಪೀಠ, ಅವಲಂಬಿಸಬಹುದಾದ ಬುನಾದಿ, ಪ್ರಜ್ಞಾಸ್ತರ ಇತ್ಯಾದಿ ಅರ್ಥಗಳು ಸಂಸ್ಕೃತದಲ್ಲಿವೆ. ಸಾಮಾನ್ಯವಾಗಿ ಹದಿನಾರು ಉಪಚಾರಗಳು ಈ ದೇವ-ದೇವಿಯರಿಗೆ ಸಲ್ಲುತ್ತದೆ. ಇದನ್ನೇ ಷೋಡಷೋಪಚಾರ ಪೂಜೆ ಎಂದು ಕರೆಯುತ್ತೇವೆ. ಈ ಪ್ರತಿ ದೇವ-ದೇವಿಯರಿಗೆ ತಾತ್ವಿಕ, ಯೌಗಿಕ ಹಾಗೂ ಪೌರಾಣಿಕ ಅರ್ಥಗಳಿವೆ. ಪೌರಾಣಿಕ ಅರ್ಥಗಳಿಗೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತು ಕೊಟ್ಟು ಕೆಲವರು ಅದರ ಬಗ್ಗೆ ಹಗುರವಾಗಿ ಮಾತನಾಡುವಂತಾಗಿದೆ.

ಭಾರತೀಯ ಪರಂಪರೆಯಲ್ಲಿ, ಸನಾತನ ಪರಂಪರೆಯಲ್ಲಿ ಯಾವುದರ ಬಗ್ಗೆಯಾದರೂ ಯಾರಾದರೂ ಹಗುರವಾಗಿ ಮಾತಾಡಿದರೆ ಅದರ ಬಗ್ಗೆ ನನ್ನ ಪ್ರತಿಕ್ರಿಯೆ ಪಾಪ! ಅವರಿಗೆ ಗೊತ್ತಿಲ್ಲ ಎನ್ನುವುದೇ! ಏಕೆಂದರೆ ಪ್ರತಿಯೊಂದರ ಹಿಂದೆ ಅಷ್ಟು ಗೂಢಾರ್ಥವಿದೆ.

ಪಂಚಾಯತನ ಪೂಜೆಯನ್ನು ಶಂಕರಾಚಾರ್ಯರ ಅನುಯಾಯಿಗಳು ನಿಷ್ಠೆಯಿಂದ ಮಾಡಿಕೊಂಡು ಬರುತ್ತಾರೆ. ಇದು ಬಹುದೇವೋಪಾಸನೆಯಲ್ಲ; ಬಹುರೂಪೋಪಾಸನೆ! ಹಿಂದೂಧರ್ಮದಲ್ಲಿ ಬಹುದೇವೋಪಾಸನೆ ಇಲ್ಲ, ಬಹುರೂಪೋಪಾಸನೆಯೇ ಇರುವುದು. ಬೇರೆಲ್ಲ ಧರ್ಮಗಳಿಗಿಂತ ಹಿಂದೆಯೇ- ಋಗ್ವೇದದ ಕಾಲದಲ್ಲಿಯೇ- ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ‘ಸತ್ಯ ಒಂದೇ, ತಿಳಿದವರು ಅದನ್ನು ಬಹುನಾಮಗಳಿಂದ ಕರೆಯುತ್ತಾರೆ’ ಎಂದು ತೋರಿಸಿದ್ದು ಹಿಂದೂ ಧರ್ಮವೇ! ಸಾಕಾರ ಉಪಾಸನೆಯಲ್ಲಿ ಬಹುರೂಪ ಸಹಜ ಬೆಳವಣಿಗೆ. ಈ ದೇಶದಲ್ಲಿ ಹುಟ್ಟಿ ವಿಶ್ವಮಾನ್ಯತೆ ಗಳಿಸಿರುವ ಸಂಗೀತ, ಸಾಹಿತ್ಯ, ಕಲೆ, ನಾಟಕ ಇತ್ಯಾದಿ ಲಾಲಿತ್ಯಗಳ ಹಿಂದಿನ ಪ್ರೇರಕಶಕ್ತಿಯೇ ಸಾಕಾರ ದೈವೋಪಾಸನೆ. ಇದರಷ್ಟು ಸಹಜ ಮತ್ತು ಸರಳ ಮತ್ತಾವ ಪೂಜಾ ಆರಾಧನಾರೂಪದಲ್ಲೂ ಸಾಧ್ಯವಿಲ್ಲ. ಮನುಷ್ಯನ ಸ್ವಭಾವಕ್ಕೆ ಅಂಟಿಕೊಂಡಿರುವುದೆ ವೈವಿಧ್ಯತೆಯನ್ನು ಇಷ್ಟಪಡುವುದು. ಅದು ಆಹಾರ, ಬಟ್ಟೆ, ವಿಹಾರ, ಮನರಂಜನೆ ಇಷ್ಟಕ್ಕೇ ಸೀಮಿತವಾಗಲಿಲ್ಲ ಭಾರತದಲ್ಲಿ. ಅದು ಅಧ್ಯಾತ್ಮಕ್ಕೂ ಕಾಲಿಟ್ಟಿತು. ಅಂಥ ಮಹಾನ್ ಬ್ರಹ್ಮಜ್ಞಾನಿ ವಿವೇಕಾನಂದರೇ ‘ಖಛ್ಚಿಠಿಠ ಞ್ಠಠಠಿ ಞ್ಠ್ಝಜಿಟ್ಝಢ, ಛಿಚ್ಚಜ ಜ್ಞಿಛಜಿಡಜಿಛ್ಠಚ್ಝ ಞ್ಠಠಠಿ ಜಚಡಛಿ ಜಜಿಠ ಟಡ್ಞಿ ಠಛ್ಚಿಠಿ’ ಅರ್ಥಾತ್ ‘ಪಂಥಗಳು ಮತ್ತಷ್ಟು ಹೆಚ್ಚಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಪಂಥವಿರಬೇಕು’ ಎಂದಾಗ ಅವರ ವೈಜ್ಞಾನಿಕತೆಯನ್ನು ಪ್ರಶ್ನಿಸುವ ಧೈರ್ಯ ಯಾರಿಗಿದ್ದೀತು?

ಭಕ್ತಿಯೋಗವೆಂಬ ರಾಜಮಾರ್ಗದಲ್ಲಿ ಕೇವಲ ರೂಪದಲ್ಲಿ ವೈವಿಧ್ಯ ತಂದು ತೃಪ್ತಗೊಂಡ ದೇಶವಲ್ಲ ನಮ್ಮದು. ಭಕ್ತಿಯೋಗದ ಉಸಿರೇ ಭಗವಂತನೊಡನೆ ಒಂದು ಸಂಬಂಧವನ್ನಿಟ್ಟುಕೊಂಡು ಅದನ್ನು ಕ್ರಮೇಣ ತೀವ್ರಗೊಳಿಸಿಕೊಳ್ಳುತ್ತ ಒಂದು ದಿನ ಸಂಪೂರ್ಣವಾಗಿ ಅವನಲ್ಲೇ ತನ್ಮಯನಾಗಿಬಿಡುವುದು. ಈ ಸಂಬಂಧದಲ್ಲೂ ವೈವಿಧ್ಯವಿದೆ. ಮನುಷ್ಯ ಸ್ವಭಾವಕ್ಕೆ ಸಂಬಂಧಿಸಿದ ಸಹಜತೆ ಇದೆ. ಸಾಮಾನ್ಯವಾಗಿ ತೀವ್ರವಾದ ನಲುಮೆ, ಒಲುಮೆಗಳಿಂದ ಬೆಸೆಯಲ್ಪಡುವ ಸಂಬಂಧಗಳು ಯಾವವು? ತಾಯಿ-ಮಗುವಿನ ಸಂಬಂಧ, ಪ್ರಿಯತಮ-ಪ್ರೇಯಸಿಯ ಸಂಬಂಧ, ಮಹಾತ್ಮರು ಮತ್ತು ಅವರನ್ನು ಗೌರವಿಸುವವರ ನಡುವಿನ ಸಂಬಂಧ, ಸ್ನೇಹಿತರ ನಡುವಿನ ಸಂಬಂಧ, ಯಜಮಾನ ದಾಸನ ಸಂಬಂಧ ಇಷ್ಟೇ ತಾನೆ?! ಆಶ್ಚರ್ಯವೆಂದರೆ ಇದೇ ಮಾನುಷ ಸಹಜ ಸಂಬಂಧಗಳನ್ನೇ ಭಕ್ತಿಯೋಗದಲ್ಲಿ ‘ಭಾವ’ ಎಂದು ಕರೆದು ಅಳವಡಿಸಿಕೊಳ್ಳಲಾಗಿದೆ. ಮೇಲಿನದ್ದನ್ನೇ ಕ್ರಮವಾಗಿ ಹೆಸರಿಸಬೇಕೆಂದರೆ ವಾತ್ಸಲ್ಯಭಾವ ಇಲ್ಲವೇ ಮಾತೃಭಾವ; ಮಧುರಭಾವ; ಶಾಂತಭಾವ; ಸಖ್ಯಭಾವ ಮತ್ತು ದಾಸ್ಯಭಾವ ಇವೇ ಅವು. ಈ ಒಂದೊಂದೂ ಭಾವಕ್ಕೆ ಇತಿಹಾಸದಲ್ಲಿ ಅದ್ಭುತ ಉದಾಹರಣೆಗಳು ಆಗಿಹೋಗಿದ್ದಾರೆ. ವಾತ್ಸಲ್ಯ ಭಾವಕ್ಕೆ ಉಜ್ವಲ ಉದಾಹರಣೆ ಯಶೋದೆ. ನಂತರ ಬರುವವಳೇ ಕೌಸಲ್ಯಾ. ಮಧುರ ಭಾವಕ್ಕೆ ರಾಧೆ, ಮೀರಾ ಮತ್ತು ಅಕ್ಕಮಹಾದೇವಿ. ಶಾಂತ ಭಾವಕ್ಕೆ ಭಾರದ್ವಾಜರೇ ಮೊದಲಾದ ಋಷಿಮುನಿಗಳು. ಸಖ್ಯ ಭಾವಕ್ಕೆ ಅರ್ಜುನ, ವಿಭೀಷಣ, ಸುಗ್ರೀವ. ದಾಸ್ಯ ಭಾವಕ್ಕೆ ವಿಶ್ವಮಾನ್ಯ ಹನುಮಂತ. ಈ ಎಲ್ಲ ಭಾವಗಳಲ್ಲೂ ಉನ್ನತ ಭಾವವೇ ಮಧುರಭಾವ. ಆದರೆ, ಆಧುನಿಕ ಯುಗದ ಆಧ್ಯಾತ್ಮಿಕ ಲೋಕದ ಚಕ್ರವರ್ತಿಗಳಾದ ಭಗವಾನ್ ರಾಮಕೃಷ್ಣರಾದರೋ ಈ ಎಲ್ಲ ಭಾವಗಳ ಪರಿಪೂರ್ಣತೆಯನ್ನೇ, ಸರ್ವತೋಮುಖ ಘಟ್ಟವನ್ನೇ ತಲುಪಿ ಅದನ್ನು ತಮ್ಮ ಸಹಜಸ್ಥಿತಿಯನ್ನಾಗಿ ಮಾಡಿಕೊಂಡುಬಿಟ್ಟರು. ಇದನ್ನೇ ‘ಮಹಾಭಾವ’ ಎನ್ನುತ್ತವೆ ಚೈತನ್ಯ ಭಾಗವತ ಇತ್ಯಾದಿ ಭಕ್ತಿಶಾಸ್ತ್ರಗಳು. ಅವರ ಈ ಸಾಧನೆಯನ್ನು ನೋಡಿಯೇ ತಂತ್ರಶಾಸ್ತ್ರಗಳಲ್ಲಿ ನುರಿತಿದ್ದ ಅಂದಿನ ಕಾಲದ ಮಹಾನ್ ಸಾಧಕಿ ಭೈರವಿ ಬ್ರಾಹ್ಮಣಿ ಪಂಡಿತರ ಸಭೆಯನ್ನು ಕರೆದು ಶ್ರೀರಾಮಕೃಷ್ಣರು ನಿಸ್ಸಂಶಯವಾಗಿಯೂ ಅವತಾರಪುರುಷರು. ಏಕೆಂದರೆ ಮಹಾಭಾವ ಅವತಾರ ಪುರುಷನಿಗೆ ಮಾತ್ರ ಸಾಧ್ಯ ಎಂದು ಸಾಧಿಸಿಯೇ ಬಿಟ್ಟಳು.

ಭಗವಂತನೊಡನೆ ಒಂದು ಸಂಬಂಧವನ್ನು ಇಟ್ಟುಕೊಂಡು ಅದನ್ನು ಭಾವವಾಗಿ ಉದಾತ್ತೀಕರಿಸಿ ಆ ಸಂಬಂಧಜನ್ಯ ಆನಂದದಲ್ಲಿ ದಿನಗಳನ್ನು ಕಳೆಯುವ ಆ ವ್ಯಕ್ತಿ ಪರಮಭಾಗ್ಯವಂತನೇ ಆಗಿರಬೇಕು. ಕಾರಣ ಇಷ್ಟೇ ಭಗವದ್ಭಕ್ತಿಗಿಂತ ಮನುಷ್ಯನನ್ನು ಮೈಮರೆಸುವುದು, ಆನಂದ ಸಾಗರದಲ್ಲಿ ತೇಲಿಸುವುದು ಈ ಸೃಷ್ಟಿಯಲ್ಲೇ ಯಾವುದೂ ಇಲ್ಲ. ಆಧ್ಯಾತ್ಮಿಕ ಲೋಕದಲ್ಲಿ ಭಕ್ತಿ, ಜ್ಞಾನ ಇವುಗಳು ತೀವ್ರಗೊಂಡಾಗ ಆ ಅಮಲಿನಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ ಸಾಧಕರು. ಕಣ್ಣುಗಳಲ್ಲಿ ಹೊಳಪು, ಕಣ್ಣುಗಳು ಊದಿಕೊಳ್ಳುವುದು, ಉನ್ಮತ್ತನಾಗುವುದು, ಸ್ತಬ್ಧನಾಗುವುದು, ಕಾಮ, ಕ್ರೋಧ, ದ್ವೇಷ ಇತ್ಯಾದಿ ಭಾವನೆಗಳು ಪೂರ್ಣವಾಗಿ ಸುಟ್ಟೇ ಹೋಗುವುದು ಈ ಸ್ಥಿತಿಯ ಲಕ್ಷಣ.

ಇಂಥ ಭಕ್ತಿ ಒಮ್ಮೆಲೇ ಬಂದುಬಿಡುವುದಿಲ್ಲ. ಹಲವು ಹಂತಗಳಲ್ಲಿ ನಮ್ಮ ಇಷ್ಟವಾದ ರೂಪದಲ್ಲಿ ಆ ಪರಮಾತ್ಮನನ್ನು ಆರಾಧಿಸಬೇಕು ಆ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದೇ ದೇವರಪೂಜೆ, ಜಪ, ಧ್ಯಾನ, ಇತ್ಯಾದಿ. ಇಷ್ಟೇ ಸಾಕಾಗುವುದಿಲ್ಲ. ಆಗಾಗ ನಿರ್ಜನಪ್ರದೇಶದಲ್ಲಿ ಸಮಯಕಳೆಯುವುದು ಮತ್ತು ಸಾಧುಸಂಗ ಕೂಡ ಮುಖ್ಯ. ಬ್ರಹ್ಮಚರ್ಯವೂ ಸೇರಬೇಕಾದ ಅನಿವಾರ್ಯವಿದೆ ಎಂದೇ ಹೇಳಬೇಕಾದೀತು. ಈ ಎಲ್ಲ ತಯಾರಿಗಳಿಂದೊಡಗೂಡಿದ ಸಾಧಕ ಶ್ರದ್ಧೆಯಿಂದ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದೇ ಆದರೆ ಕೆಲವೇ ವರ್ಷಗಳಲ್ಲಿ ದೇವತೆಗಳೂ ಅವನನ್ನು ನೋಡಿ ಮಾತ್ಸರ್ಯತಾಳುತ್ತಾರೆ. ಹಾಗಾಗಿ ಬಿಡುತ್ತಾನೆ ಅವನು.

ನಿಜಕ್ಕೂ ಹೇಳಬೇಕೆಂದರೆ ಗೃಹಸ್ಥಾಶ್ರಮದ ದೊಡ್ಡ ಪ್ರಯೋಜನವೇ ಪ್ರೀತಿಸುವುದರಲ್ಲಿ ತರಬೇತಿಯನ್ನು ಪಡೆಯುವುದು. ಹಾಗೆಯೇ ಗಮನಿಸಿ! ಭಕ್ತಿಯೋಗದ ಎಲ್ಲ ಭಾವಗಳು, ಆ ಭಾವ ಸೂಚಿತ ಎಲ್ಲ ಸಂಬಂಧಗಳು ಗೃಹಸ್ಥನಿಗೆ ಸಹಜವಾಗಿಯೇ ಬಂದೊದಗಿರುತ್ತವೆ. ಆಧ್ಯಾತ್ಮಿಕ ಕ್ಷೇತ್ರವನ್ನು ಅವನು ಗಂಭೀರವಾಗಿ ಪ್ರವೇಶಿಸಿದಾಗ ಅವನು ಮಾಡಬೇಕಾದ ಒಂದೇ ಕೆಲಸ ತನ್ನ ಎಲ್ಲ ಸಂಬಂಧಗಳನ್ನು ಪ್ರೀತಿ, ಪ್ರೇಮಗಳನ್ನು ಭಗವಂತನೆಡೆಗೆ ತಿರುಗಿಸುವುದು ಮಾತ್ರ. ಭಾವಗಳು ಭಿನ್ನವಾದರೂ ಅವೆಲ್ಲದರ ಒಳಗಣ ಗುರಿ ಮಾತ್ರ ಒಂದೇ. ಅದೇ ಅವನೆಡೆಗೆ ಶುದ್ಧ, ನಿರ್ವ್ಯಾಜ ಪ್ರೇಮವನ್ನು ಹೊಂದುವುದು.

ತಾಯೇ ನಿನ್ನ ಮಧುಮತ್ತ ಪ್ರೇಮದಲಿ ಮರುಳನಾಗಿಸೆನ್ನ |

ತರ್ಕ ವಿಚಾರದ ಗೀಳು ಕಳೆದು ನಿನ್ನ ಪದಕಮಲದೊಳಿರಿಸೆನ್ನ||

ಎನ್ನುವುದು ಶ್ರೀರಾಮಕೃಷ್ಣರು ಹಾಡುತ್ತಿದ್ದ ಬಂಗಾಳಿ ಹಾಡು. ಇಷ್ಟು ಶ್ರೀಮಂತಿಕೆ, ವೈವಿಧ್ಯತೆ, ರಂಜನೀಯತೆಗಳಿಂದ ಕಂಗೋಳಿಸುತ್ತಿದೆ ಬಹುರೂಪೋಪಾಸನೆಯ ಬಹುಭಾವಗಳಿಂದ ಕೂಡಿದ ಭಕ್ತಿಯೋಗ ಎಂಬ ಪಾವನಗಂಗೆ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net