ಎಂಬಿಎ ಸೇರುವ ಮೊದಲು ಇವಿಷ್ಟು ಗಮನದಲ್ಲಿರಲಿ..

Masth
Published on

| ಡಾ.ಗಿರೀಶ ಯರಕಲಕಟ್ಟಿಮಠ

ನಿನ್ನೆ ನಮ್ಮ ಚಿಕ್ಕಪ್ಪನ ಮಗಳು ಕಾವ್ಯಳ ದೂರವಾಣಿ ಕರೆ ಸ್ವೀಕರಿಸಿದಾಗ ಒಂದು ಕ್ಷಣ ತಬ್ಬಿಬ್ಬಾದೆ.

ಅಣ್ಣಾ, ಮುಂದೇನ್ಮಾಡೋದು? ಅಪ್ಪಾಜಿ ಬಿ.ಎಡ್ ಮಾಡು ಅಂತಾರೆ, ನನ್ನ ಸ್ನೇಹಿತರು ಎಂ.ಸಿ.ಎ ಮಾಡು ಅಂತಿದಾರೆ, ಎಂಎಸ್ಸಿ ಮ್ಯಾಥಮೆಟಿಕ್ಸ್ ಅಥವಾ ಫಿಸಿಕ್ಸ್ ಒಳ್ಳೇಯದು ಅಂತ ಟೀಚರ್ಸ್ ಹೇಳ್ತಿದಾರೆ. ಆದ್ರೆ ಎಂ.ಬಿ.ಎ ಎರಡೇ ವರ್ಷ. ಅದಿರಲಿ ಸರ್ಕಾರದಿಂದ ಎಸ್ಡಿಎ/ ಎಫ್​ಡಿಎ ಕಾಲ್ ಆಗಿದೆ. ಪರಿಶ್ರಮ ಪಟ್ಟರೆ ಕೆಎಎಸ್ / ಐಎಎಸ್ ಆಫೀಸರ್ ಕೂಡ ಆಗ್ಬೋದಂತೆ. ನೀನು ಏನು ಅಂತಿಯಾ? ಎಂಬಿಎ ಮಾಡ್ಬೇಕು ಅಂತೀದೀನಿ? ಯಾವ ಕಾಲೇಜ್ ಚೆನ್ನಾಗಿದೆ? ಹೀಗೆ ಒಂದೇ ಉಸಿರಿನಲ್ಲೇ ಪ್ರಶ್ನೆಗಳ ಸುರಿಮಳೆ!!

ಕಾವ್ಯ ಹರಿಹರ ಪಟ್ಟಣದ ಒಂದು ಪ್ರತಿಷ್ಠಿತ ಪದವಿ ಮಹಾವಿದ್ಯಾಲಯದ ಬಿ.ಎಸ್.ಸಿ ಪದವೀಧರೆ.

ಹೀಗೆ ಮಹತ್ವಾಕಾಂಕ್ಷಿ ಪದವೀಧರರ ತಲೆ ಗೊಂದಲದ ಗೂಡಾಗಿದೆ. ಯಾವುದನ್ನು ತಮ್ಮ ವೃತ್ತಿ ಜೀವನವಾಗಿ ಸ್ವೀಕರಿಸಬೇಕು ಹಾಗೂ ತ್ಯಜಿಸಬೇಕು ಎಂಬುದನ್ನು ತಿಳಿಯುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ.

ವಾಸ್ತವವಾಗಿ ನಮ್ಮ ವೃತ್ತಿ ಜೀವನದ ಬಗೆಗಿನ ಸ್ಪಷ್ಟ ಅರಿವು ಪದವಿ ಮುಗಿಸುವ ಮೊದಲೇ ಮೂಡಿರಬೇಕು. ಅದಕ್ಕಿಂತ ಮುಖ್ಯವಾಗಿ ನಾವು ಯಾವುದೇ ವೃತ್ತಿ ಜೀವನವನ್ನು ಆರಿಸಿಕೊಳ್ಳಲಿ, ಅದರಲ್ಲಿ ಹೆಚ್ಚಿನದನ್ನು ಸಾಧಿಸುವಲ್ಲಿ ನಂಬಿಕೆ ಮತ್ತು ಛಲ ವಿದ್ಯಾರ್ಥಿಗಳಲ್ಲಿ ಇರಬೇಕು.

ಎಂ.ಬಿ.ಎ. ಅಥವಾ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಒಂದು ವೃತ್ತಿ ಶಿಕ್ಷಣ ಕೋರ್ಸ್. ನೀವು ಎಂಬಿಎ ಮುಗಿಸಿದ್ದೀರಿ ಎನ್ನುವುದಕ್ಕಿಂತ ನೀವು ಹೇಗೆ ಎಂಬಿಎ ಮುಗಿಸಿದ್ದೀರಿ ಹಾಗೂ ನಿಮ್ಮ ಎಂ.ಬಿ.ಎ. ಯಾವ ಶಿಕ್ಷಣ ಸಂಸ್ಥೆಯಲ್ಲಿ ಆಗಿದೆ ಎಂಬದು ನಿಮ್ಮ ವೃತ್ತಿ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತಿದೆ. ನೀವು ಎಂಬಿಎ ಮಾಡುವ ಶಿಕ್ಷಣ ಸಂಸ್ಥೆ ನಿಮ್ಮ ಜೀವನವನ್ನು ರೂಪಿಸುವುದರಿಂದ ಹಾಗೂ ಕಾಪೋೕರೇಟ್ ಜಗತ್ತಿಗೆ ನಿಮ್ಮನ್ನು ಸಿದ್ಧಪಡಿಸುವುದರಿಂದ, ನೀವು ಎಂಬಿಎಗೆ ದಾಖಲಾಗುವ ಮೊದಲು ಈ ಬರಹವನ್ನು ಒಮ್ಮೆ ಓದಿದರೆ ಉತ್ತಮ.

1. ಮಹಾವಿದ್ಯಾಲಯದ ಅಥವಾ ಪ್ರತಿಷ್ಠಿತ ಬಿ-ಸ್ಕೂಲ್​ಗಳ ವೆಬ್​ಸೈಟ್ ಹಾಗೂ ಮಾಹಿತಿ ಪುಸ್ತಿಕೆ (ಪ್ರಾಸ್ಪೆಕ್ಟಸ್)ಬಗ್ಗೆ ಮಹಾವಿದ್ಯಾಲಯಕ್ಕೆ ಸಂಬಂಧ ಪಟ್ಟವರು ನೀಡಿದ ಮಾಹಿತಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಂಸ್ಥೆಗೆ ಭೇಟಿ ನೀಡುವುದರ ಮೂಲಕ ತಿಳಿದುಕೊಳ್ಳುವುದು.

2. ಸಂಸ್ಥೆಯ ಪ್ಲೇಸ್​ವೆುಂಟ್ ರೆಕಾರ್ಡ್ ಯಾವಾಗಲೂ ಅಭ್ಯರ್ಥಿಗಳಿಗೆ ದಾರಿದೀಪವಾಗಬಲ್ಲದು. ಸಂಬಂಧ ಪಟ್ಟ ಮಾಹಿತಿಗಾಗಿ ಸಂಸ್ಥೆಯ ಪ್ಲೇಸ್​ವೆುಂಟ್ ಅಧಿಕಾರಿಯೊಂದಿಗೆ ಸಮಗ್ರವಾಗಿ ರ್ಚಚಿಸುವುದು. ಸಂಸ್ಥೆಯಿಂದ ನೇಮಿಸಲ್ಪಟ್ಟ ಒಬ್ಬ ಪ್ರತ್ಯೇಕ ಪ್ಲೇಸ್​ವೆುಂಟ್ ಅಧಿಕಾರಿ ಇರುವರೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

3. ಸಂಸ್ಥೆಗೆ ಯಾವ ಬಗೆಯ ಕಂಪನಿಗಳು ಭೇಟಿ ನೀಡಿದ್ದವು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ತಕ್ಷಣವೇ ಆ ಕಂಪನಿಗಳ ಬಗ್ಗೆ ಮಾಹಿತಿಗಾಗಿ ಅಂತರ್ಜಾಲದಲ್ಲಿ ಹುಡುಕಬೇಕು.

4. ಸಂಸ್ಥೆಯು ಎಂ.ಬಿ.ಎ ಪದವಿಗೆ ಅನುಗುಣವಾಗಿ ಮೂಲ ಸೌಕರ್ಯ ಹೊಂದಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು.

5. ಸಂಸ್ಥೆಯ ಗ್ರಂಥಾಲಯದ ಗುಣಮಟ್ಟ, ಪುಸ್ತಕಗಳು, ದೈನಿಕ ಪತ್ರಿಕೆಗಳು, ಮ್ಯಾನೇಜ್​ವೆುಂಟ್ ಶಿಕ್ಷಣಕ್ಕೆ ಸಂಬಂಧ ಪಟ್ಟ ನಿಯತಕಾಲಿಕೆಗಳು, ಹಾಗೂ ಸಂಸ್ಥೆಯು ಪ್ರತಿಯೊಬ್ಬ ಮ್ಯಾನೇಜ್​ವೆುಂಟ್ ವಿದ್ಯಾರ್ಥಿಯನ್ನು ಅಗತ್ಯ ದಿನಪತ್ರಿಕೆಗಳಿಗೆ ಅಥವಾ ಯಾವುದಾದರೂ ಒಂದು ದಿನಪತ್ರಿಕೆ ಚಂದಾದಾರನ್ನಾಗಿಸಿದೆಯೋ ಅಥವಾ ಇಲ್ಲವೋ ಎಂಬá-ದನ್ನು ಪರಿಶೀಲಿಸಬೇಕು.

6. ಮ್ಯಾನೇಜ್​ವೆುಂಟ್ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ವರ್ಗ ಎಂತಹುದು, ಆ ಸಂಸ್ಥೆಯಲ್ಲಿ ಎಷ್ಟು ಜನ ನುರಿತ ಹಾಗೂ ಅನುಭವುಳ್ಳ ಭೋಧಕರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರಾಧ್ಯಾಪಕರುಗಳಲ್ಲಿ ಎಷ್ಟು ಜನರಿಗೆ ಕೈಗಾರಿಕಾ ಅನುಭವವಿದೆ ಹಾಗೂ ಎಷ್ಟು ಜನ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.

7. ಒಂದು ಸುಸಜ್ಜಿತವಾದ ಅಂತರ್ಜಾಲ ಸೇವೆ ಸಹಿತ ಕಂಪ್ಯೂಟರ್ ಪ್ರಯೋಗಾಲಯದ ಅವಶ್ಯಕತೆ ಇದೆ. ಅದನ್ನು ವಿದ್ಯಾರ್ಥಿಗಳು ಖಾತರಿ ಪಡಿಸಿಕೊಳ್ಳಬೇಕು.

8. ಎಂಬಿಎ ಹಂತದಲ್ಲಿ ಹಾಗೂ ನಂತರದ ವೃತ್ತಿ ಜೀವನದಲ್ಲಿ ಇಂಗ್ಲಿಷ್ ಭಾಷೆ ಅತ್ಯವಶ್ಯಕ. ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಹಾಗೂ ಅದರ ಮೇಲೆ ಹಿಡಿತ ಸಾಧಿಸುವಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಒಂದು ಪ್ರತ್ಯೇಕ ಭಾಷಾ ಪ್ರಯೋಗಾಲಯ ಹಾಗೂ ಒಬ್ಬ ನುರಿತ ಇಂಗ್ಲೀಷ್ ಭಾಷೆಯ ತರಬೇತುದಾರರ ಉಪಸ್ಥಿತಿ ಬಹಳ ಮುಖ್ಯವಾದುದು.

9. ಎಂಬಿಎ ಹಂತದಲ್ಲಿ ಹಾಗೂ ನಂತರದ ವೃತ್ತಿ ಜೀವನದಲ್ಲಿ ಕೌಶಲಗಳು ಅತಿಮುಖ್ಯ ಪಾತ್ರವಹಿಸುತ್ತಿವೆ. ಉದಾಹರಣೆಗೆ ಸಂವಹನಕೌಶಲ,ಅಂತರ್ ವ್ಯಕ್ತಿ ಕೌಶಲ, ಸಮಾಲೋಚನ ಕೌಶಲಗಳು. ಇಂತಹ ಕೌಶಲಗಳನ್ನು ಅಭಿವೃದ್ಧಿಪಡಿಸುವ ಒಂದು ಪ್ರತ್ಯೇಕ ವಿಂಗ್ ಅಂತಹ ಮಹಾವಿದ್ಯಾಲಯದಲ್ಲಿ ಇದ್ದಲ್ಲಿ ಅದು ಒಂದು ಉತ್ತಮ ಸಂಸ್ಥೆ.

10. ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವ್ಯಾಪಾರ ವಹಿವಾಟುಗಳ ಕ್ಷಣಕ್ಷಣದ ಮಾಹಿತಿ ನೀಡುವ ಟಿ.ವಿ ಚಾನಲ್ ಗಳನ್ನು ವೀಕ್ಷಿಸುವ ಅವಕಾಶ ಲಭ್ಯವಿದೆಯೇ ಎಂದು ಮೊದಲೇ ತಿಳಿದುಕೊಳ್ಳಬೇಕು.

11. ಒತ್ತಡ ನಿರ್ವಹಣೆಗಾಗಿ ಸಂಸ್ಥೆಯು ಯೋಗ ತರಬೇತಿ ತರಗತಿಗಳನ್ನು ನಡೆಸುತ್ತಿದ್ದರೆ ಅದೊಂದು ಅತ್ಯುತ್ತಮ ಸಂಸ್ಥೆ. ವಿದ್ಯಾರ್ಥಿಗಳು ದೈಹಿಕ ಫಿಟ್ನೆಸ್ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳವುದು ಬೇಡ. ನೀವು ನಿಮ್ಮ ಸಹಪಾಠಿಗಳು/ಸ್ನೇಹಿತರೊಂದಿಗೆ ಪ್ರತಿದಿನ 20 ನಿಮಿಷದ 2 ಕಿ.ಮೀ. ದೂರದ ವೇಗದ ನಡುಗೆ ಮಾಡಿದರೆ ನೀವು ದೈಹಿಕವಾಗಿ ಫಿಟ್ !!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net