ಆಪ್ತಸಲಹೆಯ ಮೂಲ ಭಗವದ್ಗೀತೆ

Krishna Arjuna
Published on
ಅನಿಸಿಕೆ
ನಮ್ಮಲ್ಲಿ ಒಂದು ತಪ್ಪು ಕಲ್ಪನೆಯಿದೆ. ಹತ್ತನೇ ತರಗತಿಯಲ್ಲಿ ಚೆನ್ನಾಗಿ ಅಂಕ ಗಳಿಸಿದವರೆಲ್ಲರೂ ಬುದ್ಧಿವಂತ ವಿದ್ಯಾರ್ಥಿಗಳು, ಅವರು ವಿಜ್ಞಾನ ವಿಷಯವನ್ನು ಓದಬೇಕು, ಪಿ.ಯು.ಸಿ. ಅಥವಾ 12ನೇ ತರಗತಿಯಲ್ಲಿ ಚೆನ್ನಾಗಿ ಓದಿ ನಂತರ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ತೆಗೆದುಕೊಂಡರೆ ಮಾತ್ರ ಅವರು ಯಶಸ್ಸು ಗಳಿಸಲು ಸಾಧ್ಯ, ಅದನ್ನು ಬಿಟ್ಟು ಅವರು ವಾಣಿಜ್ಯ ಅಥವಾ ಮಾನವಿಕ ವಿಷಯಗಳನ್ನು ಓದುತ್ತಾರೆಂದರೆ ಅವರ ಬುದ್ಧಿಮತ್ತೆಯನ್ನೇ ಓರೆಗೆ ಹಚ್ಚಿ, ಅವರನ್ನು ಏನೂ ಮಾಡಲಾಗದವರು, ಸೋಮಾರಿ ಅಂತ ಪಟ್ಟ ಕಟ್ಟುವ ಪಾಲಕರು, ಶಿಕ್ಷಕ ವರ್ಗದವರೇ ಜಾಸ್ತಿ. ಕೆಲವು ವರ್ಷಗಳ ಹಿಂದೆ ನನ್ನನ್ನು ಭೇಟಿ ಮಾಡಿದ, ಒಬ್ಬ ಹುಡುಗನ ಕಥೆಯೂ ಹೀಗೆಯೇ ಇದೆ.

ಆತನ ಹೆಸರು ಶ್ರೀದತ್ತ (ಹೆಸರು ಬದಲಾಯಿಸಲಾಗಿದೆ). ತಮಿಳುನಾಡಿನ ಅಯ್ಯಂಗಾರ್ ಬ್ರಾಹ್ಮಣ ಪಂಗಡದವನು. ಅವನ ತಂದೆ-ತಾಯಿ ಇಬ್ಬರೂ ಸಾಫ್ಟ್​ವೇರ್ ಇಂಜಿನಿಯರ್​ಗಳು. ಇವನೂ ತುಂಬ ಬುದ್ಧಿವಂತ ಹುಡುಗ, 10ನೇ ತರಗತಿಯಲ್ಲಿ 97ಕ್ಕೂ ಹೆಚ್ಚು ಅಂಕ ಗಳಿಸಿದ್ದ. ಅವನ ಪಾಲಕರಿಗೆ ಮಗನನ್ನು ಐ.ಐ.ಟಿ.ಯಲ್ಲಿ ಓದಿಸಬೇಕೆಂಬ ಹಂಬಲವಿತ್ತು. ಕೊನೆಗೆ ಸ್ವಲ್ಪದರಲ್ಲಿ ಅದು ತಪ್ಪಿ ಹೋಗಿ ಬೆಂಗಳೂರಿನಲ್ಲೇ ಇಂಜಿನಿಯರಿಂಗ್​ಗೆ ಸೇರಿದ್ದ. ಆದರೆ, ಇಂಜಿನಿಯರಿಂಗ್​ನಲ್ಲಿ ಮೊದಲಿನ ಹಾಗೆ ಅಂಕ ಗಳಿಸಲಿಲ್ಲ, ಮೊದಲ ಸೆಮಿಸ್ಟರ್​ನಲ್ಲಿ ಒಂದೆರೆಡು ವಿಷಯದಲ್ಲಿ ಅನುತ್ತೀರ್ಣನಾದ, ನಂತರದ ಸೆಮಿಸ್ಟರ್​ನಲ್ಲಿ ಸ್ವಲ್ಪ ಚೆನ್ನಾಗಿ ಮಾಡಿದರೂ ಐವತ್ತರ ಪ್ರತಿಶತದಲ್ಲೇ ಇರುತ್ತಿದ್ದ. ಅವನು ಮೂರನೇ ಸೆಮಿಸ್ಟರ್​ನಲ್ಲಿ ಇರುವಾಗ ಅವನ ಪಾಲಕರು ನನ್ನನ್ನು ಭೇಟಿ ಮಾಡಿದರು. ಅವನ ತಾಯಿಯಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸುಮಾರು ಒಂದು ಗಂಟೆಯ ಕಾಲ ಮಾತನಾಡಿದ ಅವರು ಏನಾದರೂ ಮಾಡಿ ಮಗನನ್ನು ದಾರಿಗೆ ತರಲು ಹೇಳಿದರು. ನಂತರ ಶ್ರೀದತ್ತನನ್ನು ಒಬ್ಬನೇ ಮಾತನಾಡಿಸಿದೆ. ತುಂಬ ವಿಧೇಯ ವಿದ್ಯಾರ್ಥಿಯಂತೆ ಮಾತನಾಡುತ್ತಿದ್ದ. ಒಂದು ಅರ್ಧ ಗಂಟೆ ಮಾತನಾಡಿಸಿದರೂ ಯಾವ ಸಮಸ್ಯೆಯ ಅಂಶಗಳೂ ಗೋಚರಿಸಲಿಲ್ಲ. ‘ಬಿಡುವಿದ್ದಾಗ ಏನು ಮಾಡುತ್ತೀಯಾ?’ ಅಂತ ಕೇಳಿದಾಗ, ‘ಕಥೆ-ಕಾದಂಬರಿಗಳನ್ನು ಓದುತ್ತೇನೆ’ ಎಂದು ಹೇಳಿದ. ‘ಮುಂದೆ ಏನು ಮಾಡಬೇಕೆಂದುಕೊಂಡಿದ್ದೀಯ?’ ಅಂದಾಗ ಸಿವಿಲ್ ಸರ್ವಿಸ್ ಮಾಡಬೇಕೆಂದುಕೊಂಡಿದ್ದೀನಿ, ಆದರೆ ಇಂಜಿನಿಯರಿಂಗ್ ವಿಷಯಗಳನ್ನು ತೆಗೆದುಕೊಳ್ಳುವುದಿಲ್ಲ, ಯಾವುದಾದರೂ ಮಾನವಿಕ ವಿಷಯದಲ್ಲಿ ಎಂದ. ಅವರ ತಾಯಿಯು ಮಧ್ಯೆ ಬಾಯಿ ಹಾಕಿ, ‘ಮನೆಯಲ್ಲಿ ಓದುತ್ತೇನೆಂದು ಕೊಠಡಿಯ ಒಳಗೆ ಸೇರಿದರೆ ಮತ್ತೆ ಬರುತ್ತಿದ್ದಿದು ಊಟಕ್ಕೆ ಮಾತ್ರ. ಮೊದಲಿನ ಹಾಗೆ ಮಾತುಕತೆ ಏನೂ ಇಲ್ಲ, ಆದರೆ ಬೇರೆ ಯಾವ ಕೆಟ್ಟ ಹವ್ಯಾಸಗಳೂ ಇಲ್ಲ. ಒಂದು ಹೆಮ್ಮೆಯ ವಿಚಾರವೆಂದರೆ ಇವನು ತನ್ನ ಅಜ್ಜನ ಹಾಗೆ ಪ್ರತಿದಿನವೂ ಸಂಧ್ಯಾವಂದನೆ ಮಾಡುತ್ತಾನೆ. ಅದನ್ನು ಮಾತ್ರ ತಪ್ಪಿಸುವುದಿಲ್ಲ’ ಎಂದರು.

‘ನೋಡು, ಶ್ರೀದತ್ತ, ನಿನ್ನ ಸಿವಿಲ್ ಸರ್ವಿಸ್ ಕನಸು ನನಸಾಗಬೇಕಾದರೆ ನಿನ್ನ ಪರಿಶ್ರಮವೂ ತುಂಬ ಇರಬೇಕಾಗುತ್ತದೆ. ಆದರೆ ನಿನ್ನ ಪರಿಶ್ರಮ, ಕಾರ್ಯಕ್ಷಮತೆ ಎಷ್ಟೆಂದು ನನಗೆ ತಿಳಿಯುತ್ತಿಲ್ಲ’ ಎಂದೆ.

‘ಸರ್, ನನಗೆ ಇಂಜಿನಿಯರಿಂಗ್ ಇಷ್ಟ ಇಲ್ಲ, ಇದರಲ್ಲಿ ಮುಂದುವರಿಯುವುದು ಕೂಡ ನನಗೆ ಇಷ್ಟ ಇಲ್ಲ. ನನ್ನ ಅಪ್ಪ-ಅಮ್ಮನಿಗೆ ಹೇಳಿದರೆ ಅವರು ಅರ್ಥ ಮಾಡಿಕೊಳ್ಳುವುದಿಲ್ಲ, ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ... ’ ಎಂದ.

‘ಯಾವಾಗಲಾದರೂ ಭಗವದ್ಗೀತೆಯನ್ನು ಓದಿದ್ದೀಯಾ?’ ಎಂದು ಕೇಳಿದಾಗ, ‘11ನೇ ತರಗತಿಯ ರಜೆಯಲ್ಲಿ ಓದಿದ್ದೇನೆ, ಅಷ್ಟೊಂದು ಅರ್ಥವಾಗಿರಲಿಲ್ಲ, ಆಮೇಲೆ ಓದಲು ಹೋಗಿಲ್ಲ’ ಎಂದ. ಅದಕ್ಕೆ ನಾನು, ‘ನೋಡು, ಭಗವದ್ಗೀತೆಯ ಒಂದು ಶ್ಲೋಕವನ್ನು ತೆಗೆದುಕೊಳ್ಳುವಾ. ಸಾಂಖ್ಯಯೋಗದಲ್ಲಿ ಬರುವ,

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |

ಮಾ ಕರ್ಮಫಲಹೇತುರ್ಭಃ ಮಾ ತೇ ಸಂಗೋಸ್ತ ್ವ ಕರ್ಮಣಿ ||

ಇದು ಅರ್ಥವತ್ತಾದ ಶ್ಲೋಕ ಮತ್ತು ತುಂಬ ಜನರು ಅರ್ಥ ಮಾಡಿಕೊಳ್ಳದ, ಅಪಾರ್ಥ ಮಾಡಿಕೊಳ್ಳುವ ಶ್ಲೋಕ. ಇದು, ನೀನು ಈ ಸಮಯದಲ್ಲಿ (here and now) ಮಾಡಬೇಕಾದ ನಿನ್ನ ಕರ್ತವ್ಯವನ್ನು ಹೇಳುತ್ತದೆ. ನಿನ್ನ ಕರ್ತವ್ಯವೆಂದರೆ ಅದು ನಿನ್ನ ಒಬ್ಬನ ನಿರ್ಣಯದ ಮೇಲೆ ನಿಂತಿರುವ, ನಿನ್ನ ಇಷ್ಟದ ಪ್ರಕಾರವಾಗಿ ಮಾಡುವ ಕೆಲಸವಲ್ಲ. ಕೇವಲ ನಮ್ಮ ಬಗ್ಗೆಯೇ ಯೋಚಿಸುವುದು ಭಾರತೀಯ ದೃಷ್ಟಿಕೋನವಲ್ಲ, ಹಾಗೆ ಯೋಚಿಸುವುದು ನಮ್ಮ ಪರಂಪರೆಯಲ್ಲಿ ಇಲ್ಲ. ನಮ್ಮದು ವ್ಯಕ್ತಿನಿಷ್ಠೆಯಲ್ಲ, ಅದು ಸಮೂಹದ, ಸಮುದಾಯದ, ಸಮಾಜದ ಮೇಲೆ ಇರುವ ನಿಷ್ಠೆ. ಅಲ್ಲಿ ಧರ್ಮವಿರುತ್ತದೆ, ಧರ್ಮವೆಂದರೆ ದೈವದ ಮೇಲೆ ಇರುವ ಭಕ್ತಿ, ಶ್ರದ್ಧೆಯಲ್ಲ, ಅದು ನೈತಿಕತೆ, ಸಾಮಾಜಿಕ ಚಿಂತನೆಯದ್ದು, ಸಮಷ್ಟಿಯದ್ದು. ಸಮಷ್ಟಿಯ ಹಿತವೇ ಧರ್ಮ. ಆ ಪ್ರಕಾರವಾಗಿ, ಈ ಸಮಯದಲ್ಲಿ ನೀನು ಸಾಂಸ್ಥಿಕವಾಗಿ ಮಾಡುವ ಕರ್ತವ್ಯವೆಂದರೆ ಅದು ಪರಿಶ್ರಮವಿಟ್ಟು ನಿನ್ನ ಕರ್ತವ್ಯವನ್ನು ಮಾಡುವುದು. ನಿನ್ನ ಈಗಿನ ಕರ್ತವ್ಯ ಕೇವಲ ಶ್ರದ್ಧೆಯಿಂದ ಓದುವುದು’.

‘ಆದರೆ, ನನಗೆ ಶ್ರದ್ಧೆಯಲ್ಲಿಯೇ ಸಮಸ್ಯೆ ಇದೆ. ಶ್ರದ್ಧೆಯೇ ಸಮಸ್ಯೆ ಅಂದುಕೊಳ್ತೀನಿ, ಅದಕ್ಕೆ ಏನು ಮಾಡುವುದು...’ ಅಂತ ರಾಗ ಎಳೆದ.

‘ಶ್ರದ್ಧೆಯಲ್ಲಿಯೇ ಸಮಸ್ಯೆ ಇರಲು ಸಾಧ್ಯವಿಲ್ಲ, ಏಕೆಂದರೆ ನಿನಗೆ ಮೊದಲು ಶ್ರದ್ಧೆ ಇತ್ತು, ಈಗ ಇಲ್ಲ ಎನ್ನಲು ಅರ್ಥವಿಲ್ಲ, ಪ್ರಾಯಶಃ ಶ್ರದ್ಧೆಯ ಜೊತೆಗೆ ನಾವು ನಿರೀಕ್ಷಿಸುವ ಫಲಿತಾಂಶದಲ್ಲಿನ ಸಂಘರ್ಷವಿರಬಹುದು. ಅದಕ್ಕೇ ಕೃಷ್ಣ, ಫಲಿತಾಂಶದಲ್ಲಿ ಅಪೇಕ್ಷೆ ಬೇಡ ಎಂದಿದ್ದು, ನೀನು ಕೇವಲ ನಿನ್ನ ಕರ್ತವ್ಯದಲ್ಲಿ ಗಮನವಿಟ್ಟರೆ, ಕರ್ತವ್ಯವನ್ನು ಪೂರ್ಣಗೊಳಿಸುವಲ್ಲಿ ಬದ್ಧತೆಯಿದ್ದರೆ ಅದು ನಿನಗೆ ಯಶಸ್ಸನ್ನು ತಂದುಕೊಡುತ್ತದೆ. ಸಂಘರ್ಷವು ಕೋಪವನ್ನು ಹುಟ್ಟು ಹಾಕುತ್ತದೆ. ನಮ್ಮ ಅರಿವಿಗೆ ಬಾರದ ಕೋಪ ನಮ್ಮೊಳಗೇ ಜ್ವಾಲಾಮುಖಿಯನ್ನು ಸೃಷ್ಟಿಸುತ್ತದೆ. ಜ್ವಾಲಾಮುಖಿಯ ಬೆಂಕಿಯು ಸೃಷ್ಟಿಗೆ ಪ್ರಯೋಜನಕಾರಿಯಲ್ಲ, ಅದು ತಣ್ಣಗಾಗಬೇಕು. ನಿನ್ನೊಳಗಿನ ಕೋಪವನ್ನು, ಅದು ನಿನ್ನರಿವಿಗೇ ಬಾರದ ಕೋಪ ತಣ್ಣಗಾಗಬೇಕು, ಅಂದರೆ ಶಾಂತವಾಗಬೇಕು. ದೇಹ, ಮನಸ್ಸುಗಳೆರೆಡೂ ಶಾಂತತೆಯಲ್ಲಿದ್ದಾಗ ಸ್ವಾಸ್ಥ್ಯವು ಸಂಭವ, ಸ್ವಾಸ್ಥ್ಯವೇ ಯಶಸ್ಸಿಗೆ ಮೂಲ. ಇನ್ನೊಂದು ವಿಚಾರ, ನಿನ್ನೊಳಗಿನ ಕೋಪವು ನಿನ್ನನ್ನು ಇನ್ನೂ ಕೆಳಮಟ್ಟಕ್ಕೆ ತಳ್ಳುತ್ತಿತ್ತು, ಅದನ್ನು ಸ್ವಲ್ಪ ಮಟ್ಟಿಗಾದರೂ ಮಟ್ಟ ಹಾಕಿದ್ದು ನಿನ್ನ ದಿನಚರಿ, ನೀನು ಪ್ರತಿ ನಿತ್ಯವೂ ಮಾಡುವ ಸಂಧ್ಯಾವಂದನೆ ಎಂಬ ಶಿಸ್ತಿನ ದಿನಚರಿ, ಅದು ಫಲಾಪೇಕ್ಷೆ ಇಲ್ಲದೆ ಮಾಡುವ ಕರ್ತವ್ಯ. ಅದನ್ನು ಹಾಗೇ ಮುಂದುವರಿಸು. ಬಹುಶಃ ಎಲ್ಲವೂ ಚೆನ್ನಾಗಿ ಆಗುತ್ತೆ’.

ಶ್ರೀೕದತ್ತ ಅರ್ಥವಾಯಿತೆಂದು ಗೋಣು ಅಲ್ಲಾಡಿಸಿದ, ಏನೂ ಮಾತನಾಡಲಿಲ್ಲ. ‘ಧನ್ಯವಾದಗಳು’ ಅಂತ ಹೇಳಿ ಹೊರಟು ಹೋದ. ಮುಂದೆ ಒಂದು ವಾರವಾದ ಮೇಲೆ ಅವನ ತಾಯಿ ಕರೆ ಮಾಡಿದ್ದರು. ‘ಸರ್, ಈಗ ಶ್ರೀದತ್ತ ಬದಲಾಗಿದ್ದಾನೆ. ಪ್ರತಿ ದಿನವೂ ಓದುತ್ತಿದ್ದಾನೆ, ಮೊದಲಿನ ಸಿಡುಕು, ಸಿಟ್ಟು ಈಗ ಕಾಣುತ್ತಿಲ್ಲ’ ಎಂದರು. ಅದು ಭಗವದ್ಗೀತೆಯ ಪರಿಣಾಮ, ಆಪ್ತ-ಸಮಾಲೋಚನೆಯಡಿಯಲ್ಲಿ ಅವನೊಳಗಿನ ಬೆಂಕಿಯನ್ನು ದೀಪವಾಗಿಸಿದ್ದಿದು. ಅಷ್ಟಕ್ಕೂ ಆಪ್ತ-ಸಮಾಲೋಚನೆಯ ಮೂಲವಿರುವುದು ಭಗವದ್ಗೀತೆಯಲ್ಲಿ, ಕೃಷ್ಣ ಕೊಟ್ಟಿದ್ದು ಕೇವಲ ಸಲಹೆಯಲ್ಲ, ಅದು ವ್ಯಕ್ತಿಯ ವಿಕಸನದ ಮಜಲುಗಳನ್ನ. ಆಪ್ತ-ಸಮಾಲೋಚನೆ ಎಂಬ ಜೀವನಧರ್ಮವನ್ನ. ಇದೆಲ್ಲದರ ನೆನಪಾಗಿದ್ದು ಕಳೆದ ವಾರವಿದ್ದ ಗೀತಾ ಜಯಂತಿಯಂದು. ಎಲ್ಲರೂ ಮಾಜಿ ಮುಖ್ಯಮಂತ್ರಿಗಳಾದ ಕೃಷ್ಣರವರು ವಿಧಿವಶರಾದ ದುರಂತವನ್ನು ನೆನಪಿಸಿಕೊಳ್ಳುತ್ತಿರುವಾಗ ನಾನು ಆಪ್ತ ಸಲಹೆಯಲ್ಲಿ ಇನ್ನೊಬ್ಬ ಕೃಷ್ಣನ ಹುಡುಕುತ್ತಿದ್ದೆ. ಸುಮಾರು ಐದಾರು ಸಾವಿರ ವರ್ಷಗಳ ಹಿಂದಿನದು. ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಸುತ್ತಲೂ ನೆರೆದಿರುವ ಸೈನ್ಯಗಳ ಮಧ್ಯೆ ಅರ್ಜುನನಿಗೆ ಕೃಷ್ಣನ ಗೀತೆಯ ಉಪದೇಶ, ಗೀತೆಯನ್ನು ಕೃಷ್ಣ ಅರ್ಜುನನಿಗೆ ಉಪದೇಶಿಸಿರುವುದೂ ದ್ವಂದ್ವ, ಸಂಘರ್ಷದಲ್ಲಿರುವ ಮನಃಸ್ಥಿತಿಯಿಂದ ಹೊರಬರುವುದಕ್ಕಾಗಿ. ಆಪ್ತ-ಸಮಾಲೋಚನೆಯಲ್ಲಿ ನಾವು ಮಾಡುವುದೂ ಅದನ್ನೇ. ಅಂದು ಕೃಷ್ಣ ಹೇಳಿದ್ದನ್ನು ಇವತ್ತೂ ನಾವು ಚಿಂತನ-ಮಂಥನ ಮಾಡುತ್ತೇವೆಂದರೆ ಅದರ ಪ್ರಭಾವ, ಪರಿಣಾಮ ಸಾರ್ವಕಾಲಿಕ, ವೈಶ್ವಿಕ.

(ಲೇಖಕರು ಆಪ್ತ-ಸಮಾಲೋಚಕರು, ಪಿಇಎಸ್ ವಿಶ್ವವಿದ್ಯಾಲಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net