

| ವಿಶ್ವನಾಥ ಮಲೇಬೆನ್ನೂರು ದಾವಣಗೆರೆ
ತೌಕ್ತೆ ಚಂಡಮಾರುತದ ಪ್ರಭಾವವೋ ಎಂಬಂತೆ ರಾಜ್ಯದ ರೈತರ ಚಿತ್ತ ಈ ಸಲ ಅವಧಿಗೆ ಮುನ್ನವೇ ಹೊಲಗಳತ್ತ ಹರಿದಿದೆ. ಮುಂಗಾರುಪೂರ್ವ ಅವಧಿಯಲ್ಲಿ ಸುರಿದ ಮಳೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಗದಿತ ಅವಧಿಗಿಂತ ಮೊದಲೇ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಭರದ ಚಾಲನೆ ಸಿಕ್ಕಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಭಾವ ಎದುರಾಗದಂತೆ ಸರ್ಕಾರವೂ ಸಿದ್ಧತೆ ಮಾಡಿಕೊಂಡಿದೆ. ಮುಂಗಾರುಪೂರ್ವ ಅವಧಿಯಲ್ಲಿ ರಾಜ್ಯದಲ್ಲಿ ಈ ಸಲ ವಾಡಿಕೆಗಿಂತ ಶೇ. 63ರಷ್ಟು ಹೆಚ್ಚು ಮಳೆ ಆಗಿದೆ. ಹಾಗಾಗಿ ಮೇ ತಿಂಗಳಿನಲ್ಲಿಯೇ ಬಿತ್ತನೆ ಚಟುವಟಿಕೆ ಚುರುಕುಗೊಂಡಿದೆ. ಜೂನ್ ಮೊದಲ ವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದ್ದರೂ ಕಳೆದ ಒಂದು ವಾರದಿಂದ ಎಲ್ಲೆಡೆ ಸಾಕಷ್ಟು ಮಳೆಯಾಗಿದೆ. ಈಗಲೂ ಕೆಲವೆಡೆ ಮಳೆ ಮುಂದುವರಿದಿದೆ. ಹೀಗಾಗಿ, ಕೃಷಿ ಇಲಾಖೆ ರಾಜ್ಯದ 30 ಜಿಲ್ಲೆಗಳಿಗೆ ಬೇಡಿಕೆ ಆಧರಿಸಿ ಈಗಾಗಲೇ ರಸಗೊಬ್ಬರ, ಬೀಜ ಪೂರೈಸಿದೆ. ಮುಂಗಾರಿನಲ್ಲಿ ರಾಜ್ಯದ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯತೆ ಇದ್ದು 30 ಜಿಲ್ಲೆಗಳಿಂದ ಇದುವರೆಗೆ 7.97 ಲಕ್ಷ ಟನ್ ರಸಗೊಬ್ಬರಕ್ಕೆ ಬೇಕಾಗಲಿದೆ ಎಂದು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಏ.1ರಿಂದ ಮೇ 19ರ ಅವಧಿಯಲ್ಲಿ 4.48 ಲಕ್ಷ ಟನ್ ಪೂರೈಕೆ ಮಾಡಿದ್ದು, ಉಳಿಕೆ ದಾಸ್ತಾನು ಸೇರಿದಂತೆ 30 ಜಿಲ್ಲೆಯ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸದ್ಯ 12.21 ಲಕ್ಷ ಟನ್ ವಿವಿಧ ಬಗೆಯ ರಸಗೊಬ್ಬರದ ಸಂಗ್ರಹ ರೈತರಿಗೆ ಲಭ್ಯವಿದೆ.
4 ಲಕ್ಷ ಟನ್ ಅಧಿಕ ಸಂಗ್ರಹ: ಮುಂಗಾರು ಹಂಗಾಮಿಗೆ 7- 8 ಲಕ್ಷ ಟನ್ ರಸಗೊಬ್ಬರ ಬೇಕಾಗಲಿದೆ. ಉತ್ತಮ ಮಳೆಯಾದರೆ ಏಕಾಏಕಿ ಬೇಡಿಕೆ ಹೆಚ್ಚಿ ಪೂರೈಕೆಗೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ 4 ಲಕ್ಷ ಟನ್ನಷ್ಟು ಹೆಚ್ಚುವರಿ ದಾಸ್ತಾನು ಮಾಡಲಾಗಿದೆ. ಜೂನ್ ಆರಂಭದ ವೇಳೆ ಇನ್ನೂ 4- 5 ಲಕ್ಷ ಟನ್ ಪೂರೈಕೆ ನಿರೀಕ್ಷಿಸಲಾಗಿದೆ. ರಾಜ್ಯದ 740 ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿತರಣೆಗೆ 70,997.71 ಕ್ಷಿಂಟಾಲ್ ಬಿತ್ತನೆ ಬೀಜದ ಪೂರೈಕೆ ಮಾಡಲಾಗಿದೆ. ಬೆಲೆ ಸಹ ನಿಗದಿಪಡಿಸಲಾಗಿದೆ. ಈ ಬಾರಿ ಬೀಜ, ಗೊಬ್ಬರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದೆ ಕೃಷಿ ಇಲಾಖೆ.
ಬೆಳಗ್ಗೆ 6-10 ವರೆಗೆ ರೈತ ಸಂಪರ್ಕ ಕೇಂದ್ರ ಓಪನ್: ಲಾಕ್ಡೌನ್ ಜಾರಿಗೊಳಿಸಿರುವುದರಿಂದ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ರೈತ ಸಂಪರ್ಕ ಕೇಂದ್ರಗಳು ತೆರೆದಿ ರಲಿದ್ದು, ಈ ಅವಧಿಯಲ್ಲಿಯೇ ರೈತರು ಬಿತ್ತನೆ ಬೀಜ, ಔಷಧಿ, ಗೊಬ್ಬರ ಸೇರಿದಂತೆ ಇನ್ನಿತರೆ ಕೃಷಿ ಸಾಮಗ್ರಿ ಖರೀದಿ ಮಾಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿರುವುದರಿಂದ ಅವಧಿ ಹೆಚ್ಚಳದಿಂದ ಅಪಾಯದ ಭೀತಿ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಹಂಗಾಮು ಬಿತ್ತನೆ ಆರಂಭವಾಗಿದೆ. ಈಗಾಗಲೇ ಜಿಲ್ಲಾ ಕೇಂದ್ರಗಳಿಗೆ ಅಗತ್ಯವಿರುವ ಬೀಜ, ರಸಗೊಬ್ಬರ ಪೂರೈಸಲಾಗಿದೆ. ರೈತ ಸಂಪರ್ಕ ಕೇಂದ್ರ ಮತ್ತು ಅಧಿಕೃತ ಮಾರಾಟಗಾರರ ಬಳಿ ಖರೀದಿಸಬಹುದಾಗಿದೆ. ಸದ್ಯಕ್ಕೆ ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ.
| ಬಿ.ವೈ. ಶ್ರೀನಿವಾಸ್ ನಿರ್ದೇಶಕರು ಕೃಷಿ ಇಲಾಖೆ, ಬೆಂಗಳೂರು